ಖಾಸಗಿ ಶಾಲೆಗಳಲ್ಲಿ ಬಿಳಿ ಚೀಟಿ ವ್ಯವಹಾರ..!

0
34

ಮಧುಗಿರಿ:

      ಖಾಸಗಿ ಶಾಲೆಗಳಲ್ಲಿ ಬಿಳಿ ಚೀಟಿಯ ದಂಧೆಯೊಂದು ಕಣ್ಣಾ ಮುಚ್ಚಾಲೆಯಂತೆ ನಡೆಯುತ್ತಿದೆ. ಶಾಲಾ ಆಡಳಿತ ಮಂಡಲಿಗಳ ತಾಳಕ್ಕೆ ತಕ್ಕಂತೆ ಸಿಬ್ಬಂದಿ ವರ್ಗವು ಕುಣಿಯುತ್ತಿದ್ದು, ಇವರು ನೀಡುವ ಬಿಳಿ ರಶೀದಿಗಳು ಪೋಷಕರಿಗೆ ತಲೆ ನೋವಾಗಿ ಪರಿಣಮಿಸಿದೆ.

      ತಾಲ್ಲೂಕಿನ ಬಹುತೇಕ ಖಾಸಗಿ ಶಾಲೆಗಳಲ್ಲಿ ಈಗಾಗಲೇ ದಾಖಲಾತಿಗಳು ಮುಗಿದಿದೆ. ಆದರೆ ಪೋಷಕರ ಮಾಹಿತಿಗೆಂದು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಂತೆ ಕಡ್ಡಾಯವಾಗಿ ಶುಲ್ಕದ ವಿವರಗಳನ್ನು ಒಳಗೊಂಡ ಫಲಕಗಳನ್ನು ಪ್ರದರ್ಶಿಸುವಂತೆ ಸೂಚಿಸಲಾಗಿದ್ದರೂ, ಸರಕಾರದ ಆದೇಶವನ್ನು ಗಾಳಿಗೆ ತೂರಿರುವ ಖಾಸಗಿ ಶಾಲೆಗಳು ಮನಬಂದಂತೆ ಪೋಷಕರಿಂದ ಅತಿ ಹೆಚ್ಚಿನ ಶುಲ್ಕ ವಸೂಲಿಯಲ್ಲಿ ತೊಡಗಿದ್ದವು. ಇವುಗಳನ್ನು ನಿಯಂತ್ರಿಸಬೇಕಾದ ಅಧಿಕಾರಿಗಳು ತಮಗೂ ಕೆಲಸಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ .

      ಎಪಿಎಂಸಿಯಲ್ಲಿ ನಡೆಯುತ್ತಿರುವ ವ್ಯವಹಾರ ಇಂತಹ ಶಾಲೆಗಳಲ್ಲೂ ಯಥೇಚ್ಚವಾಗಿ ನಡೆಯುತ್ತಿದೆ. ಖಾಸಗಿ ಶಾಲೆಗಳು ನೀಡುವ ಬಿಳಿ ಚೀಟಿಯಲ್ಲಿ ಕೇವಲ ಪೋಷಕರು ಭರಿಸಬೇಕಾದ ಹಣವನ್ನು ಮಾತ್ರ ಆಡಳಿತ ಮಂಡಲಿಯ ಸೂಚನೆಯಂತೆ ಸಿಬ್ಬಂದಿ ವರ್ಗ ನಮೂದಿಸುತ್ತಿದ್ದಾರೆ. ಇದು ಯಾವ ಶಾಲೆಗೆ ಸೇರಿದ ರಶೀದಿ ಎಂದು ಗೋಚರಿಸದಂತೆ ಗೌಪ್ಯತೆ ಕಾಪಾಡುವ ಉದ್ದೇಶವಾದರು ಏನು ಎಂದು ಹೆಸರು ಹೇಳಲು ಇಚ್ಚಿಸದ ಪೋಷಕರು ಅಳಲು ತೋಡಿಕೊಂಡಿದ್ದಾರೆ.

      ಪಟ್ಟಣದಲ್ಲಿನ ಕೆಲ ಖಾಸಗಿ ಶಾಲೆಗಳಲ್ಲಿ ಮಾತ್ರ ಶುಲ್ಕದ ವಿವರಗಳ ನಾಮ ಫಲಕಗಳು ಕಂಡು ಬರುತ್ತಿವೆದರೂ, ಈ ಬಗ್ಗೆ ಪ್ರಶ್ನೆ ಮಾಡುವ ಪೋಷಕರಿಗೆ ಅಲ್ಲಿನ ಸಿಬ್ಬಂದಿ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂಬುದು ಪೋಷಕರಲ್ಲಿ ಬೇಸರ ಮೂಡಿಸಿದೆ. ಇಷ್ಟವಿದ್ದರೆ ಹಣ ಪಾವತಿಸಿ ಇಲ್ಲವಾದರೆ ಬೇರೆ ಶಾಲೆಯನ್ನು ನೋಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಶಾಲಾ ಆಡಳಿತ ಮಂಡಲಿಯನ್ನು ಸಂಪರ್ಕಿಸಿ ಎಂದು ಹೇಳುತ್ತಿರುವ ಪ್ರಕರಣಗಳು ತಾಲ್ಲೂಕಿನಲ್ಲಿ ಕಂಡು ಬರುತ್ತಿವೆ. ಇತ್ತೀಚೆಗೆ ಶಿರಾ ಖಾಸಗಿ ಶಾಲೆಯ ಪ್ರಕರಣವೊಂದು ಗಮನಿಸಿದರೆ ಇಲ್ಲಿಯೂ ಕೆಲ ಶಾಲೆಗಳು ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು ಇಲ್ಲಿಯೂ ಸಹ ಶಾಲಾ ಮಕ್ಕಳಿಗೆ ರಸ್ತೆಯ ಸುರಕ್ಷತೆಯ ಸಮಸ್ಯೆ ಕಂಡು ಬರುತ್ತಿದ್ದು, ಸಂಬಂಧಪಟ್ಟ ಶಾಲೆಗಳು ಕೂಡಲೆ ಎಚ್ಚೆತ್ತುಕೊಳ್ಳಬೇಕಾಗಿದೆ.

      ತಿಂಗಳಿಗೊಂದರಂತೆ ಒಂದೊಂದು ಅನಧಿಕೃತವಾದ ಬಿಳಿ ಹಾಳೆಯ ರಶೀದಿಗಳನ್ನು ಪೋಷಕರಿಗೆ ನೀಡುತ್ತಿದ್ದು, ಅದರಲ್ಲಿ ಒಮ್ಮೆ ಟೈ ಮತ್ತು ಬೆಲ್ಟ್‍ಗೆಂದು, ಮೊತ್ತೊಂದು ಬಾರಿ ಶೂಗಳಿಗೆಂದು, ಇನ್ನೊಂದು ಬಾರಿ ಸಮವಸ್ರ ಪುಸ್ತಕಗಳಿಗೆಂದು ಬಿಳಿಯ ರಶೀದಿಗಳನ್ನು ಪೋಷಕರಿಗೆ ನೀಡಲಾಗುತ್ತಿದೆ. ಆದರೆ ಇವರು ವಿತರಿಸುವ ಕೆಲ ರಶೀದಿಗಳು ಯಾವದಕ್ಕೆಂದು ಸಹ ನಮೂದಿಸಿ ನೀಡುತ್ತಿಲ್ಲ. ಕೆಲ ಪೋಷಕರು ಮಾತ್ರ ಶಾಲಾ ಆಡಳಿತ ಮಂಡಲಿಯವರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆಂಬ ಭಯದ ವಾತಾವರಣದಲ್ಲಿದ್ದು ಪ್ರಶ್ನೆ ಮಾಡಲು ಮುಂದಾಗುತ್ತಿಲ್ಲ.

      ಖಾಸಗಿ ಶಾಲೆಗಳಿಗೆ ಸಕಾಲಕ್ಕೆ ಇಲಾಖೆಯು ಬೋಧನಾ ಶುಲ್ಕದ ಹಣ ಪಾವತಿಸಿದರೂ ಸಹ ಖಾಸಗಿ ಶಾಲೆಗಳು ಮಾತ್ರ ತಮ್ಮ ಅಟ್ಟಹಾಸ ಮುಂದುವರೆಸಿದ್ದಾರೆ. ಈ ಬಗ್ಗೆ ಹೆಚ್ಚು ಅನನುಕೂಲಗಳನ್ನು ಅನುಭವಿಸುತ್ತಿರುವುದು ಆರ್‍ಟಿಇ ಅಡಿಯಲ್ಲಿ ಪ್ರವೇಶ ಪಡೆದ ಪೋಷಕರದಾಗಿದೆ. ಜತೆಗೆ ಹೆಚ್ಚಿನ ರೀತಿಯಲ್ಲಿ ಅಂತಹ ಪೋಷಕರಿಂದ ಅದಕ್ಕಿದಕ್ಕೆಂದು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಕಡ್ಡಾಯ ಶಿಕ್ಷಣದಡಿಯ ಮಕ್ಕಳ ಪೋಷಕರಿಗೆ ಆಧಾರವಾಗುತ್ತಾರೆಯೆ ಅಥವಾ ಖಾಸಗಿ ಶಾಲೆಯವರಿಗೆ ಆಹಾರವಾಗುತ್ತಾರೆಯೆ ಎಂಬ ಪ್ರಶ್ನೆ ಪೋಷಕ ವರ್ಗದಲ್ಲಿ ಮನೆ ಮಾಡಿದೆ.

LEAVE A REPLY

Please enter your comment!
Please enter your name here