ಗಣಪತಿ ಹಬ್ಬಕ್ಕೆ ಷರತ್ತು: ಹಿಂಜಾವೇ ಪ್ರತಿಭಟನೆ

0
28

ದಾವಣಗೆರೆ:

      ರಾಜ್ಯ ಸರ್ಕಾರ ಗಣೇಶ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಷರತ್ತು ವಿಧಿಸಲಾಗಿದೆ ಎಂದು ಆರೋಪಿ, ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

      ನಗರದ ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಎಸಿ ಕಚೇರಿ ಎದುರಿನ ಪಿಬಿ ರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ, ಹಿಂದೂಗಳ ಹಬ್ಬ ಆಚರಣಗೆ ಷರತ್ತು ವಿಧಿಸಿರುವ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ನಂತರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಹಿಂಜಾವೇ ಪ್ರಾಂತ್ಯ ಕಾರ್ಯದರ್ಶಿ ಎಸ್.ಟಿ.ವೀರೇಶ್ ಮಾತನಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಎಡಿಜಿಪಿ ಕಮಲ್ ಪಂಥ್ ಜಾರಿಗೊಳಿಸಿರುವ ಆದೇಶ ಸರಿಯಲ್ಲ. ಗಣೇಶೋತ್ಸವಕ್ಕೆ ನಿರ್ಬಂಧ, ನಿಷೇಧ ಹೇರುವುದು ಹಿಂದುಗಳ ಧಾರ್ಮಿಕ ಹಕ್ಕಿನ ಮೇಲೆ ದೌರ್ಜನ್ಯ ಎಸಗಿದಂತಾಗಿದೆ. ಇದನ್ನು ಹಿಂದು ಸಮಾಜ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ನೂರಾರು ವರ್ಷಗಳಿಂದಲೂ ಗಣೇಶೋತ್ಸವವು ಸಾರ್ವಜನಿಕ ರೂಪ ಪಡೆದು, ನಿರಾತಂಕವಾಗಿ ನಡೆದು ಬರುತ್ತಿದೆ. ಈ ಧಾರ್ಮಿಕ ಉತ್ಸವವನ್ನು ರಾಷ್ಟ್ರೀಯತೆ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿದೆ. ಇದರ ಮೂಲ ಉದ್ದೇಶವನ್ನು ಅರಿಯದ, ಯೋಗ್ಯತೆ ಇಲ್ಲದ ಕೆಲ ಹಿಂದು ವಿರೋಧಿ ಅಧಿಕಾರಿ ಶಾಹಿಗಳು ಇಂತಹದ್ದೊಂದು ಹಬ್ಬವನ್ನು ಹತ್ತಿಕ್ಕಲು ಇಲ್ಲಸಲ್ಲದ ಷರತ್ತು ವಿಧಿಸುತ್ತಿದ್ದಾರೆ. ರಾಜ್ಯದ ಎಡಿಜಿಪಿ ಕಮಲ್ ಪಂಥ್ ಗಣೇಶ ಹಬ್ಬದಂತಹ ರಾಷ್ಟ್ರೀಯ ಹಬ್ಬದ ವೈಭವವನ್ನು ಹಾಳು ಮಾಡಲು ಹೊರಟಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಕಿಡಿಕಾರಿದರು.

      ಮಸೀದಿ ಇರುವ ಕಡೆಗಳಲ್ಲಿ ಗಣೇಶ ಮೆರವಣಿಗೆ ನಿಷೇಧ, ಮೈಕ್‍ಸೆಟ್ ನಿಷೇಧವೆನ್ನುವ ಅಧಿಕಾರಿಗಳು ಎಲ್ಲಾ ಧರ್ಮದವರಿಗೂ ಇದನ್ನು ಅನ್ವಯ ಮಾಡುವುದಿಲ್ಲ. ಬರೀ ಹಿಂದುಗಳ ಹಬ್ಬಕ್ಕೆ ಯಾಕೆ ಹೀಗೆ ನಿರ್ಬಂಧ ಹೇರುತ್ತಿದ್ದಾರೆ? ತಕ್ಷಣವೇ ಎಲ್ಲಾ ನಿರ್ಬಂಧಗಳನ್ನು ಹಿಂಪಡೆದು, ಸಾರ್ವಜನಿಕ ಗಣೇಶೋತ್ಸವಕ್ಕೆ ಅನುವು ಮಾಡಿಕೊಡಬೇಕು. ಹಿಂದು ಬಾಹುಳ್ಯ ಪ್ರದೇಶ, ಮಂದಿರಗಳ ಎದುರಿನಲ್ಲಿ ಅಲ್ಪಸಂಖ್ಯಾತರಿಗೆ ನಿರ್ಬಂಧ ಹೇರಲು ನಿಮ್ಮಿಂದ ಸಾಧ್ಯವೇ? ಎಂದು ಪ್ರಶ್ನಿಸಿದರು.

      ನಮ್ಮ ದೇಶಾದ್ಯಂತ ಹಿಂದು ಧಾರ್ಮಿಕ ಹಬ್ಬಗಳ ಮೆರವಣಿಗೆ, ಉತ್ಸವಗಳು ಮಸೀದಿಗಳ ಎದುರಿನಲ್ಲೇ ಚಿಕ್ಕಪುಟ್ಟ ಗಲ್ಲಿಗಳಲ್ಲಿ, ಸೂಕ್ಷ್ಮಾತಿಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾದ ಸ್ಥಳದಲ್ಲೇ ನಡೆದುಕೊಂಡು ಬಂದಿವೆ. ಗಲಭೆ, ಗಲಾಟೆ ನಡೆಯಬೇಕೆಂದಿದ್ರೆ ಇಂತಹ ಪ್ರದೇಶದಲ್ಲೇ ನಡೆಯಬೇಕೆಂದಿಲ್ಲ. ಕಿಡಿಗೇಡಿಗಳು ಎಲ್ಲಿ ಬೇಕಾದರೂ ಗಲಭೆ ಎಬ್ಬಿಸಬಹುದು. ಇದನ್ನರಿಯರ ಅಧಿಕಾರಿಗಳು ಮಸೀದಿ, ಮುಸ್ಲಿಂ ಬಾಹುಳ್ಯ ಪ್ರದೇಶಗಳೆಂದು ಹೆಸರಿಸಿ, ಒಂದು ಕೋಮಿನ ವಿರುದ್ಧ ಮತ್ತೊಂದು ಕೋಮನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು. ಇಂತಹ ನಿರ್ಬಂಧಗಳು ನಾಳೆ ಮುಸ್ಲಿಂ ಮತ್ತು ಕ್ರೈಸ್ತರ ಧಾರ್ಮಿಕ ಉತ್ಸವ, ಮೆರವಣಿಗೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದರು.

      ಮುಖ್ಯಮಂತ್ರಿಗಳು ಇಂತಹ ತುಘಲಕ್ ಆದೇಶಗಳು ಪೊಲೀಸ್ ಇಲಾಖೆಯಿಂದ ರಾಜ್ಯದಲ್ಲಿ ಜಾರಿಯಾಗದಂತೆ ನೋಡಿಕೊಳ್ಳಬೇಕು. ಈ ಮೂಲಕ ಹಿಂದು ಸಮಾಜದ ವಿರೋಧವನ್ನು ಕಟ್ಟಿಕೊಳ್ಳದಂತೆ ಎಚ್ಚರವಹಿಸಬೇಕು. ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಗೆ ಯಾವುದೇ ಅಡ್ಡಿ, ಆತಂಕ, ನಿರ್ಬಂಧ, ಷರತ್ತು, ನಿಬಂಧನೆ ಹೇರದಂತೆ ತಡೆಯಬೇಕೆಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ, ಎಸ್.ಆರ್.ಮಂಜುನಾಥ, ಮಲ್ಲಿಕಾರ್ಜುನ, ಶ್ರೀನಿವಾಸ, ಧನಂಜಯ, ರಾಜು, ಶಿವಪ್ರಸಾದ ಕುರುಡಿಮಠ, ರಾಕೇಶ, ಕಿರಣ, ವಿಶ್ವನಾಥ, ನವೀನ, ಟಿಂಕರ್ ಮಂಜಣ್ಣ ಟಿಂಕರ್, ಶಿವು, ಪವನ್, ಎಸ್.ಪಿ.ಶ್ರೀನಿವಾಸ, ನಂದೀಶ, ದೀಪಕ್, ರವಿ, ಸಂದೀಪ್, ಕಬಿ ಮತ್ತಿತರರು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here