ಗಾಂಜಾ ಮಾರುತ್ತಿದ್ದ ವಿದೇಶಿಯರು ಜೈಲಿಗೆ

0
25

ಬೆಂಗಳೂರು:

                         ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ವಿದೇಶಿಗರನ್ನು ಪತ್ತೆಹಚ್ಚಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೇ ಮಾದಕ ವಸ್ತು ಕೊಕೇನ್,ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ವಿದೇಶಿಗರನ್ನು ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
                       ಗಾಂಜಾ ಮಾರಾಟ ಮಾಡುತ್ತಿದ್ದ ಸೂಡಾನ್‍ನ ಅಜಂ ನಿಜಾರ್ ಹಸನ್ (21) ಬಂಧಿಸಲಾಗಿದೆ ಕಲ್ಯಾಣ ನಗರದ ಬೈರವೇಶ್ವರ ಲೇಔಟ್‍ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಆರೋಪಿಯು ಹೆಣ್ಣೂರು ಬಳಿ ಪರಿಚಿತ ಗಿರಾಕಿಗಳಿಗೆ, ಕಾಲೇಜು ವಿದ್ಯಾರ್ಥಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬಂಧಿತ ಆರೋಪಿಯಿಂದ ಒಂದು ಕೆಜಿ ಗಾಂಜಾ, ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಬೇರೆ ಕಡೆಯಿಂದ ಗಾಂಜಾ ತಂದು ಚಿಕ್ಕ ಪ್ಯಾಕೆಟ್‍ಗಳನ್ನಾಗಿ ಕಟ್ಟಿ ಮಾರಾಟ ಮಾಡುತ್ತಿದ್ದ. ಆರೋಪಿಯ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗೋ ಪ್ರಜೆ ಸೆರೆ
                     ಹೆಣ್ಣೂರಿನ ಚಿನ್ನಪ್ಪ ಲೇಔಟ್‍ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕಾಂಗೋ ದೇಶದ ಪ್ರಜೆಯನ್ನು ಬಂಧಿಸಿ, ಒಂದು ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾಂಗೋ ಮೂಲದ ಕೆವಿನ್ (30) ಬಂಧಿತ ಆರೋಪಿಯಾಗಿದ್ದು, ಈತನಿಂದ ಒಂದು ಕೆಜಿ ಗಾಂಜಾ, ಮೊಬೈಲ್, 500 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಾಂಗೋದಿಂದ ಬಂದಿದ್ದ ಆರೋಪಿಯು ಹೆಣ್ಣೂರಿನ ಚಿನ್ನಪ್ಪ ಲೇಔಟ್‍ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು, ಬೇರೆಡೆಯಿಂದ ಗಾಂಜಾ ಖರೀದಿಸಿಕೊಂಡು ಪರಿಚಿತ ಗಿರಾಕಿಗಳಿಗೆ ಮಾರಾಟ ಮಾಡಿ ಮೋಜು ಮಾಡುತ್ತಿದ್ದ. ಆರೋಪಿಯ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ನೈಜೀರಿಯನ್ ಬಂಧನ
                    ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್‍ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 80 ಗ್ರಾಂ ಕೊಕೇನ್‍ಸೇರಿ 8ಲಕ್ಷ 50 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜೀರಿಯಾದ ಹೆನ್ರಿ (34) ಬಂಧಿತ ಆರೋಪಿ,ಈತನಿಂದ 80 ಗ್ರಾಂ ಕೊಕೇನ್, ದ್ವಿಚಕ್ರ ವಾಹನ, 3 ಮೊಬೈಲ್ ಸೇರಿ, 8.50 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.
ಆರೋಪಿಯು ಟಿಸಿ ಪಾಳ್ಯದ ಗಾರ್ಡನ್ ಸಿಟಿ ಕಾಲೇಜು ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯು ಬೇರೆ ಕಡೆಯಿಂದ ಕೊಕೇನ್ ತಂದು ಮಾರಾಟ ಮಾಡುತ್ತಿದ್ದು, ಈತನ ಪಾಸ್ ಪೋರ್ಟ್ ಹಾಗೂ ವೀಸಾವನ್ನು ಪರಿಶೀಲಿಸಿ ಕೆ.ಆರ್. ಪುರಂನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here