ಗುಂಗುರು ಕೂದಲಿಗೆ ಇಲ್ಲಿದೆ ಪರಿಹಾರ..

0
30

ಮೃದುವಾದ ಹಾಗೂ ಕಾಂತಿ ಯುತ ಗುಂಗುರು ಕೇಶರಾಶಿ ಹೊಂದಿ ರುವುದು ಎಲ್ಲ ಹೆಂಗಳೆಯರಿಗೆ ಇಷ್ಟವಾಗುವ ಸಂಗತಿಯಾಗಿದೆ. ಆಧುನಿಕ ಮಹಿಳೆ ಆಗಿರಲಿ ಅಥವಾ ಸಂಪ್ರದಾಯಸ್ಥ ಮಹಿಳೆಯರೇ ಆಗಿರಲಿ ಎಲ್ಲರಿಗೂ ಸುಂದರವಾದ ಮುಂಗುರುಳು ಹೊಂದುವುದು ಅತಿ ಇಷ್ಟ. ಆಕರ್ಷಕ ಮುಂಗುರುಳು ಹೊಂದಲು ತಾವೂ ಅನೇಕ ಬಾರಿ ‘ಕರ್ಲಿಂಗ್ ಐರನ್’ ಅಥವಾ ಸೆಟ್ಟಿಂಗ್ ಜೆಲ್ ಮೊರೆ ಹೋಗಿರಬಹುದು.

ಸೌಂದರ್ಯವರ್ಧನೆ ಹಾಗೂ ಸುಂದರ ಕೇಶರಾಶಿಗಾಗಿ ದೊಡ್ಡ ಮೊತ್ತದ ಹಣವನ್ನು ಸಹ ಖರ್ಚು ಮಾಡಿರಬಹುದು. ಆದರೆ ಇಂತಹ ಅನೇಕ ಕ್ರಮಗಳನ್ನು ಆಗಾಗ ಬಳಸುವುದರಿಂದ ಕೇಶರಾಶಿ ತನ್ನ ಹೊಳಪು ಕಳೆದುಕೊಂಡು, ತಲೆಯಲ್ಲಿ ಹೊಟ್ಟು, ಒಣಗಿದ ನೆತ್ತಿ, ಕೂದಲುದುರುವಿಕೆ ಸೇರಿದಂತೆ ಇನ್ನೂ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಿರಬಹುದು. ಹೇರ್ ಸ್ಟೈಲ್ ಹಾಗೂ ಗುಂಗುರು ಕೂದಲು ಹೊಂದುವ ಅನೇಕ ಪ್ರಯತ್ನಗಳ ಹೊರತಾಗಿಯೂ ಯಾವುದೇ ಪ್ರಯೋಜನವಾಗದೆ, ಜೊತೆಗೆ ಹೆಚ್ಚಿನ ತೊಂದರೆಗಳು ಉದ್ಭವಿಸಿ ಇನ್ನು ಈ ಹೇರ್‌ಸ್ಟೈಲ್ ಸಹವಾಸವೇ ಬೇಡ ಎಂದು ಒಮ್ಮೊಮ್ಮೆ ಅನಿಸಿದರೂ ಆಶ್ಚರ್ಯವಿಲ್ಲ. ಆದರೆ, ಸುಂದರ ಗುಂಗುರು ಕೇಶರಾಶಿಯನ್ನು ಮನೆಯಲ್ಲಿಯೇ ಕೆಲ ವಿಧಾನಗಳ ಮೂಲಕ, ಅದೂ ಸಹ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆಯೇ ಪಡೆಯಬಹುದು ಎಂಬುದು ನಿಮಗೆ ತಿಳಿದರೆ ಸೋಜಿಗವಾಗುವುದು. ಅತ್ಯಂತ ಸಹಜ ಹಾಗೂ ನೈಸರ್ಗಿಕವಾದ ಏಳು ಕ್ರಮಗಳ ಮೂಲಕ ಹೇಗೆ ನಿಮ್ಮ ಕೇಶರಾಶಿಯನ್ನು ಗುಂಗುರಾಗಿಸಬಹುದು ಎಂಬುದನ್ನು ಮುಂದೆ ತಿಳಿದುಕೊಳ್ಳೋಣ ಬನ್ನಿ…

ಸ್ಕ್ರಂಚಿಂಗ್ : ಇಂಗ್ಲಿಷ್‌ನಲ್ಲಿ ಸ್ಕ್ರಂಚಿಂಗ್ ಎಂದು ಕರೆಯಲಾಗುವ, ಇದು ಕೂದಲನ್ನು ನಿರ್ದಿಷ್ಟ ಮಾದರಿಯಲ್ಲಿ ನಿಧಾನವಾಗಿ ಕೈಗಳಿಂದ ಉಜ್ಜುವ ಕ್ರಮವಾಗಿದೆ. ಸ್ಕ್ರಂಚಿಂಗ್ ಮೂಲಕ ಅತಿ ಸುಲಭವಾಗಿ ಮನೆಯಲ್ಲಿಯೇ ಕೂದಲನ್ನು ಸುಂದರವಾಗಿ ಗುಂಗುರಾಗಿಸಬಹುದು. ಮೊದಲಿಗೆ ಒಳ್ಳೆಯ ಗುಣಮಟ್ಟದ ವಾಲ್ಯುಮೈಸಿಂಗ್ ಶಾಂಪೂ ಉಪಯೋಗಿಸಿ ಸಹಜವಾಗಿ ತಲೆಗೂದಲನ್ನು ತೊಳೆದುಕೊಳ್ಳಿ. ನಂತರ ಕೂದಲಿನ ಸಿಕ್ಕುಗಳನ್ನು ನಿಧಾನವಾಗಿ ಬಿಡಿಸಿ, ಕಂಡೀಷನರ್ ಹಚ್ಚಿ.

ಇಷ್ಟಾದ ಬಳಿಕ ಕೂದಲನ್ನು ಸಂಪೂರ್ಣವಾಗಿ ತೊಳೆದುಕೊಳ್ಳಿ. ಕಂಡೀಷನರ್‌ನ ಯಾವುದೇ ಅಂಶ ಉಳಿಯದಂತೆ ಜಾಗೃತಿ ವಹಿಸಿ. ಟವೆಲ್ ಮೂಲಕ ಕೂದಲನ್ನು ಹಿಂಡಿ ನೀರನ್ನು ಸಂಪೂರ್ಣವಾಗಿ ತೆಗೆದು ಹಾಕಿ. ನಂತರ ಒಂದು ಕಡಲೆ ಕಾಳಿನಷ್ಟು ಕೂದಲು ಪೋಷಣೆಯ ಕ್ರೀಂ ತೆಗೆದುಕೊಂಡು ಕೈಗಳ ಮಧ್ಯೆ ಕೂದಲುಗಳನ್ನು ಉಜ್ಜಿರಿ. ಒಂದು ಹಾಳೆಯನ್ನು ಹೇಗೆ ಮುದುರಬಹುದೋ ಆ ರೀತಿ ನಿಮ್ಮ ಕೈಗಳ ಚಲನೆ ಇರಲಿ. ಹಾಗೆಯೇ ಉಜ್ಜುತ್ತ ಕೂದಲುಗಳ ಮೇಲ್ಭಾಗಕ್ಕೆ ಬನ್ನಿ. ಹೀಗೆ ಮಾಡಿದಲ್ಲಿ ನಿಮ್ಮ ಕೂದಲು ಗುಂಗುರಾಗುವುದು.

ಈ ವಿಧಾನ ಅನುಸರಿಸುವಾಗ ನೆತ್ತಿಯ ಚರ್ಮಕ್ಕೆ ಕ್ರೀಂ ಹತ್ತದಂತೆ ಕಾಳಜಿ ವಹಿಸುವುದು ಅಗತ್ಯ. ಕೂದಲಿನ ಬೇರುಗಳಿಗೆ ಕ್ರೀಂ ಹತ್ತುವುದರಿಂದ ಕೂದಲು ಉದುರುವ ಸಮಸ್ಯೆ ಎದುರಾಗಬಹುದು.

ಹೆಡ್ ಬ್ಯಾಂಡ್ ವಿಧಾನ : ಹಸಿಯಾಗಿರುವ ಕೂದಲಿಗೆ ಮೊದಲು ಹೆಡ್ ಬ್ಯಾಂಡ್ ಧರಿಸಿಕೊಳ್ಳಿ. ಬಾಚಣಿಗೆಯ ಮೂಲಕ ಕೂದಲುಗಳನ್ನು ಮೇಲೆತ್ತಿ ನಿಧಾನವಾಗಿ ಹೆಡ್ ಬ್ಯಾಂಡ್‌ನಲ್ಲಿ ಸುರುಳಿಯಾಗಿ ತೂರಿಸಿ. ಇದೇ ರೀತಿ ಎಲ್ಲ ಕೂದಲುಗಳನ್ನು ಹೆಡ್ ಬ್ಯಾಂಡ್‌ನೊಳಗೆ ಹಾಕಿ. ಈ ಹಂತದಲ್ಲಿ ಗಟ್ಟಿಯಾಗಿ ಕೂರದ ಕೆಲ ಕೂದಲುಗಳು ಹೊರಗೆ ಉಳಿದಿದ್ದರೆ ಅವುಗಳಿಗೆ ಹೇರ್ ಕ್ಲಿಪ್ ಅಳವಡಿಸಿ ಬ್ಯಾಂಡ್ ನೊಳಕ್ಕೆ ತೂರಿಸಿ. ಇದನ್ನು ಕೆಲ ತಾಸುಗಳವರೆಗೆ ಹಾಗೆಯೇ ಇರಲು ಬಿಡಿ. ಒಮ್ಮೆ ಕೂದಲುಗಳು ಸಂಪೂರ್ಣ ಒಣಗಿದ ನಂತರ ಹೇರ್ ಪಿನ್‌ಗಳನ್ನು ತೆಗೆದು ಕೂದಲುಗಳನ್ನು ಬಿಡಿಸಿಕೊಳ್ಳಿ. ಈಗ ನಿಮ್ಮ ಕೂದಲು ಮೃದು ಹಾಗೂ ಹೊಳಪಿನಿಂದ ಕೂಡಿ ಗುಂಗುರಾಗಿರುತ್ತವೆ.

ವೆಲ್‌ಕ್ರೊ ರೋಲರ್ ವಿಧಾನ : ವೆಲ್‌ಕ್ರೊ ರೋಲರ್‌ಗಳು ಸಾಮಾನ್ಯವಾಗಿ ಮನೆಯಲ್ಲಿರುತ್ತವೆ. ಒಂದು ವೇಳೆ ಇರದಿದ್ದರೆ ಮಾರುಕಟ್ಟೆಯಲ್ಲಿ ದೊರೆಯುವ ವೆಲ್‌ಕ್ರೊ ರೋಲರ್‌ಗಳನ್ನು ತಂದಿಟ್ಟುಕೊಳ್ಳಿ. ತೇವವಾಗಿರುವ ನಿಮ್ಮ ತಲೆಕೂದಲನ್ನು ಕೆಲ ಭಾಗಗಳಲ್ಲಿ ವಿಂಗಡಿಸಿ, ಮೇಲ್ಮುಖವಾಗಿ ಕ್ಲಿಪ್ ಮಾಡಿ. ಕೂದಲುಗಳ ಉದ್ದ ಹಾಗೂ ದಪ್ಪ ನೋಡಿಕೊಂಡು 2 ರಿಂದ 5 ಭಾಗಗಳಾಗಿ ಮಾಡಿಕೊಳ್ಳಬಹುದು.

ಈಗ ಪ್ರತಿ ಭಾಗವನ್ನೂ ಮೇಲ್ಭಾಗದ ದಿಕ್ಕಿನಲ್ಲಿ ರೋಲರ್‌ಗೆ ಸುತ್ತುತ್ತ ಹೋಗಿ. ತಲೆಗೆ ಸರಿಯಾಗಿ ಫಿಟ್ ಆಗಿ ಕುಳಿತುಕೊಳ್ಳುವ ಹಾಗೆ ರೋಲ್ ಮಾಡಬೇಕು. ರೋಲರ್‌ಗಳಿಗೆ ಹೇರ್ ಪಿನ್ ಬಳಸುವ ಅಗತ್ಯ ಇರುವುದಿಲ್ಲ. ಅತಿ ಹೆಚ್ಚು ಕೂದಲನ್ನು ರೋಲ್ ಮಾಡುವುದರಿಂದ ಅಥವಾ ರೋಲರ್‌ಗಳು ಹಳೆಯದಾಗಿದ್ದರೆ ಕ್ಲಿಪ್‌ಗಳು ಸರಿಯಾಗಿ ಕೂರುವುದಿಲ್ಲ ಎಂಬ ಅಂಶ ಗಮನದಲ್ಲಿರಲಿ. ಆದ್ದರಿಂದ ಕಡಿಮೆ ಪ್ರಮಾಣದ ಕೂದಲು ರೋಲ್ ಮಾಡಲು ಯತ್ನಿಸಿ. ಇದೂ ಫಲ ನೀಡದಿದ್ದರೆ ಹೊಸ ವೆಲ್‌ಕ್ರೊ ರೋಲರ್ ಖರೀದಿಸುವುದು ಉತ್ತಮ. ರೋಲರ್‌ಗಳನ್ನು ಕೆಲ ಗಂಟೆಗಳವರೆಗೆ ಬಿಡಿ. ಕೇಶ ಒಣಗಿದ ನಂತರ ರೋಲರ್‌ಗಳನ್ನು ತೆಗೆದಾಗ ಆಕರ್ಷಕ ಹಾಗೂ ಸಹಜವಾಗಿ ಮೂಡಿದ ಗುಂಗುರು ಕೂದಲು ನಿಮ್ಮ ದಾಗಿರುತ್ತವೆ. 

LEAVE A REPLY

Please enter your comment!
Please enter your name here