ಗುಡಿಗಳಿಗಿಂತ ಶೌಚಾಲಯ ನಿರ್ಮಾಣ ಶ್ರೇಷ್ಠ

0
9

 ದಾವಣಗೆರೆ:

      ಸಮಾಜದಲ್ಲಿ ಗುಡಿ-ಗುಂಡಾರಕ್ಕಿಂತ, ಜನರ ಆರೋಗ್ಯ ಕಾಪಾಡುವ ಶೌಚಾಲಯಗಳ ನಿರ್ಮಾಣ ಮಾಡುವುದು ಶ್ರೇಷ್ಠವಾಗಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

      ಲಿಂ.ಜಗದ್ಗುರು ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ ಹಾಗೂ ಸಹಜ ಶಿವಯೋಗದ ಪ್ರಯುಕ್ತ ನಗರದ ವಿರಕ್ತ ಮಠದ ಆವರಣದಿಂದ ಏರ್ಪಡಿಸಿದ್ದ ಜನಜಾಗೃತಿ ಪಾದಯಾತ್ರೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

      ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಗುಡಿ-ಗುಂಡಾರ ನಿರ್ಮಾಣಕ್ಕೆ ಎಲ್ಲರೂ ಮುಂದಾಗುತ್ತಾರೆ. ಆದರೆ, ಜನರ ಆರೋಗ್ಯ ಕಾಪಾಡುವ, ಸಾಮಾಜಿಕ ಸ್ವಾಸ್ಥ್ಯ ನಿರ್ಮಿಸುವ ಶೌಚಾಲಯ ನಿರ್ಮಾಣಕ್ಕೆ ಯಾರೂ ಸಹ ಮುಂದೆ ಬರುವುದಿಲ್ಲ.

      ಆದರೆ, ತುಮಕೂರಿನ ಸಮಾಜ ಸೇವಕಿ ಭವ್ಯರಾಣಿ ಬಡವರಿಗಾಗಿ ಶೌಚಾಲಯ ನಿರ್ಮಿಸುವ ಮೂಲಕ ಮಾದರಿ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಆದ್ದರಿಂದ ಈ ಬಾರಿಯ ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿಯನ್ನು ಅವರಿಗೆ ನೀಡಿ ಶ್ರೀಮಠವು ಅವರನ್ನು ಗೌರವಿಸುತ್ತಿದೆ ಎಂದು ಹೇಳಿದರು.

      ಪ್ರಸ್ತುತ ದೇಶದಲ್ಲಿ ಹಲವಾರು ಸಮಸ್ಯೆಗಳು ತಾಂಡವಾಡುತ್ತಿವೆ. ಈ ಸಮಸ್ಯೆಗಳ ನಿವಾರಣೆಗೆ ಹಾಗೂ ಶಾಂತಿ-ಸಹಬಾಳ್ವೆ ಜೀವನಕ್ಕಾಗಿ ಶರಣರ ವಚನಗಳ ಅಧ್ಯಯನ ಮಾಡಿ, ಅದರಲ್ಲಿರುವ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವುದು ಹಾಗೂ ಬಸವಾದಿ ಪ್ರಮಥರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕೆಂದು ಕಿವಿಮಾತು ಹೇಳಿದರು.

      ಆರೋಗ್ಯವಂತ ಹಾಗೂ ಸುಖಿ ಕುಟುಂಬಕ್ಕಾಗಿ, ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದ ಅವರು, ಇತ್ತೀಚೆಗೆ ಕಾಯಕ ಸಂಸ್ಕøತಿ ಮರೆಯಾಗುತ್ತಿದ್ದು, ರಜೆ ಬಯಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಯಕದಿಂದಲೇ ನಮ್ಮ ಜೀವನ, ನಮ್ಮ ದೇಶ ಉದ್ಧಾರವಾಗುತ್ತದೆ ಎಂಬುದನ್ನು ಅರಿತು, ಬಸವಣ್ಣನವರು ನೀಡಿದ ಕಾಯಕವೇ ಕೈಲಾಸ ಎಂಬ ತತ್ವವನ್ನು ಅರಿತು ಎಲ್ಲರೂ ಕಾಯಕ ಪ್ರಜ್ಞೆ ಬೆಳೆಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

      ಬಸವಣ್ಣನವರ ಆಶಯದಂತೆ ಜಯದೇವ ಜಗದ್ಗುರುಗಳ ನಡೆದಿದ್ದು, ಅವರ ಸಾಧನೆ ಅಪಾರವಾಗಿದೆ. ಜಯದೇವ ಶ್ರೀಗಳು ಎಂದರೆ, ಶಿಕ್ಷಣ, ದಾಸೋಹ, ಕಾಯಕ, ಮಾನವೀಯತೆ, ಪ್ರೀತಿ-ವಿಶ್ವಾಸದ ಗಣಿ ಇದ್ದಂತೆ. ಜಾತ್ಯಾತೀತ ವ್ಯಕ್ತಿಯಾಗಿದ್ದರು. ಎಲ್ಲರನ್ನೂ ಅಪ್ಪಿಕೊಂಡು ಹೋಗುತ್ತಿದ್ದರು. ಅವರ ಸಾಧನೆಗಳನ್ನು ಕೂಡಾ ಪಾದಯಾತ್ರೆಯ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.

      ವಿರಕ್ತಮಠದಿಂದ ಮೇಯರ್ ಶೋಭಾ ಪಲ್ಲಾಗಟ್ಟೆ ಅವರಿಂದ ಚಾಲನೆ ಪಡೆದ ಜನಜಾಗೃತಿ ಪಾದಯಾತ್ರೆಯು ಮದಕರಿನಾಯಕ ವೃತ್ತ, ವಕ್ಕಲಿಗರಪೇಟೆ, ಕಾಯಿಪೇಟೆ, ವಿಜಯಲಕ್ಷ್ಮೀ ರಸ್ತೆಯ ಮೂಲಕ ಪುನಃ ವಿರಕ್ತಮಠಕ್ಕೆ ಮರಳಿ ಮುಕ್ತಾಯವಾಯಿತು.

      ಪಾದಯಾತ್ರೆಯ ರಸ್ತೆಯುದ್ದಕ್ಕೂ ಬಸವಕಲಾ ಲೋಕ ಭಜನಾ ತಂಡದವರು ವಚನ ಹಾಗೂ ಜಾಗೃತಿ ಗೀತೆಗಳನ್ನು ಹಾಡಿದರು.
ಪಾದಯಾತ್ರೆಯಲ್ಲಿ ಎನ್.ಆರ್.ಪುರಂ ಬಸವಕೇಂದ್ರದ ಶ್ರೀಶಿವಯೋಗ ಪ್ರಭು ಸ್ವಾಮೀಜಿ, ಶ್ರೀಬಸವ ಕಿರಣ ಸ್ವಾಮೀಜಿ, ಸಿರಸಂಗಿ ಮಠದ ಶ್ರೀಮಹಾಂತ ಸ್ವಾಮೀಜಿ, ಶ್ರೀಶಿವಮೂರ್ತಿ ಸ್ವಾಮೀಜಿ ಮೈಸೂರು, ನಿಜಗುಣ ಶಿವಯೋಗಿ, ಅಕ್ಕಿ ಚನ್ನಪ್ಪ, ಹಾಸಬಾವಿ ಕರಬಸಪ್ಪ, ಲಂಬಿ ಮುರುಘೇಶ, ಕಣಕುಪ್ಪಿ ಮುರುಗೇಶ, ಶಿವಕುಮಾರ್, ಮಹಾದೇವಮ್ಮ, ಶರಣಬಸವ, ಕುಮಾರಸ್ವಾಮಿ, ಶಿಕ್ಷಕರಾದ ಸೌಭಾಗ್ಯ, ವಿನುತ, ರೇಖಾ, ಉಮಾ, ವಿರಕ್ತಮಠದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here