ಗುರುಕುಲದ ಶಿಕ್ಷಣ ಪದ್ದತಿಯೇ ಇಂದಿನ ಶಿಕ್ಷಣ ಪದ್ದತಿಗೆ ಜೀವಾಳ : ವಿಶ್ವಕ್ಕೆ ಶಿಕ್ಷಣ ಪರಿಚಯಿಸಿದ ಕೀರ್ತಿ ಭಾರತದ್ದು

0
50

ಚಳ್ಳಕೆರೆ

            ವಿಶ್ವದಲ್ಲೇ ಅತಿ ಹೆಚ್ಚು ಜ್ಞಾನ ಭಂಡಾರದ ಖಣಜವನ್ನು ಹೊಂದಿದ ರಾಷ್ಟ್ರ ನಮ್ಮ ಭಾರತ ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವವಿಕರು ವಿದ್ಯೆಗೆ ಹೆಚ್ಚು ಗೌರವ ಹಾಗೂ ಸ್ಥಾನಮಾನವನ್ನು ನೀಡಿದವರು. ಇಂದಿನಂತೆ ಯಾವುದೇ ಶಾಲಾ ಕಾಲೇಜು ಇಲ್ಲದ ಕಾರಣ ನಮ್ಮ ಬುದ್ದಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಗುರುಕುಲದ ಮೊರೆ ಹೋಗಲಾಯಿತು. ಅಂದು ಸಮಾಜದಲ್ಲಿ ಗುರುಕುಲವೇ ಪ್ರತಿಯೊಬ್ಬರಿಗೂ ಜ್ಞಾನ ಬೆಳಕು ನೀಡುವ ಕೇಂದ್ರಗಳಾಗಿದ್ದವು ಎಂದು ಎಚ್‍ಪಿಸಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ನಾಗರಾಜು ತಿಳಿಸಿದರು.
            ಅವರು, ಶನಿವಾರ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ನೂತನ ಸಮಾಜಶಾಸ್ತ್ರ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವೆಲ್ಲರೂ ಸಹ ನೈಜ್ಯ ಶಿಕ್ಷಣದ ಬಗ್ಗೆ ಹೆಚ್ಚು ಜಾಗೃತಿವಹಿಸಬೇಕಿದೆ, ಈ ಹಿಂದೆ ನಮಗೆ ಗುರುಕುಲದ ಮೂಲಕ ದೊರೆಯುತ್ತಿದ್ದ ಶಿಕ್ಷಣ ಹೆಚ್ಚು ಮೌಲ್ಯವುಳ್ಳದ್ದಾಗಿತ್ತು. ಗುರುಕುಲದಲ್ಲಿ ಅಭ್ಯಾಸ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜವನ್ನು ಸರಿದಾರಿಗೆ ತರುವಂತಹ ಶಿಕ್ಷಣವನ್ನು ಪಡೆಯುತ್ತಿದ್ದನು. ಅಂದಿನ ದಿನಗಳಲ್ಲಿ ಶಿಕ್ಷಣ ಪಡೆದ ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುತ್ತಿದ್ದನು. ಶಿಕ್ಷಣ ನಮ್ಮೆಲ್ಲರ ಜೀವದ ಉಸಿರಾಗಿದ್ದು, ಯಾವುದೇ ವಿದ್ಯಾರ್ಥಿಗಳು ನೀವು ಪಡೆಯುವ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯೆ ವಹಿಸಬಾರದು. ನಿರ್ಲಕ್ಷ್ಯೆ ವಹಿಸಿದಲ್ಲಿ ನಿಮ್ಮ ಭವಿಷ್ಯದ ಬದುಕು ಅಸ್ಥಿರಗೊಳ್ಳುವ ಸಾಧ್ಯತೆಯೇ ಹೆಚ್ಚು ಎಂದರು.
         ಬಾಪೂಜಿ ಪ್ರಧಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ ಮಾತನಾಡಿ, ಯಾವ ಸಮಾಜ ಶಿಕ್ಷಣವನ್ನು ಗೌರವದಿಂದ ಆರಾಧಿಸುತ್ತದೆಯೋ ಅ ಸಮಾಜ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಇಂದಿನ ಶಿಕ್ಷಣ ಅತ್ಯಂತ ಗೌರವವನ್ನು ಹೊಂದಿರಲು ಕಾರಣ ಶಿಕ್ಷಣಕ್ಕಾಗಿ ಶ್ರಮಿಸಿದ ಸರ್ವಪಲ್ಲಿ ರಾಧಕೃಷ್ಣನ್, ನಾಡಿನ ಧೀಮಂತ ಸಾಹಿತಿ, ಕವಿಗಳಾದ ಪ್ರೊ.ವೆಂಕಣಯ್ಯ, ಕುವೆಂಪು, ದ.ರಾ.ಬೇಂದ್ರೆ ಮುಂತಾದ ಮಹಾನ್ ಸಾಹಿತಿಗಳು ನೀಡಿದ ವಿಶೇಷ ಕೊಡುಗೆಯಿಂದ. ನಮ್ಮ ಶಿಕ್ಷಣದಲ್ಲಿ ಪರಿವರ್ತನೆಗೆ ಹೆಚ್ಚು ಒತ್ತು ನೀಡುವ ಹಲವಾರು ಮಾಹಿತಿಗಳಿದ್ದು, ಈ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ ಅರ್ಥೈಸಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜು ಉಪನ್ಯಾಸಕರಾದ ಎನ್.ರವಿಕುಮಾರ್, ಡಿ.ಟಿ.ಸುರೇಶ್, ವಿಮಲ, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here