ಗೋಕರ್ಣ, ಮಹಾಬಲೇಶ್ವರ ದೆವಾಲಯ ಹಸ್ತಾಂತರ ಆದೇಶ ರದ್ದು : ಹೈಕೋರ್ಟ್ ಮಹತ್ವದ ತೀರ್ಪು

0
124

ಬೆಂಗಳೂರು:

      ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿ 2008ರಲ್ಲಿ ಆಗಿನ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದೆ.

      ಜಿಲ್ಲಾಧಿಕಾರಿ ನೇತೃತ್ವದಲ್ಲಿ ದೇವಸ್ಥಾನದ ಉಸ್ತುವಾರಿ ಸಮಿತಿ ರಚಿಸಬೇಕು. ನಿವೃತ್ತ ನ್ಯಾಯಮೂರ್ತಿ ಶ್ರೀ ಕೃಷ್ಣ ಅವರನ್ನು ಸಮಿತಿಯ ಸಲಹೆಗಾರನ್ನಾಗಿ ನೇಮಿಸುವಂತೆ ನಿರ್ದೇಶನ ಕೊಟ್ಟಿದೆ.

      ಯಡಿಯೂರಪ್ಪ ಅವರ ಸರ್ಕಾರದ ನಿರ್ಧಾರವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಹಿಂದಿನ ಬಿಜೆಪಿ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ಕಪಾಳ ಮೋಕ್ಷ ಮಾಡಿದೆ.

      ಇದರಿಂದಾಗಿ ಗೋಕರ್ಣ ಕ್ಷೇತ್ರ ಧಾರ್ಮಿಕ ದತ್ತಿ ದೇಗುಲವಾಗಿ ಮುಂದುವರಿಯಲಿದೆ. 2008ರಲ್ಲಿ ಆಗಿನ ಯಡಿಯೂರಪ್ಪ ನೇತೃತ್ವದ ಸರಕಾರ ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದರು. ಇದು ಭಾರೀ ವಿವಾದ ಮತ್ತು ಚರ್ಚೆಗೆ ಕಾರಣವಾಗಿತ್ತು.

      ಯಡಿಯೂರಪ್ಪ ಸರಕಾರದ ಈ ಆದೇಶ ಪ್ರಶ್ನಿಸಿ ಬಾಲಚಂದ್ರ ದೀಕ್ಷಿತ್ ಮತ್ತು ನರಹರಿ ಕೃಷ್ಣ ಹೆಗಡೆ ಅವರು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಅರ್ಜಿಯನ್ನು ಮಾನ್ಯ ಮಾಡಿ ರಾಜ್ಯ ಸರಕಾರದ ಕ್ರಮವನ್ನು ರದ್ದುಗೊಳಿಸಿದೆ.

      ರಾಜ್ಯದ ಸರಕಾರದ ಆದೇಶದಲ್ಲಿ ಲೋಪದೋಷಗಳಿವೆ. ಮಹಾಬಲೇಶ್ವರ ದೇವಸ್ಥಾನವನ್ನು ಧಾರ್ಮಿಕ ದತ್ತಿ ಪಟ್ಟಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ಹೀಗಾಗಿ, ಹಿಂದಿನ ಸರಕಾರದ ಆದೇಶವನ್ನು ರದ್ದುಗೊಳಿಸುತ್ತಿದ್ದೇವೆ. ಗೋಕರ್ಣ ದೇವಸ್ಥಾನವು ಧಾರ್ಮಿಕ ದತ್ತಿ ದೇಗುಲವಾಗಿ ಮುಂದುವರಿಯಲಿ ಎಂದು ಹೈಕೋರ್ಟ್ ಪೀಠ ತನ್ನ 256 ಪುಟಗಳ ತೀರ್ಪಿನಲ್ಲಿ ತಿಳಿಸಿದೆ.

      ಗೋಕರ್ಣ ದೇವಸ್ಥಾನಕ್ಕೆ ತತ್‍ಕ್ಷಣವೇ ಡಿಸಿ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚನೆಯಾಗಬೇಕು ಎಂದು ಆದೇಶಿಸಿದ ನ್ಯಾಯಾಲಯವು, ಸಮಿತಿಯ ಸಲಹೆಗಾರರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರನ್ನು ನೇಮಿಸಿದೆ.

      ಸೆ. 10ರಂದು ಉಸ್ತುವಾರಿ ಸಮಿತಿ ಅಸ್ತಿತ್ವಕ್ಕೆ ಬರಲಿದ್ದು, ಅಲ್ಲಿಯವರೆಗೂ ಗೋಕರ್ಣ ಕ್ಷೇತ್ರವು ರಾಮಚಂದ್ರಾಪುರ ಮಠದ ಸುಪರ್ದಿಯಲ್ಲೇ ಇರಲಿದೆ. ಅಷ್ಟರೊಳಗೆ ಗೋಕರ್ಣ ದೇವಸ್ಥಾನದ ಸ್ಥಿರಾಸ್ತಿ, ಚರಾಸ್ತಿ ಪಟ್ಟಿಯನ್ನು ತಯಾರಿಸಿ ಎರಡು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾ| ಅರವಿಂದ್ ಕುಮಾರ್ ಮತ್ತು ನ್ಯಾ| ಬಿ.ವಿ. ನಾಗರತ್ನ ಅವರಿದ್ದ ಹೈಕೋರ್ಟ್ ಪೀಠ ಸೂಚಿಸಿದೆ.

      ಐದು ದಶಕಗಳ ಕಾಲ ಗೋಕರ್ಣದ ದೇವಸ್ಥಾನವು ಏಕ ವ್ಯಕ್ತಿಯ ಆಡಳಿತದಲ್ಲಿತ್ತು. ಹೀಗಾಗಿ, ಒಂದು ಪ್ರಬಲ ಸಂಸ್ಥೆಯ ಆಡಳಿತದ ಅಡಿಯಲ್ಲಿ ಸೇರಿಸಿದರೆ ಶ್ರೀ ಕ್ಷೇತ್ರ ಇನ್ನಷ್ಟು ಬೆಳಯಬಹುದು ಎಂಬ ಕಾರಣ ಕೊಟ್ಟು ಯಡಿಯೂರಪ್ಪ ಸರಕಾರವು ರಾಮಚಂದ್ರಾಪುರ ಮಠಕ್ಕೆ ಅದನ್ನು ಹಸ್ತಾಂತರಿಸಿ ಆದೇಶ ಹೊರಡಿಸಿತ್ತು. ತುಮಕೂರಿನ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನವನ್ನ ಗದಗ್‍ನ ತೋಂಟದಾರ್ಯ ಮಠದ ಸುಪರ್ದಿಗೆ ಒಪ್ಪಿಸುವ ಕುರಿತೂ ಆಗಿನ ಸರಕಾರ ಚಿಂತನೆ ನಡೆಸಿತ್ತು. ಆದರೆ, ಆದೇಶವು ಗೋಕರ್ಣ ದೇವಸ್ಥಾನಕ್ಕೆ ಮಾತ್ರ ಸೀಮಿತವಾಯಿತು.

      ಇದಾದ ಬೆನ್ನಲ್ಲೇ ಸರಕಾರದ ಆದೇಶ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲಾಗಿತ್ತು. ಇದೀಗ ನ್ಯಾಯಾಲಯದಲ್ಲಿ ಈ ಆದೇಶ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ರಾಮಚಂದ್ರಾಪುರ ಮಠಕ್ಕೆ ಒಂದೇ ಮಾರ್ಗ ಉಳಿದಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದು. ಅಲ್ಲಿಯೂ ಹಿನ್ನಡೆಯಾದರೆ ಗೋಕರ್ಣ ದೇವಸ್ಥಾನವನ್ನು ಬಿಟ್ಟುಕೊಡುವುದು ರಾಮಚಂದ್ರಾಪುರ ಮಠಕ್ಕೆ ಅನಿವಾರ್ಯವಾಗಲಿದೆ.

LEAVE A REPLY

Please enter your comment!
Please enter your name here