ಗೌರಿ ಲಂಕೇಶ್ ಹತ್ಯೆ ಪ್ರಕರಣ ಹಂತಕ ನಾನಲ್ಲ: ತಿರುಗಿಬಿದ್ದ ವಾಘ್ಮೋರೆ

0
78

 ಬೆಂಗಳೂರು:

 ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕುರಿತಂತೆ ಪ್ರಮುಖ ಆರೋಪಿ ಪರಶುರಾಮ್ ವಾಘ್ಮೋರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ತಪ್ಪೋಪ್ಪಿಕೊಳ್ಳಲು ನಿರಾಕರಿಸಿದ್ದಾನೆ. ಇದರಿಂದ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಬಂದಿದೆ.

      ಇದುವರೆಗೆ ಗೌರಿ ಲಂಕೇಶ್ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದು ನಾನೇ ಎಂದು ವಿಶೇಷ ತನಿಖಾ ತಂಡದ ಮುಂದೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದ ಆರೋಪಿ ಪರಶುರಾಮ್ ಈಗ ಅದನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿರುವುದು ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

      ಹತ್ಯೆ ಪ್ರಕರಣ ಕುರಿತಂತೆ ವಿಶೇಷ ತನಿಖಾ ತಂಡ ನಿರಂತರ ಕಾರ್ಯಾಚರಣೆ ನಡೆಸಿ ಹಂತಕರ ಹೆಜ್ಜೆ ಜಾಡನ್ನು ಬೆನ್ನಟ್ಟಿ ಪ್ರಮುಖ ಆರೋಪಿಯನ್ನು ಬಂಧಿಸಿ ಆತನನ್ನು ಸುಧೀರ್ಘ ವಿಚಾರಣೆಗೆ ಗುರಿಪಡಿಸಿದಾಗ ಕೊಲೆ ರಹಸ್ಯದ ಮಾಹಿತಿಯನ್ನು ಬಿಚ್ಚಿಟ್ಟಿದ್ದನು. ಬಲಪಂಥೀಯ ವಿಚಾರಧಾರೆಯ ವಿರುದ್ಧವಾಗಿದ್ದ ಗೌರಿ ಲಂಕೇಶ್ ಹತ್ಯೆಗೆ ರೂಪಿಸಿದ ಸಂಚನ್ನು ಎಸ್ಐಟಿ ಮುಂದೆ ಆರೋಪಿ ಪರಶುರಾಮ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದನು. ವಿಚಾರಣೆಯನ್ನು ಪೂರ್ಣಗೊಳಿಸಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮ್ಯಾಜಿಸ್ಟ್ರೇಟರ ಮುಂದೆ ಏಕಾಏಕಿ ತಪ್ಪೊಪ್ಪಿಕೊಳ್ಳಲು ನಿರಾಕರಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

      ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಘ್ಮೋರೆಯನ್ನು ಪರಪ್ಪನ ಅಗ್ರಹಾರದಿಂದ ಹೊರಕ್ಕೆ ಕರೆದುಕೊಂಡು ಹಾಗೂ ಇನ್ನಿತರ ಐವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 19ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹತ್ಯೆ ಮಾಡಿದ್ದನ್ನು ಒಪ್ಪಿಕೊಳ್ಳುವ ಸಲುವಾಗಿ ಹಾಜರುಪಡಿಸಲಾಗಿತ್ತು. ಆದರೆ ವಾಘ್ಮೋರೆ ತಪ್ಪನ್ನು ಒಪ್ಪಿಕೊಳ್ಳದೆ ತಿರುಗಿ ಬಿದ್ದಿದ್ದಾನೆ.

      ನಂತರ ಆರೋಪಿಯನ್ನು ಜುಲೈ 11 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದ ಪರಶುರಾಮನನ್ನು ಮೂರನೇ ಎಸಿಎಂಎಂ ಕೋರ್ಟಿಗೆ ಹಾಜರುಪಡಿಸಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ಆದರೆ ಈಗ ತಪ್ಪನ್ನು ಒಪ್ಪಿಕೊಳ್ಳಲು ಆರೋಪಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಗೌರಿ ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರವನ್ನು ಇಲ್ಲವೆ ನಾಶಪಡಿಸಿರುವ ಸಾಕ್ಷಿಯನ್ನು ಎಸ್ಐಟಿ ಪತ್ತೆ ಹಚ್ಚಬೇಕಾಗಿದೆ.

      ಇದರ ಜೊತೆಗೆ ಹತ್ಯೆಯಲ್ಲಿ ಶಾಮೀಲಾಗಿರುವ ಸಾಂದರ್ಭಿಕ ಸಾಕ್ಷಿಗಳನ್ನು ಹುಡುಕಿದರೆ ಮಾತ್ರ ವಾಘ್ಮೋರೆಯ ಕೊಲೆ ರಹಸ್ಯ ಬಯಲು ಮಾಡಲು ಸಾಧ್ಯವೆಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರು ಬಲವಾದ ಸಾಕ್ಷಿ ಸಂಗ್ರಹಿಸುವುದು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.

      ಆರೋಪಿ ಪಿಸ್ತೂಲಿನಿಂದ ಟ್ರಿಗರ್ ಒತ್ತಿ ಗುಂಡೂಹಾರಿಸಿದ ಅಪರಾಧ ದೃಶ್ಯವನ್ನು ಎಸ್ಐಟಿ ನ್ಯಾಯಾಲಯಕ್ಕೆ ಹಾಜರುಪಡಿಸಿದರೆ ಮಾತ್ರ ಆರೋಪಿ ಕೊಲೆ ಮಾಡಿರುವುದನ್ನು ಸಾಬೀತುಪಡಿಸಲು ಸಾಧ್ಯವೆಂದು ಹೈಕೋರ್ಟ್ ವಕೀಲ ಶ್ಯಾಮಸುಂದರ್ ಹೇಳುತ್ತಾರೆ.

      ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿದ್ಯಮಾನದಲ್ಲಿ (ಪ್ರಕರಣದಲ್ಲಿ ಸೆರೆಯಾಗಿರುವ ಮೊದಲ ಆರೋಪಿ) ಕೆ.ಟಿ. ನವೀನ್ ಕುಮಾರ್ ಮಂಪರು ಪರೀಕ್ಷೆಗೆ ಒಳಪಡಲು ಒಪ್ಪಿಕೊಂಡಿದ್ದಾನೆ ಎಂದು ಆತನ ಪರ ವಕೀಲ ಎ. ವೇದಮೂರ್ತಿ ತಿಳಿಸಿದರು.

      ಗೌರಿ ಲಂಕೇಶ್ ಹತ್ಯೆ ಪ್ರಕರಣ ಕುರಿತಂತೆ ಯಾವುದೇ ರಹಸ್ಯವನ್ನು ಮುಚ್ಚಿರುವುದಿಲ್ಲ. ತಮ್ಮ ಕಕ್ಷಿದಾರನಿಂದ ವಶಪಡಿಸಿಕೊಳ್ಳಲಾದ ಗುಂಡು ಲಂಕೇಶ್ ದೇಹಕ್ಕೆ ಹೊಕ್ಕಿದ್ದ ಗುಂಡು ತಾಳೆಯಾಗುತ್ತಿಲ್ಲ. ಆದ್ದರಿಂದ ಮಂಪರು ಪರೀಕ್ಷೆಗೆ ಒಳಪಡಲು ಒಪ್ಪಿಕೊಂಡಿದ್ದಾನೆ ಎಂದು ವಕೀಲರು ವಿವರಿಸಿದರು.

LEAVE A REPLY

Please enter your comment!
Please enter your name here