ಗ್ರಾಮಾಂತರ ಶಾಸಕರಿಂದ ಜನತಾ ದರ್ಶನ : ಅಭೂತಪೂರ್ವ ಸ್ಪಂದನೆ

0
38

ತುಮಕೂರು:

      ತುಮಕೂರು ತಾಲ್ಲೂಕು ಕಚೇರಿ ಆವರಣದಲ್ಲಿರುವ ಗ್ರಾಮಾಂತರ ಶಾಸಕರ ಕಚೇರಿಯಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ರವರ ನೇತೃತ್ವದಲ್ಲಿ ನಡೆದ ಜನತಾದರ್ಶನಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ದೊರಕಿತು.

      ತಾಲ್ಲೂಕು ಕಚೇರಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಕ್ಷೇತ್ರದ ಜನತೆ ಕಿಕ್ಕಿರಿದು ಬಂದು ತಮ್ಮ ಅಹವಾಲುಗಳನ್ನು ಶಾಸಕರಿಗೆ ಸಲ್ಲಿಸಿದರು.

      ಸೋಮವಾರ ಬೆಳಗ್ಗೆ 11 ಗಂಟೆಯಿಂದ ಶಾಸಕರ ನೇತೃತ್ವದಲ್ಲಿ ನಡೆದ ಜನತಾ ದರ್ಶನದಲ್ಲಿ ತಹಸೀಲ್ದಾರ್, ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ||. ನಾಗಣ್ಣ, ಸರ್ಕಲ್ ಪೋಲೀಸ್ ಇನ್‍ಸ್ಪೆಕ್ಟರ್ ಮಧುಸೂದನ್, ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕ್ಷೇತ್ರದ ಜನರಿಂದ ಅರ್ಜಿ ಸ್ವೀಕರಿಸಿದ ಶಾಸಕರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲೆ ಅರ್ಜಿ ರವಾನಿಸಿ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಲು ಅಧಿಕಾರಿಗಳಿಗೆ ಆದೇಶಿಸಿದರು.

      ಕುಡಿಯುವ ನೀರು, ವಸತಿ ಯೋಜನೆ, ಪಡಿತರ ಚೀಟಿ ಹಾಗೂ ಇತರೆ ಸಮಸ್ಯೆಗಳ ಕುರಿತಾಗಿ 600ಕ್ಕೂ ಹೆಚ್ಚು ಅರ್ಜಿಗಳನ್ನು ಶಾಸಕರು ಸ್ವೀಕರಿಸಿ ಅರ್ಜಿಗೆ ಸಂಬಂಧಪಟ್ಟ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅರ್ಜಿ ವಿಲೇವಾರಿಗೆ ತುರ್ತು ಆದೇಶ ಕೈಗೊಳ್ಳುವಂತೆ ನಿರ್ದೇಶಿಸಿದರು. ಸ್ಥಳದಲ್ಲಿ ಇರದ ಅಧಿಕಾರಿಗಳಿಗೆ ದೂರವಾಣಿ ಮುಖೇನ ಮಾತನಾಡಿ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮುಖೇನವೇ ತಾಕೀತು ಮಾಡಿದರು.

      ಮಧ್ಯಾಹ್ನ 2ಗಂಟೆ ಕಳೆದರೂ ಅರ್ಜಿ ಸಲ್ಲಿಸಲು ಬರುತ್ತಿದ್ದ ಜನಸಂಖ್ಯೆ ಹೆಚ್ಚುತ್ತಲೇ ಇತ್ತು. ಎಲ್ಲಾ ಅರ್ಜಿಗಳನ್ನು ಸಹನೆಯಿಂದಲೆ ಸ್ವೀಕರಿಸಿದ ಶಾಸಕರು ಮುಂದಿನ ಸೋಮವಾರದೊಳಗೆ ಸ್ವೀಕೃತಿಯಾಗಿರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕರು ಕಾರು ಹತ್ತಿ ಕ್ಷೇತ್ರ ಪ್ರವಾಸಕ್ಕೆ ತೆರಳುವಾಗಲೂ ಸಹ ದಾರಿಯಲ್ಲಿ ಸಿಕ್ಕ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದ್ದೂ ವಿಶೇಷವಾಗಿತ್ತು.

      ಗ್ರಾಮಾಂತರ ಕ್ಷೇತ್ರದ ಸಾವಿರಾರು ರೈತರು, ಸಾರ್ವಜನಿಕರು ಜನತಾದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರಿಗೆ ಅಹವಾಲುಗಳನ್ನು ಸಲ್ಲಿಸಿದರು. ಈ ವೇಳೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿಯೇ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದರು.

      ಈ ವೇಳೆ ಹೋಬಳಿ ಮಟ್ಟದ ಜೆ.ಡಿ.ಎಸ್. ಅಧ್ಯಕ್ಷರಾದ ಪಾಲನೇತ್ರಯ್ಯ, ವೈ.ಟಿ.ನಾಗರಾಜು, ರಾಮಚಂದ್ರಪ್ಪ, ನರುಗನಹಳ್ಳಿ ವಿಜಯಕುಮಾರ್, ಬೆಳಗುಂಬ ವೆಂಕಟೇಶ್, ಹಿರೇಹಳ್ಳಿ ಮಹೇಶ್, ಹರಳೂರು ರುದ್ರೇಶ್, ಸುವರ್ಣಗಿರಿಕುಮಾರ್, ರಾಜೇಶ್, ಭೈರೇಗೌಡ ಹಾಗೂ ಸಾವಿರಾರು ಜೆ.ಡಿ.ಎಸ್. ಕಾರ್ಯಕರ್ತರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here