ಚಿಂದಿ ಆಯುವವರು ನೈರ್ಮಲತೆಯ ರಾಯಭಾರಿಗಳು..

0
50

ಕೆ.ಟಿ.ಸೋಮಶೇಖರ್:

ಹೆಗಲಿಗೆ ಒಂದು ಪ್ಲಾಸ್ಟಿಕ್ ಚೀಲದ ಬ್ರಹ್ಮಾಂಡ ಜೋಳಿಗೆ ಹಾಕಿ ಕೊಂಡು ಮನೆಯ ಸುತ್ತ, ಕೊಳಚೆ ಪ್ರದೇಶಗಳಲ್ಲಿ, ಕಸದ ಸಂಗ್ರಹಗಳಲ್ಲಿ ಪ್ಲಾಸ್ಟಿಕ್, ಲೋಹ, ರಬ್ಬರ್ ಮುಂತಾದ ಪದಾರ್ಥಗಳಿಂದಾದ ಹರುಕು, ಮುರುಕು ವಸ್ತು ಗಳ ಹುಡುಕಿ ಜೋಳಿಗೆ ತುಂಬಿ ಸುವವರ ಕಂಡು ಮೂಗು ಮುರಿದಿರುತ್ತೀರಿ. ಮುಖ ಸಿಂಡರಿಸಿಕೊಂಡಿರುತ್ತೀರಿ! ಅವರು ಹತ್ತಿರಕ್ಕೆ ಬಂದರೆ ಮಾರು ದೂರ ಸರಿದಿರುತ್ತೀರಿ! ಅವರನ್ನೇ ಚಿಂದಿ ಆಯುವವರು ಎಂದು ಕರೆಯುವುದು.

ಕೊಳಕಾಗಿ ಕಾಣುವ, ಸ್ವಚ್ಚ ಮನಸ್ಸಿನ, ನಿರ್ಮಲ ಕಾರ್ಯದ, ಚಿಂದಿಯಾದ ಬಟ್ಟೆ ಉಟ್ಟು, ಇಸ್ತ್ರಿ ಮಾಡಿದ ಬೆಲೆ ಬಾಳುವ ಉಡುಪುಗಳ ನೀಟಾಗಿ ಧರಿಸಿದ ಉಳ್ಳ ಮಂದಿ ತಮಗೆ ಬೇಡವಾದ, ಹರಿದ, ಮುರಿದ, ಹಾಳಾದ ವಸ್ತುಗಳ ಮನೆ ಮುಂದಕ್ಕೆ ಬರುವ ಕಸದ ವಾಹನಕ್ಕೆ ಹಾಕದೆ ಮನೆಯ ಸುತ್ತ, ಕೊಳಚೆ ಪ್ರದೇಶದ ಸುತ್ತ, ಕಸ ಸಂಗ್ರಹದ ಸುತ್ತ ಎಸೆದಿರುತ್ತಾರೆ. ಆ ಪ್ರದೇಶಗಳ ಸುತ್ತುತ್ತಾ ಅವರು ಎಸೆದುದ ಬಗ್ಗಿ ಬಗ್ಗಿ ತೆಗೆದುಕೊಂಡು ಜೋಳಿಗೆಗೆ ಹಾಕಿ ಹಾಕಿ ತುಂಬಿಸುವುದು ಮಾಡುತ್ತಾರೆ. ಹೀಗೆ ಸಂಗ್ರಹಿಸಿದ ಅವುಗಳನ್ನು ಗುಜರಿಯವರಿಗೆ ಕೊಟ್ಟು ಅವರು ಕೊಟ್ಟುದರಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.

ಇದೇ ಇವರ ನಿತ್ಯದ ಕಾಯಕ! ಇವರೇ ಚಿಂದಿ ಆಯುವವರು. ತಾವು ನಗರಗಳ ಶುಚಿಕಾರಕರೆಂದು ಭಾವಿಸದೆ ಚಿಂದಿ ಆಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಅವರು ಭಾವಿಸಿರುತ್ತಾರೆ. ಅದರೂ ಅವರು ನಗರದ ನಿರ್ಮಲಕಾರಕರೆಂಬ ಕೀರ್ತಿ ಅಳಿಸಲಾಗದು!.

ನಿಂದಕರಿರಬೇಕು ಜಗದೊಳು ನಿಂದಕರಿರಬೇಕು ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಾಂಗೆ!! ನಿಂದಕರಿರಬೇಕು!! … ಎಂದು ಪುರಂದರ ದಾಸರು ಹಾಡುತ್ತಾ ಪರಿಸರಕ್ಕೆ ಹಂದಿಯಿಂದ ಹೇಗೆ ಲಾಭವೋ ಹಾಗೆ ಪಾಪ ಮಾಡಿದವರನ್ನು ಜರೆಯುವ ನಿಂದಕರಿರುವುದರಿಂದ ಸಮಾಜಕ್ಕೆ ಹಾಗೆ ಲಾಭ ಎಂಬುದನ್ನು ಹೇಳಿದ್ದಾರೆ. ಚಿಂದಿ ಆಯುವವರು ಹಂದಿ ಇದ್ದಂತೆ! ಹಂದಿ ಎಂದ ತಕ್ಷಣ ಅಸಹ್ಯ ಪಟ್ಟುಕೊಳ್ಳುತ್ತೇವೆ! ಹಂದಿ ಶುಚಿಕಾರಕ! ನಾಗರಿಕರೆಂದು ಕರೆಯಿಸಿಕೊಳ್ಳುವವರು ನಿರ್ಮಲವಾದ ಜಾಗದಲ್ಲಿ ಮಲವನ್ನು ಮಾಡಿ, ಬೇಡವಾದುದ ಎಸೆದು ಪರಿಸರ ಮಲಿನವಾಗುವಂತೆ ಮಾಡಿರುತ್ತಾರೆ. ಅವರು ಅಸಹ್ಯ ಪಟ್ಟುಕೊಳ್ಳುವ ಹಂದಿ ಆ ಮಲವ, ಕೆಟ್ಟ ಆಹಾರ ಪದಾರ್ಥಗಳ ತಿಂದು ಪರಿಸರವನ್ನು ದುರ್ಗಂಧ ಮುಕ್ತವಾಗಿಸಿ, ಪರಿಸರದ ಸುಂದರತೆ ಹೆಚ್ಚಿಸಿ ನಿರ್ಮಲ ಮಾಡುತ್ತದೆ! ಅಂದಂದು ಮಾಡಿದ ಪಾಪವೆಂಬ ಮಲ ತಿಂದು ಹೋಗುವರಯ್ಯ ನಿಂದಕರು! ಎಂಬ ಪುರಂದರರ ಮಾತು ನಿಂದಕರು ಸಮಾಜದ ಪರಿಶುದ್ಧಕಾರಕರು ಎನ್ನುವುದನ್ನು ಸಾರುತ್ತದೆ.

ಅಂದರೆ ಯಾರೂ ಸರ್ವಜ್ಞರಲ್ಲ, ಪರಿಪೂರ್ಣರಲ್ಲ! ಒಮ್ಮೊಮ್ಮೆ ಎಂತಹ ಮಾನವರಾಗಲಿ ತಪ್ಪು ಮಾಡುವುದು, ದಾರಿ ತಪ್ಪುವುದು, ಪಾಪ ಮಾಡುವುದು ಸಹಜ! ಯಾರೇ ಆಗಲಿ ತಪ್ಪು ಮಾಡಿದಾಗ, ಪಾಪ ಮಾಡಿದಾಗ ತಾವು ಮಾಡಿದ ತಪ್ಪಗಳು, ಪಾಪಗಳು ಒಮ್ಮೊಮ್ಮೆ ಮಾಡಿದವರ ಗಮನಕ್ಕೆ ಬರುವುದಿಲ್ಲ! ನಿಂದಕರು ತಪ್ಪುಗಳ ಮಾಡಿದವರನ್ನು ನಿಂದಿಸುವುದರಿಂದ ಅವರ ಪಾಪಗಳು, ತಪ್ಪುಗಳು ಮಾಡಿದವರ ಗಮನಕ್ಕೆ ಬರುವಂತೆ ಮಾಡುತ್ತಾರೆ! ಆಗ ಪಾಪ ಮಾಡಿದವರು ತಮ್ಮ ಪಾಪಗಳನ್ನು, ತಪ್ಪುಗಳನ್ನು, ಸರಿಪಡಿಸಿಕೊಳ್ಳಲು ಅವಕಾಶವಾಗುವುದು. ಅವರು ಸರಿಪಡಿಸಿಕೊಂಡು ಪಾಪವನ್ನು, ತಪ್ಪುಗಳನ್ನು ಮಾಡದಿರುವ ಪ್ರಯತ್ನ ಮಾಡುವರು.

ಇದರಿಂದ ಸಮಾಜದ ನೈತಿಕಮಟ್ಟ ಸುಧಾರಿಸಿ ಉತ್ತಮ ಸಮಾಜ ನಿರ್ಮಾಣವಾಗಲು ನಿಂದಕರಿಂದ ಸಹಕಾರಿಯಾಗುವುದು! ಎಷ್ಟೋ ನಾಗರಿಕರು ಎಸೆದ ಬೇಡವಾದ ವಸ್ತುಗಳ ತಿಂದು ತಿಂದು ಶುಚಿಗೊಳಿಸುವ ಹಂದಿ ಶುಚಿಕಾರಕವಲ್ಲವೇ? ಹೌದು! ಹಾಗೆ ಚಿಂದಿ ಆಯುವವರು ಪರಿಸರದ ಮಲಿನತೆಗೆ ಕಾರಣವಾಗುವ, ಪರಿಸರದ ಅಂದ ಕೆಡಿಸುವ, ಎಷ್ಟೋ ಜೀವಸಂಕುಲದ ಜೇವಕ್ಕೇ ಕುತ್ತಾಗುವ ಹರಿದ, ಮುರಿದ, ಹಾಳಾದ ಪ್ಲಾಸ್ಟಿಕ್ಕಿನ, ಲೋಹದ, ರಬ್ಬರಿನ, ರೊಟ್ಟಿನ ವಸ್ತುಗಳನ್ನು ಆಯುತ್ತಾರೆ. ಪರಿಸರ ನಿರ್ಮಲ ಮಾಡುವ ಮನಸ್ಸಿನ ಇವರು ಆ ವಸ್ತುಗಳ ಆಯುವಾಗ ತಮ್ಮ ಕೈಯನ್ನು ಉಡುಪುಗಳನ್ನು ಮಲಿನ ಮಾಡಿಕೊಳ್ಳುತ್ತಾರೆ. ಆದರೂ ಪರಿಸರವನ್ನು ಶುಚಿಗೊಳಿಸಿ ಸ್ಥಳೀಯ ಶುಚಿಕಾರರಿಗೆ, ಶುಚಿಕಾರಕ ಸಂಸ್ಥೆಗಳಾದ ಪಟ್ಟಣ ಪಂಚಾಯ್ತಿ, ನಗರಸಭೆ ಮುಂತಾದವುಗಳಿಗೆ ಸಹಕಾರಿಯಾಗುತ್ತಾರೆ! ಇವರು ಎಲ್ಲಾ ಕಡೆ ಸುತ್ತುತ್ತಾ ಚಿಂದಿ ಆಯುತ್ತಾ ನಿರ್ಮಲ ಮಾಡುವುದರಿಂದ ಇವರೇ ನಿಜವಾದ ನೈರ್ಮಲ್ಯದ ರಾಯಭಾರಿಗಳೆಂದರೆ ತಪ್ಪಾಗದು! ಇವರ ಬದುಕು ಸ್ವಚ್ಚವಾಗಿರದಿದ್ದರೂ, ಸುಂದರ ಇರದಿದ್ದರೂ ನಗರವ ನಿರ್ಮಲ ಮಾಡುವ, ಸುಂದರಗೊಳಿಸುವ ಕಾರ್ಯ ಸಂಭಾವನೆ ಪಡೆಯದೆ ಮಾಡುತ್ತಾರೆ! ಸರ್ವರೂ ಇವರನ್ನು ಕಂಡು ತಾವು ಹೇಗಿರಬೇಕೆಂದನ್ನು ತಿಳಿಯಬೇಕಿದೆ!

ಚಿಂದಿ ಆಯುವವರು ಸಂಗ್ರಹಿಸಿದ ಆ ವಸ್ತುಗಳನ್ನು ಗುಜರಿ ಅಂಗಡಿಗಳಿಗೆ ಹಾಕುತ್ತಾರೆ. ಅವರು ಕೊಡುವ ಪುಡಿಗಾಸಿನಿಂದ ಜೀವನ ಪಾವನ ಮಾಡಿಕೊಳ್ಳುತ್ತಾರೆ. ಗುಜರಿಯವರು ಕೊಂಡ ಆ ಹರಿದ ಮುರಿದ ಹಾಳಾದ ವಸ್ತುಗಳು ಕಾರ್ಖಾನೆಗಳಿಗೆ ಹೋಗಿ ಹೊಸ ರೂಪ ಪಡೆದು ಹೊಸ ವಸ್ತುಗಳಾಗಿ ಮಾರುಕಟ್ಟೆಗೆ ಬರುತ್ತವೆ. ಹೀಗೆ ಚಿಂದಿ ಆಯುವವರು ಪರಿಸರ ನಿರ್ಮಲ ಮಾಡಿದ್ದಲ್ಲದೆ ಆ ವಸ್ತುಗಳು ಪುರ್ನ ಬಳಕೆಗೆ ಬರುವಂತೆ ಮಾಡಲು ಸಹಕಾರಿಯಾಗಿದ್ದಾರೆ.

ಇದರಿಂದ ಹೊಸ ವಸ್ತುಗಳನ್ನು ತಯಾರಿಸಲು ಮಿತಿಯಿಲ್ಲದೆ ಬಳಸಿ ಬರಿದು ಮಾಡುತ್ತಿರುವ ಸಂಪನ್ಮೂಲಗಳಿಗೆ ಸ್ವಲ್ಪ ಕಡಿವಾಣ ಹಾಕಲು, ಗಣಿಗಾರಿಕೆ ಕಡಿಮೆಯಾಗಲು ಸಹಕಾರಿಯಾಗಿ ಅಲ್ಲೂ ಪರಿಸರ ಮಾಲಿನ್ಯ ತಡೆಯಲು ಕಾರಣರಾಗುವರು. ಹೀಗೆ ಪರಿಸರ ಮಾಲಿನ್ಯ ತಡೆಯಲು ಸಹಕಾರಿಯಾದ, ನಗರ ನಿರ್ಮಲ ಮಾಡಲು ಪೂರಕರಾದ ಇವರನ್ನು ಕಂಡು ಮೂಗು ಮುರಿಯಬೇಕೇ? ಹಾಳಾದ ವಸ್ತುಗಳ ಎಲ್ಲಿಯಂದರೆ ಅಲ್ಲಿ ಎಸೆದು ಪರಿಸರ ಮಾಲಿನ್ಯ ಮಾಡುವವರನ್ನು, ಪರಿಸರದ ಅಂದ ಕೆಡಿಸುವವರನ್ನು ಕಂಡು ಮೂಗು ಮುರಿಯಬೇಕೇ? ಯಾರನ್ನು ಕಂಡು ಮೂಗುಮುರಿಯಬೇಕು?

ಚಿಂದಿ ಆಯುವವರು ಊರಿನ ನಗರದ ಶುಚಿಮಾಡುವ ಜವಾಬ್ದಾರಿ ಹೊತ್ತವರಲ್ಲ! ನಗರವನ್ನು ಶುಚಿಗೊಳಿಸಲೆಂದು ಅವುಗಳನ್ನು ಆಯುವುದಿಲ್ಲ! ಸಮಾಜದಲ್ಲಿ ಎಲ್ಲರಂತೆ ಬದುಕಬೇಕೆಂಬ ಆಸೆ. ಅದು ಆಗದಿರುವುದರಿಂದ, ಉಂಡಂತೆ ಸೋರುವ ಹೊಟ್ಟೆ, ಉಟ್ಟಂತೆ ಹರಿಯುವ ಬಟ್ಟೆ ಮಾನವನದಾಗಿರುವುದರಿಂದ, ನಿರುದ್ಯೋಗ ಸಮಸ್ಯೆ

ತಾಂಡವವಾಡುತ್ತಿರುವುದರಿಂದ ಬದುಕು ದುಸ್ಥರವಾದುದರಿಂದ ಹೊಟ್ಟೆ ತುಂಬಿಸಬೇಕಾದುದರಿಂದ ಈ ಚಿಂದಿ ಆಯಲು ಮುಂದಾಗಿದ್ದಾರೆ. ಒಮ್ಮೊಮ್ಮೆ ಇವರೊಂದಿಗೆ ಇವರು ತಮ್ಮ ಮಕ್ಕಳನ್ನೂ ಕರೆತರುತ್ತಾರೆ. ಕಲಿಯಲು ನಲಿಯಲು ಸಮವಸ್ತ್ರ ಉಟ್ಟು ಶಾಲೆ ಕಡೆಗೆ ಪುಸ್ತಕದ ಚೀಲ ಹೆಗಲಿಗೇರಿಸಿಕೊಂಡು ಹೆಜ್ಜೆ ಹಾಕಬೇಕಾದ ಮಗುವಿನ ಹೆಗಲಿಗೆ ಪುಸ್ತಕದ ಚೀಲದ ಬದಲು ಒಂದು ಸಣ್ಣ ಜೋಳಿಗೆ ಹಾಕಿರುತ್ತಾರೆ.

LEAVE A REPLY

Please enter your comment!
Please enter your name here