ಚಿರಾಯುಗಳಾಗಿ ಬದುಕೋಣಾ..!

0
69

ಹುಟ್ಟಿದ ಪ್ರತಿಯೊಂದು ಜೀವಿಗೂ ಸಾವು ಇದ್ದೇ ಇರುತ್ತದೆ. ಹುಟ್ಟು ಸಾವು ಸಹಜ. ಸಾಯದೇ ಇರುವವರು ಯಾರಿದ್ದಾರೆ ಹೇಳಿ!? ಹುಟ್ಟಿದ ಪ್ರತಿಯೊಬ್ಬರು ಒಂದಲ್ಲ ಒಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇ ಬೇಕು. ಕೆಲವರು ಆಡಂಬರದಿಂದ ಬಂದು ಸದ್ದಿಲ್ಲದೆ ಹೋಗುತ್ತಾರೆ, ಇನ್ನು ಕೆಲವರು ಸದ್ದಿಲ್ಲದೆಯೇ ಬಂದು ಸದ್ದಿಲ್ಲದಯೇ ಹೋಗುತ್ತಾರೆ.

ಒಟ್ಟಾರೆ ಹೇಳುವುದಾದರೆ ಬಂದವರೆಲ್ಲರೂ ಒಂದಲ್ಲ ಒಂದು ದಿನ ಹೋಗುವರೆ. ಹೋಗದೆ ಇರುವವರು ಯಾರು? ಹೋಗದೆ ಇರುವವರು ಯಾರಾದರು ಇದ್ದಾರೆಯೇ? ಹೋಗದೆ ಇರಲು ಸಾಧ್ಯವೇ? ನನ್ನ ಈ ಪ್ರಶ್ನೆಗಳಿಗೆ ಸಿಕ್ಕ ಉತ್ತರ….!!
‘ಅಂತಹವರು ಕೇವಲ ಕಾಲ್ಪನಿಕ, ಭೂಮಿಯ ಮೇಲಿರಲು ಸಾಧ್ಯವೇ ಇಲ್ಲ. ಸಾವಿಲ್ಲದವರು ಯಾರಿದ್ದಾರೆ ಹೇಳಿ? ಇದ್ದಿದ್ದರೆ ಅವರನ್ನು ಚಿರಾಯುಗಳೆಂದು ಕರೆಯ ಬಹುದಿತ್ತೇನೋ! ಆದರೆ ಅದು ಪುರಾಣಗಳಲ್ಲಿ ಮಾತ್ರ’.

‘ನಿಜ ಜೀವನದಲ್ಲಿ ಚಿರಾಯುಗಳಾಗಿ ಬದುಕುವುದು ಅಸಾಧ್ಯ. ಅದರಲ್ಲೂ ಈ ಒತ್ತಡದ ಜೀವನದಲ್ಲಂತೂ ಸಾಧ್ಯವೇ ಇಲ್ಲ. ಆದರೆ ಯೋಗ, ಪ್ರಾಣಾಯಾಮ, ಧ್ಯಾನವನ್ನು ಮಾಡಿ ಆಯಸ್ಸನ್ನು ಹೆಚ್ಚಿಸಿಕೊಳ್ಳಬಹುದೇ ಹೊರತು ಚಿರಾಯುಗಳಾಗುವುದು ಅಸಾಧ್ಯವೇ ಸರಿ’.

ಇನ್ನೂ ಕೆಲವರು… ‘ಚಿರಾಯುಗಳು ಇರಬಹುದು, ಬಹುಶಃ ಹಿಮಾಲಯದಂತಹ ಎತ್ತರದ ಶಿಖರಗಳನ್ನೇರಿ ಸಾವಿರಾರು ವರ್ಷಗಳಿಂದ ಧ್ಯಾನವನ್ನು ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿದ್ದೇವೆ ಆದರೆ ಎಂದಿಗೂ ಕಂಡಿಲ್ಲ’.
ಇಷ್ಟೆಲ್ಲಾ ಹತ್ತು ಹಲವು ಉತ್ತರಗಳು ನನ್ನಲಿದ್ದ ಪ್ರಶ್ನೆಗಳಿಗೆ ಉತ್ತರವೆನ್ನಿಸಲೇ ಇಲ್ಲ….

ಹೀಗೆ ಒಮ್ಮೆ ನನ್ನ ಪ್ರಶ್ನೆಗಳ ಕುರಿತು ಯೋಚಿಸುತ್ತಿರುವಾಗ ನನ್ನೆದುರಿಗೆ ಇದ್ದ ಪುಸ್ತಕವೊಂದು ನನ್ನ ಗಮನ ಸೆಳೆಯಿತು. ಆ ಪುಸ್ತಕ ರಾಮಾನುಜನ್, ಸರ್.ಎಂ.ವಿ, ರನ್ನ, ಜನ್ನ, ಪಂಪ, ಕುಮಾರವ್ಯಾಸ, ಪೈತಾಗರಸ್, ಐನ್‌ಸ್ಟೈನ್, ಯುಕ್ಲಿಡ್, ಥಾಮಸ್ ಆಲ್ವ ಎಡಿಸನ್, ಡೇನಿಯಲ್‌ನಂತಹ ಹಲವು ಸಾಧಕರ ವಿಷಯಗಳನ್ನೊಳಗೊಂಡಿತ್ತು. ಅವರುಗಳು ಹುಟ್ಟಿ ಬಹಳಷ್ಟು ವರ್ಷಗಳ ಹಿಂದೆಯೇ ಆದರೂ ಅವರ ಕುರಿತು ನಾವು ಇಂದಿಗೂ ತಿಳಿದುಕೊಳ್ಳುತ್ತಿದ್ದೇವೆ ಹಾಗೂ ಮುಂದಿನ ಪೀಳಿಗೆಗೂ ತಿಳಿಸುತ್ತಿರುತ್ತೇವೆ. ಹಾಗಾದರೆ ಹೇಳಿ ಇವರಲ್ಲವೇ ನಿಜವಾದ ಚಿರಾಯುಗಳು.

ಇವರು ಸತ್ತು ಬಹಳಷ್ಟು ವರ್ಷಗಳಾಗಿವೆಯೆಂದು ಸಮರ್ಥಿಸುವವರೂ ಇದ್ದಾರೆ. ಆದರೆ ಸಾವು ಅವರ ದೇಹಕ್ಕೆ ಮಾತ್ರ ಸೀಮಿತವೇ ಹೊರತು ಅವರ ವಿಚಾರಗಳಿಗಲ್ಲ. ಅವರ ಸಾಧನೆ, ತತ್ವಗಳು ಹಾಗೂ ವಿಚಾರಗಳು ಇಂದಿಗೂ ಉಸಿರಾಡುತ್ತಿವೆ. ಹೌದು ಉಸಿರಾಡುತ್ತಿವೆ ಎಲ್ಲರ ಮನದಲ್ಲಿ. ಹಾಗಾದರೆ ಬನ್ನಿ ಇನ್ನಾದರು ನಮ್ಮ ವ್ಯಕ್ತಿತ್ವಗಳ ಕಡೆ ಗಮನ ಹರಿಸೋಣ, ನಮ್ಮನ್ನು ನಾವು ಬದಲಿಸಿಕೊಳ್ಳೋಣ, ಚಿರಾಯುಗಳಾಗಿ ಬದುಕೋಣ. ‘ವ್ಯಕ್ತಿ ನಮ್ಮನ್ನು ಅಗಲಬಹುದು, ಆದರೆ ವ್ಯಕ್ತಿಯ ವ್ಯಕ್ತಿತ್ವ ಎಂದೂ ನಮ್ಮನ್ನು ಅಗಲುವುದಿಲ್ಲ’.

LEAVE A REPLY

Please enter your comment!
Please enter your name here