ಜಾತಿ ಹೆಸರಿನಲ್ಲಿ ವೀರಶೈವ ಧರ್ಮ ಒಡೆಯಬೇಡಿ

0
42

 ದಾವಣಗೆರೆ:

      ಜಾತಿಯ ಹೆಸರಿನಲ್ಲಿ ವೀರಶೈವ ಧರ್ಮವನ್ನು ಒಡೆಯುವ ಪ್ರಯತ್ನವನ್ನೂ ಯಾರೂ ಮಾಡಬಾರದು ಎಂದು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.

      ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ ಸಮಾರೋಪ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮದ ಇತಿಹಾಸ ಮತ್ತು ಪರಂಪರೆ ಅಪೂರ್ವವಾದುದು. ಧರ್ಮ ಜಾತಿಯ ಹೆಸರಿನಲ್ಲಿ ವೀರಶೈವ ಧರ್ಮವನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದರು.

      ಧರ್ಮ ನೀಡುವ ಫಲಗಳನ್ನು ಮನುಷ್ಯ ಬಯಸುತ್ತಾನೆ. ಆದರೆ ಆ ಧರ್ಮದ ಪರಿಪಾಲನೆ ಕೆಲವರಿಗೆ ಬೇಕಾಗಿಲ್ಲ. ಯಾವುದೇ ಧರ್ಮದ ಬಗೆಗೆ ಮಾತನಾಡುವುದು ಸುಲಭ. ಆದರೆ, ಆ ಮಾತಿನಂತೆ ನಡೆದುಕೊಳ್ಳುವುದು ಸುಲಭದ ಮಾತಲ್ಲ. ಕಾಲ ಕಾಲಕ್ಕೆ ಮರದ ಎಲೆಗಳು ಉದುರಿದರೂ ಮರದ ಬೇರು ಭದ್ರವಾಗಿರುವಂತೆ ಕೆಲವು ಜನರ ಅಭಿಪ್ರಾಯಗಳು ಬದಲಾದರೂ ಮೂಲ ತತ್ವ ಸಿದ್ಧಾಂತಗಳನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗದು ಎಂದರು.

      ಸತ್ಯ ಸಂಸ್ಕೃತಿಯನ್ನು ಯಾರಿಂದಲೂ ಮರೆಮಾಚಲು ಸಾಧ್ಯವಿಲ್ಲ. 28 ಶಿವಾಗಮಗಳ ಉತ್ತರ ಭಾಗದಲ್ಲಿ ವೀರಶೈವ ಧರ್ಮದ ಹಿರಿಮೆ ಮಹಿಮೆಯನ್ನು ಕಾಣಬಹುದು. ಸಿದ್ಧಾಂತ ಶಿಖಾಮಣಿ ಮತ್ತು ವಚನಗಳ ಸಾಹಿತ್ಯದಲ್ಲಿ ವೀರಶೈವ ಧರ್ಮದ ಆದರ್ಶ ಮೌಲ್ಯಗಳನ್ನು ಕಾಣಬಹುದಾಗಿದೆ. ಧರ್ಮ ನನಗೆ ಏನು ಕೊಟ್ಟಿದೆ ಎಂದು ಕೇಳುವುದಕ್ಕಿಂತ ನಾನು ಧರ್ಮಕ್ಕಾಗಿ ಏನು ಕೊಟ್ಟಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಂಡರೆ ಸಾಕು ಎಂದು ಹೇಳಿದರು.

      ಧರ್ಮವೆಂದರೆ ಉತ್ಕೃಷ್ಟ ಸಂಸ್ಕೃತಿ. ಅದಕ್ಕೊಂದು ನೀತಿ ಸಂಹಿತೆಯಿದೆ. ಧರ್ಮದಲ್ಲಿ ಮಾರ್ಗವಿದೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ. ಧರ್ಮ ವಿಜ್ಞಾನಗಳು ಪರಸ್ಪರ ಬೆರೆತು ನಡೆದರೆ ಮಾನವ ಕಲ್ಯಾಣ ಸುಲಭವಾಗುತ್ತದೆ. ವೀರಶೈವ ಧರ್ಮದ ಪಂಚ ಪೀಠಗಳು ಯಾವಾಗಲೂ ಸಮನ್ವಯ ಭಾವನೆಯನ್ನು ಹೊಂದಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಬಸವಾದಿ ಶಿವಶರಣರ ವಿಚಾರ ಧಾರೆಗಳನ್ನು ಪ್ರಸಾರ ಮಾಡುತ್ತಿವೆ ಎಂದರು.

ರಾಜ್ಯ ಇಬ್ಭಾಗದ ಭಾವನೆ ಬೇಡ:

       ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂದು ರಾಜ್ಯ ಇಬ್ಭಾಗದ ಅಪಸ್ವರದ ಭಾವನೆ ಯಾರಿಗೂ ಬೇಡ. ಅಧಿಕಾರ ಸೂತ್ರ ಹಿಡಿದ ಮುಖ್ಯ ಮಂತ್ರಿಗಳು ಅಖಂಡ ಕರ್ನಾಟಕದ ವಿಶಾಲ ಮನೋಭಾವನೆ ಬೆಳೆಯುವಂತೆ ಕಾರ್ಯ ಮಾಡಬೇಕಾಗಿದೆ. ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗಬೇಕಲ್ಲದೇ ಕೆಲವೇ ಪ್ರಾಂತ ಅಭಿವೃದ್ಧಿ ಭಾವನೆ ಬೇಡ. ಅಭಿವೃದ್ಧಿಯಾಗದ ಎಲ್ಲ ಭಾಗದ ಕಾರ್ಯಗಳನ್ನು ಸಮಾನ ಮನಸ್ಸಿನಿಂದ ಪ್ರೋತ್ಸಾಹಿಸಿ ಬೆಳೆಸಬೇಕೆಂದರು. ರಾಜ್ಯದ ಕೆಲವು ಭಾಗಗಳಲ್ಲಿ ಸರಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ನೋವಿನ ಸಂಗತಿ. ಮಾತೃ ಭಾಷೆ ಕನ್ನಡ ಬೆಳೆಯುವಂತೆ ಸರಕಾರ ವಿಶೇಷ ಗಮನವಿತ್ತು ಬೆಳೆಸಲಿ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು.

      ಬಿಜೆಪಿ ಯುವ ಮುಖಂಡ ಹೆಚ್.ಎಸ್.ನಾಗರಾಜ ಮಾತನಾಡಿ, ಧರ್ಮವು ಆಚರಣೆಗೆ ಸೀಮಿತವಾಗಿರಬೇಕು. ಆದರೆ ಇಂದು ಕೆಲವರಿಂದ ಧರ್ಮವು ಲಾಭ, ವೃತ್ತಿಗಾಗಿ ಬಳಕೆಯಾಗುತ್ತಿದೆ. ಭಾವನಾತ್ಮಕ ಜನರಿಗೆ ಮೋಸ ಮಾಡುವಂತಹ ಕೃತ್ಯಗಳನ್ನು ಕಳೆದೊಂದು ವರ್ಷದಿಂದ ನೋಡಿದ್ದೇವೆ. ವೀರಶೈವ, ಲಿಂಗಾಯತ ಎರಡೂ ಒಂದೇ ಆಗಿದ್ದು, ಅದರಲ್ಲಿ ಯಾವುದೇ ಅನುಮಾನ ಬೇಡ. ಸರ್ಕಾರದ ಕಡತಕ್ಕಿಂತಲೂ ಜನರ ಮನಸ್ಸಿನಲ್ಲಿರುವ ಭಾವನೆಗಳು ಮುಖ್ಯ. ಲಾಭಕ್ಕೋಸ್ಕರ ರಾಜಕಾರಣಿಗಳು ಧರ್ಮ ಒಡೆಯುವ ಕೆಲಸ ಮಾಡಿದ್ದು, ಅದಕ್ಕೆ ಜನರೂ ತಕ್ಕ ಉತ್ತರ ನೀಡಿದ್ದಾರೆ. ಜನರ ಭಾವನೆಗಳಿಗೆ ಧಕ್ಕೆ ತರುವಯಾವ ರಾಜಕಾರಣಿಗೂ ಉಳಿಗಾಲವಿಲ್ಲ. ಜನರ ಭಾವನೆ ಗೌರವಿಸುವವರು ಮಾತ್ರರಾಜಕೀಯದಲ್ಲಿ ಏಳಿಗೆಯಾಗಬಹುದು ಎಂದರು.

      ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧರ್ಮ ಕೆಡಿಸುವುದು ಸುಲಭ. ಆದರೆ ಧರ್ಮ ಕಟ್ಟಿ ಬೆಳೆಸುವುದು ಬಲು ಕಷ್ಟ. ಪೂರ್ವಜರ ಆದರ್ಶ ದಾರಿಯಲ್ಲಿ ಮುನ್ನಡೆದು ಬಾಳಿನಲ್ಲಿ ಬೆಳಕು ಕಾಣಬೇಕೆಂದರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. . ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯರು, ಮಳಲಿಯ ಡಾ|| ನಾಗಭೂಷಣ ಶಿವಾಚಾರ್ಯರು, ಚನ್ನಗಿರಿ ಶಿವಶಾಂತವೀರ ಶಿವಾಚಾರ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಜೆ.ವೇದಮೂರ್ತಿ ಅವರಿಗೆ “ಜನಸೇವಾ ರತ್ನ” ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿ. ಶಿವಯೋಗಪ್ಪ, ಎನ್.ಜಿ. ಪುಟ್ಟಸ್ವಾಮಿ, ಎನ್.ಎ. ಮುರುಗೇಶ, ಸೈಯದ್ ಸೈಫುಲ್, ಡಿ.ಎಂ. ಹಾಲಸ್ವಾಮಿ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಹಲವಾರು ಗಣ್ಯರಿಗೆ ಹಾಗೂ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯಿತ್ತು ಆಶೀರ್ವದಿಸಿದರು. ವೀರೇಶ ಕಿತ್ತೂರು ಅವರಿಂದ ಸಂಗೀತ ಜರುಗಿತು. ಜಂಬಗಿ ರಾಧೇಶ ಸ್ವಾಗತಿಸಿದರು. ಕೆ.ಎಂ. ರುದ್ರಮುನಿಸ್ವಾಮಿ ನಿರೂಪಿಸಿದರು.

LEAVE A REPLY

Please enter your comment!
Please enter your name here