ಜಾನಪದ ಕಲೆ ಉಳಿಸಿ ಬೆಳೆಸಲು ಪಾರ್ವತಮ್ಮ ಕರೆ

0
19

 ದಾವಣಗೆರೆ:

      ನಶಿಸುತ್ತಿರುವ ನಮ್ಮ ಕಲೆಯನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜನೆ ಮಾಡಿ ಜನರಲ್ಲಿ ಅದರ ಮಹತ್ವ ಸಾರುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜಿಪಂ ಮಾಜಿ ಅಧ್ಯಕ್ಷೆ, ಶಾಲೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಅಣಬೇರು ಪಾರ್ವತಮ್ಮ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

      ತಾಲೂಕಿನ ಬಾಡ ಗ್ರಾಮದ ಅಣಬೇರು ಕೆಂಚಪ್ಪ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ತರಳಬಾಳು ಜಾನಪದ ಸಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಈ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಆಯೋಜನೆ ಮಾಡಲಾಗಿದೆ. ಪ್ರಸ್ತುತ ದಿನಗಳಲ್ಲಿ ಸಿನಿಮಾ, ಟಿವಿ ಮಾಧ್ಯಮದ ಮುಂದೆ ಜಾನಪದ ಮರೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಜಾನಪದ ಕಲೆಯನ್ನು ಬೆಳೆಸಿ ಉಳಿಸುವಲ್ಲಿ ಸಂಘ, ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಶ್ರಮ ವಹಿಸಬೇಕು ಎಂದರು.ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಪ್ರೊ:ಬಿ.ಎಸ್.ರಂಗನಾಥ ಮಾತನಾಡಿ, ಶಿಕ್ಷಣ ಎಂದರೆ ಮಕ್ಕಳನ್ನು ಕೇವಲ ಬುದ್ದಿವಂತರನ್ನಾಗಿ ಮಾಡುವುದಲ್ಲ. ಹೃದಯವಂತರನ್ನಾಗಿ ಮಾಡಬೇಕು. ವಿದ್ಯಾರ್ಥಿಗಳಲ್ಲಿನ ಭಾವನಾತ್ಮಕ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು.

     ವಿದ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಒತ್ತು ನೀಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಜಿಪಂ ಸದಸ್ಯೆ ಶೈಲಜಾ ಬಸವರಾಜ ಮಾತನಾಡಿ ಸಿರಿಗೆರೆ ಶ್ರೀಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಮ್ಮ ಕಲೆ, ಸಂಪ್ರದಾಯ, ಸಂಸ್ಕಾರ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸಗಳನ್ನು ಮಾಡುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ಹೇಳಿದರು.ಜಿಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್.ಪ್ರಭುದೇವ, ಬಿಇಒ ಪುಷ್ಪಲತಾ, ತಾಪಂ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಳಬಾಳು ವಿದ್ಯಾಸಂಸ್ಥೆಯ 350 ವಿದ್ಯಾರ್ಥಿಗಳು ರಾಜ್ಯದ 25 ಜಾನಪದ ಕಲಾಪ್ರಕಾರಗಳನ್ನು ಪ್ರದರ್ಶನ ಮಾಡಿದರು.

LEAVE A REPLY

Please enter your comment!
Please enter your name here