ಜಾಲತಾಣದಲ್ಲಿ ಸುದ್ದಿಯಾದ ಬೋಡಬಂಡೇನಹಳ್ಳಿ ಶಾಲಾ ಸಮಸ್ಯೆ

0
20

ಕೊರಟಗೆರೆ:

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಗಮನಸೆಳೆಯುವಂತೆ ಮಾಡಿದ ಯುವಕನೋರ್ವನ ಸಂದೇಶವನ್ನು ವೀಕ್ಷಿಸಿದ ಕೊರಟಗೆರೆ ಫ್ರೇಂಡ್ಸ್‍ಗ್ರೂಪ್ ಸ್ಪಂದಿಸಿ ಶಾಲೆಗೆ ಭೇಟಿ ನೀಡಿ ಶಾಲೆಯ ಅಭಿವೃದ್ದಿಗೆ ಮುಂದಾಗಿದ್ದಾರೆ.

      ತಾಲ್ಲೂಕಿನ ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬೋಡಬಂಡೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮೇಲ್ಛಾವಣಿ ಶಿಥಿಲಗೊಂಡಿರುವ ಬಗ್ಗೆ ಅದೇ ಗ್ರಾಮದ ಯುವಕನೋರ್ವ ಫೇಸ್‍ಬುಕ್, ವಾಟ್ಸ್‍ಆಪ್‍ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನೆ ಮಾಡಿದ ಹಿನ್ನೆಲೆಯಲ್ಲಿ ಫ್ರೇಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್ ಹಾಗೂ ಸದಸ್ಯರು ಶಾಲೆಗೆ ಭೇಟಿ ನೀಡಿ ಸಂಪೂರ್ಣ ಶಾಲೆಯ ದುಸ್ಥಿತಿಯನ್ನು ಕಂಡು ಶಾಲೆಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

      ಬೋಡಬಂಡೆನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಸುತ್ತಮುತ್ತಲಿನ 5 ಗ್ರಾಮದ ಮಕ್ಕಳು ವ್ಯಾಸಂಗ ಮಾಡಲು ಬರುತ್ತಾರೆ. ಈ ಸರ್ಕಾರಿ ಶಾಲೆಯು ಉತ್ತಮ ಶಿಕ್ಷಣ ನೀಡುತ್ತಿದ್ದು, ಇಲ್ಲಿನ ಶಾಲಾ ಕೊಠಡಿಗಳು ಹಾಗೂ ಶೌಚಾಲಯಗಳ ಅವ್ಯವಸ್ಥೆಯನ್ನು ಕಂಡ ಪೋಷಕರು ತಮ್ಮ ಮಕ್ಕಳ ಜೀವಕ್ಕೇನಾದರೂ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ಪಟ್ಟಣದ ಖಾಸಗಿ ಶಾಲೆಗಳಿಗೆ ಸಾಲಸೋಲ ಮಾಡಿ ತಮ್ಮ ಮಕ್ಕಳನ್ನು ದಾಖಲಾತಿ ಮಾಡುತ್ತಿರುವುದು ಕಂಡು ಬಂದಿದೆ.

      ಇತ್ತೀಚಿನ ದಿನಗಳಲ್ಲಿ ಕನ್ನಡ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಮುಚ್ಚುವ ಹಂತ ತಲುಪಿದ್ದು, ಬೋಡಬಂಡೇನಹಳ್ಳಿ ಗ್ರಾಮದ ಶಾಲೆಯಲ್ಲಿ ಸುಮಾರು 81 ವಿದ್ಯಾರ್ಥಿಗಳು 1ರಿಂದ 7ನೇ ತರಗತಿಯವರೆಗೂ ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಅನೇಕ ಅರ್ಜಿಗಳನ್ನು ಸಲ್ಲಿಸಿ ಮನವಿ ಮಾಡಿದರೂ ಯಾವ ಪ್ರತಿಕ್ರಿಯೆ ದೊರೆಯದೆ ಇಂದಿಗೂ ಕೂಡ ಶಾಲೆಯ ಕೊಠಡಿ ಮೇಲ್ಛಾಣಿಯ ಶಿಥಿಲವಾಗಿ ವಿದ್ಯಾರ್ಥಿಗಳು ಜೀವ ಭಯದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಕಳೆದ 45 ವರ್ಷಗಳ ಹಳೆಯ 3 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಯೆ ತಲುಪಿದ್ದು, ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ವ್ಯಾಸಂಗ ಮಾಡುತ್ತಿರುವುದನ್ನು ಕಂಡ ಸ್ಥಳೀಯ ಯುವಕ ಶಾಲೆಯ ಅವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಕಳುಹಿಸಿದ್ದನ್ನು ಗಮನಿಸಿದ ಸಂಘ, ಸಂಸ್ಥೆಗಳು ಆ ಶಾಲೆಗೆ ತೆರಳಿ ಅಲ್ಲಿನ ಸಮಸ್ಯೆಯನ್ನು ಕುಲಂಕಶವಾಗಿ ವೀಕ್ಷಿಸಿ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲೆಯ ಮೂಲಭೂತ ಸೌಕರ್ಯ ಕುಂಠಿತವಾಗಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

      ಶಾಲೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಸ್ಥಳಿಯ ಗ್ರಾ.ಪಂ., ತಾ.ಪಂ, ಜಿ.ಪಂ ಹಾಗೂ ಸಂಬಂಧಪಟ್ಟ ಇಲಾಖೆಗೆ ಅನೇಕ ಬಾರಿ ಅರ್ಜಿ ಸಲ್ಲಿಸಿ ಹಾಗೂ ಸ್ಥಳಿಯವಾಗಿ ಗ್ರಾಮಕ್ಕೆ ಭೇಟಿ ನೀಡಿದಾಗ ಮೌಖಿಕವಾಗಿ ಮತ್ತು ಲಿಖಿತ ಮೂಲಕ ಮನವಿ ಸಲ್ಲಿಸಿದರೂ ಸ್ಪಂದಿಸುವುದಾಗಿ ಹೇಳಿದಂತಹ ಎಲ್ಲ್ಲರೂ ಕೂಡ ಸಮಸ್ಯೆಯನ್ನು ಬಗೆಹರಿಸಿಕೊಡುವ ಆಶ್ವಾಸನೆಯನ್ನು ನೀಡಿದರೆ ಹೊರತು ಈವರೆಗೂ ಸರಿಪಡಿಸದಿರುವ ಬೇಜವಾಬ್ದಾರಿತನಕ್ಕೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

      ಈ ಶಾಲೆಯ ಅವ್ಯವಸ್ಥೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದ ತಾಲ್ಲೂಕಿನ ವೈದ್ಯರು, ಕನ್ನಡಪರ ಸಂಘಟನೆಗಳು, ಸರ್ಕಾರಿ ನೌಕರರು, ಸ್ಥಳೀಯ ಸಂಘಸಂಸ್ಥೆಗಳು, ಸಾರ್ವಜನಿಕರು ಮುಂದಾಗಿ ಶಾಲೆಯ ಮಕ್ಕಳ ಸ್ಥಿತಿಯನ್ನು ಕಂಡು ಸರ್ಕಾರಿ ಶಾಲೆಯ ಉಳಿವಿಗಾಗಿ ತಮ್ಮನ್ನು ತೊಡಗಿಸಿ ಕೊಳ್ಳುವುದಾಗಿ ಭರವಸೆ ನೀಡುತ್ತಿರುವುದು ಕಂಡು ಬಂದಿತು.

      ಸಾಮಾಜಿಕ ಜಾಲತಾಣಗಳಲ್ಲಿ ಬೋಡಬಂಡೇನಹಳ್ಳಿ ಗ್ರಾಮದ ಶಾಲಾ ಕೊಠಡಿ ಕುಸಿದು ವಿದ್ಯಾರ್ಥಿಗಳು ಹೊರಗೆ ಕುಳಿತು ವ್ಯಾಸಂಗ ಮಾಡುತ್ತಿರುವುದನ್ನು ನೋಡಿದಾಗ ನಾವು ಮತ್ತು ನಮ್ಮ ಗ್ರೂಪ್ ನ ಸದಸ್ಯರು ಶಾಲೆಗೆ ಭೇಟಿ ನೀಡಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಗ್ರಾಮದ ಹಿರಿಯರೊಂದಿಗೆ ಚರ್ಚಿಸಿ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದ್ದೇವೆ.

ಮಲ್ಲಣ್ಣ, ಖಜಾಂಚಿ, ಫ್ರೇಂಡ್ಸ್ ಗ್ರೂಪ್, ಕೊರಟಗೆರೆ.

ಶಾಲೆಯ ಕಟ್ಟಡ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸದ್ದರೂ ಯಾವ ಪ್ರಯೋಜ£ವೂ ಆಗಿರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಶಾಲೆಯಲ್ಲಿನ ಸಮಸ್ಯೆಯನ್ನು ಕಂಡ ಫ್ರೇಂಡ್ಸ್‍ಗ್ರೂಪ್ ಮತ್ತು ಸಂಘ, ಸಂಸ್ಥೆಗಳು ಮುಂದಾಗಿರುವುದು ಶ್ಲಾಘನೀಯ.
ಎಸ್.ಡಿ.ಎಂ.ಸಿ ಅಧ್ಯಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಬೋಡಬಂಡೇನಹಳ್ಳಿ.
ನಾನು ಈ ಶಾಲೆಯ ಬಗ್ಗೆ ವಾಟ್ಸ್‍ಆಪ್‍ನಲ್ಲಿ ನೋಡಿ ನಮ್ಮ ಸಂಸ್ಥೆಯ ಮುಖ್ಯಸ್ಥರಿಗೆ ತಿಳಿಸಿದಾಗ ತಕ್ಷಣ ಪ್ರತಿಕ್ರಿಯಿಸಿ ಕೊಠಡಿಯನ್ನು ಸರಿಪಡಿಸಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ನಾವು ಕೂಡ ನಮ್ಮ ರೋಟರಿ ಸಂಸ್ಥೆಯ ವತಿಯಿಂದ ಶಾಲೆಯ ಅಗತ್ಯತೆಗಳನ್ನು ಚರ್ಚಿಸಿ ಸಹಕಾರ ನೀಡುತ್ತೇವೆ.

ಚಿನ್ನವೆಂಕಟಶ್ರೇಷ್ಠಿ, (ಚಿನ್ನಿ) ರೋಟರಿ ಕಬ್ಲ್ ಸದಸ್ಯ, ಕೊರಟಗೆರೆ.

ಮಕ್ಕಳ ಹಕ್ಕುಗಳು ಸರ್ಕಾರದಿಂದಲೆ ಉಲ್ಲಂಘನೆಯಾಗುತ್ತಿದ್ದು, ಈಗಾಗಲೇ ಈ ಶಾಲೆಗೆ ಖುದ್ದು ಭೇಟಿ ನೀಟಿ ಪರಿಶೀಲಿಸಲಾಗಿದೆ. ಇಲ್ಲಿನ ವಾತಾವರಣ ಗಮನಿಸಿದರೆ ಮಕ್ಕಳು ಯಾವುದೋ ಅನಾದಿ ಕಾಲದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವಂತೆ ಭಾಸವಾಗುತ್ತಿದೆ. ಈ ಶಾಲೆಗೆ ಸಂಬಂಧಿಸಿ ಅನೇಕ ಪತ್ರಗಳನ್ನು ಸರ್ಕಾರಕ್ಕೆ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಮೂಲ ಸೌಕರ್ಯಗಳಿಗಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.

ಸಿದ್ದಲಿಂಗೇಗೌಡ, ವಿಶ್ವ ಮಾನವ ಹಕ್ಕುಗಳ ಹೋರಾಟಗಾರರು, ತುಮಕೂರು.

ನಾವು ಇದೇ ಶಾಲೆಯಲ್ಲಿ 1ನೇ ತರಗತಿಯಿಂದ ಓದುತ್ತಿದ್ದೇವೆ. ನಮಗೆ ಓದಲು ತರಗತಿಯ ಕೋಣೆಯಿಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕೊಠಡಿಯ ಮೇಲ್ಛಾವಣಿಯ ಹೆಂಚುಗಳು ಬಿದ್ದು ಹೋಗಿ ಶಾಲೆಯ ಮೈದಾನದಲ್ಲಿ ಓದಿ ಕೊಳ್ಳುತ್ತಿದ್ದೇವೆ. ಮಳೆ ಬಂದರೆ ಅಂದಿನ ದಿನ ನಮಗೆ ತುಂಬಾ ತೊಂದರೆಯಾಗುತ್ತಿದೆ. ನಮಗೆ ಓದಲು ಕೊಠಡಿಯನ್ನು ಕಲ್ಪಿಸಿಕೊಡಿ ಎಂದು ಮನವಿ ಮಾಡುತ್ತೇನೆ.

ಸ್ನೇಹ, 7ನೇ ತರಗತಿ ವಿದ್ಯಾರ್ಥಿನಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಬೋಡಬಂಡೇನಹಳ್ಳಿ.

LEAVE A REPLY

Please enter your comment!
Please enter your name here