ಜಾಸ್ತಿ ಕೂಲಿಕಾರ್ಮಿಕರು ಕೆಲಸ ಮಾಡುವ ಕಡೆ ಕಾರ್ಮಿಕ ಅದಾಲತ್ ನಡೆಸಿ

0
23

ಬಳ್ಳಾರಿ:

      ನರೇಗಾ ಅಡಿ ಜಾಸ್ತಿ ಕೂಲಿಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಕಾರ್ಮಿಕ ಅದಾಲತ್ ನಡೆಸಬೇಕು. ಈ ಮೂಲಕ ಅವರಿಗೆ ಕಾರ್ಮಿಕ ಇಲಾಖೆಯಿಂದ ದೊರಕುವ ಸೌಲಭ್ಯಗಳ ಕುರಿತು ಅವರಿಗೆ ಸಮರ್ಪಕವಾಗಿ ಮಾಹಿತಿ ನೀಡುವ ಕೆಲಸವನ್ನು ಆಂದೋಲನ ರೂಪದಲ್ಲಿ ಕೈಗೆತ್ತಿಕೊಳ್ಳುವಂತೆ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

       ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಕೂಲಿಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನಾನಾ ಸೌಲಭ್ಯಗಳಿದ್ದು,ಅವುಗಳ ಬಗ್ಗೆ ಮಾಹಿತಿ ಕೊರತೆ ಕಾರ್ಮಿಕರಲ್ಲಿದೆ. ಆದ ಕಾರಣ ಆ ಸೌಲಭ್ಯಗಳ ಕುರಿತು ಅವರಿಗೆ ಮಾಹಿತಿ ನೀಡಿ ಅವುಗಳನ್ನು ಸದುಪಯೋಗಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅದಾಲತ್‍ಗಳನ್ನು ಆಂದೋಲನದ ರೂಪದಲ್ಲಿ ನಡೆಸಬೇಕು. ಇದಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೋಬಳಿಮಟ್ಟಕ್ಕೆ ಒಬ್ಬರಂತೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

      ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ದೇವರಾಜ ಅರಸು ನಿಗಮಗಳ ಅಧಿಕಾರಿಗಳು ತಾಪಂ ಸಾಮಾನ್ಯ ಸಭೆಗಳನ್ನು ಗಂಭೀರವಾಗಿ ಪರಿಗಣಿಸಿ,ಅವುಗಳಲ್ಲಿ ಭಾಗವಹಿಸುವುದಕ್ಕೆ ಮುಂದಾಗಬೇಕು. ಸ್ಥಳೀಯ ಮಟ್ಟದಲ್ಲಿ ಉದ್ಭವವಾಗುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವುಗಳನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದು ಜಿಪಂ ಸಿಇಒ ರಾಜೇಂದ್ರ ಅವರು ಹೇಳಿದರು. ಈ ತಾಪಂ ಸಾಮಾನ್ಯ ಸಭೆಗಳ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದಿರಿ; ಆ ರೀತಿ ಏನಾದ್ರೂ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ತಾಪಂ ಇಒಗಳಿಗೆ ಸೂಚನೆ ನೀಡಿದರು.

       *ಗ್ರಾಪಂ ಸಿಬ್ಬಂದಿಗೆ ಇ-ಹಾಜರಾತಿ ಕಡ್ಡಾಯ: ಜಿಲ್ಲೆಯಲ್ಲಿರುವ ಎಲ್ಲ 200 ಗ್ರಾಪಂಗಳ ಪಿಡಿಒಗಳು,ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಯವರಿಗೆ ಇ-ಹಾಜರಾತಿ ಕಡ್ಡಾಯ ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು

      ಇ-ಹಾಜರಾತಿ ಇಲ್ಲದಿದ್ದಲ್ಲಿ ಅನಧಿಕೃತ ಗೈರು ಎಂದು ಪರಿಗಣಿಸಲಾಗುವುದು. ಇ-ಹಾಜರಾತಿ ಪರಿಗಣಿಸದೇ ಸಂಬಳ ಮಾಡಿದರೇ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಜಿಪಂ ಅಧೀನದಲ್ಲಿ ಬರುವ ಎಲ್ಲ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು.

      ತಾಪಂ ಇಒಗಳು ಒಂದು ತಿಂಗಳೊಳಗೆ ಅಂಗನವಾಡಿ ಕೇಂದ್ರಗಳಿಗೆ ಸ್ಥಳ ಗುರುತುಮಾಡಿ ವರದಿ ಕೊಡಿ;ಇದನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿ ಎಂದು ಸಿಇಒ ರಾಜೇಂದ್ರ ಅವರು ಹೇಳಿದರು.

      ಕೃಷಿ,ಆರೋಗ್ಯ, ಶಿಕ್ಷಣ,ವಸತಿ, ನರೇಗಾ, ಶುದ್ಧಕುಡಿಯುವ ನೀರು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಹಾಗೂ ಜಿಪಂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here