ಜಿಲ್ಲಾಪಂಚಾಯಿತಿ ಕಾರ್ಯಕ್ರಮಗಳಿಗಾಗಿ 456.17 ಕೋಟಿ ರೂ ಅನುದಾನ ನಿಗಧಿ

0
35

     

      ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ 2018-19 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿಯ ವತಿಯಿಂದ ಹಮ್ಮಿಕೊಳ್ಳಲಾಗುವ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾಯೋಜನೆ ತಯಾರಾಗಿದೆ. ವಿವಿಧ ಇಲಾಖೆಗಳು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಬೇಕಾದ ಅನುದಾನದ ಮೊತ್ತ ಹಾಗೂ ವಾರ್ಷಿಕ ಕ್ರಿಯಾಯೋಜನೆಯನ್ನು ಜಿಲ್ಲಾಪಂಚಾಯಿತಿಗೆ ಸಲ್ಲಿಸಿ ಅನುಮೋದನೆಯನ್ನು ಪಡೆದಿವೆ.

      ಇಡೀ ಜಿಲ್ಲೆಯಲ್ಲಿ ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತಿತರ ಆಡಳಿತಾತ್ಮಕ ವೆಚ್ಚ, ಸಿಬ್ಬಂದಿ ವೇತನಗಳು ಮತ್ತು ವಾಹನಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮುಂತಾದ ಕಾರ್ಯಕ್ರಮಗಳಿಗಾಗಿ ಸದರಿ ಕ್ರಿಯಾ ಯೋಜನೆಯಲ್ಲಿ ಅವಕಾಶÀವನ್ನು ಕಲ್ಪಿಸಲಾಗಿದ್ದು, ಇದು ಸದರಿ ಆರ್ಥಿಕ ವರ್ಷದಲ್ಲಿ ಪೂರ್ಣಗೊಳ್ಳಬೇಕಾಗುತ್ತದೆ. ಜಿಲ್ಲಾ ವಲಯ ಕಾರ್ಯಕ್ರಮಗಳಡಿಯಲ್ಲಿ ಇಲಾಖಾವಾರು ಕ್ರಿಯಾಯೋಜನೆಗೆ 456.17 ಕೋಟಿ ರೂಗಳ ಪ್ರಸ್ತಾವನೆಗೆ ಹಸಿರು ನಿಶಾನೆ ದೊರೆತಿದೆ.

ಇಲಾಖಾವಾರು ಕ್ರಿಯಾಯೋಜನೆ…ನಿಗಧಿಯಾದ ಅನುದಾನ..!

      ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತುಮಕೂರು ಮತ್ತು ಮಧುಗಿರಿ ಕಚೇರಿಗಳಲ್ಲಿ ಸಿಬ್ಬಂದಿಗಳ ವೇತನಕ್ಕಾಗಿ 413 ಲಕ್ಷ, ವೇತನೇತರ ವೆಚ್ಚಗಳಿಗಾಗಿ 24.04 ಲಕ್ಷ, ಜಿಲ್ಲಾ ಪಂಚಾಯಿತ್ ಕೇಂದ್ರ ಕಚೇರಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಉಪವಿಭಾಗಗಳ ಕಟ್ಟಡಗಳ ನಿರ್ವಹಣೆ ಮತ್ತು ದುರಸ್ತಿಗಾಗಿ 75.56 ಲಕ್ಷ, ಭಾರತ ಸರ್ಕಾರ ಪೂರೈಸಿದ ಸಾಮಗ್ರಿ ಮತ್ತು ಸಲಕರಣೆಯ ಖರ್ಚುಗಳಿಗಾಗಿ ವಿನಿಯೋಗಿಸಲಾಗುವ ಮೊತ್ತ 8.01 ಲಕ್ಷ ರೂಪಾಯಿಗಳು. ಒಟ್ಟಾರೆಯಾಗಿ 520.61 ಲಕ್ಷ ರೂಪಾಯಿಗಳ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಗಿದೆ.

      ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 22928.20 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಇದರಲ್ಲಿ ಅಕ್ಷರ ದಾಸೋಹಕ್ಕಾಗಿ 8677.19 ಲಕ್ಷ, ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ಶೈಕ್ಷಣಿಕ ಜಿಲ್ಲೆಗೆ 9400.46 ಲಕ್ಷ, ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ 4783.35 ಲಕ್ಷ ಮತ್ತು ಜಿಲ್ಲೆಯ ಆಯ್ದ ಗ್ರಾಮಪಂಚಾಯಿತಿಗಳಲ್ಲಿ ಆಯ್ದ ನವಸಾಕ್ಷರರಿಗೆ ಸಾಕ್ಷರತಾ ಸ್ಥಿರೀಕರಣ ಮತ್ತು ಜೀವನಮಟ್ಟ ಸುಧಾರಣಾ ಶಿಬಿರ ಕಾರ್ಯಕ್ರಮಗಳಿಗಾಗಿ ಹಾಗೂ ಇತರೆ ವೆಚ್ಚಗಳಿಗಾಗಿ ವಯಸ್ಕರ ಶಿಕ್ಷಣಕ್ಕಾಗಿ 67.20 ಲಕ್ಷ ರೂಪಾಯಿಗಳ ಕ್ರಿಯಾಯೋಜನೆಗೆ ಅನುಮೋದನೆಯನ್ನು ಪಡೆಯಲಾಗಿದೆ.

      ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಿಗಾಗಿ ಒಟ್ಟು 7362.98 ಲಕ್ಷ ರೂಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಆರೋಗ್ಯ ಇಲಾಖೆಯ ಕ್ರಿಯಾ ಯೋಜನೆಯಲ್ಲಿ ಆರೋಗ್ಯ ಸಂಸ್ಥೆಗಳಿಗೆ ಆರೋಗ್ಯ ಸಲಕರಣೆಗಳ ದುರಸ್ತಿ ವೆಚ್ಚವನ್ನು ಭರಿಸುವುದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಧೀನ ಆರೋಗ್ಯ ಸಂಸ್ಥೆಗಳು ಮತ್ತು ಉಪಕೇಂದ್ರಗಳ ದುರಸ್ತಿ ವೆಚ್ಚವನ್ನು ಭರಿಸುವಿಕೆ, ವೈದ್ಯರು ಮತ್ತು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ವೇತನ, ಇತರೆ ಭತ್ಯೆ, ಪ್ರವಾಸ ಭತ್ಯೆ, ಕಚೇರಿ ವೆಚ್ಚ, ಹೊರಗುತ್ತಿಗೆ ನೌಕರರ ವೇತನ ಹಾಗೂ ಗುತ್ತಿಗೆ ಆಧಾರದ ವೈದ್ಯರಿಗೆ ವೇತನಕ್ಕಾಗಿ ವೆಚ್ಚವನ್ನು ಭರಿಸುವಿಕೆ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಮತ್ತು ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಗೆ ಆಂಬುಲೆನ್ಸ್ ಖರೀದಿ, ಕರ್ನಾಟಕ ಆರೋಗ್ಯ ಅಭಿವೃದ್ಧಿ ಯೋಜನೆಯ ಸಿಬ್ಬಂದಿಗಳ ವೇತನ, ಇತರೆ ಭತ್ಯೆಗಳು ಹಾಗೂ ತಾಲ್ಲೂಕುಗಳಿಗೆ ದಂತ ಘಟಕಗಳ ಸಾಮಗ್ರಿಗಳ ಪೂರೈಕೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳು, ಗ್ರಾಮೀಣ ಆರೋಗ್ಯಕ್ಕಾಗಿ 4354.25 ಲಕ್ಷ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗಾಗಿ 2561.77 ಲಕ್ಷ ಅನುದಾನವನ್ನು ನಿಗಧಿಗೊಳಿಸಲಾಗಿದೆ.

      ಆಯುಷ್ ಇಲಾಖೆಯ ಕಾರ್ಯಕ್ರಮಗಳಿಗೆ 446.96 ಲಕ್ಷ ರೂಗಳಿಗೆ ಜಿಲ್ಲಾವಲಯದಡಿಯಲ್ಲಿ ಅಂಗೀಕಾರ ನೀಡಲಾಗಿದ್ದು, ಇದರಲ್ಲಿ ಆಯುಷ್ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳನ್ನು ತೆರೆಯುವುದು, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪತಿ ಆಸ್ಪತ್ರೆಗಳಿಗೆ ಅನುದಾನ, ಆಯುಷ್ ಇಲಾಖೆಯ ಔಷಧಿ ಮತ್ತು ರಸಾಯನಿಕಗಳ ಖರೀದಿ, ಯುನಾನಿ ಚಿಕಿತ್ಸಾಲಯಗಳ ಪ್ರಾರಂಭ ಮತ್ತು ನಿರ್ವಹಣೆ ಹಾಗೂ ಕಟ್ಟಡಗಳ ನಿರ್ವಹಣೆಗಾಗಿ ಸದರಿ ಅನುದಾನವನ್ನು ಈ ವರ್ಷದಲ್ಲಿ ನಿಗಧಿಗೊಳಿಸಲಾಗಿದೆ. ಕ್ರೀಡಾ ಕಾರ್ಯಕ್ರಮ ಮತ್ತು ಯುವಜನ ಸೇವೆಗಳಿಗಾಗಿ 160.79 ಲಕ್ಷ, ಕಲೆ ಮತ್ತು ಸಂಸ್ಕøತಿಗಾಗಿ 12 ಲಕ್ಷ ರೂಗಳ ಕ್ರಿಯಾಯೋಜನೆ ಸಿದ್ಧವಾಗಿದ್ದು, ಇದೇ ಆರ್ಥಿಕ ವರ್ಷದಲ್ಲಿ ಸದರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅನುವು ಮಾಡಲಾಗಿದೆ.

      ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ 3069.82 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮUಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ 5 ಲಕ್ಷ, ಕೇಂದ್ರ ಪುರಸ್ಕøತ ಯೋಜನೆಯಲ್ಲಿ ಇಂಜಿನಿಯರಿಂಗ್/ವೈದ್ಯಕೀಯ ಕಾಲೇಜುಗಳಲ್ಲಿ ಪುಸ್ತಕ ಭಂಡಾರಕ್ಕಾಗಿ 6 ಲಕ್ಷ, ಪ.ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ 933.30 ಲಕ್ಷ, ಪರಿಶಿಷ್ಟ ಜಾತಿ/ ಮೆಟ್ರಿಕ್ ನಂತರದ ಸರ್ಕಾರಿ ವಿದ್ಯಾರ್ಥಿನಿಲಯಗಳ ನಿರ್ವಹಣೆಗಾಗಿ 1018 ಲಕ್ಷ ಪರಿಶಿಷ್ಟ ಜಾತಿಯ ನಿವಾಸಿ ಶಾಲೆಗಳಿಗಾಗಿ 36.21 ಲಕ್ಷ, ಸರ್ಕಾರಿ ಕಾಲೇಜು ವಿದ್ಯಾರ್ಥಿನಿಲಯಗಳ ನಿರ್ವಹಣೆಗಾಗಿ 106.66 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಪುರಸ್ಕಾರ/ಇತರೆ ರಿಯಾಯಿತಿಗಳು/ಶ್ರೇಷ್ಠತೆ ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಖಾಸಗಿ ವಿದ್ಯಾರ್ಥಿನಿಲಯಗಳಿಗೆ ಸಹಾಯಾನುದಾನ ಕಾರ್ಯಕ್ರಮಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

      ಪರಿಶಿಷ್ಟ ಪಂಗಡ ಇಲಾಖೆಯ ಕಾರ್ಯಕ್ರಮಗಳಾದ ಕೇಂದ್ರ ಪುರಸ್ಕøತ ಯೋಜನೆಯಲ್ಲಿ ಇಂಜಿನಿಯರಿಂಗ್/ವೈದ್ಯಕೀಯ ಕಾಲೇಜುಗಳಲ್ಲಿ ಪುಸ್ತಕ ಭಂಡಾರಕ್ಕಾಗಿ 3 ಲಕ್ಷ, ಪ.ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ 528 ಲಕ್ಷ, ಪರಿಶಿಷ್ಟ ಪಂಗಡ ವಿದ್ಯಾರ್ಥಿನಿಲಯಗಳ ನಿರ್ವಹಣೆಗಾಗಿ 126.26 ಲಕ್ಷ, ಮೊರಾರ್ಜಿ ದೇಸಾಯಿ ನಿವಾಸಿ ವಸತಿ ಶಾಲೆಗಳಿಗಾಗಿ 68.76 ಲಕ್ಷ, ವಿದ್ಯಾರ್ಥಿನಿಲಯಗಳು, ವಿದ್ಯಾರ್ಥಿವೇತನ ಮತ್ತು ಸಹಾಯಕ್ಕಾಗಿ 288.23 ಲಕ್ಷ ಖಾಸಗಿ ವಿದ್ಯಾರ್ಥಿನಿಲಯಗಳಿಗೆ ಸಹಾಯಾನುದಾನದ ರೂಪದಲ್ಲಿ ಒಟ್ಟಾರೆಯಾಗಿ 1070.53 ಲಕ್ಷ ನಿಗಧಿಯಾಗಿದೆ.

      ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ 9177.90 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆಯನ್ನು ಜಿಲ್ಲೆಯ ಹತ್ತು ತಾಲ್ಲೂಕುಗಳಿಗೂ ತಯಾರಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿನಿಲಯಗಳ ನಿರ್ವಹಣೆಗಾಗಿ 2281 ಲಕ್ಷ, ಆಸ್ರಮ ಶಾಲೆಗಳಿಗಾಗಿ 81.40 ಲಕ್ಷ ಹಾಗೂ ಇತರೆ ಕಾರ್ಯಕ್ರಮಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ. ಒಟ್ಟು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ 4607.79 ಲಕ್ಷ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳಿಗಾಗಿ 429.76 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆ ಸಿದ್ದವಾಗಿದ್ದು, ಅನುಮೋದನೆ ಕೂಡ ದೊರೆತಿದೆ. ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅಲ್ಪಸಂಖ್ಯಾತ ಕಾನೂನು ಪದÀವೀಧರರಿಗೆ ತರಬೇತಿ ಭತ್ಯೆ, ಅಲ್ಪಸಂಖ್ಯಾತರ ಅನಾಥಾಲಯಗಳಿಗೆ ಸಹಾಯಾನುದಾನ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳ ನಿರ್ವಹಣೆ ಮತ್ತು ಇತರೆ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನವನ್ನು ನಿಗಧಿಗೊಳಿಸಲಾಗಿದೆ.

      ಕಾರ್ಮಿಕ ಇಲಾಖೆ ಮತ್ತು ಉದ್ಯೋಗ ಇಲಾಖೆಯ ಕಾರ್ಯಕ್ರಮಗಳಿಗಾಗಿ 56.59 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆಯನ್ನು ಜಿಲ್ಲಾ ವಲಯದಡಿಯಲ್ಲಿ ತಯಾರಿಸಲಾಗಿದೆ. ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳಿಗಾಗಿ 148.59 ಲಕ್ಷ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳಿಗಾಗಿ 187.93 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ.
(ಮುಂದುವರೆಯುವುದು)

 ಭೂಷಣ್ ಮಿಡಿಗೇಶಿ

LEAVE A REPLY

Please enter your comment!
Please enter your name here