ಜಿಲ್ಲೆಗೆ 2,613.44 ಲಕ್ಷ ರೂ. ಬಿಡುಗಡೆ

0
10

ದಾವಣಗೆರೆ:

         ಜಿಲ್ಲೆಯ 233 ಗ್ರಾಮ ಪಂಚಾಯತ್‍ಗಳಿಗೆ 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದ 14ನೇ ಹಣಕಾಸು ಯೋಜನೆಯಡಿ 5,479.13 ಲಕ್ಷ ರೂ ಅನುದಾನ ನಿಗದಿಯಾಗಿದ್ದು, 2,613.44 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.

          ಹೌದು… ಹಿಂದೆ ಗ್ರಾಮ ಪಂಚಾಯತ್‍ಗಳ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರದ 14ನೇ ಹಣಕಾಸು ಆಯೋಗವು ಆಯಾ ಗ್ರಾಮ ಪಂಚಾಯತ್‍ಗಳಿಗೆ ಶಕ್ತಾನುಸಾರವಾಗಿ ಅನುದಾನ ಬಿಡುಗಡೆ ಮಾಡುತ್ತಿತ್ತು. ಆದರೆ, ಇತ್ತೀಚೆಗೆ ಈ ಕುರುಡು ಪದ್ಧತಿಯನ್ನು ಬಿಟ್ಟು, ಗ್ರಾಮ ಪಂಚಾಯತ್‍ಗಳು ವಸೂಲಿ ಮಾಡಿರುವ ಮನೆಗಂದಾಯ, ಆಸ್ತಿ ಕಂದಾಯ ಸೇರಿದಂತೆ ಇತರೆ ಕಂದಾಯ ವಸೂಲಾತಿ ಹಾಗೂ ಹಿಂದಿನ ವರ್ಷದಲ್ಲಿ ಬಿಡುಗಡೆಯಾಗಿದ್ದ ಅನುದಾನದ ಬಳಕೆಯ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡುತ್ತಿದೆ.

         ಈಗಾಗಲೇ 14ನೇ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರವು ಜಿಲ್ಲೆಯ 233 ಗ್ರಾಮ ಪಂಚಾಯತ್‍ಗಳಿಗೆ 2,613.44 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಈಗಾಗಲೇ 1,117.82 ಲಕ್ಷ ರೂ.ಗಳ ಮೊತ್ತದ ಅಡಿಯಲ್ಲಿ ಒಟ್ಟು 1,716 ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

        ಪರಿಶಿಷ್ಟ ಜಾತಿಯ ಕಾಲೋನಿಗಳಲ್ಲಿ 384.4 ಲಕ್ಷ ರೂ. ವೆಚ್ಚದಲ್ಲಿ 492 ಕಾಮಗಾರಿ, ಪರಿಶಿಷ್ಟ ಪಂಗಡದ ಜನರು ನೆಲೆಸಿರುವ ಪ್ರದೇಶಗಳಲ್ಲಿ 92.01 ಲಕ್ಷ ರೂ. ವೆಚ್ಚದಲ್ಲಿ 136 ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ಇತರೆ ಪ್ರದೇಶಗಳಲ್ಲಿ 641.41 ಲಕ್ಷ ರೂ. ವೆಚ್ಚದಲ್ಲಿ 784 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಈ ಕಾಮಗಾರಿಗಳ ಪೈಕಿ ಕೆಲವು ಪೂರ್ಣಗೊಂಡು ಥರ್ಡ್ ಪಾರ್ಟಿ ಇನ್ಸ್‍ಫೆಕ್ಷನ್‍ಗಾಗಿ ಕಾಯುತ್ತಿದ್ದರೆ, ಇನ್ನೂ ಕೆಲವು ಕ್ರಯಾ ಯೋಜನೆ ತಯಾರಾಗುವ ಹಂತದಲ್ಲಿವೆ.

         ಈ ಅನುದಾನದಡಿಯಲ್ಲಿ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಕುಡಿಯುವ ನೀರು ಪೂರೈಸುವ, ನೈರ್ಮಲ್ಯೀಕರಣ, ಒಳ ಚರಂಡಿ ವ್ಯವಸ್ಥೆ, ಘನತ್ಯಾಜ್ಯ ವಸ್ತು ನಿರ್ವಹಣೆ, ಮಳೆ ನೀರು ಸರಾಗವಾಗಿ ಹರಿದುಕೊಂಡು ಹೋಗಲು ಚರಂಡಿ ನಿರ್ಮಾಣ, ಸಮುದಾಯ ಆಸ್ತಿ ನಿರ್ವಹಣೆ, ರಸ್ತೆ ಮತ್ತು ಪಾದಚಾರಿ ರಸ್ತೆ ನಿರ್ಮಾಣ ಮತ್ತು ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.

         ಅನುದಾನ ಸೋರಿಕೆ ತಡೆಗಟ್ಟಲು ಸರ್ಕಾರ ಎಷ್ಟೇ ಕಾನೂನು, ನೀತಿ, ನಿಯಮಗಳನ್ನು ಬಿಗಿ ಗೊಳಿಸಿದರೂ ಹೇಗಾದರೂ ಮಾಡಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದ ಒಂದಿಷ್ಟು ಪಾಲನ್ನು ತಮ್ಮ ಜೇಬಿಗೆ ಸೇರಿಸಿಕೊಳ್ಳೋಣ ಎಂಬ ಮನಸ್ಥಿತಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದಾರೆ. 14ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿದ್ದ ಅನುದಾನದಲ್ಲಿ ಅವ್ಯವಹಾರ ನಡೆಸಿ, ವರ್ಷದ ಕೊನೆಯಲ್ಲಿ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆ ಗ್ರಾಮ ಪಂಚಾಯತ್‍ಗಳ ಆಡಿಟ್ ನಡೆಸುವ ಸಂದರ್ಭದಲ್ಲಿ 14ನೇ ಹಣಕಾಸು ಯೋಜನೆಯಡಿ ನಡೆದಿರುವ ಅವ್ಯವಹಾರ ಪತ್ತೆಯಾಗಿದ್ದ ಕಾರಣಕ್ಕೆ ಕೆಲ ಗ್ರಾಮ ಪಂಚಾಯತ್‍ಗಳ ಪಿಡಿಒಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಅಲ್ಲದೆ, ಕೆಲ ಗ್ರಾಮ ಪಂಚಾಯತ್‍ಗಳ ಅಧ್ಯಕ್ಷರುಗಳ ವಿರುದ್ಧ ದೂರು ದಾಖಲಾಗಿದೆ.

          ಆದ್ದರಿಂದ 14ನೇ ಹಣಕಾಸು ಯೋಜನೆಯಿಂದ ಬಿಡುಗಡೆಯಾಗುವ ಅನುದಾನದಲ್ಲಿ ಅವ್ಯವಹಾರ ನಡೆಸಿ, ಅಲ್ಪ-ಸ್ವಲ್ಪ ಪುಡಿಗಾಸು ಜೇಬಿಗೆ ಇಳಿಸಿಕೊಂಡು ಸಿಕ್ಕಿ ಹಾಕಿಕೊಳ್ಳುವುದಕ್ಕಿಂತ ತೆಪ್ಪಗಿರುವುದೇ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಂದಿರುವುದರಿಂದ ಈ ಯೋಜನೆಯಡಿ ಬಿಡುಗಡೆಯಾಗುವ ಅನುದಾನ ಹೆಚ್ಚು ಫೋಲಾಗದೇ, ಗ್ರಾಮೀಣ ಪ್ರದೇಶಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಬಳಿಕೆಯಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here