ಜಿಲ್ಲೆ: ಅಧಿಕಾರ ಕಳೆದುಕೊಂಡ ಶಾಸಕ ಪ್ರಮುಖರು

0
10

ತುಮಕೂರು:

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‍ನ ನಾಲ್ವರು ಶಾಸಕರಿದ್ದರು. ಜೆಡಿಎಸ್‍ನಿಂದ 6 ಮಂದಿ ಹಾಗೂ ಬಿಜೆಪಿಯ ಓರ್ವರು ಅಧಿಕಾರದಲ್ಲಿದ್ದರು. 2018ರ ಚುನಾವಣೆ ಹಲವು ಪ್ರಮುಖರನ್ನು ಸೋಲಿಸಿದೆ. ಹೊಸಬರನ್ನು ವಿಧಾನಸಭೆಗೆ ಪ್ರವೇಶ ಮಾಡುವಂತೆ ಮಾಡಿದೆ.


ಜಿಲ್ಲಾ ಉಸ್ತುವಾರಿ ಸಚಿವರು, ಕಾನೂನು ಸಚಿವರೂ ಆಗಿದ್ದ ಟಿ.ಬಿ.ಜಯಚಂದ್ರ ಶಿರಾ ಕ್ಷೇತ್ರದಲ್ಲಿ ಸೊಲುಂಡಿದ್ದಾರೆ. ಕಳ್ಳಂಬೆಳ್ಳದಲ್ಲಿ ಅಧಿಪತ್ಯ ಸ್ಥಾಪಿಸಿಕೊಂಡಿದ್ದ ಟಿ.ಬಿ.ಜಯಚಂದ್ರ, ಕ್ಷೇತ್ರ ಮರುವಿಂಗಡಣೆಯ ನಂತರ ಶಿರಾ ಕ್ಷೇತ್ರವನ್ನು ಆರಿಸಿಕೊಂಡರು. 2008 ಮತ್ತು 2013 ರಲ್ಲಿ ಸತತವಾಗಿ ಶಿರಾ ಕ್ಷೇತ್ರದಿಂದ ಜಯಶಾಲಿಯಾದರು. ಈ ಹಿಂದೆ ಕೃಷಿ ಸಚಿವರಾಗಿ, 2013ರ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಮಂತ್ರಿಗಳಾಗಿ ಸರ್ಕಾರದಲ್ಲಿ ತಮ್ಮದೇ ಆದ ವರ್ಚಸ್ಸು ಪಡೆದಿದ್ದರು. ಈ ಬಾರಿ ಗೆಲುವು ಸಾಧಿಸಿದ್ದರೆ ಹ್ಯಾಟ್ರಿಕ್ ಸಾಧನೆಯಾಗುತ್ತಿತ್ತು. ತನ್ನ ಪುತ್ರ ಸಂತೋಷ್ ಅವರನ್ನು ಪಕ್ಕದ ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸುವಂತೆ ಮಾಡಿದ್ದರು. ಅಲ್ಲಿಯೂ ಅವರ ಮಗ ಸೋತಿದ್ದಾರೆ.


ಕುಣಿಗಲ್‍ನ ಮಾಜಿ ಸಚಿವ ಡಿ.ನಾಗರಾಜಯ್ಯ ಈ ಹಿಂದೆ ಸಚಿವರಾಗಿದ್ದವರು. ಈ ಬಾರಿ ಕಾಂಗ್ರೆಸ್ ಎದುರು ಸೋತಿದ್ದಾರೆ. ಇವರ ಸಹೋದರ ಡಿ.ಕೃಷ್ಣಕುಮಾರ್ ಸಾಕಷ್ಟು ಪೈಪೋಟಿ ನೀಡಿರುವುದು ಕಂಡುಬರುತ್ತದೆ. ಮಧುಗಿರಿಯ ಶಾಸಕ ಕೆ.ಎನ್.ರಾಜಣ್ಣ ಆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ಆದರೆ ಅಲ್ಲಿನ ಮತದಾರ ಜೆಡಿಎಸ್ ಪರ ವಾಲಿದ್ದಾರೆ. ಕೆ.ಎನ್.ರಾಜಣ್ಣ ಅವರನ್ನು ಸೋಲಿಸಿ ಜೆಡಿಎಸ್‍ನ ಎಂ.ವಿ.ವೀರಭದ್ರಯ್ಯ ಅವರನ್ನು ಗೆಲ್ಲಿಸಿದ್ದಾರೆ.


ಪಾವಗಡದಲ್ಲಿ ಜೆಡಿಎಸ್‍ನ ತಿಮ್ಮರಾಯಪ್ಪ ಅವರೇ ಹಲವು ಸುತ್ತುಗಳ ತನಕ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಯ ಸುತ್ತುಗಳ ಸಂದರ್ಭದಲ್ಲಿ ತಿಮ್ಮರಾಯಪ್ಪ ಅವರನ್ನು ಹಿಂದಿಕ್ಕಿ ಕಾಂಗ್ರೆಸ್‍ನ ವೆಂಕಟರವಣಪ್ಪ ಜಯದ ದಡ ಸೇರಿದರು. ತೀವ್ರ ಕುತೂಹಲ ಕೆರಳಿಸಿದ ಪಾವಗಡ ಕ್ಷೇತ್ರದ ಮತ ಎಣಿಕೆ ಕೊನೆಯ ಸುತ್ತುಗಳಲ್ಲಿ ಕಾರ್ಯಕರ್ತರ ಲೆಕ್ಕಾಚಾರಗಳನ್ನು ಉಲ್ಟ ಮಾಡಿತು. ಹೀಗಾಗಿ ಜೆಡಿಎಸ್ ಗೆಲುವು ಪಡೆದಿದೆ ಎಂದು ಆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿದರೆ ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿದರು.


ಕೊರಟಗೆರೆಯಲ್ಲಿ ಜೆಡಿಎಸ್‍ನ ಸುಧಾಕರಲಾಲ್ ಹಾಗೂ ಪರಮೇಶ್ವರ್‍ನ ಡಾ.ಜಿ.ಪರಮೇಶ್ವರ್ ಅವರ ನಡುವೆ ಕೆಲವೇ ಮತಗಳ ಅಂತರದ ಮುನ್ನಡೆ ಕಾಣಿಸಿಕೊಂಡು ಪರಮೇಶ್ವರ್ ಗೆಲುವಿನತ್ತ ಸಾಗಿದರು. ತುಮಕೂರು ನಗರದಲ್ಲಿ ಆರಂಭದ ಸುತ್ತುಗಳಲ್ಲಿ ಜೆಡಿಎಸ್‍ನ ಗೋವಿಂದರಾಜು ಹಾಗೂ ಕಾಂಗ್ರೆಸ್‍ನ ಡಾ.ರಫೀಕ್ ಅಹಮದ್ ಅವರ ನಡುವೆಯೇ ಮತಗಳ ಏರಿಳಿಕೆ ಕಂಡುಬಂದಿತು. ನಂತರದ ಕೊನೆಯ ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಗೆಲುವಿನ ದಡ ಸೇರಿದರು.


ತುಮಕೂರು ಗ್ರಾಮಾಂತರದಲ್ಲಿ ಆರಂಭದ ಹಲವು ಸುತ್ತುಗಳಲ್ಲಿ ಬಿಜೆಪಿಯ ಸುರೇಶ್‍ಗೌಡ ಮುನ್ನಡೆ ಕಾಯ್ದುಕೊಂಡರು. ನಂತರದಲ್ಲಿ ದಾಪುಗಾಲು ಹಾಕಿದ ಡಿ.ಸಿ.ಗೌರಿಶಂಕರ್ ಗೆಲುವಿನ ದಡ ಸೇರಿದರು. ಇಡೀ ಜಿಲ್ಲೆಯಲ್ಲಿ 2013ರ ಚುನಾವಣೆಯಲ್ಲಿ ಪಕ್ಷದ ಮರ್ಯಾದೆ ಉಳಿಸಿದ್ದ ಸುರೇಶ್‍ಗೌಡ ಈಗ ಮಾಜಿ ಆದರು.


ತಿಪಟೂರಿನಲ್ಲಿ ಕಾಂಗ್ರೆಸ್‍ನ ಕೆ.ಷಡಕ್ಷರಿ ವಿರುದ್ಧ ಬಿಜೆಪಿಯ ಬಿ.ಸಿ.ನಾಗೇಶ್ ಸತತವಾಗಿ ಮುನ್ನಡೆ ಕಾಯ್ದುಕೊಂಡರು. 10 ಸುತ್ತಿನ ವೇಳೆಗಾಗಲೆ ಬಿ.ಸಿ.ನಾಗೇಶ್ ಅವರ ಗೆಲುವು ಖಚಿತ ಎಂಬ ತೀರ್ಮಾನಗಳು ಕೆಲವರಿಂದ ಬರತೊಡಗಿದವು. ಸಾಕಷ್ಟು ಮತಗಳ ಅಂತರದಿಂದ ಬಿ.ಸಿ.ನಾಗೇಶ್ ಗೆಲುವು ಸಾಧಿಸಿದರು. ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್‍ನ ಸಿ.ಬಿ.ಸುರೇಶ್‍ಬಾಬು ಅವರು ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡರಾದರೂ ಆನಂತರ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಮತ್ತು ಕಾಂಗ್ರೆಸ್‍ನ ಸಂತೋಷ್ ಜಯಚಂದ್ರ ಅವರ ನಡುವೆ ತೀವ್ರ ಪೈಪೋಟಿ ನಡೆದು ಜೆ.ಸಿ.ಮಾಧುಸ್ವಾಮಿ ಅವರು ಮುನ್ನಡೆ ಕಾಯ್ದುಕೊಳ್ಳುತ್ತಾ ಹೋದರು.


ತುರುವೇಕೆರೆಯಲ್ಲಿ ಜೆಡಿಎಸ್‍ನ ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ಬಿಜೆಪಿಯ ಮಸಾಲ ಜಯರಾಂ ಸೋಲಿಸಿದ್ದಾರೆ.


ಜಿಲ್ಲೆಯಲ್ಲಿ 2013ರ ಚುನಾವಣೆಯಲ್ಲಿ ನಾಲ್ಕು ಮಂದಿ ಕಾಂಗ್ರೆಸ್‍ನಿಂದ ಶಾಸಕರಾಗಿದ್ದರು. ಇವರಲ್ಲಿ ಪ್ರಸ್ತುತ ಚುನಾವಣೆಯಲ್ಲಿ ಯಾರೊಬ್ಬರೂ ಗೆಲುವು ಸಾಧಿಸಿಲ್ಲ. ಕಾಂಗ್ರೆಸ್‍ನ ಎಲ್ಲ ಶಾಸಕರು ಸೋಲು ಅನುಭವಿಸಿದ್ದಾರೆ. ಬದಲಾಗಿ ಕೆಲವು ಮಾಜಿ ಶಾಸಕರು-ಸಚಿವರು ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದಾರೆ. ಇವರಲ್ಲಿ ಪಾವಗಡದ ವೆಂಕಟರವಣಪ್ಪ, ಕೊರಟಗೆರೆಯಿಂದ ಡಾ.ಜಿ.ಪರಮೇಶ್ವರ್ ಸೇರಿದ್ದಾರೆ. ಇದೇ ಪ್ರಥಮ ಬಾರಿಗೆ ಕುಣಿಗಲ್‍ನಿಂದ ಡಾ.ರಂಗನಾಥ್ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.


ಜೆಡಿಎಸ್‍ನಿಂದ 6 ಮಂದಿ ಶಾಸಕರಿದ್ದರು. ಇವರಲ್ಲಿ ಗುಬ್ಬಿಯ ಎಸ್.ಆರ್.ಶ್ರೀನಿವಾಸ್ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಸೋತಿದ್ದಾರೆ. ಈ ಪಕ್ಷದಿಂದ ಮಾಜಿ ಸಚಿವ ಬಿ.ಸತ್ಯನಾರಾಯಣ ಗೆಲುವು ಸಾಧಿಸಿದ್ದರೆ, ಇದೇ ಪ್ರಥಮ ಬಾರಿಗೆ ಮಧುಗಿರಿಯಿಂದ ಎಂ.ವಿ.ವೀರಭದ್ರಯ್ಯ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ತುಮಕೂರು ಗ್ರಾಮಾಂತರದಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಈ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ವಿಧಾನಸಭೆಗೆ ತೆರಳುತ್ತಿದ್ದಾರೆ.
ಹೊಸದಾಗಿ ವಿಧಾನಸಭೆ ಪ್ರವೇಶಿಸುತ್ತಿರುವವರು


ತುಮಕೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ ಇದೇ ಪ್ರಥಮ ಬಾರಿಗೆ ನಾಲ್ಕು ಕ್ಷೇತ್ರಗಳಿಂದ ಆಯ್ಕೆಯಾಗಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.


ಬಿಜೆಪಿಯ ಜಿಲ್ಲಾಧ್ಯಕ್ಷ ಜಿ.ಬಿ. ಜ್ಯೋತಿಗಣೇಶ್ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಆಗ ಬಿಜೆಪಿ ಮತ್ತು ಕೆಜೆಪಿ ಎಂಬ ವಿಭಾಗಗಳಿದ್ದವು. ಈ ಬಾರಿ ಬಿಜೆಪಿಯಿಂದ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಕೊನೆ ಹಂತದಲ್ಲಿ ಟಿಕೆಟ್ ನೀಡಲಾಯಿತು. ಇವರಿಗೆ ಟಿಕೆಟ್ ನೀಡದಂತೆ ಬಹಳಷ್ಟು ಪ್ರತಿರೋಧಗಳು ಆ ಪಕ್ಷದ ಇತರೆ ಮುಖಂಡರಿಂದ ಕೇಳಿಬಂದಿತ್ತಾದರೂ ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ನೀಡಿದ್ದ ವಾಗ್ದಾನದಂತೆ ಜ್ಯೋತಿಗಣೇಶ್ ಅವರಿಗೆ ಟಿಕೆಟ್ ಸಿಗುವಂತೆ ನೋಡಿಕೊಂಡರು. ಇವರು ಜಯಶಾಲಿಯಾಗಿದ್ದು, ಇದೇ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.


ಕುಣಿಗಲ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ. ರಂಗನಾಥ್ ಅವರ ಸ್ಪರ್ಧೆಯನ್ನು ಅಲ್ಲಿ ಬಿ.ಬಿ.ರಾಮಸ್ವಾಮಿಗೌಡ ಬಲವಾಗಿ ವಿರೋಧಿಸಿದ್ದರು. ಆದರೆ ಈ ವಿರೋಧವನ್ನು ಶಮನ ಮಾಡುವಲ್ಲಿ ಡಿ.ಕೆ.ಶಿವಕುಮಾರ್ ಬ್ರದರ್ಸ್ ಯಶಸ್ವಿಯಾಗಿದ್ದರು. ನಿರೀಕ್ಷೆಯಂತೆ ಡಾ.ರಂಗನಾಥ್ ಅಲ್ಲಿ ಗೆಲುವು ಸಾಧಿಸಿದ್ದಾರೆ. ಇದೇ ಪ್ರಥಮ ಬಾರಿಗೆ ವಿಧಾನಸಭೆಯ ಪ್ರವೇಶ ಮಾಡುತ್ತಿದ್ದಾರೆ.


ತುರುವೇಕೆರೆ ತಾಲ್ಲೂಕಿನಿಂದ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ತೀವ್ರ ಸವಾಲೊಡ್ಡಿದ್ದ ಮಸಾಲ ಜಯರಾಂ ಅವರ ಗೆಲುವು ಈ ಬಾರಿ ನಿರೀಕ್ಷೆಯಂತೆಯೇ ನಡೆದಿದೆ. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಮಧುಗಿರಿಯಿಂದ ಸ್ವಯಂ ನಿವೃತ್ತಿ ಪಡೆದ ಅಧಿಕಾರಿ ಎಂ.ವಿ.ವೀರಭದ್ರಯ್ಯ ಕಳೆದ ಬಾರಿಯೇ ತೀವ್ರ ಪೈಪೋಟಿವೊಡ್ಡಿದ್ದರು. ಈ ಬಾರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

LEAVE A REPLY

Please enter your comment!
Please enter your name here