ತಮಿಳುನಾಡಿನ ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಇನ್ನಿಲ್ಲ

0
69

ಚೆನ್ನೈ:

      ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ (94) ಮಂಗಳವಾರ ವಿಧಿವಶರಾಗಿದ್ದಾರೆ.

      ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ 6.10ಕ್ಕೆ  ಕೊನೆಯುಸಿರೆಳೆದಿದ್ದಾರೆ.

      ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾವೇರಿ ಆಸ್ಪತ್ರೆ ವೈದ್ಯರು ಸೋಮವಾರವೇ 24 ಗಂಟೆಗಳ ಕಾಲ ಯಾವ ಭರವಸೆಗಳನ್ನು ನೀಡೋದಕ್ಕೆ ಸಾಧ್ಯವಿಲ್ಲ. ಕ್ಷಣ ಕ್ಷಣಕ್ಕೂ ಕರುನಾನಿಧಿ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಸ್ಪಷ್ಟಪಡಿಸಿತ್ತು. ಕರುಣಾನಿಧಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ನಡೆಸಿದ್ದರೂ ಅವರು ಅದಕ್ಕೆ ಸ್ಪಂದಿಸುವಲ್ಲಿ ವಿಫಲರಾದರು. ಸಂಜೆ 6.10ರ ಸಮಯಕ್ಕೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ತಿಳಿಸಿದೆ. ಕರುಣಾನಿಧಿ ಅವರು ಪತ್ನಿಯರಾದ ರಜತಿ ಅಮ್ಮಾಳ್, ದಯಾಳು ಅಮ್ಮಾಳ್, ಮಕ್ಕಳಾದ ಎಂ.ಕೆ. ಸ್ಟಾಲಿನ್, ಕನಿಮೊಳಿ, ಎಂ.ಕೆ ಅಳಗಿರಿ, ಎಂ.ಕೆ. ಮುತ್ತು, ಎಂ.ಕೆ. ತಮಿಳರಸು ಮತ್ತು ಎಂ.ಕೆ. ಸೆಲ್ವಿ ಅವರನ್ನು ಅಗಲಿದ್ದಾರೆ

      ಕಾವೇರಿ ಆಸ್ಪತ್ರೆಯ ಮುಂದೆ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಪೊಲೀಸ್ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದು, ಆಸ್ಪತ್ರೆಯ ಸುತ್ತಮುತ್ತ 1200 ಪೊಲೀಸ್ ಸಿಬ್ಬಂದಿ ಇದರ ಜೊತೆಗೆ 500 ಸಶಸ್ತ್ರ ಪಡೆ ಮತ್ತು 700 ಸ್ಪೆಷಲ್ ಫೋರ್ಸ್  ನಿಯೋಜನೆ ಮಾಡಲಾಗಿದೆ.

      ಜಿಲ್ಲೆಗಳ ಪೊಲೀಸ್ ಠಾಣೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಿನ್ನೆ ಸಂಜೆ 6 ಗಂಟೆಯಿಂದಲೇ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಾಡುತ್ತಿದ್ದ ಮಳಿಗೆಗಳು ಬಂದ್ ಆಗಿವೆ. ಆಸ್ಪತ್ರೆ ಮತ್ತು ಗೋಪಾಲಪುರಂ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಣ್ಣಾ ವಿವಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

      ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಕರುಣಾನಿಧಿ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಆಸ್ಪತ್ರೆ ಮತ್ತು ಗೋಪಾಲಪುರಂನ ಕರುಣಾನಿಧಿ ನಿವಾಸದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಬೆಂಬಲಿಗರು ಕರುಣಾನಿಧಿ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದ್ದರು.

      ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು.  ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷಕ್ಕೆ 50 ವರ್ಷ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿದ್ದ ಕರುಣಾನಿಧಿ ಅವರು, ದಕ್ಷಿಣ ಭಾರತದ ಅತ್ಯಂತ ಪ್ರಭಾವಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದರು.

ಕರುಣಾನಿಧಿ ಅವರು 1969-2011ರವರೆಗೆ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.

 

ಸಂತಾಪ: 

      ಬದುಕಿರುವಾಗಲೇ ದಂತಕಥೆಯಂತಿದ್ದರು. ತಮ್ಮ ಜೀವಿತಾವಧಿ ಪೂರ್ಣ ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಿದ ಕರುಣಾನಿಧಿ ಅವರು ಪ್ರಾದೇಶಿಕ ಪಕ್ಷವನ್ನು ಸಧೃಢಗೊಳಿಸುವಲ್ಲಿ ಪ್ರದರ್ಶಿಸಿದ ಮುತ್ಸದ್ದಿತನ ವೈಶಿಷ್ಟ್ಯಪೂರ್ಣ. ಹಲವು ಬಾರಿ ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದೆ. ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಪ್ರತಿ ಬಾರಿಯೂ ನನಗೆ ಮನವರಿಕೆ ಮಾಡಿಕೊಡುತ್ತಿದ್ದರು. ಹಿಂದುಳಿದ ವರ್ಗ ಹಾಗೂ ತುಳಿತಕ್ಕೊಳಗಾದವರ ಬಗ್ಗೆ ಅವರು ತೆಗೆದುಕೊಂಡ ಜನಪ್ರಿಯ ಯೋಜನೆಗಳನ್ನು ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಅನುಕರಿಸುತ್ತಿವೆ. ಹೆಚ್.ಡಿ.ದೇವೇಗೌಡ ಅವರು ಪ್ರಧಾನ ಮಂತ್ರಿಗಳಾಗಿದ್ದ ಸಮ್ಮಿಶ್ರ ಸರ್ಕಾರದ ರಚನೆಗೆ ಕರುಣಾನಿಧಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

      ಚಿತ್ರರಂಗದ ಮೂಲಕ ರಾಜಕೀಯಕ್ಕೆ ಬಂದು ತಮಿಳುನಾಡಿನ ಶೋಷಿತ ವರ್ಗಕ್ಕೆ ಗಟ್ಟಿದನಿ ನೀಡಿದ ಕರುಣಾನಿಧಿ, ರಾಜಕೀಯ ಸಿದ್ಧಾಂತ ನಮಗೆಲ್ಲರಿಗೂ ಮಾದರಿ. ಅವರ ನಿಧನದಿಂದ ಭಾರತದ ರಾಜಕೀಯ ರಂಗದಲ್ಲಿ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವವೊಂದು ಕಣ್ಮರೆಯಾಗಿದೆ. ಅವರ ನಿಧನದಿಂದ ತಮಿಳುನಾಡು ಒಬ್ಬ ದಾರ್ಶನಿಕ ನಾಯಕನನ್ನು ಕಳೆದುಕೊಂಡಿದೆ.

ಹೆಚ್.ಡಿ. ಕುಮಾಸ್ವಾಮಿ,ಮುಖ್ಯಮಂತ್ರಿಗಳು. ಕರ್ನಾಟಕ ಸರ್ಕಾರ

 

 

LEAVE A REPLY

Please enter your comment!
Please enter your name here