ತಳಮಟ್ಟದಿಂದ ಪಕ್ಷ ಕಟ್ಟಲು ಕರೆ

0
32

ಚಿಕ್ಕನಾಯಕನಹಳ್ಳಿ:

      ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಭದ್ರವಾಗಿ ನೆಲೆನಿಲ್ಲಿಸಬೇಕು. ಹಾಗಾಗಿ ತಳಮಟ್ಟದಿಂದ ಪಕ್ಷವನ್ನು ಕಟ್ಟಬೇಕಾಗಿರುವುದರಿಂದ ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದ್ದು ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಜೊತೆಗೆ ನಾನೂ ಸಹ ಮತದಾರರ ಬಳಿ ತೆರಳಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

      ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಈ ಚುನಾವಣೆ ಮುಂಬರುವ ಲೋಕಾಸಭಾ ಚುನಾವಣೆಯ ದಿಕ್ಸೂಚಿ ಆಗಲಿದೆ ಎಂದರು.

      ಸ್ಥಳೀಯ ಸಂಸ್ಥೆಗಳು ಸುಭದ್ರವಾಗಿದ್ದರೆ ಮಾತ್ರ ಆಯಾ ಪ್ರದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಕೇವಲ 6 ತಿಂಗಳು 1 ವರ್ಷಕ್ಕೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ಆಯ್ಕೆ ನಡೆದರೆ ಅಭಿವೃದ್ಧಿ ಅಸಾಧ್ಯ. ಹೀಗಾಗಿ ಸರ್ಕಾರ ನಿಗದಿಪಡಿಸಿರುವ 30 ತಿಂಗಳ ಅವಧಿಗೆ ಅಧ್ಯಕ್ಷರು ಉಪಾಧ್ಯಕ್ಷರು ಆಯ್ಕೆಯಾದರೆ ಮಾತ್ರ ಅಭಿವೃದ್ಧಿಗೆ ಸಹಕಾರವಾಗಲಿದೆ. ಇಂತಹ ಇಚ್ಛಾಶಕ್ತಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಪರವಾಗಿ ಜನತೆ ನಿಲ್ಲುವಂತೆ ಮಾಡಬೇಕಾದ ಜವಾಬ್ದಾರಿ ಕಾರ್ಯಕರ್ತರ ಹೊಣೆಯಾಗಿದೆ ಎಂದರು.

      ರಾಜ್ಯ ರಾಜಕಾರಣದಲ್ಲಿ ಜಾತ್ಯತೀತ ಶಕ್ತಿ ಒಂದಾಗುವ ಮೂಲಕ ಸಮ್ಮಿಶ್ರ ಸರ್ಕಾರವಿದೆ. ಆಯಾ ಸ್ಥಳೀಯ ಪ್ರದೇಶಗಳಿಗೆ ಅನುಗುಣವಾಗಿ ಹೊಂದಾಣಿಕೆಬೇಕು-ಬೇಡ ಎಂಬುದರ ಬಗ್ಗೆ ಚರ್ಚೆ ಅನಗತ್ಯ. ಇವೆಲ್ಲವನ್ನೂ ಬದಿಗಿಟ್ಟು ಜನತೆಗೆ ಮೂಲ ಸೌಕರ್ಯವನ್ನು ಕೊಟ್ಟು ಅಭಿವೃದ್ಧಿಯತ್ತ ಪಟ್ಟಣವನ್ನು ನಡೆಸಬೇಕಿದೆ. ಇಲ್ಲಿ ಯಾವುದೇ ವ್ಯಕ್ತಿ ದೊಡ್ಡವನಲ್ಲ ಪಕ್ಷವೇ ದೊಡ್ಡದು ಎಂದು ತಿಳಿದು ಮನೆ ಮನೆಯಲ್ಲಿ ಕಾಂಗ್ರೆಸ್ ಬಗ್ಗೆ ಹೆಚ್ಚು ಉತ್ಸುಕರಾಗುವಂತೆ ನಮ್ಮ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದ ಅವರು, ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿ ಎರಡು ಪುರಸಭೆಗೆ ಬೇಕಾದ ಜನಸಂಖ್ಯೆ ಹೊಂದಿದ್ದು ಎರಡು ಕ್ಷೇತ್ರಗಳು ಅಭಿವೃದ್ಧಿ ಹೊಂದಬೇಕಾಗಿದೆ. ಈಗ ಪಕ್ಷಕ್ಕೆ ಅಭ್ಯರ್ಥಿಯಾಗಬಯಸುವವರು ಕಚೇರಿಗೆ ಅರ್ಜಿಗಳನ್ನು ಸಲ್ಲಿಸಿ ಎಂದರು.

      ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ, ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದಾರೆ. ಪುರಸಭೆ ಆಡಳಿತವನ್ನು ಕಾಂಗ್ರೆಸ್ ಹಿಡಿಯಬೇಕು, ಈಗಿರುವ ಪುರಸಭಾ ಆಡಳಿತ ವೈಖರಿಯಲ್ಲಿ ಅನೇಕ ಅಕ್ರಮಗಳು ನಡೆದಿದ್ದಾವೆ, ಅವುಗಳನ್ನು ಸ್ವಚ್ಛಗೊಳಿಸಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಪುರಸಭಾ ವ್ಯಾಪ್ತಿಯ 23 ವಾರ್ಡ್‍ಗಳಿಗೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ, ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷದ ಅಭಿವೃದ್ಧಿಗೆ ದುಡಿಯಬೇಕು. ಈ ಚುನಾವಣೆಯಿಂದ ಮುಂಬರುವ ಲೋಕಸಭಾ ಚುನಾವಣೆಯೂ ಕೂಡ ಹೆಚ್ಚಿನ ಮಹತ್ವ ಪಡೆಯಲಿದೆ ಎಂದರು.

      ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಮಾತನಾಡಿ, ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಆಗಸ್ಟ್ 9ರ ಗುರುವಾರ ಚಿಕ್ಕನಾಯಕನಹಳ್ಳಿಗೆ ಬರಲಿದ್ದಾರೆ. ಅವರೊಂದಿಗೆ ಚರ್ಚೆ ನಡೆಸಿ ಸೂಕ್ತ ಸಮರ್ಥ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸುವ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಹಾಗೂ ಪುರಸಭೆ ಅಧಿಕಾರ ಹಿಡಿಯುವ ಕೆಲಸ ಮಾಡಬೇಕಿದೆ. ಹಾಗಾಗಿ ಅಂದು ಕಾರ್ಯಕರ್ತರು ಹೆಚ್ಚಿನದಾಗಿ ಸೇರಬೇಕು ಎಂದು ತಿಳಿಸಿದ ಅವರು, ಚುನಾವಣೆಗೆ ನಿಲ್ಲುವ ಆಸಕ್ತ ಆಕಾಂಕ್ಷಿ ಅಭ್ಯರ್ಥಿಗಳು ಆಗಸ್ಟ್ 10ರವರೆಗೆ ಅರ್ಜಿಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ.

      ಕಾಂಗ್ರೆಸ್ ಪಕ್ಷದ ವಕ್ತಾರ ಕೆ.ಜಿ.ಕೃಷ್ಣೆಗೌಡ ಮಾತನಾಡಿ, ಪಕ್ಷದ ಕಚೇರಿಯು ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ತೆರೆದಿರುತ್ತದೆ. ಅರ್ಜಿಗಳನ್ನು ಕಚೇರಿಗೆ ಸಲ್ಲಿಸಬಹುದು ಎಂದು ಹೇಳಿದರು.

      ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಹೆಚ್.ಬಿ.ಎಸ್.ನಾರಾಯಣಗೌಡ, ಸಿ.ಡಿ.ಚಂದ್ರಶೇಖರ್, ಜಾವಿದ್‍ಪಾಷಾ, ಸಿ.ಎಸ್.ಲಿಂಗದೇವರು, ಬ್ರಹ್ಮಾನಂದ್, ಬಿ.ಶಿವಕುಮಾರ್, ಮುಜೀಬ್, ಗುರುಸಿದ್ದಯ್ಯ, ತಾ.ಪಂ.ಮಾಜಿ ಅಧ್ಯಕ್ಷ ಕೆ.ಶಿವಣ್ಣ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here