ತಾಲೂಕಿನಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಮುಗಿಸಬೇಕು: ಜೆ.ಸಿ.ಮಾಧುಸ್ವಾಮಿ ತಾಕೀತು.

0
42

 
ಚಿಕ್ಕನಾಯಕನಹಳ್ಳಿ:

   ಒಂದು ಎರಡು ತಿಂಗಳಲ್ಲಿ ಮುಗಿಯಬೇಕಾದ ಕಾಮಗಾರಿಗಳನ್ನು ವರ್ಷಾನುಗಟ್ಟಲೇ ತೆಗೆದುಕೊಂಡರೇ ಹೇಗೆ, 2014-15ನೇ ಸಾಲಿನಲ್ಲಿ ಮಂಜೂರಾಗಿ ಟೆಂಡರ್ ಆಗಿರುವ ಕಾಮಗಾರಿಗಳಲ್ಲಿ ಇದುವರೆಗೂ ಒಂದೇ ಒಂದು ಕಾಮಗಾರಿ ಪೂರ್ಣವಾಗಿಲ್ಲ, ಎಲ್ಲವೂ ಪ್ರಗತಿಯಲ್ಲಿದೆ ಎಂದು ವರದಿ ನೀಡಿದ್ದೀರಿ, ಅಧಿಕಾರಿಗಳು ಸಾಹುಕಾರರ ಸೇವೆ ಮಾಡಲು ಬಂದಿಲ್ಲ, ಸರ್ಕಾರಿ ಕೆಲಸ ಮಾಡಲು ಬಂದಿದ್ದೀರಿ ತಿಳಿದು ಕೆಲಸ ಮಾಡಿರಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಸಣ್ಣ ನೀರಾವರಿ ಇಲಾಖಾ ಇಂಜನಿಯರ್ ಚಿತ್ತಯ್ಯನವರಿಗೆ ತಾಕೀತು ಮಾಡಿದರು.

      ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಯಾರ ಟೆಂಡರ್ ತೆಗೆದುಕೊಂಡು, ಕಾಮಗಾರಿಯ ಅವಧಿ ಮುಗಿದಿದೆಯೋ ಅವರ ಟೆಂಡರ್‍ನ್ನು ವಜಾಗೊಳಿಸಿ ಎಂದ ಅವರು, ಪ್ರತಿ ಹಂತದಲ್ಲೂ ಟೆಂಡರ್ ಪ್ರಗತಿಯಲ್ಲಿದೆ, ಭೌತಿಕವಾಗಿ ಪೂರ್ಣಗೊಂಡಿದೆ ಎಂದು ನಮೂದಿಸಿದ್ದೀರಿ ಹಾಗೆಂದರೇನು ಎಂದು ಪ್ರಶ್ನಿಸಿದ ಶಾಸಕರಿಗೆ ಉತ್ತರ ನೀಡಲು ಅಧಿಕಾರಿ ತಡಬಡಾಯಿಸಿದರು.

      2017-18ನೇ ಸಾಲಿನಲ್ಲಿ ಸಣ್ಣ ನೀರಾವರಿ ಯೋಜನೆ, ವಿಶೇಷ ಘಟಕ ಯೋಜನೆ, ಗಂಗಾ ಕಲ್ಯಾಣ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ 22ಜನರಿಗೆ ಕೊಳವೆ ಬಾವಿಗಳನ್ನು ಕೊರೆಸಿದ್ದೀರಿ, ಟೆಂಡರ್ ನೀಡಿ ಪ್ರಗತಿಯಲ್ಲಿದೆ ಎಂದು ವರದಿ ನೀಡಿದ್ದೀರಿ, ಬಡವರಿಗೆ ನೀಡುವ ಗಂಗಾಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಹೀಗೇನಾ ನೀವು ಕೆಲಸ ಮಾಡುವುದು, ನೀವು ಸುಮ್ಮನೇ ವರದಿ ನೀಡಿದರೆ ಸಾಲದು ಯಾವ ಯಾವ ಹಂತದಲ್ಲಿ ಕೆಲಸವಾಗಿದೆ ಎಂಬ ಮಾಹಿತಿ ನೀಡಿ ಎಂದರು, ಟೆಂಡರ್‍ನಲ್ಲಿ ಎಷ್ಟು ಸಮಯದಲ್ಲಿ ಕಾಮಗಾರಿ ಮುಗಿಯಬೇಕು ಎಂಬ ಕಂಡೀಷನ್ ಹಾಕಿಲ್ಲವೇ, ಆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಲ್ಲವೇ ಎಂದು ಪ್ರಶ್ನಿಸಿದ ಶಾಸಕರು, ಮಳೆಗಾಲ ಪ್ರಾರಂಭವಾಗಿದೆ, ಕೆರೆ, ಕಟ್ಟೆ ಅಣೆಗಳಲ್ಲಿ ನೀರು ನಿಂತರೆ ಕಾಮಗಾರಿ ನಡೆಸಲು ಸಾಧ್ಯವೇ, ಒಂದು ಎರಡು ತಿಂಗಳಲ್ಲಿ ಮುಗಿಯಬೇಕಾದ ಕಾಮಗಾರಿಗಳನ್ನು ವರ್ಷಗಟ್ಟಲೇ ತೆಗೆದುಕೊಂಡರೇ ಹೇಗೆ ಎಂದರು.

      ಎಪಿಎಂಸಿ ಸದಸ್ಯ ರುದ್ರೇಶ್ ಮಾತನಾಡಿ ಬೋರನ ಕಣಿವೆ ರಾಜಕಾಲುವೆಯಿಂದ ಕೇಲವು ಪ್ರಭಾವಿ ರೈತರು ತಮ್ಮ ತೋಟಗಳಿಗೆ ಪೈಪ್‍ಲೈನ್ ಮೂಲಕ ನೀರನ್ನು ಹರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

      ಬೋರನಕಣಿವೆ ಜಲಾಶಯದಿಂದ ರಾಜಕಾಲುವೆ ಮುಖಾಂತರ ಕೆಲವು ಶ್ರೀಮಂತ ರೈತರ ತೋಟಗಳಿಗೆ ನೀವೇ ಪೈಪ್‍ಲೈನ್ ಹಾಕಿ ಬಿಟ್ಟಿದ್ದೀರಿ, ಇದರ ಬಗ್ಗೆ ನನ್ನಲ್ಲಿ ಮಾಹಿತಿ ಇದೆ ಎಂದಾಗ ಇಂಜನಿಯರ್ ಮರು ಮಾತನಾಡದೆ ಸುಮ್ಮನಾದರು. ನಂತರ ಶಾಸಕರು ಮಾತನಾಡಿ, ಕೂಡಲೇ ಈ ಬಗ್ಗೆ ಪೈಪ್‍ಗಳನ್ನು ತೆಗೆದು ಸೂಕ್ತ ಕ್ರಮವಹಿಸುವಂತೆ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

      ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಬಗ್ಗೆ ಜಿ.ಪಂ.ಸದಸ್ಯರಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಜಿ.ಪಂ.ಸದಸ್ಯ ಮಹಲಿಂಗಪ್ಪ ಆರೋಪಿಸಿದರು.

      ಹುಳಿಯಾರಿಗೆ ನಿತ್ಯ 2ಲಕ್ಷ ಲೀಟರ್ ಬೋರನಕಣಿವೆ ಜಲಾಶಯದಿಂದ ನೀರು ಸರಬರಾಜಾಗುತ್ತಿದ್ದರೂ 10ನೇ ವಾರ್ಡ್ ಹಾಗೂ 11ವಾರ್ಡ್‍ಗಳಿಗೆ ನೀರು ಬರುತ್ತಿಲ್ಲ ಎಂಬ ದೂರಿದೆ ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಇಂಜನಿಯರ್ ಹೊನ್ನೇಶಪ್ಪರವರನ್ನು ಪ್ರಶ್ನಿಸಿದಾಗ ಇಂಜನಿಯರ್ ಇದು ಹುಳಿಯಾರು ಪಿಡಿಓ ಆಡಳಿತಕ್ಕೆ ಸಂಬಂದಪಟ್ಟಿದ್ದು ಎಂದಾಗ ಪಿಡಿಓಗೆ ಸಮಸ್ಯೆ ಬಗೆಹರಿಸಿ ಎಂದು ಶಾಸಕರು ಸೂಚಿಸಿದರು.

      ಬೆಳ್ಳಾರ-ರಾಮನಹಳ್ಳಿ ರಸ್ತೆಯಲ್ಲಿ ತಿಮ್ಮನಹಳ್ಳಿ ಪೆಟ್ರೋಲ್ ಬಂಕ್‍ನಿಂದ ಬೆಳವಾಡಿ ರಸ್ತೆಯವರೆಗೆ ರಸ್ತೆ ಹಾಳಾಗಿದ್ದು ಇದನ್ನು ಸರಿಪಡಿಸುವಂತೆ ಜಿಲ್ಲಾ ಪಂಚಯಿತಿ ಸದಸ್ಯ ಮಹಲಿಂಗಪ್ಪ ಒತ್ತಾಯಿಸಿದರು.

      ತಾಲ್ಲೂಕಿನಲ್ಲಿ ಇದುವರೆಗೂ ರೇಷ್ಮೆ ಇಲಾಖೆ ರೈತರಿಗೆ ಹಿಪ್ಪುನೇರಳೆ ಸಸಿಗಳನ್ನು ವಿತರಿಸಿಲ್ಲ, ಇಲಾಖೆ ಸ್ವತಃ ಹಿಪ್ಪುನೇರಳೆ ಸಸಿಗಳನ್ನು ಬೆಳೆಯುವ ಕೆಲಸವನ್ನು ಕೈಬಿಟ್ಟಿದೆ, ಇನ್ನು ಮುಂದೆ ಸ್ವತಃ ಜವಬ್ದಾರಿ ವಹಿಸಿಕೊಂಡು ಹಿಪ್ಪುನೇರಳೆ ಸಸಿಗಳನ್ನು ಬೆಳೆಯುವಂತೆ ಅಧಿಕಾರಿಗೆ ಸೂಚಿಸಿದರು.

      ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್ ಮಾತನಾಡಿ ತೋಟಗಾರಿಕೆ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ದಲ್ಲಾಳಿಗಳನ್ನು ಇಟ್ಟು ಕೊಂಡು ಸರ್ಕಾರಿ ನೌಕರರು ಕೆಲಸ ಮಾಡುತ್ತಿದ್ದಾರೆ ಈ ಬಗ್ಗೆ ಅನೇಕ ಬಾರಿ ತಿಳಿಸಿದರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ ಅವರು ಕೇವಲ ಹೆಚ್ಚಾಗಿ ತೆಂಗು ಬೆಳೆಯುವ ಭಾಗ ಇದಾಗಿದ್ದು ಈ ಭಾಗದಲ್ಲಿ ಕೇವಲ ದಾಳಿಂಬೆ, ಅಡಿಕೆ ಬೆಳೆಗೆ ಮಾತ್ರ ವಿಮೆ ಮಾಡಿಸಲು ತಿಳಿಸಲಾಗಿದೆ ತೆಂಗಿನ ಬೆಳೆಗು ವಿಮೆ ಮಾಡಿಸಲು ಇಲಾಖೆ ಕ್ರಮಕೈಗೊಳ್ಳಬೇಕು ಎಂದರು.

      ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ, ಹುಳಿಯಾರು ಪಶು ವೈದ್ಯಾಧಿಕಾರಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ದೂರವಾಣಿ ಕರೆ ಮಾಡಿ ಸಮಸ್ಯೆ ಹೇಳಿದರೆ ನಿಮ್ಮ ಸಮಸ್ಯೆ ಬಗ್ಗೆ ನನಗೇನು ಕನಸ್ಸು ಬಿದ್ದಿರುತ್ತದೆಯೇ ಎಂದು ಹೇಳುತ್ತಾರೆ, ಸಾರ್ವಜನಿಕರ ಸಮಸ್ಯೆ ಹೇಳಿದರೆ ವೈದ್ಯರು ಹೀಗೇಳಬಹುದೇ ಎಂದು ಪ್ರಶ್ನಿಸಿದರು. ಪಶು ಇಲಾಖೆ ಸಹಾಯಕ ನಿರ್ದೇಶಕರು ಮಾತನಾಡಿ ಈ ಬಗ್ಗೆ ವೈದ್ಯರೊಂದಿಗೆ ಮಾತನಾಡುತ್ತೇನೆ ಎಂದರು.

      ಹೊಯ್ಸಳಕಟ್ಟೆ ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ ಅವರ ಬದಲಿಗೆ ಅಲ್ಲಿಗೆ ಬೇರೆ ಮ್ಯಾನೇಜರ್‍ನ್ನು ತರಲು ಶಾಸಕ ಜೆ.ಸಿ.ಮಾಧುಸ್ವಾಮಿ ಲೀಡ್‍ಬ್ಯಾಂಕ್ ಅಧಿಕಾರಿಗೆ ಸೂಚಿಸಿದರು. ತಾಲ್ಲೂಕಿನ ಯಾವ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಿದೆ ಆ ಬಗ್ಗೆ ಮಾಹಿತಿ ನೀಡಿ ಎಂದು ಪಿಡಿಓಗಳಿಗೆ ತಿಳಿಸಿದರೂ ಮಾಹಿತಿ ನೀಡಿಲ್ಲ, ಮುಂದಿನ ಸಭೆಯೊಳಗೆ ಮಾಹಿತಿ ನೀಡಿ ಎಂದರು.

      ತಾಲ್ಲೂಕಿನಲ್ಲಿ 65ಅಂಗನವಾಡಿ ಕಟ್ಟಡ ಕಟ್ಟಲು ತಲಾ 3ಲಕ್ಷ ಹಣ ಬಿಡುಗಡೆಯಾಗಿದೆ ಎಂದು ಸಿಡಿಪಿಓ ತಿಪ್ಪಯ್ಯ ಸಭೆಗೆ ತಿಳಿಸಿದರು, ಜಿ.ಪಂ.ಸದಸ್ಯ ಮಹಲಿಂಗಪ್ಪ ಮಾತನಾಡಿ, ತಾಲ್ಲೂಕಿನಲ್ಲಿರುವ ಹಳೆಯ ಅಂಗನವಾಡಿ ಕಟ್ಟಡಗಳಲ್ಲಿ ವಿದ್ಯುತ್ ಸಮಸ್ಯೆ ಇದೆ ಈ ಬಗ್ಗೆ ಗಮನ ಹರಿಸಿ ಎಂದು ಅಧಿಕಾರಿಗೆ ತಿಳಿಸಿದರು.

      2018-19ನೇ ಸಾಲಿನಲ್ಲಿ 620.ಮಿ.ಮೀ ವಾಡಿಕೆ ಮಳೆ, ಜೂನ್‍ವರೆಗೆ 168.50 ಮಿ.ಮೀ. ವಾಸ್ತವಿಕ ಮಳೆ ಆದರೆ ಈ ಬಾರಿ 261.ಮಿ.ಮೀ ಮಳೆಯಾಗಿದೆ, ಪೂರ್ವ ಮುಂಗಾರು ಬೆಳೆಗಳಾದ ಹೆಸರು 4500ಹೆಕ್ಟೇರ್ ಗುರಿಗೆ 4100 ಗುರಿ ಬಿತ್ತನೆಯಾಗಿದೆ, ಉದ್ದು 165, ಅಲಸಂದೆ 520, ತೊಗರಿ 335, ಎಳ್ಳು 63 ಎಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ, ಇದುವರೆಗೂ 39.922 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿದ್ದು ಆದರೆ 5483 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ, ಮುಂಗಾರು ಬೆಳೆಗಳಾದ ತೊಗರಿ, ಹರಳು, ಅವರೆ, ಇತ್ಯಾದಿ ಬೆಳೆಗಳು ಬೆಳವಣಿಗೆ ಹಂತದಲ್ಲಿವೆ, ರಸಗೊಬ್ಬರ ಹಾಗೂ ಬಿತ್ತನೆ ಬೀಜ ದಾಸ್ತಾನು ಸಮರ್ಪಕವಾಗಿದ್ದು ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಹಾಗೂ ಕಳೆದ ವರ್ಷ 15ಸಾವಿರ ರೈತರಿಗೆ ಬೆಳೆ ವಿಮೆ ಬಂದಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಹೊನ್ನದಾಸೇಗೌಡ ಸಭೆಗೆ ತಿಳಿಸಿದರು.

 
ಕೆಡಿಪಿ ಸಭೆಗೆ ರಾಜ್ಯದಲ್ಲಿ ಸ್ಥಳೀಯ ಶಾಸಕರನ್ನೇ ಸರ್ಕಾರ ಅಧ್ಯಕ್ಷರನ್ನಾಗಿ ನೇಮಿಸಿದೆ, ಆ ಸಭೆಯಲ್ಲಿ ಸರ್ಕಾರಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ಬರಬೇಕು, ಇಂದು ಬರದ ಪೋಲಿಸ್, ಉಪಖಜಾನೆ, ಲ್ಯಾಂಡ್ ರೆಕಾರ್ಡ್,ಸರ್ವೆ ಸೇರಿದಂತೆ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿಯನ್ನು ಕೆಡಿಪಿ ಸಭೆಯ ಎರಡು ದಿನಕ್ಕೆ ಮುಂಚಿತವಾಗಿ ನಡವಾಳಿಯನ್ನು ನೀಡಬೇಕು, ಸಭೆ ನಡೆಯುವಾಗ ನೀಡುವುದಲ್ಲ,!.

  ಜೆ.ಸಿ.ಮಾಧುಸ್ವಾಮಿ, ಶಾಸಕ ಚಿ.ನಾ.ಹಳ್ಳಿ 

LEAVE A REPLY

Please enter your comment!
Please enter your name here