ತುಮಕೂರು ಜಿಲ್ಲೆ : ಜೆಡಿಎಸ್-ಬಿಜೆಪಿ: 4, ಕಾಂಗ್ರೆಸ್ 3 ಸ್ಥಾನ

0
98

ತುಮಕೂರು:
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು, ಜೆಡಿಎಸ್ ಮತ್ತು ಬಿಜೆಪಿ ತಲಾ 4 ಸ್ಥಾನಗಳನ್ನು ಹಂಚಿಕೊಂಡರೆ, ಕಾಂಗ್ರೆಸ್ ಪಕ್ಷ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ಬಹಿರಂಗವಾಗುವುದರೊಂದಿಗೆ ವಿಧಾನಸಭಾ ಚುನಾವಣೆಯ ಕಸರತ್ತುಗಳಿಗೆ ಅಂತಿಮ ತೆರೆ ಬಿದ್ದಿದೆ.

ತುಮಕೂರು ನಗರ: 

ತುಮಕೂರು ನಗರ ಕ್ಷೇತ್ರದಿಂದ ಬಿಜೆಪಿಯ ಜಿ.ಬಿ.ಜ್ಯೋತಿಗಣೇಶ್ 60,421 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‍ನ ಎನ್.ಗೋವಿಂದರಾಜು (55,128) ಅವರನ್ನು 5293 ಮತಗಳ ಅಂತರದಿಂದ ಸೋಲಿಸಿದ್ದಾರೆ. ಶಾಸಕರಾಗಿದ್ದ ಡಾ. ರಫೀಕ್ ಅಹಮದ್ ಮೂರನೇ ಸ್ಥಾನದಲ್ಲಿದ್ದು, 51219 ಮತಗಳನ್ನು ಪಡೆದಿದ್ದಾರೆ.

ತುಮಕೂರು ಗ್ರಾಮಾಂತರ:

ಜೆಡಿಎಸ್‍ನ ಡಿ.ಸಿ.ಗೌರಿಶಂಕರ್ 82740 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಿ.ಸುರೇಶ್‍ಗೌಡ (77100) ಅವರನ್ನು 5640 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ರಾಯಸಂದ್ರ ರವಿಕುಮಾರ್ 7633 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಗುಬ್ಬಿ: ಹಾಲಿ ಶಾಸಕರಾಗಿದ್ದ ಜೆಡಿಎಸ್‍ನ ಎಸ್.ಆರ್.ಶ್ರೀನಿವಾಸ್ 55572 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜಿ.ಎನ್.ಬೆಟ್ಟಸ್ವಾಮಿ (46491) ಅವರನ್ನು 9081 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ದಿಲೀಪ್ ಕುಮಾರ್ 30528 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್‍ನ ಕೆ.ಕುಮಾರ್ 13938 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿ:

ಬಿಜೆಪಿಯ ಜೆ.ಸಿ.ಮಾಧುಸ್ವಾಮಿ 69612 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‍ನ ಸಿ.ಬಿ.ಸುರೇಶ್‍ಬಾಬು (59335) ಅವರನ್ನು 10277 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಾಂಗ್ರೆಸ್‍ನ ಸಂತೋಷ್ ಜಯಚಂದ್ರ 45893 ಮತಗಳನ್ನು ಪಡೆದಿದ್ದಾರೆ.
ತಿಪಟೂರು: ಬಿಜೆಪಿಯ ಬಿ.ಸಿ.ನಾಗೇಶ್ 61383 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಕೆ.ಷಡಕ್ಷರಿ (35820) ಅವರನ್ನು 25563 ಮತಗಳ ಅಂತರದಿಂದ ಸೋಲಿಸಿದ್ದಾರೆ. ಜೆಡಿಎಸ್‍ನ ಲೋಕೇಶ್ವರ 17027 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಸ್ವತಂತ್ರ ಅಭ್ಯರ್ಥಿ ಕೆ.ಟಿ.ಶಾಂತಕುಮಾರ್ 13506, ಜಿ.ನಾರಾಯಣ್ 8689, ಬಿ.ನಂಜಾಮರಿ 6212 ಮತಗಳನ್ನು ಪಡೆದಿದ್ದಾರೆ.

ತುರುವೇಕೆರೆ:

ಬಿಜೆಪಿಯ ಜಯರಾಂ ಎ.ಎಸ್. (ಮಸಾಲ ಜಯರಾಂ) 60710 ಮತಗಳನ್ನು ಪಡೆದು ಜೆಡಿಎಸ್‍ನ ಎಂ.ಟಿ.ಕೃಷ್ಣಪ್ಪ (58661) ಅವರನ್ನು 2049 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಕಾಂಗ್ರೆಸ್‍ನ ರಂಗಪ್ಪ ಟಿ.ಚೌಧರಿ 24584 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಎನ್.ನಾರಾಯಣಗೌಡ 4566 ಮತಗಳನ್ನು ಪಡೆದಿದ್ದಾರೆ.
ಕುಣಿಗಲ್: ಕಾಂಗ್ರೆಸ್‍ನ ಹೆಚ್.ಡಿ.ರಂಗನಾಥ್ 58697 ಮತಗಳನ್ನು ಪಡೆದು ಬಿಜೆಪಿಯ ಡಿ.ಕೃಷ್ಣಕುಮಾರ್ (53097) ಅವರನ್ನು 5600 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹಾಲಿ ಶಾಸಕರಾಗಿದ್ದ ಡಿ.ನಾಗರಾಜಯ್ಯ ಪಡೆದ ಮತಗಳು 44476.

ಶಿರಾ:

ಜೆಡಿಎಸ್‍ನ ಬಿ.ಸತ್ಯನಾರಾಯಣ್ 74338 ಮತಗಳನ್ನು ಪಡೆದು ಕಾಂಗ್ರೆಸ್‍ನ ಟಿ.ಬಿ.ಜಯಚಂದ್ರ (63973) ಅವರನ್ನು 10365 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಬಿಜೆಪಿಯ ಎಸ್.ಆರ್.ಗೌಡ 16959, ಪಕ್ಷೇತರ ಸಿ.ಎಂ.ನಾಗರಾಜು 14468, ಚಿದಾನಂದ ಎಂ.ಗೌಡ 3610 ಮತಗಳನ್ನು ಪಡೆದಿದ್ದಾರೆ.
ಪಾವಗಡ: ಕಾಂಗ್ರೆಸ್‍ನ ವೆಂಕಟರವಣಪ್ಪ ಅವರು 72974 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‍ನ ಕೆ.ಎಂ.ತಿಮ್ಮರಾಯಪ್ಪ (72565) ಅವರನ್ನು 409 ಮತಗಳಿಂದ ಸೋಲಿಸಿದ್ದಾರೆ. ಬಿಜೆಪಿಯ ಜಿ.ವಿ.ಬಲರಾಂ ಪಡೆದ ಮತಗಳು 14074.

ಮಧುಗಿರಿ:

ಜೆಡಿಎಸ್‍ನ ಎಂ.ವಿ.ವೀರಭದ್ರಯ್ಯ ಅವರು 88521 ಮತಗಳನ್ನು ಪಡೆದು ಕಾಂಗ್ರೆಸ್‍ನ ಕ್ಯಾತ್ಸಂದ್ರ ಎನ್.ರಾಜಣ್ಣ (69947) ಅವರನ್ನು 18574 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಬಿಜೆಪಿಯ ರಮೇಶ್‍ರೆಡ್ಡಿ 2911 ಮತಗಳನ್ನು ಪಡೆದಿದ್ದಾರೆ.

ಕೊರಟಗೆರೆ:

ಕಾಂಗ್ರೆಸ್‍ನ ಡಾ.ಜಿ.ಪರಮೇಶ್ವರ ಅವರು 81598 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‍ನ ಪಿ.ಆರ್.ಸುಧಾಕರಲಾಲ್ (73979) ಅವರನ್ನು 7619 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಸ್ಥಾನ ಕಳೆದುಕೊಂಡ ಕಾಂಗ್ರೆಸ್-ಜೆಡಿಎಸ್:

ನಾಲ್ಕು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 1 ಸ್ಥಾನವನ್ನು ಕಳೆದುಕೊಂಡು 3 ಕ್ಕೆ ಕುಸಿದಿದೆ. ಅಲ್ಲದೆ, ಗಳಿಸಿದ್ದ ಕ್ಷೇತ್ರಗಳೂ ಸಹ ಬೇರೆ ಪಕ್ಷಗಳ ಪಾಲಾಗಿವೆ. ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ತಿಪಟೂರು, ತುಮಕೂರು, ಮಧುಗಿರಿ ಮತ್ತು ಶಿರಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದೆ.
ಗುಬ್ಬಿ, ಕುಣಿಗಲ್, ತುರುವೇಕೆರೆ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ಮತ್ತು ಪಾವಗಡದಲ್ಲಿ ಜೆಡಿಎಸ್ ಶಾಸಕರಿದ್ದರು. ಇದರಲ್ಲಿ ಗುಬ್ಬಿಯಲ್ಲಿ ಮಾತ್ರ ತನ್ನ ಸ್ಥಾನ ಉಳಿಸಿಕೊಂಡಿರುವ ಜೆಡಿಎಸ್ ಉಳಿದ ಕ್ಷೇತ್ರಗಳನ್ನು ಕಳೆದುಕೊಂಡಿದೆ.

ಸ್ಥಾನ ಹೆಚ್ಚಿಸಿಕೊಂಡ ಬಿಜೆಪಿ:
ಇಡೀ ಜಿಲ್ಲೆಯಲ್ಲಿ ತುಮಕೂರು ಗ್ರಾಮಾಂತರದಲ್ಲಿ ಮಾತ್ರವೇ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದ ಬಿಜೆಪಿ ಈಗ ಆ ಸ್ಥಾನವನ್ನು ಕಳೆದುಕೊಂಡಿದ್ದರೂ ಉಳಿದ ಕ್ಷೇತ್ರಗಳಲ್ಲಿ ಅದು ಗೆಲುವು ಸಾಧಿಸಿದೆ. ತುಮಕೂರು ನಗರ, ತುರುವೇಕೆರೆ, ತಿಪಟೂರು ಮತ್ತು ಚಿ.ನಾ.ಹಳ್ಳಿಯಲ್ಲಿ ಗೆಲುವು ಸಾಧಿಸುವ ಮೂಲಕ ಈ ಬಾರಿ 4 ಸ್ಥಾನಗಳನ್ನು ಆ ಪಕ್ಷ ಗಳಿಸಿಕೊಂಡಿದೆ. ತುಮಕೂರು ಗ್ರಾಮಾಂತರ ಜೆಡಿಎಸ್ ಪಾಲಾಗಿದೆ.

LEAVE A REPLY

Please enter your comment!
Please enter your name here