ತುಮಕೂರು ನಗರಾಭಿವೃದ್ದಿಗೆ ಅಧ್ಯಯನ ಕೇಂದ್ರ ಆರಂಭ

0
50

ತುಮಕೂರು
                ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಿಸಿದಂತೆ ಎಲ್ಲಾ ವರ್ಗದ ಜನರ ಅಭಿಪ್ರಾಯವನ್ನು ಕ್ರೋಡೀಕರಿಸಲು ಅಧ್ಯಯನ ಕೇಂದ್ರವನ್ನು ತೆರೆದಿದ್ದು, ನಾಗರಿಕರು ಇದರ ಲಾಭ ಪಡೆದುಕೊಳ್ಳುವಂತೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.
             ಶನಿವಾರ ನಗರದ 15ನೇ ವಾರ್ಡಿಗೆ ಸೇರಿದ ಸಿಎಸ್‍ಐ ಲೇಔಟ್‍ನಲ್ಲಿ ಸಿಎಸ್‍ಐ ಬಡಾವಣೆ ನಾಗರಿಕ ಸಮಿತಿ ವತಿಯಿಂದ ಆಯೋಜಿಸಿದ್ದ ನೂತನ ಪಾಲಿಕೆ ಸದಸ್ಯರು ಹಾಗೂ ಶಾಸಕರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಸ್ಮಾರ್ಟ್‍ಸಿಟಿಯಾಗಿ ಆಯ್ಕೆಯಾಗಿರುವ ತುಮಕೂರು ನಗರದ ಅಭಿವೃದ್ದಿ ಈಗಷ್ಟೇ ಅರಂಭವಾಗಿದೆ. ಇದು ವ್ಯವಸ್ಥಿತವಾಗಿ ಸಾಕಾರಗೊಳ್ಳಬೇಕಾದರೆ ಎಲ್ಲ ಜನರ ಸಹಭಾಗಿತ್ವವೂ ಅಗತ್ಯವಾಗಿದೆ ಎಂದರು.
              ನಗರದ 15ನೇ ವಾರ್ಡು ಬೇರೆಲ್ಲಾ ವಾರ್ಡುಗಳಿಗಿಂತ ಹೆಚ್ಚು ವ್ಯಾವಹಾರಿಕ ಜನರೇ ಇರುವ ಬಡಾವಣೆಯಾಗಿದೆ. ವಾಸದ ಮನೆಗಳಿಗಿಂತ, ವಾಣಿಜ್ಯ ಕಟ್ಟಡಗಳೇ ಹೆಚ್ಚು. ಎಲ್ಲಾ ಸಮುದಾಯಕ್ಕೆ ಸೇರಿದ ವ್ಯಾಪಾರಸ್ಥರು ಇಲ್ಲಿ ವಾಸವಾಗಿದ್ದಾರೆ. ಇವರಿಗೆ ಸ್ಮಾರ್ಟ್‍ಸಿಟಿ ಹಾಗೂ ಕೈಗಾರಿಕಾ ಹಬ್‍ನ ಲಾಭ ದೊರಕಬೇಕು ಎಂಬುದು ನಮ್ಮ ಆಶಯ. ಭವಿಷ್ಯದಲ್ಲಿ ತುಮಕೂರು ಮತ್ತೊಂದು ಗ್ರೇಟ್ ನೊಯಿಡಾ ಆಗುತ್ತದೆ. ಇದರ ಲಾಭ ನಗರದ ಎಲ್ಲಾ ವರ್ಗದ ಜನರಿಗೆ ತಲುಪಬೇಕು ಎಂಬ ಆಶಯ ನಮ್ಮದಾಗಿದೆ ಎಂದು ಜ್ಯೋತಿಗಣೇಶ್ ನುಡಿದರು.
                ಸಿಎಸ್‍ಐ ಬಡಾವಣೆಗೆ ಸಂಬಂಧಿಸಿದಂತೆ ಈ ಹಿಂದಿನ ಕಾರ್ಪೊರೇಟರ್ ಕರುಣಾರಾಧ್ಯ ಸಹ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ನೂತನ ಸದಸ್ಯೆ ಗಿರಿಜಾ ಧನಿಯಕುಮಾರ್ ಸಹ ಮುತುವರ್ಜಿಯಿಂದ ನಿಮ್ಮ ಸೇವೆ ಮಾಡಲಿದ್ದಾರೆ. ನಿಮ್ಮಗಳ ನಂಬಿಕೆ ಉಳಿಸಿಕೊಳ್ಳಲಿದ್ದಾರೆ. ಸ್ಮಾರ್ಟ್‍ಸಿಟಿಯಿಂದ ಈ ಬಡಾವಣೆಗೆ ಕೂಗಳತೆ ದೂರದಲ್ಲಿರುವ ಹೈಸ್ಕೂಲ್ ಮೈದಾನದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಮುಂದಿನ ದಿನಗಳಲ್ಲಿ ಜರುಗಲಿವೆ. ಇದರ ಜವಾಬ್ದಾರಿಯನ್ನು ನೀವುಗಳು ಹೊರಬೇಕಾಗುತ್ತದೆ ಎಂದು ಶಾಸಕರು ತಿಳಿಸಿದರು.
               ಅಭಿನಂದನೆ ಸ್ವೀಕರಿಸಿ ಮಾತನಾಡಿದ 15ನೇ ವಾರ್ಡಿನ ನಗರಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್, ಭಾಜಪ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿತು. ಆ ನಂಬಿಕೆಯನ್ನು ನೀವುಗಳು ಉಳಿಯುವಂತೆ ಮಾಡಿದ್ದೀರಿ. ಇದಕ್ಕಾಗಿ ವಾರ್ಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ವಿದ್ಯಾವಂತರು, ಸುಶಿಕ್ಷಿತರೆ ವಾಸವಾಗಿರುವ ಈ ಬಡಾವಣೆಯನ್ನು ಪ್ಲಾಸ್ಟಿಕ್ ಮುಕ್ತ ಬಡಾವಣೆಯಾಗಿಸುವ ಗುರಿ ಹೊಂದಿದ್ದು, ನಾಗರಿಕರು ಸಹಕರಿಸುವಂತೆ ಮನವಿ ಮಾಡಿದ ಅವರು, ರೈಲ್ವೆ ನಿಲ್ದಾಣದ ರಸ್ತೆಯ ಅಭಿವೃದ್ದಿ ಕಾರ್ಯ ವಿಳಂಬದಿಂದ ತೀವ್ರ ತೊಂದರೆಯಾಗಿದೆ. ಶಾಸಕರು ಗಮನಹರಿಸಿ, ಬಹುಬೇಗ ದುರಸ್ತಿ ಕಾರ್ಯ  ಪೂರ್ಣಗೊಳಿಸಿದರೆ ಬಡಾವಣೆಯ ಜನರಿಗೆ ಅನುಕೂಲವಾಗುತ್ತದೆ ಎಂಬ ಕೋರಿಕೆ ಸಲ್ಲಿಸಿದರು.
                  ಮಾಜಿ ಕೌನ್ಸಿಲರ್ ಕರುಣಾರಾಧ್ಯ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಈ ವಾರ್ಡಿನ ಜನ ನನ್ನನ್ನು ಅವರ ಮನೆ ಮಗನಂತೆ ತಿಳಿದು, ಪುರಸ್ಕರಿಸಿದ್ದಾರೆ. ಈ ಬಡಾವಣೆಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸಿ ದ್ದೇನೆ. ಇಂದಿನ ಅಭಿನಂದನೆ ನನಗೆ ಮತ್ತಷ್ಟು ಕೆಲಸ ಮಾಡಲು ಪುಷ್ಟಿ ನೀಡಿದೆ ಎಂದರು.
                 ಸಿಎಸ್‍ಐ ಲೇಔಟ್‍ನ ನಾಗರಿಕ ಸಮಿತಿಯ ಜಿ.ಪಿ.ಜೈನ್ ಮಾತನಾಡಿ, ಇಡೀ ನಗರದಲ್ಲಿಯೇ ಸ್ವಚ್ಚತೆಯಲ್ಲಿ ಸಿಎಸ್‍ಐ ಬಡಾವಣೆÉ ಮೊದಲನೇ ಸ್ಥಾನದಲ್ಲಿದೆ. ಆದರೆ ರೈಲ್ವೆ ನಿಲ್ದಾಣ ರಸ್ತೆ ದುರಸ್ತಿ ಕಾರ್ಯ ವಿಳಂಬದಿಂದ ತೊಂದರೆಯಾಗುತ್ತಿದೆ. ಜೊತೆಗೆ ಸರಗಳ್ಳತನವೂ ಇದೆ. ಸರಗಳ್ಳತನವನ್ನು ಕಡಿಮೆ ಮಾಡಲು ಸಿಸಿ ಟಿವಿ ಕ್ಯಾಮರ ಅಳವಡಿಸುವಂತೆ ಶಾಸಕರಲ್ಲಿ ಮನವಿ ಮಾಡುತ್ತೇನೆ ಎಂದ ಅವರು, ಇದು ಕೇವಲ ಅಭಿನಂದನೆಯಲ್ಲಿ ಪಾಲಿಕೆ ಸದಸ್ಯರ ಜವಾಬ್ದಾರಿಯನ್ನು ಎಚ್ಚರಿಸುವ ಕಾರ್ಯಕ್ರಮವೂ ಹೌದು ಎಂದರು.
ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್, ಮಾಜಿ ಸದಸ್ಯ ಕರುಣಾರಾಧ್ಯ, ಶಾಸಕ ಜಿ.ಬಿ.ಜೋತಿ ಗಣೇಶ್ ಅವರುಗಳನ್ನು ಅಭಿನಂದಿಸಲಾಯಿತು. ಅಲ್ಲದೆ ಬಡಾವಣೆಯ ಹಿರಿಯ ನಾಗರಿಕರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಜೇಸಿಸ್‍ನ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಟಿ.ವಿ.ಎನ್.ಮೂರ್ತಿ, ಕನ್ನಡ ಸೇನೆಯ ಧನಿಯಕುಮಾರ್ ಸೇರಿದಂತೆ ಬಡಾವಣೆಯ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here