ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರಕ್ಕೆ ತಾಂತ್ರಿಕ ಮುಖ್ಯ ಸಲಹೆಗಾರರಾಗಿ ಕೆ.ಜಯಪ್ರಕಾಶ್

0
30

ತುಮಕೂರು:

      ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರದ ತಾಂತ್ರಿಕ ಸಮಿತಿಯ ಮುಖ್ಯ ಸಲಹಾಗಾರರಾಗಿ ಕೆ:ಜಯಪ್ರಕಾಶ್ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಪ್ರಕಟಿಸಿದರು.

      ಅವರು ನಗರದ ಎತ್ತಿನಹೊಳೆ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ, ಜಯಪ್ರಕಾಶ್ ಈಗ ರಾಜ್ಯ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗಳ ಸಾಧಕ-ಬಾಧಕಗಳ ತಾಂತ್ರಿಕ ಅವಲೋಕನ ಮತ್ತು ವಿಷನ್ 2025 ಸಿದ್ಧಪಡಿಸಲು ಅಧ್ಯಯನ ಕೇಂದ್ರದಲ್ಲಿ ಭಾಗವಹಿಸುತ್ತಿರುವುದು ಹರ್ಷವಾಗಿದೆ ಎಂದರು.

      ತುಮಕೂರು ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿರುವುದರಿಂದ ನಗರದಲ್ಲಿ ವಾಸಿಸುವ ಪ್ರತಿಯೊಬ್ಬರ ಜವಾಬ್ಧಾರಿ ಹೆಚ್ಚಿದೆ. ಶಾಸಕ ಜಿ.ಬಿ.ಜ್ಯೋತಿಗಣೇಶ್ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರ ಆರಂಭಿಸಿರುವುದು ದೇಶಕ್ಕೆ ಮಾದರಿಯಾಗಿದೆ. ಇದಕ್ಕೆ ಸರ್ಕಾರದ ಸಹಭಾಗಿತ್ವ ಅಗತ್ಯ. ನಗರದಲ್ಲಿನ ಹಾಗೂ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಅಧಿಕಾರಿಗಳು ಮತ್ತು ನೌಕರರು ಅವರು ಸೇವೆ ಮಾಡುತ್ತಿರುವ ಇಲಾಖಾ ಅಡಿಯಲ್ಲಿ ಒಂದೊಂದು ಯೋಜನೆಯ ಜವಾಬ್ದಾರಿ ಪಡೆಯಲು ಕೆ.ಜಯಪ್ರಕಾಶ್ ಕರೆ ನೀಡಿದರು.

      ಡಿಜಿಟಲ್ ಯುಗದಲ್ಲಿ ನಗರದ ಪ್ರತಿಯೊಂದು ಇಲಾಖೆಯ ಕಾಮಗಾರಿಗಳು ಜಿಐಎಸ್ ಆಧಾರಿತ ಇತಿಹಾಸ ಸಹಿತ ನಕ್ಷೆಯಲ್ಲಿ ನಮೂದಾಗಬೇಕು. ಎಲ್ಲಾ ಇಲಾಖೆಗಳು ಅಧ್ಯಯನ ಕೇಂದ್ರದಲ್ಲಿ ಅಪ್‍ಲೋಡ್ ಮಾಡಬೇಕು. ಈ ಬಗ್ಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಮತ್ತು ತುಮಕೂರು ಮಹಾನಗರ ಪಾಲಿಕೆ ಏನೇನು ಕ್ರಮಕೈಗೊಂಡಿದೆ ಎಂಬ ಬಗ್ಗೆ ಮುಂದಿನ ಸಭೆಯಲ್ಲಿ ಮಂಡಿಸಲು ಅಧ್ಯಯನ ಕೇಂದ್ರದ ಸಿ.ಇ.ಓ ರವರಿಗೆ ಸೂಚಿಸಿದರು.

      ಮಾಜಿ ಸಂಸದ ಜಿ.ಎಸ್.ಬಸವರಾಜ್ ಮಾತನಾಡಿ, ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ನಾಯಕರ ಅಭಿಪ್ರಾಯ ಪಡೆಯುವುದು ಈ ಕೇಂದ್ರದ ಜವಾಬ್ದಾರಿ. ತುಮಕೂರಿನ ಮಾಜಿ ಶಾಸಕರು, ವಿಜ್ಞಾನಿಗಳೂ ಹಾಗೂ ರ್ಯಾಂಕ್ ನಜೀರ್ ಎಂದೇ ಖ್ಯಾತಿ ಪಡೆದಿರುವ ನಜೀರ್ ಅಹಮ್ಮದ್‍ರವರು ಈ ಕೇಂದ್ರಕ್ಕೆ ಸಲಹೆ ನೀಡಲು ಮುಂದೆ ಬಂದಿದ್ದಾರೆ. ತುಮಕೂರು ನಗರ ದೇಶದಲ್ಲಿಯೇ ನಂಬರ್ -1 ಆಗಲು ಪಣತೊಟ್ಟಿರುವ ಅಧ್ಯಯನ ಕೇಂದ್ರಕ್ಕೆ ನಾನೂ ಸದಾ ಸೇವೆ ಸಲ್ಲಿಸಲು ಸಿದ್ದ. ಅಧಿಕಾರ ಇರಲಿ ಇಲ್ಲದಿರಲಿ ನಗರದ ಅಭಿವೃದ್ಧಿ ಕಡತಗಳು ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಇಲಾಖೆಯಲ್ಲಿರಲಿ ನಾನೂ ಸಹ ಶ್ರಮಿಸುತ್ತೇನೆ ಎಂದು ಘೋಷಿಸಿದರು.

      ಮೊದಲ ಸಭೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕೈಗೊಂಡಿರುವ ಕಾಮಗಾರಿಗಳ ಅವಲೋಕನ ನಡೆಯಿತು. ಮುಂದಿನ ಸಭೆಯಲ್ಲಿ ಸಮಾಲೋಚನೆ ನಡೆಸಿ ಅಧ್ಯಯನ ಕೇಂದ್ರದ ಸಲಹೆ ನೀಡಲು ತೀರ್ಮಾನಿಸಲಾಯಿತು.

      ಸಭೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರದ ಸಿ.ಇ.ಓ ಕುಂದರನಹಳ್ಳಿ ರಮೇಶ್, ಎಂಜಿನಿಯರ್‍ಗಳಾದ ಹರೀಶ್, ಮಲ್ಲೇಶ್, ಕೃಷ್ಣಮೂರ್ತಿ, ರಾಜಶೇಖರ್, ತಿಪ್ಪೆಸ್ವಾಮಿ ಇನ್ನೂ ಮುಂತಾದವರು ಭಾಗವಹಿಸಿದ್ದರು.

ಅಮಾನಿಕೆರೆಗೆ ಹೇಮಾವತಿ ನೀರು:

      ತುಮಕೂರು ಅಮಾನಿಕೆರೆಗೆ ಹೇಮಾವತಿ ಕಾಲುವೆಯಿಂದ ನೀರು ತುಂಬಿಸುವ ಸುಮಾರು 22.50 ಕೋಟಿ ರೂ. ವೆಚ್ಚದ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಸ್ತಾವನೆಗೆ ಹಸಿರು ನಿಶಾನೆ ನೀಡಲಾಯಿತು.

      ಮುಂದಿನ ಸಭೆಯಲ್ಲಿ ನಗರದ ಕೆರೆಗಳಿಗೆ ನೀರು, ಶಾಶ್ವತ ಕುಡಿಯುವ ನೀರಿನ ಯೋಜನೆಗಳು, ಯುಜಿಡಿ ಯೋಜನೆ, ರಸ್ತೆ ಪಕ್ಕದ ಚರಂಡಿ ಮತ್ತು ಮಳೆ ನೀರಿನ ಚರಂಡಿ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಯಿತು.
 

LEAVE A REPLY

Please enter your comment!
Please enter your name here