ತೋಟದಲ್ಲಿ ಕೆಲಸ ನಿರ್ವಹಿಸುತ್ತಿರುವ ವೇಳೆ ಚಿರತೆ ದಾಳಿ ಇಬ್ಬರ ಸ್ಥಿತಿ ಚಿಂತಾಜನಕ

0
18

ದೊಡ್ಡೇರಿ:
 ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಹತ್ತಿರ ಬೆಳಿಗ್ಗೆ 8 ಗಂಟೆಗೆ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ.
      ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದ ಹೊರ ವಲಯದ ಜಮೀನಿನ ತೋಟದಲ್ಲಿ ಕೆಲಸ ನಿರ್ವಹಿಸುತ್ತಿರುವ ವೇಳೆ ಇದೆ ಗ್ರಾಮದ ಸುಮಾರು (55) ವರ್ಷದ ಕರಿಯಣ್ಣ ಎಂಬುವವರಿಗೆ ತಲೆಯ ಭಾಗ ಮತ್ತು ಕಿವಿಗಳ ಎಡ & ಬಲ ಭಾಗದಲ್ಲಿ ಕಚ್ಚಿ ಗಾಯಗೊಳಿಸಿರುತ್ತದೆ. ಈತನ ಸ್ಥಿತಿ ಚಿಂತಾ ಜನಕವಾಗಿರುತ್ತದೆ.

      ಮತ್ತೋರ್ವ ಶಿವಣ್ಣ ಎಂಬುವವರೂ ತನ್ನ ಜಮೀನಿನಲ್ಲಿ ಹಸುವಿಗೆ ಸೀಮೆ ಹುಲ್ಲು ಕೊಯ್ಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ಈತನ ಮೇಲೆ ಎರಗಿ ತಲೆ ಮತ್ತು ಬೆನ್ನಿನ ಹಿಂಭಾಗಕ್ಕೆ ಬಾಯಿಯಿಂದ ಕಡಿದು ಗಾಯಗೊಳಿಸಿರುತ್ತದೆ. ಈ ವಿಚಾರವಾಗಿ ಈಗಾಗಲೇ ಮಧುಗಿರಿ ವಲಯ ಅರಣ್ಯ ಅಧಿಕಾರಿಗಳಿಗೆ ಸತತ ಸಾರ್ವಜನಿಕವಾಗಿ ಅರ್ಜಿ ನೀಡಿದ್ದರೂ, ಅರಣ್ಯ ಇಲಾಖೆಯವರು ಈ ಕಡೆ ಗಮನಹರಿಸದೆ ನಿರ್ಲಕ್ಷ್ಯ ತೋರಿರುವುದರಿಂದ ಈಗಾಗಲೇ ಪ್ರತಿದಿನ ಕುರಿ, ಮೇಕೆ, ಕತ್ತೆಗಳನ್ನು ತಿಂದು ಹೋಗುತ್ತಿದ್ದ ಚಿರತೆ ಏಕಾಏಕಿ ಮನುಷ್ಯರ ಮೇಲೆ ಎರಗಿರುವುದರಿಂದ ಮನುಷ್ಯರ ರಕ್ತದ ರುಚಿ ಕಂಡಿರುವ ಚಿರತೆ ಮುಂದಿನ ದಿನಗಳಲ್ಲಿ ಕತ್ತೆ, ಕುರಿಗಳನ್ನು ಬಿಟ್ಟು ಮನುಷ್ಯರ ಮೇಲೆಯೇ ಎರಗಬಹುದೆಂದು ಈ ಭಾಗದ ಕುರಿಗಾಯಿಗಳಾದ ಮತ್ತು ದನಗಾಯಿಗಳಾದ ಹಾಗೂ ಜಮೀನಿನಲ್ಲಿ ಕೆಲಸ ನಿರ್ವಹಿಸುವ ರೈತರುಗಳು ಆತಂಕದಲ್ಲಿ ಸಂಚರಿಸುವ ಸ್ಥಿತಿ ಬಂದಿರುತ್ತದೆ.


      ಇನ್ನೂ ಮುಂದಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ದೊಡ್ಡೇರಿ, ಗೊಲ್ಲರಹಟ್ಟಿ ಗ್ರಾಮ, ಮಲ್ಲೇನಹಳ್ಳಿ, ಚಂದ್ರಗಿರಿ, ನಾಗೇನಹಳ್ಳಿ, ಭೂತ್‍ನಳ್ಳಿ, ತಿಮ್ಮಲಾಪುರ ಇನ್ನೂ ಮುಂತಾದ ಗ್ರಾಮಗಳ ಕಾಡಿನ ಮತ್ತು ಬೆಟ್ಟಗುಡ್ಡದ ಅಂಚಿನಲ್ಲಿ ವಾಸಿಸುತ್ತಿರುವ ಮತ್ತು ಜಮೀನು ವ್ಯವಸಾಯ ಮಾಡುತ್ತಿರುವ ರೈತರುಗಳಿಗೆ ರಕ್ಷಣೆ ಒದಗಿಸುವುದರ ಮೂಲಕ ಚಿರತೆಗಳನ್ನು ಹಿಡಿದು ಬನ್ನೇರುಘಟ್ಟ ಕಾಡಿಗೆ ಅಟ್ಟಬೇಕೆಂದು ಸಾರ್ವಜನಿಕರಾದ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ತಿಮ್ಮಯ್ಯ, ಕೃಷ್ಣಪ್ಪ, ಈರಣ್ಣ, ನಾಗರಾಜು, ಹಟ್ಟಿತಿಮ್ಮಣ್ಣ ಹಾಗೂ ಸರ್ಜಮ್ಮನಹಳ್ಳಿ ಗ್ರಾಮದ ರಾಜಣ್ಣ, ರಾಮಕೃಷ್ಣಯ್ಯ, ಹನುಮಂತರಾಯಪ್ಪ, ಭೀಮಣ್ಣ ಇನ್ನೂ ಮುಂತಾದವರು ಆರೋಪಿಸಿರುತ್ತಾರೆ.

LEAVE A REPLY

Please enter your comment!
Please enter your name here