ದುಶ್ಚಟ ಬೇಡುವ ಜಯದೇವ ಜೋಳಿಗೆಗೆ ಚಾಲನೆ

0
36

 

ದಾವಣಗೆರೆ:

ಬೀಡಿ, ಸಿಗರೇಟ್, ತಂಬಾಕು, ಗುಟ್ಕಾ, ಬ್ರಾಂದಿ, ವಿಸ್ಕಿ ಸೇವನೆಯಿಂದ ಕಾನ್ಸರ್ ಸೇರಿದಂತೆ ಹಲವು ಮಾರಕ ಕಾಯಿಲೆಗಳು ಬರಲಿವೆ. ಅಲ್ಲದೆ, ಮನುಷ್ಯನ ಅಂಗಾಂಗವೂ ಊನ ಆಗಲಿದೆ. ಆದ್ದರಿಂದ ದುಶ್ಚಟಗಳನ್ನು ಜಯದೇವ ಜೋಳಿಗೆಗೆ ಹಾಕಿ ಆರೋಗ್ಯಕರ ಜೀವನ ನಡೆಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಕರೆ ನೀಡಿದರು.

ನಗರದ ಕೊಂಡಜ್ಜಿ ರಸ್ತೆಯ ಮಾರುತಿ ಮಂದಿರ ಎದುರಿನ ಸವಿತಾ ಮಹರ್ಷಿ ಸಮುದಾಯ ಭವನದಲ್ಲಿ ಶನಿವಾರ ಬಸವ ಕೇಂದ್ರ, ಶ್ರೀಮುರುಘ ರಾಜೇಂದ್ರ ವಿರಕ್ತಮಠ, ಸವಿತಾ ಸಮಾಜ ಸಂಘ, ಗದ್ವಾಲ್ ಜಮುಲಮ್ಮ ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಏರ್ಪಡಿಸಿರುವ ದುಶ್ಚಟಗಳನ್ನು ಬೇಡುವ ಜಯದೇವ ಜೋಳಿಗೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯ ದುಶ್ಚಟಗಳ ದಾಸನಾದರೆ ಕಣ್ಣು, ಕವಿ, ಕಿಡ್ನಿ, ಹೃದಯಗಳು ಹಲವು ಸೋಂಕುಗಳಿಗೆ ತುತ್ತಾಗಲಿವೆ. ಅಲ್ಲದೆ, ಕ್ಯಾನ್ಸ್‍ರ್ ಸೇರಿದಂತೆ ಇತರೆ ಮಾರಕ ಕಾಯಿಲೆಗಳು ನಮ್ಮನ್ನ ಬಾಧಿಸುವ ಸಾಧ್ಯತೆ ಇದೆ. ನಮ್ಮ ಅಂಗಾಂಗಳು ಹಾಳಾದರೆ, ಅವುಗಳನ್ನು ನೀಡಲು ಮತ್ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಮನುಷ್ಯನು ದುಶ್ಚಟಗಳಿಂದ ದೂರವಿದ್ದು, ಆರೋಗ್ಯವನ್ನು ಜೋಪಾನ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿನ ತಿಜೋರಿಯಲ್ಲಿ ಬೆಲೆ ಬಾಳುವ ಬೆಳ್ಳಿ, ಬಂಗಾರ, ರೇಷ್ಮೆ ಸೀರೆ, ಬಟ್ಟೆಗಳನ್ನು ಇಡುತ್ತಾರೆ ವಿನಃ, ಕಸವನ್ನು ಸಂಗ್ರಹಿಸಿ ಇಡುವುದಿಲ್ಲ. ಅದರಂತೆಯೇ ಬೆಲೆಯೇ ಕಟ್ಟಲಾಗದಂತಹ ನಮ್ಮ ದೇಹವೆಂಬ ತಿಜೋರಿಯಲ್ಲಿ ಒಳ್ಳೆಯ ಸಂಸ್ಕಾರ, ಆಚಾರ, ವಿಚಾರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕೇ ಹೊರತು ಬೀಡಿ, ಸಿಗರೇಟ್, ಗುಟ್ಕಾ, ಹೆಂಡವನ್ನಲ್ಲ ಎಂದರು.
ಇತ್ತೀಚೆಗೆ ಯುವಕರು ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ಬೀಡಿ, ತಂಬಾಕು, ಸರಾಯಿ, ಗುಟ್ಕಾ ಸೇವನೆ ಮಾಡುತ್ತಾ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲ ಯುವಕರು ಚಿತ್ರ ತಾರೆಯರ ಸ್ಟೈಲ್‍ಗಳನ್ನು ಅನುಕರಣೆ ಮಾಡಲು ಹೋಗಿ ದಾರಿ ತಪ್ಪುತ್ತಿರುವುದು ಸರಿಯಲ್ಲ ಎಂದು ನುಡಿದರು.

ವಿರಕ್ತಮಠವು ಕಳೆದ 10 ವರ್ಷಗಳಿಂದ ಜಯದೇವ ಜೋಳಿಗೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಪವಿತ್ರವಾದ ಶ್ರಾವಣ ಮಾಸ ಭಕ್ತಿಗೆ ಸುಗ್ಗಿಯ ಕಾಲವಿದ್ದಂತೆ. ಈ ತಿಂಗಳಲ್ಲಿ ದುಶ್ಚಟಗಳಿಂದ ದೂರ ಉಳಿದರೆ, ಜೀವನ ಪರ್ಯಂತ ಅವುಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ. ನಮ್ಮ ಅಭಿಯಾನದಿಂದ ಕೆಲ ಯುವಕರು ಬೀಡಿ, ತಂಬಾಕು, ಸರಾಯಿ ಸೇವನೆಯಿಂದ ದೂರ ಉಳಿದು, ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ. ಅವರ ಕುಟುಂಬದವರು ನೆಮ್ಮದಿಯಿಂದ ಇದ್ದಾರೆ. ದಾವಣಗೆರೆ ನಗರ ದುಶ್ವಟ ಮುಕ್ತ ನಗರವಾಗಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದರು.

ಯಾರನ್ನು ನೋಡಿದರೆ ಅಶುಭವಾಗುತ್ತದೆ ಎಂಬ ಮನೋಭಾವನೆ ಹೊಂದಿರುವವರ ಮೌಢ್ಯವನ್ನು 12 ನೇ ಶತಮಾನದಲ್ಲಿಯೇ ಬಸವಣ್ಣನವರು ಹೋಗಲಾಡಿಸಿದ್ದಾರೆ. ಈ ಮನೋಭಾವವನ್ನು ತೊಡೆದು ಹಾಕಬೇಕಂಬ ಸಂಕಲ್ಪದಿಂದಾಗಿ ವಿಶ್ವಗುರು ಬಸವಣ್ಣನವರು ನಿತ್ಯ ಸವಿತಾ ಸಮಾಜದವರನ್ನು ನೋಡಿ ಶುಭ ಕಾರ್ಯಗಳನ್ನು ಆರಂಭಿಸುತ್ತಿದ್ದರು ಎಂದು ಸ್ಮರಿಸಿದರು.
ಮಾನವ ಕುಲವನ್ನು ಸುಂದರ ಗೊಳಿಸಿದ ಕೀರ್ತಿ ಸವಿತಾ ಸಮಾಜಕ್ಕೆ ಇದೆ. ಮನುಷ್ಯ ಹೇಗೆ ಇದ್ದರು ಸವಿತಾ ಸಮಾಜದವರು ಸುಂದರ ಗೊಳಿಸುವರು. ಅವನಲ್ಲಿರುವ ಕೊಳೆಯನ್ನು ಕಳೆದು ಹೊಳೆಯುವಂತೆ ಮಾಡುವರು ಎಂದರು.

ಮಾರುತಿ ಮಂದಿರದಿಂದ ಆರಂಭವಾಗಿ ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದ ವರೆಗೆ ನಡೆದ ಜಯದೇವ ಜೋಳಿಗೆ ಅಭಿಯಾನದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಮಾಜಿ ನಗರಸಭಾಧ್ಯಕ್ಷ ಬಿ.ವೀರಣ್ಣ, ಶಿವಾನಂದಪ್ಪ ಪಲ್ಲಾಗಟ್ಟೆ, ಸವಿತಾ ಸಮಾಜ ಸಂಘದ ಅದ್ಯಕ್ಷ ಎನ್.ರಂಗಸ್ವಾಮಿ, ಗದ್ವಾಲ್ ಜಮುಲಮ್ಮ ಸೇವಾ ಸಂಘದ ಅಧ್ಯಕ್ಷ ಜಿ.ಎಸ್.ಪರಶುರಾಮ್, ಕರಿಬಸಪ್ಪ.ಆರ್, ಎನ್.ಜೆ.ಶಿವಕುಮಾರ್, ಎಂ.ಬಸವರಾಜ್, ಎಸ್.ಜಿ.ಸಂಗಪ್ಪ, ಚನ್ನಬಸವ ಶೀಲವಂತ, ಉಮೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here