ದುಷ್ಟಶಕ್ತಿಗಳ ನಿರ್ನಾಮಕ್ಕೆ ದುರ್ಗೆಯರಾಗಿ

0
20

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಶಿಕ್ಷಣ ಶಿಬಿರದಲ್ಲಿ ವಿಜಯ ರಾಹತ್ಕರ್

ದಾವಣಗೆರೆ:

      ದುಷ್ಟಶಕ್ತಿಗಳ ನಿರ್ನಾಮಕ್ಕೆ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ದುರ್ಗೆಯರಾಗಿ ಮುನ್ನುಗ್ಗಬೇಕೆಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯ ರಾಹತ್ಕರ್ ಕರೆ ನೀಡಿದರು.

      ನಗರದ ಜಿಎಂಐಟಿ ಕಾಲೇಜಿನಲ್ಲಿ ಭಾನುವಾರದಿಂದ ಆರಂಭವಾದ ಭಾರತೀಯ ಜನತಾ ಪಾರ್ಟಿಯ ರಾಜ್ಯ ಮಹಿಳಾ ಮೋರ್ಚಾದ ಪ್ರಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತೆಯರು ಒಂದು ಕೈಯಲ್ಲಿ ಸಂವಿಧಾನ, ಇನ್ನೊಂದು ಕೈಯಲ್ಲಿ ಸಂಸ್ಕಾರ, ಸೃಜನಶೀಲತೆ, ಸಮತೆಗಳನ್ನು ಹಿಡಿದು ದುಷ್ಟಶಕ್ತಿಗಳ ನಿರ್ನಾಮಕ್ಕೆ ದುರ್ಗೆಯ ಅವತಾರ ತಾಳಬೇಕೆಂದು ಕಿವಿಮಾತು ಹೇಳಿದರು.

      ಅಧಿಕಾರವೇ ಬಿಜೆಪಿಯ ಅಂತಿಮ ಗುರಿಯಲ್ಲ, ಭಾರತ ಮಾತೆಯ ಸೇವೆ ಮಾಡಿ, ಆಕೆಯ ಗೌರವನ್ನು ಹೆಚ್ಚಿಸುವುದು ನಮ್ಮ ಮೂಲ ಗುರಿಯಾಗಿದೆ. ಅಲ್ಲದೆ, ದೇಶದ ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣಕ್ಕಾಗಿ ಹಗಲು-ರಾತ್ರಿ ದುಡಿಯಲು ನಮ್ಮ ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕೆಂದು ಸಲಹೆ ನೀಡಿದರು.

      ಬಿಜೆಪಿಯ ವಿಚಾರಧಾರೆಗಳನ್ನು ಅರಿತು, ಪಕ್ಷ ಸಂಘಟನೆಗೆ ಮುಂದುವರೆಯಬೇಕಾಗಿದೆ. ಹೀಗಾಗಿ ನಮ್ಮ ಪಕ್ಷದ ವಿಚಾರಧಾರೆ ತಿಳಿಯಲು ನಮ್ಮ ಜ್ಞಾನ ಹಾಗೂ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಇಂಥಹ ಪ್ರಶಿಕ್ಷಣ ಶಿಬಿರಗಳು ಅತ್ಯವಶ್ಯವಾಗಿವೆ ಎಂದ ಅವರು, ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಒಂದು ಹಸಿ ಮಣ್ಣಿನ ಮುದ್ದೆ ಇದ್ದಂತೆ, ಆ ಮಣ್ಣಿನ ಮುದ್ದೆಗೆ ಒಂದು ಸುಂದರ ಸ್ವರೂಪ ಕೊಡಲು, ಜನರ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂಬುದರ ಬಗ್ಗೆ ಚಿಂಥನ-ಮಂಥನ ನಡೆಸಲು ಈ ಪ್ರಶಿಕ್ಷಣ ಶಿಬಿರ ಸಹಕಾರಿಯಾಗಿದೆ ಎಂದು ಹೇಳಿದರು.

      ಕೇಂದ್ರದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ದೇಶದ 21 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ನಾಡಿನ ಜನತೆ ಬಿಜೆಪಿಯ ಮೇಲೆ ಅತ್ಯಂತ ವಿಶ್ವಾಸವಿಟ್ಟು, ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಆದರೆ, ಕೆಲವೇ ಸ್ಥಾನಗಳ ಕೊರತೆಯಿಂದ ಅಧಿಕಾರದಿಂದ ದೂರ ಉಳಿಯಬೇಕಾಗಿದೆ. ಆದರೆ, ನಮ್ಮ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಿದ್ದರೆ, ಇನ್ನಷ್ಟು ಸೀಟು ಗಳಿಸಿ ಅಧಿಕಾರ ಪಡೆಯಬಹುದಿತ್ತು ಎಂದರು.

      ಈಗಾಗಲೇ ಮೋದಿ ಸರ್ಕಾರದಲ್ಲಿ ಡಿಜಿಟಿಯಲ್ ಕ್ರಾಂತಿ ಸೇರಿದಂತೆ ಬಹಳಷ್ಟು ಪರಿವರ್ತನೆಯಾಗುತ್ತಿದೆ. ಇದನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಅರಿತು, ನಮ್ಮ ಕೇಂದ್ರ ಸರ್ಕಾರ ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ತಲುಪಿಸಬೇಕಾಗಿದೆ. ಜಗತ್ತಿನ ಅತೀ ದೊಡ್ಡ ಪಾರ್ಟಿಯಾಗಿ ಹೊರಹೊಮ್ಮಿರುವ ಬಿಜೆಪಿಯಲ್ಲಿ ಸುಮಾರು 3 ಕೋಟಿ ಮಹಿಳೆಯರು ಸದಸ್ಯತ್ವ ಹೊಂದಿದ್ದಾರೆ. ಹೀಗಾಗಿ ದೇಶದ ಮುನ್ನಡೆಯಲ್ಲಿ ಮಹಿಳಾ ಕಾರ್ಯಕರ್ತರ ಜವಾಬ್ದಾರಿಯೂ ಬಹುದೊಡ್ಡದಾಗಿದ್ದು, ಸವ್ರ ಕಲ್ಯಾಣಕ್ಕಾಗಿ ವಿಚಾರಧಾರೆಯ ಮೇಲೆ ಮುನ್ನಡೆಯಬೇಕೆಂದು ಕಿವಿಮಾತು ಹೇಳಿದರು.

      ಕರ್ನಾಟಕದ ಬಿಜೆಪಿಯ ರಾಜ್ಯ ಸಹ ಉಸ್ತುವಾರಿ ಪುರಂದರೇಶ್ವರಿ ಮಾತನಾಡಿ, ದೇಶದಲ್ಲಿರುವ 1700 ರಾಜಕೀಯ ಪಕ್ಷಗಳಿವೆ. ಈ ಪೈಕಿ ಎಲ್ಲಾ ಪಕ್ಷಗಳಿಂದಲೂ ನಮ್ಮ ಪಕ್ಷ ವಿಭಿನ್ನವಾಗಿದೆ. ಕಾಂಗ್ರೆಸ್, ಸಮಾಜವಾದಿ ಪಕ್ಷ, ಜೆಡಿಎಸ್ ಸೇರಿದಂತೆ ಬಹುತೇಕ ಪಕ್ಷಗಳು ಕುಟುಂಬ ಮತ್ತು ವಂಶ ಪಾರಂಪರ್ಯ ರಾಜಕಾರಣ ನಡೆಸುತ್ತಿವೆ. ಆದರೆ, ಬಿಜೆಪಿ ಸಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕೆ ಸೇರಿದ ಶಿಕ್ಷಕರ ಮಗ ಅಟಲ್‍ಬಿಹಾರಿ ವಾಜಪೇಯಿ, ಬಾಲ್ಯದಲ್ಲಿ ಟೀ ಮಾರಿದ ನರೇಂದ್ರ ಮೋದಿ ಇವರಿಬ್ಬರನ್ನು ಪ್ರಧಾನಿ ಮಾಡಿದ, ಅತ್ಯಂತ ತಳ ಸಮುದಾಯದಲ್ಲಿ ಜನಸಿದ ರಾಮನಾಥ್ ಕೋವಿಂದರನ್ನು ದೇಶದ ಪ್ರಥಮ ಪ್ರಜೆಯನ್ನಾಗಿಸಿದ ಕೀರ್ತಿ ನಮ್ಮ ಪಕ್ಷಕ್ಕಿದೆ. ಇವರ್ಯಾರಿಗೂ ಸಹ ಗಾಡ್ ಫಾದರ್‍ಗಳಿಲ್ಲ. ಆದರೆ, ಆ ಬೇರೆ ಪಕ್ಷಗಳಲ್ಲಿ ಗಾಡ್‍ಫಾದರ್ ಇಲ್ಲದಿದ್ದರೆ, ಏನಾಗಲೂ ಸಾಧ್ಯವಿಲ್ಲ. ಇದೇ ಬಿಜೆಪಿ ಮತ್ತು ಇತರೆ ಪಕ್ಷಗಳಿಗಿರುವ ವ್ಯತ್ಯಾಸ ಎಂದು ವಿಶ್ಲೇಷಿಸಿದರು.

      ಇಬ್ಬರು ಸಂಸತ್ ಸದಸ್ಯರನ್ನು ಹೊಂದುವ ಮೂಲಕ ರಾಜಕೀಯ ಪಯಣ ಆರಂಭಿಸಿದ ಬಿಜೆಪಿ ಇವತ್ತು ದೇಶವನ್ನು ಆಳುತ್ತಿದೆ. ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಬೇಟಿ ಬಚಾವೋ, ಬೇಟಿ ಪಡಾವೋ, ಹೆಣ್ಣು ಮಕ್ಕಳು ಸಂಸಾರಕ್ಕೆ ಆರ್ಥಿಕ ಹೊರೆ ಎಂಬ ಮನಸ್ಥಿಯಿಂದ ಹೊರತರಲು ಸುಕನ್ಯಾ ಸಮೃದ್ಧಿ, ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ಮುದ್ರಾ ಯೋಜನೆ, ಗರ್ಭಿಣಿ ಮತ್ತು ನವಜಾತ ಶಿಶುಗಳ ಸಾವು ತಡೆಯಲು ಮಾಸಿಕ ಆರೋಗ್ಯ ತಪಾಸಣೆ ಸೇರಿದಂತೆ ಸುಮಾರು 104 ಯೋಜನೆಗಳನ್ನು ಪ್ರಧಾನಿ ಮೋದಿ ಅವರು ಅನುಷ್ಠಾನಗೊಳಿಸಿದ್ದು, ಇವುಗಳನ್ನು ಸಾರ್ವಜನಿಕರಿಗೆ ತಲುಪಿಸಲು ನಮ್ಮ ಕಾರ್ಯಕರ್ತರು ಪಕ್ಷ ಮತ್ತು ಜನರ ಮಧ್ಯೆ ಸಂಪರ್ಕಕೊಂಡಿಯಂತೆ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

      2019ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವ ನಮ್ಮ ಮೇಲೆ ಬಹಳಷ್ಟು ಜವಾಬ್ದಾರಿಗಳಿವೆ. ಆ ಜವಾಬ್ದಾರಿಯನ್ನು ಅರಿತು ಪಕ್ಷ ಸಂಘಟನೆಯಲ್ಲಿ ತೊಡಗಿ, ನಮ್ಮ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಕ್ಷವನ್ನು ಮರಳಿ ಕೇಂದ್ರದಲ್ಲಿ ಅಧಿಕಾರಕ್ಕೆ ತಂದು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕೆಂದು ಕರೆ ನೀಡಿದರು.

      ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಮೋದಿ ನೇತೃತ್ವದ ಸರ್ಕಾರ ಪ್ರಯತ್ನಿಸಿದ ಸಂದರ್ಭದಲ್ಲಿ ಮೂರು ಜನ ಯಾದವ್‍ಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇನ್ನೊಮ್ಮೆ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮಹಿಳಾ ಕಾರ್ಯಕರ್ತೆಯರು ಶ್ರಮಿಸಿದರೆ, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಬಿಲ್ ಅನ್ನು ಪಾಸ್ ಮಾಡಿಸಿಯೇ ತೀರುತ್ತೇವೆ ಎಂದರು.

      ಹಿಂದೆ ಪ್ರಮುಖ ಐದು ಯೋಜನೆಗಳನ್ನು ಅನುಷ್ಠಾನಗೊಳಿಸಿದ ಅಟಲ್‍ಬಿಹಾರ್ ವಾಜಪೇಯಿ ಕಾಂಗ್ರೆಸ್‍ನವರಂತೆ ಯಾವ ಯೋಜನೆಗೂ ಅವರ ಹೆಸರು ಇಡಲಿಲ್ಲ. ಬದಲಿಗೆ ದೇಶಕ್ಕಾಗಿ ಶ್ರಮಿಸಿದವರ ಹೆಸರನ್ನು ಇಟ್ಟರು. ಆದರೆ, ನಂತರದ ಚುನಾವಣೆಯಲ್ಲಿ ಮರಳಿ ನಮ್ಮ ಸರ್ಕಾರ ಬರಲಿಲ್ಲ. ಇದಕ್ಕೆ ನಮ್ಮ ಕಾರ್ಯಕರ್ತರು ವಾಜಪೇಯಿ ಕೈಗೊಂಡ ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವದಿರುವುದೇ ಕಾರಣವಾಯಿತು. ಈಗ ಪ್ರಧಾನಿ ಮೋದಿ ಅವರು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈಗ ಇವರ ಕಾರ್ಯಕ್ರಮಗಳನ್ನು ಜನತೆಗೆ ಮನವರಿಕೆ ಮಾಡಿಕೊಡದಿದ್ದರೆ, ಅವರಿಗೂ ವಾಜಪೇಯಿ ಗತಿ ಬರುವ ಅಪಾಯವಿದೆ. ಆದ್ದರಿಂದ ಕಾರ್ಯಕರ್ತರು ಮೋದಿ ಸರ್ಕಾರದ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಲು ಶ್ರಮಿಸಬೇಕೆಂದು ಸಲಹೆ ನೀಡಿದರು.

      ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮಹಿಳೆಯರಿಗೆ ಡಬ್ಬಲ್ ಶಕ್ತಿ ಇದೆ. ಈ ಶಕ್ತಿಯನ್ನು ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕು. ಒಂದು ಕಾಲದಲ್ಲಿ ನರೇಂದ್ರ ಮೋದಿಗೆ ವಿಸಾ ನಿರಾಕರಿಸಿದ್ದ ಆಮೇರಿಕಾ ಈಗ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದೆ. ಇದು ಇಡೀ ಭಾರತಕ್ಕೆ ಸಿಕ್ಕ ಗೌರವ ಮನ್ನಣೆಯಾಗಿದೆ. ದೇಶದಲ್ಲಿ ನಡೆಯುತ್ತಿರುವ ವಂಶ ಆಡಳಿತ ನಿಲ್ಲಬೇಕಾದರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲೇಬೇಕಾಗಿದೆ. ಪ್ರಧಾನಿ ಹುದ್ದೆಯ ಜೊತೆಗೆ ರಾಹುಲ್‍ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ ಅವರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮೋದಿ ಅವರಿಗೆ ಪ್ರತಿಸ್ಪರ್ಧಿಗಳೇ ಇಲ್ಲ. ಹೀಗಾಗಿ ಬಿಜೆಪಿ ಕೇಂದ್ರದ ಆಡಳಿತ ಚುಕ್ಕಾಣಿ ಹಿಡಿದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಚಿತ್ರ ನಟಿ ಶೃತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಶಾಸಕಿ ರೂಪಾಲಿ ನಾಯ್ಕ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷೆ ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

 ಜನರ ಭಾವನೆಗಿಲ್ಲ ಬೆಲೆ :
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರ ಭಾವನೆ ಬಿಜೆಪಿ ಮೇಲೆ ಇತ್ತು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಾವನೆಗೆ ಮೌಲ್ಯವಿಲ್ಲ. ಬದಲಿಗೆ ತಲೆಗಳಿಗೆ ಮಾತ್ರ ಮೌಲ್ಯವಿದೆ. ನಮಗೆ ಆರೇಳು ತಲೆಗಳ ಸಂಖ್ಯೆ ಕಡಿಮೆ ಬಂದ ಕಾರಣಕ್ಕೆ ಅಧಿಕಾರದಿಂದ ದೂರ ಉಳಿಯಬೇಕಾಯಿತು.
                                                                                   -ಶೋಭಾ ಕರಂದ್ಲಾಜೆ, ಸಂಸದರು.

LEAVE A REPLY

Please enter your comment!
Please enter your name here