ದೇಸಿ ಸೋಡಾದಲ್ಲಿ ಆರೋಗ್ಯದ ಘಮಲು

0
40

ಪ್ರಕಾಶ್ ಕೆ.ನಾಡಿಗ್: 

ಬಹುರಾಷ್ಟ್ರೀಯ ಕಂಪೆನಿಗಳ ತಂಪು ಪಾನೀಯಗಳು ಆರೋಗ್ಯಕ್ಕೆ ಮಾರಕ ಎಂದು ಹಲವಾರು ಬಾರಿ ಸಾಭೀತಾಗಿದೆ. ಆದರೂ ಇಂದಿನ ಯುವಜನಾಂಗ ಇದರ ಬೆನ್ನು ಹತ್ತಿರುವುದು ವಿಪರ್ಯಾಸ. ಒಂದು ಲೋಟ ತಂಪು ಪಾನೀಯಗಳಲ್ಲಿರುವ ಸಕ್ಕರೆಯ ಅಂಶ ದೇಹದಿಂದ ಹೋರಹೋಗಲು ಒಂದು ವಾರ ಬೇಕು. ಇವುಗಳ ಸೇವನೆಯಿಂದ ಅತಿ ಚಿಕ್ಕ ವಯಸ್ಸಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆಗೆ ಚಿಕ್ಕ ವಯಸ್ಸಿನಲ್ಲೇ ತುತ್ತಾಗುತ್ತಿದೆ ಯುವಜನಾಂಗ. ತಂಪು ಪಾನೀಯಗಳಿಂದ ಈ ಯುವ ಜನಾಂಗದ ಚಿತ್ತವನ್ನು ಬೇರೆಡೆಗೆ ಸೆಳೆಯಬೇಕೆಂದು ಯೋಚಿಸಿದಾಗಲೇ ಹುಟ್ಟಿದ್ದು ಈ ದೇಸಿ ಸೋಡಾವನ್ನು ಬಳಸಿಕೊಂಡು ಆರೋಗ್ಯಕರ ಪಾನೀಯಗಳನ್ನು ತಯಾರಿಸಿದರೇ ಹೇಗೆ ಎಂಬ ವಿಚಾರ. ಹೀಗೆ ಯೋಚಿಸಿದ ತುಮಕೂರಿನವರಾದ ನವೀನ್ ಎಂ.ಜಿ ರಸ್ತೆಯ ಎರಡನೇ ತಿರುವಿನಲ್ಲಿ ಅಮೃತ್ ಹರ್ಬಲ್ ಸೋಡಾ ಹಾಗೂ  ಜ್ಯೂಸ್ ಸೆಂಟರ್‌ನ್ನು ಹತ್ತು ವರ್ಷಗಳ ಹಿಂದೆ ಪ್ರಾರಂಭಿಸಿಯೇ ಬಿಟ್ಟರು.

ಆಯುರ್ವೇದದ ಬಗ್ಗೆ ಸ್ವಲ್ಪ ಜ್ಞಾನವಿದ್ದ ಇವರು ಇದರ ಬಗ್ಗೆ ತಿಳುವಳಿಕೆಯಿದ್ದ ಹಲವರನ್ನು ಸಂಪರ್ಕಿಸಿ ಸಾಮಾನ್ಯ ಕಾಯಿಲೆಗಳಾದ ಶೀತ, ಕೆಮ್ಮು, ಬಾಯಿಹುಣ್ಣು, ಜ್ವರ, ದೇಹದ ಉಷ್ಣತೆ ಎರುವುದು, ಆಮಶಂಕೆ ಕಣ್ಣುರಿ, ತಲೆನೋವು, ವಾಕರಿಕೆ, ಪಿತ್ತ, ವಾಯುಪ್ರಕೋಪ ಮುಂತಾದ ಹಲವಾರು ಕಾಯಿಲೆಗಳಿಗೆ ಆಯುರ್ವೇದದ ಗಿಡಮೂಲಿಕೆಗಳನ್ನು ಸೋಡಾದಲ್ಲಿ ಬೆರೆಸಿ ಕೊಡುವ ಮೂಲಕ ಯಶ್ಸಸ್ವಿಯಾದರಲ್ಲದೇ ಯುವಜನರನ್ನು ಇತ್ತ ಸೆಳೆಯುವಲ್ಲೂ ಗೆದ್ದರು.

ಕಳೆದ ಹತ್ತು ವರ್ಷಗಳಿಂದ ಇವರ ಆಯುರ್ವೇದದ ಗಿಡಮೂಲಿಕೆಗಳ ಸೋಡಾ ತುಮಕೂರಿನಲ್ಲಿ ಅಲ್ಲದೇ ಕರ್ನಾಟಕದ ಬೇರೆ ಬೇರೆ ನಗರಗಳಲ್ಲೂ ಪಸರಿಸಿದೆ. ಇವರ ಬಳಿ ಬಂದು ಹರ್ಬಲ್ ಸೋಡಾ ಕುಡಿದು ಹಲವಾರು ಮಂದಿ ಗುಣಮಖರಾಗಿದ್ದಾರೆ, ಆಗುತ್ತಿದ್ದಾರೆ. ಶೀತ , ಕೆಮ್ಮು, ದೇಹದ ಉಷ್ಣತೆ ಏರಿದರೆ, ಪಿತ್ತ. ಅಮಶಂಕೆ, ಬಾಯಿಹುಣ್ಣು ಮುಂತಾದ ಕಾಯಿಲೆಗಳಿಗೆ ಜನ ಮೊದಲು ಬರುವುದು ಇವರ ಅಂಗಡಿಗೆ. ಇಲ್ಲಿ ಬರಿ ಹರ್ಬಲ್ ಸೋಡಾ ಅಲ್ಲದೇ ಕಷಾಯ ಹಾಗೂ ಆರೋಗ್ಯಕರ ್ರೂಟ್ ಜ್ಯೂಸ್ ಸಹ ದೊರೆಯುತ್ತದೆ. ಕೆಲವು ಯುವಕರು ಸೋಡಾವನ್ನು ಬಿಟ್ಟು ಇತ್ತೀಚೆಗೆ ಕಷಾಯವನ್ನು ಮಾಡಿಸಿಕೊಂಡು ಸಹ ಕುಡಿಯುವುದನ್ನು ನೀವಿಲ್ಲಿ ನೋಡಬಹುದು. ಯುವಜನತೆಗೆ ಸೋಡಾ ಎಂದರೆ ಎನೋ ಆಕರ್ಷಣೆ, ಇದರ ಮೂಲಕ ಬಹುರಾಷ್ಟ್ರೀಯ ಕಂಪನಿಗಳ ಮಾರಕ ತಂಪು ಪಾನೀಯಕ್ಕಿಂತ ಆರೋಗ್ಯಕರ ಶಕ್ತಿವರ್ಧಕ ರುಚಿಕರವಾದ ಸೋಡಾಗಳನ್ನು ಮಾಡುವ ಮೂಲಕ ಯುವಜನಾಂಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಕ್ತ ಶುದ್ದಿಗೆ ನನ್ನಾರಿ ಸೋಡಾ, ಶರೀರ ಉಷ್ಣತೆಯನ್ನು ಕಡಿಮೆ ಮಾಡಲು ಲಾವಂಚದ ಸೋಡಾ, ರೋಗ ನಿರೋಧಕ ಶಕ್ತಿಗೆ ಹಾಗೂ ಸಿ ಜೀವಸತ್ವಕ್ಕೆ ನೆಲ್ಲಿಕಾಯಿ ಜ್ಯೂಸ್, ಕಾನ್ಸ್ಟಿಪೇಶನ್, ಪೈಲ್ಸ್‌ಗೆ ಗರಿಕೆಯ ಸೋಡಾ ಅಥವಾ ಜ್ಯೂಸ್, ಚರ್ಮದ ಕಾಂತಿ ಹೆಚ್ಚಿಸಲು ಅಲೋವೇರಾ ಸೋಡಾ, ಪಿತ್ತ ಶಮನಕ್ಕೆ ಹೆರೆಳೆಕಾಯಿ ಸೋಡಾ ಹೀಗೆ ಹತ್ತು ಹಲವಾರು ಸೋಡಾ ಮತ್ತು ಜ್ಯೂಸ್‌ಗಳನ್ನು ಕುಡಿಯುವ ಮೂಲಕ ಅನೇಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಇಲ್ಲಿಗೆ ಬರುವ ಗ್ರಾಹಕರೊಬ್ಬರು ಬರಿ ಹರ್ಬಲ್ ಸೋಡಾ ಕುಡಿದೆ ಪೈಲ್ಸ್ ಸಂಪೂರ್ಣ ಗುಣಪಡಿಸಿಕೊಂಡಿದ್ದರೆ, ಮತ್ತೊಬ್ಬ ರು ತುಳಸಿ ಸೋಡಾ ಕುಡಿದು ದಮ್ಮಿನ ಕಾಯಿಲೆಯನ್ನು ವಾಸಿಮಾಡಿ ಕೊಂಡಿದ್ದಾರೆ.

ದೇಹವನ್ನು ತಂಪಾಗಿರಿಸಲು ಇವರ ಬಳಿ ಹೆಚ್ಚಾಗಿ ಆಟೋ ಚಾಲಕರು ಬರುತ್ತಾರಲ್ಲದೇ ಇದರಿಂದ ಉಪಯೋಗ ವಾಗಿದೆಯೆಂದು ಹೇಳುತ್ತಾರೆ. ಇವರ ಅಂಗಡಿಯಲ್ಲಿ ಸುಮಾರು 60 ಕ್ಕೂ ಹೆಚ್ಚು ಸೋಡ ಸಹಿತ ಹಾಗೂ ಸೋಡ ರಹಿತವಾದ ಆರೋಗ್ಯಕರವಾದ ಪೇಯಗಳು ಲಭ್ಯವಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇವರು ಉಪಯೋಗಿಸುವ ನಾರು ಬೇರುಗಳ ಅಪ್ಪಟ ಗಿಡಮೂಲಿಕೆಗಳು ಎನ್ನುವುದಕ್ಕೆ ಇವರ ಅಂಗಡಿಗೆ ಬೇಟಿಕೊಡುವ ಜೇನು ನೊಣಗಳೇ ಸಾಕ್ಷಿ. ಜೇನು ಹುಳಗಳು ಕೇವಲ ನೈಸರ್ಗಿಕ ಸುಗಂಧಕ್ಕೆ ಮಾತ್ರ ಆಕರ್ಷಣೆಯಾಗುತ್ತದೆ.

ಸ್ವದೇಶಿ, ಸ್ವಾವಲಂಬಿ, ಸಾವಯವ ಎಂಬ ಧ್ಯೇಯವನ್ನು ಇಟ್ಟುಕೊಂಡಿರುವ ಇವರು ತಮ್ಮ ಅಂಗಡಿಯಲ್ಲಿ ಸೋಡಾ ಹಾಗೂ  ಜ್ಯೂಸ್‌ಗಳ ಜೊತೆಗೆ ಸ್ವದೇಶಿ ಹಾಗೂ ಸಾವಯವ ಉತ್ಪನ್ನಗಳನ್ನು ಮಾರುತ್ತಾರೆ. ಅಷ್ಟೇ ಅಲ್ಲ ಯುವಕರು ಸ್ವಾವಲಂಬಿಗಳಾಗಿ ಬದುಕಬೇಕೆಂಬ ಉದ್ದೇಶದಿಂದ ತಮ್ಮ ಈ ಹರ್ಬಲ್ ಸೋಡಾದ ಫ್ರಾಂಚೈಸಿಯನ್ನು ಸಹ ಅತಿ ಕಡಿಮೆ ಹಣಕ್ಕೆ ನೀಡುತ್ತಿದ್ದು ಗುಲ್ಬರ್ಗ, ಹೊಸಪೇಟೆ, ಚಿಂತಾಮಣಿ, ಮಧುಗಿರಿ, ಬೆಂಗಳೂರಿನ ಕೆಲವುಕಡೆ, ಕೊರಟಗೆರೆ, ತಿಪಟೂರು, ಹಾಸನ, ಕುಣಿಗಲ್, ಗುಬ್ಬಿ ಮುಂತಾದ ಕಡೆ ಸ್ವದೇಶಿ ಪಾನೀಯ ಕೇಂದ್ರಗಳನ್ನು ಯುವಕರು ಇವರಿಂದ ಫ್ರಾಂಚೈಸಿ ತೆಗೆದುಕೊಂಡು ನೆಡೆಸುತ್ತಿದ್ದಾರಲ್ಲದೇ ಸ್ವಾವಲಂಬಿ ಬದುಕು ನೆಡೆಸುತ್ತಿದ್ದಾರೆ.

ಫ್ರಾಂಚೈಸಿ ತೆಗೆದುಕೊಂಡುವರಿಗೆ ಹರ್ಬಲ್ ಸೋಡಾ ತಯಾರಿಸಲು ಬೇಕಾದ ಪದಾರ್ಥಗಳನ್ನು ತಾವೇ ಸರಬರಾಜು ಮಾಡುತ್ತಾರೆ. ಸೋಡಾದಲ್ಲಿ ಬೇಡ ದಿದ್ದರೆ ಬಿಸಿನೀರು ಅಥವಾ ಹಾಲಿನಲ್ಲಿ ಕೂಡ ಇವರು ಈ ಆಯುರ್ವೇದದ ನಾರು ಬೇರುಗಳನ್ನು ಬಳಸಿ ಕಷಾಯ ಮಾಡಿಕೊಡುತ್ತಾರೆ. ಕಳೆದ ಹತ್ತು ವರ್ಷದ ಹಿಂದೆ ಪ್ರಾರಂಭವಾದ ಹರ್ಬಲ್ ಸೋಡಾ ಕೇಂದ್ರ ಇಂದು ಹಲವರಿಗೆ ಉದ್ಯೋಗಕ್ಕೆ ದಾರಿಯಾಗಿರುವುದು ಇವರಿಗೆ ಸಂತೃಪ್ತಿಯೆನಿಸಿದೆ ಎನ್ನುತ್ತಾರೆ ನವೀನ್‌ರವರು. ದೇಸಿಯ ಸೋಡಾದಲ್ಲಿ ಗಿಡ ಮೂಲಿಕೆಗಳ ಔಷಧಿಗಳನ್ನು ನೀಡುವ ಮೂಲಕ ಇವರು ಯುವಜನಾಂಗವನ್ನು ವಿದೇಶಿ ಹಾನಿಕಾರಕ ಪಾನೀಯಗಳಿಂದ ವಿಮುಖರಾಗಿಸಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ ಅಲ್ಲವೇ?

LEAVE A REPLY

Please enter your comment!
Please enter your name here