ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದ ಏಕಾದಶಿ ಮಹೋತ್ಸವ

0
24

ಗುಬ್ಬಿ

    ಸನಾತನ ಕಾಲದಿಂದಲೂ ನಿರಂತರವಾಗಿ ಪ್ರತಿ ವರ್ಷವೂ ಆಷಾಢ ಮಾಸದಲ್ಲಿ ಏಕಾದಶಿ ಅಂಗವಾಗಿ ತಾಲ್ಲೂಕಿನ ಅಮ್ಮನಘಟ್ಟ ಮಜರೆ ಹೊಸಹಟ್ಟಿ ಗ್ರಾಮದಲ್ಲಿ ಶ್ರೀತಿರುಮಲ ದೇವರ ಏಕಾದಶಿ ಪೂಜಾ ಮಹೋತ್ಸವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವೈಭವಯುತವಾಗಿ ಆಚರಿಸಲಾಯಿತು. ಗ್ರಾಮದ ಆರಾಧ್ಯ ದೇವರಾದ ಶ್ರೀತಿರುಮಲ ದೇವರ ದೇವಾಲಯದಲ್ಲಿ ಸಂಪ್ರದಾಯ ಬದ್ದವಾಗಿ ಮೂರು ದಿನಗಳ ಕಾಲ ಏಕಾದಶಿ ಪೂಜಾ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಭಾರಿ ವಿಶೇಷವಾಗಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ವಿಶೇಷವಾಗಿದೆ.

     ಏಕಾದಶಿ ಪೂಜಾ ಮಹೋತ್ಸವದ ಅಂಗವಾಗಿ ಮೊದಲ ದಿನದಂದು ವಿವಿಧ ಜಾತಿಯ ಹೂ ಮತ್ತು ಅಡಿಕೆ ಹೊಂಬಾಳೆಗಳಿಂದ ಅಲಂಕರಿಸಿದ ಆರತಿ ಸೇವೆ ಅತ್ಯಂತ ಆಕರ್ಷಣಿಯವಾಗಿತ್ತು, ಗ್ರಾಮದ ಮಹಿಳೆಯರು ಆರತಿಯನ್ನು ಹೊತ್ತು ದೇವಾಲಯದವರೆಗೆ ಮೆರವಣಿಗೆ ಮೂಲಕ ಸಾಗಿದರು. ದೇವಾಲಯದ ಆವರಣದಲ್ಲಿ 101 ದೀಪಗಳನ್ನು ಹಚ್ಚುವ ಮೂಲಕ ದೀಪದ ಸೇವೆ, ಧೂಪದ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯಗಳಂತೆ ಶ್ರೀತಿಮ್ಮಪ್ಪಸ್ವಾಮಿ, ಚನ್ನಿಹಟ್ಟಿ ಶ್ರೀಬಾಲಕೃಷ್ಣಸ್ವಾಮಿ, ಅಮ್ಮನಘಟ್ಟದ ಶ್ರೀಕೆಂಪಮ್ಮದೇವಿ, ಬೆಳ್ಳಾವಿ ಹಾಲು ಮೀಸಲು ದೇವರುಗಳನ್ನು ಅತ್ಯಂತ ಆಕರ್ಷಣಿಯವಾಗಿ ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೈಭವಯುತವಾದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಯಾದವ ಸಮುದಾಯದ ಸಂಪ್ರದಾಯಿಕ ಕುಣಿತವಾದ ಗೊರವಪ್ಪನ ಕುಣಿತ, ಸೋಮನಕುಣಿತ ಸೇರಿದಂತೆ ವಿವಿಧ ಜಾನಪದ ನೃತ್ಯ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ತಮ್ಮ ಇಷ್ಟಾರ್ಥ ಪೂಜೆ ಸಲ್ಲಿಸಿದರು.

     ಪ್ರತಿ ವರ್ಷ ಆಷಾಢ ಮಾಸದ ಏಕಾದಶಿ ಅಂಗವಾಗಿ ನಡೆಯುವ ಪೂಜಾ ಮಹೋತ್ಸವ ನಮ್ಮ ಸನಾತನ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಭಕ್ತಾದಿಗಳು ಪೂಜಾ ಮಹೋತ್ಸವ ನಡೆಯುವ ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಡಿಯಿಂದ ಆರತಿ ಮಾಡಿ ದೇವರಿಗೆ ಅರ್ಪಿಸುವ ಮೂಲಕ ಧಾರ್ಮಿಕ ಆಚರಣೆಗಳನ್ನು ವಿಧಿವತ್ತಾಗಿ ನಡೆಸುತ್ತಾರೆ. ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಅಮ್ಮನಘಟ್ಟ, ವರದೇನಹಳ್ಳಿ ಹಟ್ಟಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಭಕ್ತಾದಿಗಳು ಭಕ್ತಿ ಭಾವನೆಗಳಿಂದ ಭಾಗವಹಿಸಿ ಇಮ್ಮ ಇಷ್ಟಾರ್ಥ ಪೂಜೆ ಸಲ್ಲಿಸುತ್ತಾರೆ.
ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಈರಬಿಳಿಯಪ್ಪ, ಗಿರಿಯಪ್ಪ, ದಾಸಪ್ಪ, ಗ್ರಾಮ ಪಂಚಾಯ್ತಿ ಸದಸ್ಯೆ ರಾಜೇಶ್ವರಿಸಿದ್ದರಾಜು, ಅಧ್ಯಾಪಕ ಬಸವರಾಜು, ಅರ್ಚಕ ಶಿವಣ್ಣ, ದೊರೆಸ್ವಾಮಿ, ತಿಮ್ಮಯ್ಯ, ಸಿದ್ದರಾಜು ಸೇರಿದಂತೆ ಅಮ್ಮನಘಟ್ಟ, ಹೊಸಹಟ್ಟಿ ಮತ್ತು ವರದೇನಹಳ್ಳಿ ಸುತ್ತ ಮುತ್ತಲ ಗ್ರಾಮಸ್ಥರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here