ನಾಡಿನ ಹಿತ ಬಯಸಿದ ಪ್ರಜೆಗಳು, ಪ್ರಭುಗಳು, ರೈತರ ಹಿತಕ್ಕಾಗಿ ಯಾಗ ಯಜ್ಞ : ಧನಂಜಯ ಸ್ವಾಮಿ

0
30

ಕುಣಿಗಲ್ :

    ನಿನ್ನೆ ಸಂಭವಿಸಿದ ಖಗ್ರಾಸ ಚಂದ್ರಗ್ರಹಣದಿಂದ ನಾಡಿನ ಜನರಿಗೆ ಯಾವುದೇ ರೀತಿಯ ತೊಂದರೆಗಳು ಬಾರದಿರಲಿ ಮತ್ತು ಕಾಲ ಕಾಲಕ್ಕೆ ಸರಿಯಾಗಿ ಮಳೆ ಬಂದು ರೈತರ ಬಾಳು ಬಂಗಾರವಾಗಲೆಂದು ಹಾಗೂ ದೇಶ ಮತ್ತು ರಾಜ್ಯ ಸುಭಿಕ್ಷೆಯಾಗಿರಲೆಂದು ಬಯಸಿರುವ ಪ್ರಭುಗಳಿಗೆ ಶುಭವಾಗಲೆಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಯಾಗ ಯಜ್ಞ ಮಾಡಲಾಗುತ್ತಿದೆ ಎಂದು ಧರ್ಮದರ್ಶಿ ಧನಂಜಯ ಸ್ವಾಮಿ ತಿಳಿಸಿದರು.

    ಪಟ್ಟಣದ ಬಿದನಗೆರೆಯಲ್ಲಿರುವ ಶ್ರೀ ಸತ್ಯ ಶನೈಶ್ಚರ ಹಾಗೂ ಉದ್ಭವ ಬಸವಣ್ಣ ದೇವಸ್ಥಾನದಲ್ಲಿ ಆಯೋಜಿಸಿದ್ದ ಹೋಮ, ಹವನ ಹಾಗೂ ಯಜ್ಞ ಮಾಡುತ್ತಾ ನೆರೆದಿದ್ದ ಭಕ್ತರಿಗೆ ಆಶೀರ್ವಾದ ಮಾಡಿ ಮಾತನಾಡಿದರು.
ಶತಮಾನದ ಖಗ್ರಾಸ ಚಂದ್ರಗ್ರಹಣ ಬಹಳ ಅಪರೂಪ. ಹಾಗಾಗಿ ಇದರಿಂದ ಯಾರು ಭಯ ಪಡಬೇಕಿಲ್ಲ, ಎಲ್ಲದಕ್ಕೂ ಭಗವಂತನ ಆರಾಧನೆಯಿಂದ ಮುಕ್ತಿ ಕಾಣಬಹುದು. ಹಿಂದೆ ನಮ್ಮ ಪೂರ್ವಜರು ಹಾಕಿಕೊಟ್ಟಿರುವ ಮಾರ್ಗಗಳು ಮೂಢನಂಬಿಕೆಯಲ್ಲ, ಅದರಲ್ಲಿ ಹಲವಾರು ವೈಜ್ಞಾನಿಕ ಕಾರಣಗಳಿವೆ. ಹೋಮ ಯಾಗಗಳಿಂದ ದೇವರನ್ನು ಒಲಿಸಿಕೊಳ್ಳುವ ಮೂಲಕ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಸುಖ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದ ಅವರು, ಸುದೀರ್ಘ ಚಂದ್ರಗ್ರಹಣದಿಂದ ಭೂಮಿ ಮೇಲೆ ಆಗಿರುವ ದೋಷ ಪರಿಹಾರ ಆಗುವಂತೆ ದೇಶದ ಜನತೆ ಸುಭಿಕ್ಷೆಯಿಂದಿರುವಂತೆ ಇಂದು ನೆರೆದಿರುವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹೋಮ ಯಾಗ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು.

   ರಾಜ್ಯ ಸೇರಿದಂತೆ ದೇಶದ ನಾನಾ ಕಡೆಗಳಿಂದ ಭಕ್ತರು ದೇವರ ದರುಶನ ಪಡೆದು ಹೋಮ ಯಾಗದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಶಾಸಕ ರಂಗನಾಥ್ ಕೂಡ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಿದರು. ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆಯನ್ನು ದೇವಸ್ಥಾನ ಸೇವಾ ಸಮಿತಿ ಮಾಡಿತ್ತು.
ಶ್ರೀ ಕ್ಷೇತ್ರದಲ್ಲಿ 151 ಅಡಿ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿ ಸುಮಾರು 80 ಅಡಿ ಎತ್ತರದವರೆಗೂ ನಿರ್ಮಾಣವಾಗಿದ್ದು, ಮತ್ತೊಂದು ವಿಶೇಷವೆಂದರೆ ಶನಿಸಿಂಗಾಪುರ ಮಾದರಿಯ ಶನೈಶ್ಚರ ದೇವಸ್ಥಾನ ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಶ್ರೀ ಕ್ಷೇತ್ರದ ಧರ್ಮದರ್ಶಿ ತಿಳಿಸಿದರು.

LEAVE A REPLY

Please enter your comment!
Please enter your name here