ನಾಯಕ ಸಮಾಜಕ್ಕೆ 7.5 ರಷ್ಟು ಮೀಸಲಾತಿ ಪಡೆಯಲು ಹೋರಾಟ ಮಾಡಬೇಕಿದೆ- ವಾಲ್ಮಿಕಿ ಗುರು ಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ

0
143

 ಜಗಳೂರು :

      ರಾಜ್ಯದಲ್ಲಿ 53 ಲಕ್ಷ ಜನಸಂಖ್ಯೆ ಹೊಂದಿರುವ ನಾಯಕ ಸಮಾಜವು, ನಾಯಕರು, ವಾಲ್ಮಿಕಿ , ಬೇಡ, ತಳವಾರ ಪರಿವಾರ, ಪಾಳೆಗಾರ ಎಂದು ಅನೇಕ ಹೆಸರುಗಳಿಂದ ಕರೆಯಲ್ಪಡುತ್ತಿರುವ ಈ ಸಮಾಜ ಮಹಾನ್ ಕೊಡುಗೆಯನ್ನು ನೀಡಿದ್ದರೂ ಸಹ 7.5 ರಷ್ಟು ಮೀಸಲಾತಿ ಪಡೆಯಲು ಹೋರಾಟ ಮಾಡಬೇಕಿದೆ ಎಂದು ರಾಜನಹಳ್ಳಿ ಶ್ರೀ ವಾಲ್ಮಿಕಿ ಗುರು ಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಹೇಳಿದರು.

      ಪಟ್ಟಣದ ವಾಲ್ಮಿಕಿ ಸಮುದಾಯಭವನದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ನಾಯಕ ಸಮಾಜ ನೂತನ ಶಾಸಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

      ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿ-ಎಸ್ಟಿಯವರಿಗೆ 24.1 ಆರ್ಥಿಕ ಮೀಸಲಾತಿ ನೀಡಿದರು.ಶಿಕ್ಷಣಕ್ಷೇತ್ರದಲ್ಲಿ ಮೀಸಲಾತಿ ಪಡೆಯಲು ಹೋರಾಟ ಮಾಡಬೇಕಿದೆ. ಎಸ್ಸಿ-ಎಸ್ಟಿ ನೌಕರರಿಗೆ ಹಿಂಭಡ್ತಿ ಕೊನೆಗೊಳಿಸಿ ಯಥಾ ಸ್ಥಿತಿ ಮುಂದುವರೆಸುವಂತೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರೂ ಸಹ ಈಗಿನ ರಾಜ್ಯ ಸರ್ಕಾರ ತಟಸ್ಥ ಮನೋಭಾವನೆ ಹೊಂದಿದೆ ಎಂದು ವಿಷಾಧ ವ್ಯಕ್ತ ಪಡಿಸಿದರು.

      ಎಸ್ಟಿ ಮೀಸಲು ಕ್ಷೇತ್ರದಲ್ಲಿ ಮೂರು ಬಾರಿ ಗೆಲುವುಸಾಧಿಸಿದ ಎಸ್.ವಿ.ರಾಮಚಂದ್ರರವರು 7.5 ಮೀಸಲಾತಿ ಪಡೆಯಲು ವಿಧಾನಸೌದದಲ್ಲೂ ಹೊರಗು ಹೋರಾಟ ಮಾಡಬೇಕು. ಜಲಾಶಯಗಳು ತುಂಬಿ ತುಳುಕುತ್ತಿರುವ ಸಮಯದಲ್ಲಿ ಜಗಳೂರು ತಾಲ್ಲೂಕಿನ ಎಲ್ಲಾ ಕೆರಗಳಿಗೆ , ರಾಜನಹಳ್ಳಿಕೆರೆಗಳಿಂದ ನೀರು ತರುವಂತ ಕಾರ್ಯವನ್ನು ಮಾಡಬೇಕು. ಅಧಿಕಾರಿಗಳು ಮುಂಜಾಗೃತ ವಹಿಸಬೇಕು. ಅಧಿಕಾರಿಗಳ ನಿರ್ಲಕ್ಷೆಯಿಂದ ತುಂಬಿ ಹರಿಯತ್ತಿರುವ ತುಂಗಾಭದ್ರಾ ನೀರು ಬರುತ್ತಿಲ್ಲ .ಸರಿ ಪಡಿಸುವಂತೆ ರೈತರು ಸಿರಿಗೆರೆ ಶ್ರೀಗಳ ಹತ್ತಿರ ಮನವಿ ಮಾಡಿದ್ದಾರೆ. ಸಿರಿಗೆರೆ ಶ್ರೀಗಳ ಆಶಯದಂತೆ ಹೊಳೆ ತುಂಬಿ ಹರಿಯುವಾಗ ಕೆರೆಗಳಿಗೆ ನೀರು ಹರಿಸುವಂತ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಚುನಾಯಿತ ಪ್ರತಿನಿಧಿಗಳ ಮೇಲೆ ರೈತರು ಒತ್ತಡ ಹೇರಿ ಕೆಲಸ ತೆಗೆದುಕೊಳ್ಳುವಂತಾಗಬೇಕೆಂದು ಸ್ವಾಮೀಜಿ ಹೇಳಿದರು.

      ಶಾಸಕ ಎಸ್.ವಿ.ರಾಮಚಂದ್ರ ನಾಯಕ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಕ್ಷೇತ್ರದ ನಾಯಕ ಸಮಾಜ ಸೇರಿದಂತೆ ಎಲ್ಲಾ ಸಮಾಜದವರ ಆಶಿರ್ವಾದದಿಂದ 78 ಸಾವಿರ ಮತಗಳಿಂದ ನನ್ನನ್ನು ಶಾಸಕನಾಗಿ ಆಯ್ಕೆಗೊಳಿಸಿರುವ ನಿಮಗೆ ಪ್ರಸನ್ನಾನಂದಪುರಿ ಶ್ರೀಗಳು, ಸಿರಿಗೆರೆ ಶ್ರೀಗಳು ಸೇರಿದಂತೆ ವಿವಿಧ ಸ್ವಾಮೀಜಿಗಳ ಆಶೀರ್ವಾದದಿಂದ ಭದ್ರಾಮೇಲ್ದಂಡೆ ಯೋಜನೆ ಜಾರಿ ಸೇರಿದಂತೆ ತಾಲ್ಲೂಕಿನ 46 ಕೆರೆಗಳಿಗೆ ನೀರು ತುಂಬಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ.

      ಚುನಾವಣಾ ಮೊದಲು 20 ರಿಂದ 30 ಜನರು ಇಲ್ಲ ಸಲ್ಲದ ಆರೋಪದಿಂದ ನನ್ನ ಮನಸ್ಸಿಗೆ ನೊವ್ವು ಉಂಟುಮಾಡಿದಾಗ 4 ಸಾವಿರಕ್ಕೂ ಅಧಿಕ ನಾಯಕ ಸಮಾಜದ ಬಂಧುಗಳು ನನ್ನ ಪರವಾಗಿ ಇರುವ ಮೂಲಕ ಪ್ರತಿಭಟನೆ ಮಾಡಿ ಖಂಡಿಸಿದ್ದರು. ಎಸ್ಟೇ ಮಾನಸಿಕ ಹಿಂಸೆಯಾದರೂ ನಿಮ್ಮ ಬಲದಿಂದ ಸಹಿಸುವ ಶಕ್ತಿ ಇದೆ ಎಂದು ಮಾತು ಬಾರದೆ ದು:ಖವನ್ನು ಸಹಿಸಿಕೊಂಡು ಮಾತನಾಡಿದರು. ಐದು ವರ್ಷದಲ್ಲಿ ಜಗಳೂರು ವಿಧಾನಸಭೆ ಕ್ಷೇತ್ರ ಹದಗೆಟ್ಟು ಹೋಗಿದೆ.ಇದನ್ನು ಸರಿಪಡಿಸಬೇಕಿದೆ. ನಿಮ್ಮ ಆಶಿರ್ವಾದ ಇರುವವರಿಗೂ ನನ್ನ ಮುಟ್ಟಲು ಯಾರಿಂದಲು ಸಾಧ್ಯವಿಲ್ಲವೆಂದು ಪರೋಕ್ಷವಾಗಿ ಹೆಸರೇಳದೇ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ವಿರುದ್ದ ಹರಿಹಾಯ್ದರು.

      ಕೇಂದ್ರ ಸರ್ಕಾರವು ಪರಿಶಿಷ್ಟ ಪಂಗಡದವರಿಗೆ ಏಕಲವ್ಯ ವಸತಿ ಶಾಲೆಗೆ 12 ಕೋಟಿ ರೂ.ಬಿಡುಗಡೆ ಮಾಡಿದ್ದು , ಮಾಗಡಿ ಹತ್ತಿರ 20 ಎಕರ ಪ್ರದೇಶದಲ್ಲಿ ಶಾಲೆ ನಿರ್ಮಿಸಲಾಗುವದು.3 ಕೋಟಿ ರೂ ವೆಚ್ಚದಲ್ಲಿ ಎಸ್ಟಿ ಬಾಲಕರ ವಿದ್ಯಾರ್ಥಿ ನಿಲಯ ಪ್ರಾರಂಭಿಸಲಾಗುವುದು. ನಾಯಕ ಸಮಾಜದ ವತಿಯಿಂದ ನೀಡಿರುವ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.

      ನಾಯಕ ಸಮಾಜದ ವತಿಯಿಂದ ಎಸ್.ವಿ.ರಾಮಚಂದ್ರ,ಇಂದಿರಾ ರಾಮಚಂದ್ರ, ಕಾ.ನಿ.ಪಂ.ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎ.ಎಂ.ಕೊಟ್ರೇಶ್‍ರವರನ್ನು ಸನ್ಮಾನಿಸಲಾಯಿತು.
ಇದಕ್ಕು ಮುನ್ನ ಪಟ್ಟಣ ಬೆಸ್ಕಾಂ ಇಲಾಖೆಯಿಂದ ಎಸ್.ವಿ.ರಾಮಚಂದ್ರ , ಸಂಸದ ಜಿ.ಎಂ.ಸಿದ್ದೇಶ್ವರರನ್ನು ಮೆರವಣಿಗೆಯ ಮೂಲಕ ವಿವಿಧ ವ್ಯಾಧ್ಯ,ಡೊಳ್ಳುಗಳ ಮೂಲಕ ಸಮಾರಂಭಕ್ಕೆ ಕರೆ ತರಲಾಯಿತು.

      ನಾಯಕ ಸಮಾಜದ ಮುಖಂಡರು ತಾ.ಪಂ. ಮಾಜಿ ಅಧ್ಯಕ್ಷರಾದ ಕಿಲಾರಿ ಸಣ್ಣ ಸೂರಯ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

      ಈ ಸಂದರ್ಭದಲ್ಲಿ ಜಿ.ಪಂ.ಪ್ರಭಾರಿ ಅಧ್ಯಕ್ಷೆ ಸವಿತಾ ಕಲ್ಲೇಶಪ್ಪ, ,ಜಿ.ಪಂ.ಸದಸ್ಯರುಗಳಾದ ಎಸ್.ಕೆ.ಮಂಜುನಾಥ್, ಶಾಂತಕುಮಾರಿ ಶಶಿಧರ, ರಶ್ಮಿರಾಜಪ್ಪ, ಸಿದ್ದಪ್ಪ, ನಾಯಕ ಸಮಾಜದ ಕಾರ್ಯದರ್ಶಿ ಸೂರಲಿಂಗಪ್ಪ, ಬಿಜೆಪಿ ಯುವ ಮೋರ್ಚ ಅಧ್ಯಕ್ಷ ರವಿಕುಮಾರ್, ತಾ.ಬಿಜೆಪಿ ಅಧ್ಯಕ್ಷ ಡಿ.ವಿ.ನಾಗಪ್ಪ, ಶ್ರೀನಿವಾಸ್,ಹೆಚ್.ಸಿ.ಮಹೇಶ್, ಹೆಚ್.ನಾಗರಾಜ್, ಶಿವಣ್ಣ, ತಾ.ಪಂ.ಸದಸ್ಯರುಗಳು, ಚುನಾಯಿತಿ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರುಗಳು, ನಾಯಕ ಸಮಾಜದ ಮುಖಂಡರುಗಳು, ವಿವಿಧ ಸಮಾಜದ ಮುಖಂಡರುಗಳು ಹಾಜರಿದ್ದರು.

LEAVE A REPLY

Please enter your comment!
Please enter your name here