ನೂತನ ಪಾಲಿಕೆ ಸದಸ್ಯರ ಮೇಲೆ ಗುರುತರ ಜವಾಬ್ದಾರಿ-ಆಶ್ರಫ್ ಹುಸೇನ್

0
21

ತುಮಕೂರು:

              ನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರ ಮೇಲೆ ಗುರುತರ ಜವಾಬ್ದಾರಿಗಳಿದ್ದು,ಜನರ ನಂಬಿಕೆ ಹುಸಿಗೊಳಿಸದಂತೆ ಕಾರ್ಯನಿರ್ವಹಿಸಿ ಎಂದು ಕೈಗಾರಿಕೋದ್ಯಮಿ ಆಶ್ರಫ್ ಹುಸೇನ್ ತಿಳಿಸಿದ್ದಾರೆ.
               ನಗರದ ಸದಾಶಿವನಗರದಲ್ಲಿ ಹ್ಯೂಮನ್ ವೆಲ್ಫೇರ್ ಚಾರಿಟಬಲ್ ಟ್ರಸ್ಟ್(ರಿ) ಆಯೋಜಿಸಿದ್ದ ನೂತನ ಪಾಲಿಕೆ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಜನರ ನಿರೀಕ್ಷೆ ಬಹಳಷ್ಟಿದೆ. ಪ್ರಮುಖವಾಗಿ ಕುಡಿಯುವ ನೀರು, ಉತ್ತಮ ರಸ್ತೆ, ಒಳಚರಂಡಿ,ಕಸ ವಿಲೇವಾರಿ ಬಗ್ಗೆ ಜನರು ಜನಪ್ರತಿನಿಧಿಗಳ ಮೇಲೆ ಅಪಾರ ನಿರೀಕ್ಷೆ ಹೊಂದಿದ್ದು, ಅವರ ಆಶಯಕ್ಕೆ ತಕ್ಕ ರೀತಿಯಲ್ಲಿ ಕಾರ್ಯನಿರ್ವಹಿಸಿ, ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುವಂತೆ ಸಲಹೆ ಮಾಡಿದರು.
               ಜನಪ್ರತಿನಿಧಿಯಾದವರಿಗೆ ದಕ್ಷತೆ, ಪ್ರಾಮಾಣಿಕತೆಯ ಜೊತೆಗೆ, ಮಾನವೀಯ ಗುಣವೂ ಮುಖ್ಯ. ಜನರ ಸೇವೆ ಮಾಡಲು ನಿಮಗೆ ದೊರಕಿರುವ ಸದಾಶವಕಾಶ ಎಂದು ಭಾವಿಸಿ, ಎಲ್ಲರನ್ನು ಪ್ರೀತಿ, ಆಧರದಿಂದ ಕಾಣುವ ಮೂಲಕ ನಗರದ ಅಭಿವೃದ್ದಿಗೆ ಶ್ರಮಿಸುವಂತೆ ಆಶ್ರಫ್ ಹುಸೇನ್ ಕಿವಿ ಮಾತು ಹೇಳಿದರು.
                ಲೇಖಕ ಹಾಗೂ ಪತ್ರಕರ್ತ ಮುನೀರ್ ಅಹಮದ್ ಮಾತನಾಡಿ,ನಗರದ ಜನತೆಗೆ ಅತಿ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಒಳ್ಳೆಯ ರಸ್ತೆ, ವಿದ್ಯುತ್ ದೀಪ,ಸ್ವಚ್ಚತೆ ನೀಡುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯ. ಕಸಮುಕ್ತ, ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ನೂತನ ಸದಸ್ಯರು ಪಣತೊಡಬೇಕಿದೆ ಎಂದರು.
                ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ತುಮಕೂರು ನಗರ ಬೆಳೆದಿದ್ದರೂ ಹಳೆಯ ಬಡಾವಣೆಗಳಾದ ಚಿಕ್ಕಪೇಟೆ,ಜಿ.ಸಿ.ಆರ್.ಕಾಲೋನಿ,ಜಯಪುರ, ವಿನೋಭನಗರ, ಕುರಿಪಾಳ್ಯ ಮತ್ತಿತರರ ಮೊಹಲ್ಲಾಗಳು ಇನ್ನೂ ಸರಿಯಾದ ರಸ್ತೆ, ಚರಂಡಿ ಇಲ್ಲದೆ ಪರಿತಪಿಸುತ್ತಿವೆ.ಕಾಲ್ ಟ್ಯಾಕ್ಸ್ ನಿಂದ ಸದಾಶಿವ ನಗರದವರೆಗೆ ಸುಮಾರು 30 ಸಾವಿರಕ್ಕು ಅಧಿಕ ಜನಸಂಖ್ಯೆಯಿದ್ದು,ಮೂಲಭೂತ ಸೌಕರ್ಯಗಳ ಕೊರತೆಯಿದೆ. ಸರಕಾರಿ ಹೈಸ್ಕೂಲ್,ಪಿಯು ಕಾಲೇಜುಗಳಿಲ್ಲ.ಪಾಲಿಕೆಯ ನೂತನ ಸದಸ್ಯರುಗಳು ಇತ್ತ ಗಮನಹರಿಸಿ, ಬಡಾವಣೆಗಳ ಅಭಿವೃದ್ದಿಗೆ ಮುಂದಾಗಬೇಕೆಂದ ಅವರು, ಜಿ.ಸಿ.ಆರ್.ಕಾಲೋನಿಯಲ್ಲಿಯೇ 15ಕ್ಕು ಹೆಚ್ಚು ಬುದ್ದಿಮಾಂಧ್ಯ ಮಕ್ಕಳಿದ್ದು, ಅವರುಗಳ ಚಿಕಿತ್ಸೆಗೆ ಈ ಭಾಗದಿಂದ ಆಯ್ಕೆಯಾಗಿರುವ ಕುಮಾರ್ ಅವರು ಕ್ರಮವಹಿಸುವಂತೆ ಸಲಹೆ ನೀಡಿದರು.
                 ಈ ವೇಳೆ ತುಮಕೂರು ಮಹಾನಗರಪಾಲಿಕೆಯ ಸದಸ್ಯರುಗಳಾಗಿ ಆಯ್ಕೆಯಾಗಿರುವ ಕುಮಾರ್,ಸೈಯದ್ ನಯಾಜ್, ಇಸ್ಮಾಯಿಲ್,ಉಬೇದುಲ್ಲಾ ಷರೀಫ್, ನಾಸೀರಬೇಗ್, ಜಿಯಾವುಲ್ಲಾ, ಷಕೀಲ್ ಅಹಮದ್, ಇನಾಯತ್‍ವುಲ್ಲಾ ಅವರುಗಳನ್ನು ಹ್ಯೂಮನ್ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.ಟ್ರಸ್ಟ್‍ನ ಅಧ್ಯಕ್ಷ ಉಮರ್ ಫಾರೂಕ್,ಸಾಧಿಕ್ ಪಾಷ,ಮಹಮದ್ ಯೂನೂಸ್,ಗೌಸ್‍ಫೀರ್, ಖತೀಫ್ ಷರೀಫ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here