ನೆರೆ ಸಂತ್ರಸ್ಥರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 10 ಕೋಟಿ ರೂ.ಗಳ ನೆರವು

0
48

ಧರ್ಮಸ್ಥಳ:

     ನೆರೆ ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆ ಮತ್ತು ಸಕಲೇಶಪುರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 10 ಕೋಟಿ ರೂ. ನೆರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಕಟಿಸಿದ್ದಾರೆ.

      ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಸಂಬಂಧ ಚರ್ಚಿಸಿದ ಅವರು, ಕೊಡಗು ಜಿಲ್ಲೆಯಲ್ಲಿ ಸುಮಾರು 1,715 ಯೋಜನೆಯ ಕುಟುಂಬಗಳಿಗೆ ವ್ಯಾಪಕವಾಗಿ ಹಾನಿಯಾಗಿದ್ದು, ಈ ಪೈಕಿ 1,000 ಕುಟುಂಬಗಳ ಮನೆಗಳು ಸಂಪೂರ್ಣ ಹಾನಿಗೊಂಡಿವೆ. ಸುಮಾರು 2.50 ಕೋಟಿಯ ಉಪಕರಣಗಳು, ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಿದೆ. ಜತೆಗೆ, ಸುಮಾರು 1 ಕೋಟಿ ರೂ.ಗೂ ಮಿಕ್ಕಿದ ವ್ಯವಹಾರದ ವಸ್ತುಗಳು ನಾಶವಾಗಿದೆ. 1,500 ಎಕರೆ ಕೃಷಿ ಸಂಪೂರ್ಣ ನಾಶವಾಗಿದೆ. 

       ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ಹಾಗೂ ಹಾನಿಯಾದವರಿಗೆ ತಲಾ 25 ಸಾವಿರ ರೂ.ನಂತೆ ಗೃಹ ನಿರ್ಮಾಣಕ್ಕೆ ನೆರವು ಘೋಷಿಸಿದ್ದು, 1,044 ಮನೆಗಳಿಗೆ 2.61 ಕೋಟಿ ರೂ. ಮಂಜೂರು ಮಾಡಲಾಗಿದೆ. ನಿತ್ಯೋಪಯೋಗಿ ವಸ್ತುಗಳನ್ನು ಖರೀದಿಸಲು 1,335 ಮನೆಗಳಿಗೆ 15 ಸಾವಿರ ರೂ.ನಂತೆ 2 ಕೋಟಿ ರೂ. ಮಂಜೂರು ಮಾಡಿದರು. ಜಿಲ್ಲೆಯಲ್ಲಿ 1,117 ಕುಟುಂಬಗಳ 1,450 ಎಕರೆ ಕೃಷಿ ಭೂಮಿ ನಾಶವಾಗಿದ್ದು, ಈ ಕುಟುಂಬಗಳಿಗೆ ಕೃಷಿಯನ್ನು ಪುನರ್‌ ನಿರ್ಮಾಣ ಮಾಡಲು ತಲಾ 25 ಸಾವಿರ ರೂ. ನಂತೆ 2.80 ಕೋಟಿ ರೂ. ನೀಡಲು ನಿರ್ಧರಿಸಲಾಯಿತು. 

       ಹಾಗೆಯೇ ಸಕಲೇಶಪುರ ಮತ್ತು ಅರಕಲಗೂಡು ಮತ್ತಿತರ ಪ್ರದೇಶಗಳಲ್ಲಿ ಹಾನಿಗೊಂಡಿರುವ ಕುಟುಂಬಗಳಿಗೆ ತಲಾ 10 ಸಾವಿರ ರೂ. ನಂತೆ 60 ಲಕ್ಷ ರೂ. ಮಂಜೂರು ಮಾಡಲಾಯಿತು. ಒಟ್ಟು 8 ಕೋಟಿ ರೂ. ಮೊತ್ತವನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸಲು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಡಾ. ಹೆಗ್ಗಡೆಯವರು ಸೂಚಿಸಿದರು. 

      ಪರಿಹಾರ ಧನವನ್ನು ಆಯಾ ಸೊತ್ತುಗಳ ನಿರ್ಮಾಣ, ಖರೀದಿ ಸಮಯದಲ್ಲಿ ವಿತರಿಸಲು ಕ್ರಿಯಾ ಯೋಜನೆ ತಯಾರಿಸುವಂತೆ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚಿಸಿದರು. 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here