ಪತ್ರಕರ್ತರಿಗೆ ಬದುಕಿನ ಭದ್ರತೆ ಅಗತ್ಯವಿದೆ

0
20

 ಹೂವಿನಹಡಗಲಿ :

       ಇಂದು ಪತ್ರಿಕಾ ಮಾಧ್ಯಮ ಒಂದು ರೀತಿಯ ಆತಂಕದ ಸ್ಥಿತಿಯಲ್ಲಿದ್ದು, ಪತ್ರಕರ್ತರಾಗಿ ಕಾರ್ಯನಿರ್ವಹಿಸುವವರಿಗೆ ಬದುಕಿನ ಭದ್ರತೆಯ ಅಗತ್ಯವಿದೆ ಎಂದು ಕಣ್ಣು ಪತ್ರಿಕೆಯ ಸಂಪಾದಕ ಶಿವಕುಮಾರ್ ಹೇಳಿದರು.

      ತಾ.ಪಂ. ಮಲ್ಲಿಗೆ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮವಾಗಿದ್ದು, ಅದಕ್ಕೆ ತನ್ನದೇ ಆದ ಗೌರವವನ್ನು ಹೊಂದಿದೆ ಎಂದರು ಪತ್ರಕರ್ತರಿಗೆ ಬಸ್ ಪಾಸ್ ಸೇರಿದಂತೆ ಹಲವಾರು ಸೌಲಭ್ಯಗಳು ಸಿಗುವಂತಾಗಬೇಕು. ರಾಜಕೀಯ ಕೆಲವು ನಾಯಕರು ಪತ್ರಕರ್ತರನ್ನು ಹೀಯಾಳಿಸುತ್ತಾರೆ. ಆದರೆ ಯಾರೂ ಎದೆಗುಂದದೆ ಕೀಳಿರಿಮೆಯನ್ನು ತೊರೆದು ಕೆಲಸ ಮಾಡಬೇಕೆಂದು ಹೇಳಿದರು.

      ನಿವೃತ್ತ ಇಂಜೀನೀಯರ್ ಓದೋಗಂಗಪ್ಪ ಮಾತನಾಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ. ಮುದ್ರಣ ಮಾಧ್ಯಮ ಟಿ.ವಿ. ಮಾಧ್ಯಮಕ್ಕಿಂತ ಉತ್ತಮವಾಗಿದೆ. ಟಿ.ವಿ.ಗಳಲ್ಲಿ ಆಧಾರಗಳಿಲ್ಲದೇ ವಿಷಯಗಳು ಬಿತ್ತರವಾಗುತ್ತವೆ. ಆದರೆ ಮುದ್ರಣ ಮಾಧ್ಯಮದಲ್ಲಿ ಆಧಾರ ಸಹಿತವಾಗಿ ಬಿತ್ತರವಾಗುತ್ತವೆ ಎಂದು ಹೇಳಿದರು.
ಕ.ಸಾ.ಪ. ತಾಲೂಕು ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ, ಎಂ.ಪರಮೇಶ್ವರಪ್ಪ , ಪಿ.ವಿಜಯಕುಮಾರ್ ಮಾತನಾಡಿದರು. ಗವಿಮಠದ ಡಾ.ಹಿರಿಶಾಂತವೀರಸ್ವಾಮೀಜಿ ಸಾನಿಧ್ಯವಹಿಸಿದ್ದರು. ಚಲನ ಚಿತ್ರ ನಟ ಧನಂಜಯ್, ಬಳ್ಳಾರಿ ಬೆಳಗಾಯಿತು ಪತ್ರಿಕೆಯ ಅನೂಷ್ ಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಬುಳ್ಳಪ್ಪ, ತಾಲೂಕು ಅಧ್ಯಕ್ಷ ಜಯನಾಯ್ಕ, ಅಂಗನವಾಡಿ ಪೆಡರೇಷನ್ ಅಧ್ಯಕ್ಷೆ ಎನ್. ಮಂಜುಳಾ, ಬಿ.ಎಂ. ವೀರಯ್ಯ, ಖಾಜಾ ಹುಸೇನ್, ಕಲಿಕೇರಿ ಬಸವರಾಜ್ ಸೇರಿದಂತೆ ಇತರರು ಇದ್ದರು.

     ಇದೇ ಸಂದರ್ಭದಲ್ಲಿ ವಿವಿಧ ಕ್ಚೇತ್ರದಲ್ಲಿ ಸಾಧನೆಗೈದ ಕಲಾವತಿ ಹವಲ್ದಾರ್, ಎಸ್.ನಿಂಗರಾಜ್, ಉಳಿಗದ ಲಲಿತಮ್ಮ, ಎಂಟಮನಿ ಯಮುನಪ್ಪ, ದೊಡ್ಡಮನಿ ರಾಜಾಸಾಬ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here