ಪತ್ರಿಕಾ ವಿತರಕರ ಕೆಲಸ ಶ್ಲಾಘನೀಯ

0
18

ತುಮಕೂರು
            ಒಬ್ಬ ವರದಿಗಾರ ಸುದ್ದಿಯನ್ನು ಬರೆಯಬಹುದು, ಪತ್ರಿಕಾಲಯದಲ್ಲಿ ಅದನ್ನು ಪ್ರಕಟಿಸಬಹುದು. ಆದರೆ ಅದನ್ನು ಜನರಿಗೆ ತಲುಪಿಸುವ ಕಾರ್ಯ ಪ್ರಮುಖವಾದದ್ದು, ಅದನ್ನು ಮಾಡುವವರು ಇಲ್ಲದಿದ್ದರೆ ಇಡೀ ದಿನ ಮಾಡಿದ ಕೆಲಸ ವ್ಯರ್ಥವಾಗುತ್ತದೆ ಎಂದು ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ತಿಳಿಸಿದರು.

              ನಗರದ ಪ್ರಜಾಪ್ರಗತಿ ಪತ್ರಿಕಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಬೆಳಗ್ಗೆ ಏಳುತ್ತಲೇ ಪತ್ರಿಕೆ ಓದುವ ಹವ್ಯಾಸ ಇರುವುದು ಸಹಜ. ಅದನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಬಹುಮುಖ್ಯವಾಗಿದೆ. ಬೇಸಿಗೆ, ಚಳಿ, ಮಳೆ ಎನ್ನದೆ ಪ್ರತಿನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸವ ಕಾರ್ಯ ಮಾಡುತ್ತಾರೆ. ಜಗತ್ತು ಎಷ್ಟೇ ಆಧುನಿಕತೆಯಲ್ಲಿ ಬೆಳೆದರೂ ಪತ್ರಿಕೆಗಳನ್ನು ಓದುವುದನ್ನು ಮಾತ್ರ ಯಾರೂ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪತ್ರಿಕಾ ವಿತರಕರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು. ಸಾಮಾನ್ಯವಾಗಿ ಜನರು ಪತ್ರಿಕಾ ವಿತರಕರನ್ನು ಕೀಳು ಮಟ್ಟದಲ್ಲಿ ನೋಡುತ್ತಾರೆ. ಅದು ಬದಲಾವಣೆಯಾಗಬೇಕು. ಯಾವುದೇ ಕ್ಷೇತ್ರದಲ್ಲಾದರೂ ತಮ್ಮ ಕೆಲಸಕ್ಕೆ ತಕ್ಕಂತೆ ಗೌರವ ಇರುತ್ತದೆ. ಅದೇ ರೀತಿ ಪತ್ರಿಕಾ ವಿತರಕರನ್ನೂ ಕೂಡ ಗೌರವಿಸುವಂತಾಗಬೇಕು ಎಂದು ತಿಳಿಸಿದರು.

               ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಚಲುವರಾಜ್ ಮಾತನಾಡುತ್ತಾ, ಕಳೆದ 6 ತಿಂಗಳ ಹಿಂದೆ ಜಿಲ್ಲಾ ಪತ್ರಿಕಾ ವಿತರಕರ ಸಂಘವನ್ನು ಕಟ್ಟಿಕೊಂಡು ಇದರಿಂದ ಪತ್ರಿಕೆ ವಿತರಣೆ ಮಾಡುವ ಎಲ್ಲಾ ಸದಸ್ಯರಿಗೆ ಗೌರವ ದೊರಕಿಸಿಕೊಡಲು ಪ್ರಯತ್ನ ನಡೆಸಲಾಗುತ್ತಿದೆ. ಈ ಸಂಘದಿಂದ ಸದಸ್ಯರಿಗೆ ವಿಮೆ ಸೌಲಭ್ಯ, ವಿದ್ಯಾರ್ಥಿಗಳಿಗೆ ಸಹಾಯ, ಮುಂತಾದ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಸಂಘದ ಸದಸ್ಯರಿಗೆ ಗುರುತಿನ ಚೀಟಿ ನೀಡುವ ಮೂಲಕ ಅವರನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಈ ಸಮಾರಂಭದಲ್ಲಿ ಪತ್ರಿಕಾ ವಿತರಕರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಈ ಸಮಾರಂಭದಲ್ಲಿ ಉಪಸಂಪಾದಕರಾದ ಟಿ.ಎನ್.ಮಧುಕರ್, ವ್ಯವಸ್ಥಾಪಕ ಚಿಕ್ಕವೀರಯ್ಯ, ಪ್ರಸಾದ್, ನಾಗರಾಜು ಹಾಗೂ ಪತ್ರಿಕಾ ಏಜೆಂಟರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here