ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಶಾಸಕ

0
42

ತುರುವೇಕೆರೆ

ಹಾರ ತುರಾಯಿ ಬದಲು ನಮಗೂ ಸಸಿ ನೀಡಿದಲ್ಲಿ ನಮ್ಮ ಜಮೀನುಗಳಲ್ಲಿ ಗಿಡನೆಟ್ಟು ಪರಿಸರ ಉಳಿವಿಗೆ ಸಹಕರಿಸಲಾಗುವುದು ಎಂದು ಶಾಸಕ ಮಸಾಲ ಜಯರಾಂ ತಿಳಿಸಿದರು.

ತಾಲ್ಲೂಕಿನ ಶೆಟ್ಟಗೊಂಡನಹಳ್ಳಿ ಜ್ಞಾನಭಾರತಿ ಪ್ರೌಢಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಹಯೋಗದಲ್ಲಿ ಏರ್ಪಡಿಸಿದ್ದ “ಪರಿಸರ ಜಾಗೃತಿ ಜಾಥಾ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳ ಮೂಲಕ ವನಮಹೋತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಅದನ್ನು ಉಳಿಸಿ ಬೆಳೆಸಬೇಕಾಗಿದೆ. ಆ ನಿಟ್ಟಿನಲ್ಲಿ ತಾಲ್ಲೂಕಿನ ಗೋಮಾಳ ಹಾಗೂ ಗುಂಡುತೋಪುಗಳನ್ನು ಗುರ್ತಿಸಿ ಗಿಡ ನೆಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಹಾಗೆಯೇ ತಾಲ್ಲೂಕಿನ ಜನತೆ ತಮ್ಮ ಊರು- ಜಮೀನುಗಳಲ್ಲಿರುವ ಖಾಲಿ ಪ್ರದೇಶಗಳಲ್ಲಿ ಗಿಡಮರ ನೆಡುವ ಮೂಲಕ ಬರ ನಿವಾರಣೆಯಾಗಿ ಒಳ್ಳೆಯ ಗಾಳಿ ದೊರೆಯಲಿದೆ. ಕೇವಲ ಸಭೆ ಸಮಾರಂಭಗಳಿಗಷ್ಟೇ ಸೀಮಿತವಾಗದೆ ಅದು ಜನಮನದಿಂದ ಮಾತ್ರ ಆಗುವಂತ ಕೆಲಸವಾಗಬೇಕು. ಆದ್ದರಿಂದ ಇಂದು ನಿಮ್ಮ ಶಾಲಾ ಆವರಣದಲ್ಲಿ ನೆಟ್ಟ ಒಂದೊಂದು ಸಸಿಗೂ ಐದೈದು ವಿದ್ಯಾರ್ಥಿಗಳು ಒಗ್ಗೂಡಿ ಗಿಡಗಳನ್ನು ಪೋಷಿಸಿ ಬೆಳೆಸುವುದರೊಂದಿಗೆ ಪರಿಸರ ಉಳಿಸಿ ಎಂದು ಶಾಲಾ ಮಕ್ಕಳಿಗೆ ಕಿವಿ ಮಾತು ಹೇಳಿದರು.

ವಲಯ ಅರಣ್ಯಾಧಿಕಾರಿ ರಾಧಾ ಪ್ರಾಸ್ತಾವಿಕ ನುಡಿಗಳನ್ನಾಡಿ ಒಟ್ಟು 1941 ಹೆಕ್ಟೇರ್ ಪ್ರದೇಶದಲ್ಲಿ ಸಸಿ ಬೆಳೆಸಲಾಗಿದೆ. ರಸ್ತೆಯ 323 ಕಿ.ಮೀ. ಉದ್ದಗಲಕ್ಕೂ ಗಿಡ ನೆಡಲಾಗಿದ್ದು, ಪರಿಶಿಷ್ಟ, ವಿಕಲಾಂಗ, ಹಿಂದುಳಿದ, ಸಣ್ಣ ಹಾಗೂ ಅತಿಸಣ್ಣ ರೈತರು ಸೇರಿದಂತೆ 6644 ರೈತರಿಗೆ ರಿಯಾಯಿತಿ ದರದಲ್ಲಿ ಬೇಡಿಕೆ ಸಸಿ ವಿತರಿಸಲಾಗಿದೆ ಎಂದರು.

ತಾ.ಪಂ.ಸದಸ್ಯರಾದ ಮಹಾಲಿಂಗಯ್ಯ, ಬೈರಪ್ಪ ಮಾತನಾಡಿ ವಿದ್ಯೆ ಎಷ್ಟು ಮುಖ್ಯವೋ ಹಾಗೆಯೇ ಮುಂದಿನ ಪೀಳಿಗೆಗೆ ಒಳ್ಳೇ ಗಾಳಿ ಅಷ್ಟೇ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಮರ ಬೆಳೆಸಿ ಪರಿಸರ ಕಾಪಾಡಿ ಎಂದರು.
ಇದೇ ಸಂದರ್ಭದಲ್ಲಿ ನೂತನ ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಜಿ.ಪಂ.ಸದಸ್ಯೆ ಜಯಲಕ್ಷ್ಮೀ ಜಯರಾಂ, ತಾ.ಪಂ.ಸದಸ್ಯ ಮಂಜುನಾಥ್, ಗ್ರಾ.ಪಂ.ಸದಸ್ಯ ರಮೇಶ್, ಪ.ಪಂ.ಅಧ್ಯಕ್ಷ ಲಕ್ಷ್ಮೀನರಸಿಂಹ, ದೊಡ್ಡೇರಿ ರಾಜಣ್ಣ, ಗಂಗಣ್ಣ, ರಾಜಣ್ಣ, ತಮ್ಮಣ್ಣ, ಕಾಂತರಾಜು, ಎಸಿಎಫ್ ಸಂತೋಷ್ ನಾಯಕ್, ಡಿ.ಎಫ್. ಸತೀಶ್ ಬಾಬಾರೈ, ಅರಣ್ಯ ಇಲಾಖಾಧಿಕಾರಿಗಳಾದ ನಿಸಾರ್‍ಅಹಮದ್, ತಿಮ್ಮರಾಜು , ರಾಧಾ, ಸುಜಾತ, ಪವಿತ್ರ, ಅನಿಷಾಭಟ್ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here