ಪರಿಸರ ಸಂರಕ್ಷಣೆ ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಬೇಕು-ಸಾಲುಮರದ ತಿಮ್ಮಕ್ಕ

0
28

 

ಶಿರಾ
    ಪರಿಸರ ಸಂರಕ್ಷಣೆ ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಬೇಕು. ಜ್ಞಾನಾರ್ಜನೆ ಹೆಚ್ಚಿಸಿ ಉತ್ತಮ ಶಿಕ್ಷಣ ನೀಡಿದರೆ ಮಕ್ಕಳು ಮುಂದೆ ಫಲ ಕೊಡುವಂತೆ, ಗಿಡಮರಗಳ ಜೊತೆಗೆ ಪ್ರಕೃತಿ ಹಾಗೂ ಪರಿಸರ ಸುಂದರಗೊಳಿಸಿದಲ್ಲಿ ಕಾಲ ಕಾಲಕ್ಕೆ ಮಳೆ ಬಂದು ರೈತ ಸೇರಿದಂತೆ ಎಲ್ಲರ ಬದುಕು ಹಸನಾಗಲು ಸಾಧ್ಯ ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.

    ಶಿರಾ ತಾಲ್ಲೂಕಿನ ಬಂದಕುಂಟೆ ಗ್ರಾಮದ ಎಸ್‍ಎಂಆರ್ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ ಹಳೆ ವಿದ್ಯಾರ್ಥಿಗಳ  ಸ್ನೇಹ ಮಿಲನ ಹಾಗೂ ಗುರುವಂದನಾ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ನಂತರ ವೃಕ್ಷಮಾತೆ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

    ಈ ಸಾಲುಮರದ ತಿಮ್ಮಕ್ಕ ನೆಪ ಮಾತ್ರ, ಗ್ರಾಮೀಣ ಪ್ರದೇಶದ ಯುವಕರು ಒಬ್ಬರಿಗೆ 2 ಗಿಡ ನೆಡಿಸಿ ಬೆಳಸುವಂತ ಪ್ರವೃತ್ತಿ ಮೈಗೂಡಿಸಿ ಕೊಳ್ಳಬೇಕು. ನೀವು ಮಾಡುವಂತಹ ಸೇವೆ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಮಾಡಿದಾಗ ಸೇವೆ ಸಾರ್ಥಕತೆ ಕಾಣಲಿದೆ. ಹತ್ತಾರು ವರ್ಷ ಒಂದೇ ಶಾಲೆಯಲ್ಲಿ ಕಲಿತು ಉತ್ತಮ ಪ್ರಜೆಯಾಗಿ ರೂಪುಗೊಂಡಿರುವ ಹಳೆಯ ವಿದ್ಯಾರ್ಥಿಗಳು ಸ್ನೇಹಮಿಲನ ಕೂಟದಂತ ವೇದಿಕೆ ಮೂಲಕ ಪರಸ್ಪರ ಸ್ನೇಹ, ಪ್ರೀತಿ, ಸಂಬಂಧಗಳ ಶಾಶ್ವತ ಉಳಿಯುವಿಕೆಗೆ ಕಾರಣವಾಗಲಿದೆ ಎಂದರು.

    ಜೀವದಾತೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಸೂಲಗಿತ್ತಿ ನರಸಮ್ಮ ಮಗುವಿಗೆ ಜೀವ ನೀಡುವಂತ ಮಹತ್ವದ ಕೆಲಸ ಪ್ರತಿಯೊಬ್ಬ ತಾಯಂದಿರಿಗೆ ದೇವರು ನೀಡಿದ ಬಹುದೊಡ್ಡ ಭಾಗ್ಯ. ಇಂತಹ ಸಾವಿರಾರು ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿಗಳು ನನಗೆ ಬಂದಿರಬಹುದು. ಆದರೆ ಇದಕ್ಕಿಂತ ಮಿಗಿಲಾಗಿ ಈ ಮುಗ್ದ ಕಂದಮ್ಮಗಳನ್ನು ಜನ್ಮದಾತೆಯಿಂದ ಭೂಮಿಗೆ ತರುವಂತ ಸೂಲಗಿತ್ತಿ ಕೆಲಸ ನನಗೆ ತೃಪ್ತಿತಂದಿದೆ. ಪ್ರಸಕ್ತ ಸ್ಥಿತಿಯಲ್ಲಿ ಸೇವೆ ಮಾಡುವಂತ ಹಾಗೂ ಸಾಧಿಸುವಂತ ಮುಕ್ತ ಅವಕಾಶಗಳು ಪ್ರತಿಯೊಬ್ಬ ಮಹಿಳೆಗೆ ಸಿಗುತ್ತಿದ್ದು, ಸಮಾಜಕ್ಕೆ ಒಳ್ಳೆಯದನ್ನು ಮಾಡುವಂತ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸೇವಾ ಮನೋಭಾವದಿಂದ ಕೆಲಸ ಮಾಡುವ ಮೂಲಕ ನೊಂದವರಿಗೆ ಧ್ವನಿಯಾಗಬೇಕೆಂದರು.

LEAVE A REPLY

Please enter your comment!
Please enter your name here