ಪುಟ್‍ಬಾತ್ ವ್ಯಾಪಾರಸ್ಥರಿಗೆ ತೆರವುಗೊಳಿಸಲು ಅಧಿಕಾರಿಗಳ ಸೂಚನೆ : ಪುಟ್‍ಬಾತ್ ವ್ಯಾಪಾರಸ್ಥರಿಂದ ನಕಾರ

0
32

   ಚಳ್ಳಕೆರೆ-

ಚಳ್ಳಕೆರೆ ನಗರದ ಹೃದಯ ಭಾಗದಲ್ಲಿ ಕಳೆದ ಡಿಸೆಂಬರ್ ಮಾಹೆಯಲ್ಲಿ ನಿರ್ಗಮನ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಸುಮಾರು 6.50 ಕೋಟಿ ವೆಚ್ಚದ ಸುಸಜ್ಜಿಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದ್ದು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ನಗರಕ್ಕೆ ಖಾಸಗಿ ಬಸ್ ನಿಲ್ದಾಣವನ್ನು ಸಹ ಸುಮಾರು 2.75 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಿದ್ದು, ನಗರದ ಈಗಿರುವ ಖಾಸಗಿ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಅದೇ ಜಾಗದಲ್ಲಿ ನೂತನ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

   ಈ ಹಿನ್ನೆಲೆಯಲ್ಲಿ ಸೋಮವಾರ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಪಿಎಸ್‍ಐ ಕೆ.ಸತೀಶ್‍ನಾಯ್ಕ, ಜೆಇ ಲೋಕೇಶ್, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ ಮುಂತಾದವರು ಬಸ್ ನಿಲ್ದಾಣ ಮತ್ತು ಅದರ ಸುತ್ತಲಿನ ಪುಟ್‍ಬಾತ್ ವ್ಯಾಪಾರಸ್ಥರಿಗೆ ಸೋಮವಾರ ಸಂಜೆಯೊಳಗೆ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಬೇಕು. ನೂತನ ಬಸ್ ನಿಲ್ದಾಣ ಕಾಮಗಾರಿ ಚಾಲನೆಗೆ ಎಲ್ಲರೂ ಸಹಕರಿಸಬೇಕೆಂದು ತಿಳಿಸಿ ಈಗಿರುವ ಅಂಗಡಿಗಳನ್ನು ಕಡ್ಡಾಯವಾಗಿ ಸೋಮವಾರ ರಾತ್ರಿಯೊಳಗೆ ಬೇರೆಡೆಗೆ ಸ್ಥಳಾಂತರ ಮಾಡುವಂತೆ ಸೂಚನೆ ನೀಡಿದರು.

   ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್, ಹೂವಿನ ಅಂಗಡಿ, ಹಣ್ಣಿನ ಅಂಗಡಿ ಹಾಗೂ ಬೀದಿ ಬದಿ ವ್ಯಾಪಾರಿಗಳು ಏಕಾಏಕಿ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ತೆರವುಗೊಳಿಸುವಂತೆ ಸೂಚನೆ ನೀಡಿದ್ದುತ್ತಿದ್ದೀರಿ, ಯಾರಿಗೂ ಪರ್ಯಾಯ ವ್ಯವಸ್ಥೆಯ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುತ್ತಿಲ್ಲ. ನೂರಾರು ಬಡ ಕುಟುಂಬಗಳು ಪುಟ್‍ಬಾತ್ ವ್ಯಾಪರವನ್ನೇ ನಂಬಿ ಬದುಕುತ್ತಿವೆ. ದಿಢೀರನೇ ಅಧಿಕಾರಿಗಳು ಬಂದು ವ್ಯಾಪಾರವನ್ನು ತಡೆದರೆ ನಮ್ಮ ಜೀವನದ ಗತಿ ಏನು ಎಂದು ಕಾರವಾಗಿಯೇ ಪ್ರಶ್ನಿಸಿದರು.
ಇದಕ್ಕೆ ಉತ್ತರ ನೀಡಿದ ಪೌರಾಯುಕ್ತ ಜೆ.ಟಿ.ಹನುಮಂತರಾಜು, ನಗರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಹಲವಾರು ಕಾಮಗಾರಿಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕಟ್ಟಡ ನಿರ್ಮಿಸಲು ಮುಂದಾದಗಾ ಬರುವ ಧೂಳು, ಬಿಸಿಲಿನಿಂದ ವ್ಯಾಪಾರಸ್ಥರಿಗೆ ತೊಂದರೆಯಾಗಲಿದೆ. ಆದರೆ, ಕಾಮಗಾರಿಯನ್ನು ನಿಗದಿತ ಅವಧಿಯಲ್ಲೇ ಗುತ್ತಿಗೆದಾರರು ಪೂರೈಸಬೇಕಾಗಿದೆ. ಈಗಾಗಲೇ ತಡವಾಗಿದ್ದು, ಎಲ್ಲರೂ ಸೇರಿ ಅವಕಾಶ ಮಾಡಿಕೊಟ್ಟಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಶೀಘ್ರದಲ್ಲೇ ಅಂತ್ಯಗೊಳಿಸಲಾಗುವುದು. ನಗರದ ಹಿತದೃಷ್ಠಿಯಿಂದ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

   ಪುಟ್‍ಬಾತ್ ವ್ಯಾಪಾರಸ್ಥರ ಅಳಲು :- ತೆರವುಗೊಳಿಸುವ ಕುರಿತು ಹಿರಿಯ ಅಧಿಕಾರಿಗಳ ಸೂಚನೆಯಿಂದ ಕಂಗೆಟ್ಟಿರುವ ಇಲ್ಲಿನ ಪುಟ್‍ಬಾತ್ ವ್ಯಾಪಾರಸ್ಥರು ಯಾವುದೇ ಕಾರಣಕ್ಕೂ ನಾವು ಈಗಿರುವ ಜಾಗವನ್ನು ಬಿಡುವ ಪ್ರಶ್ನೆಯೇ ಇಲ್ಲ. ಪುಟ್‍ಬಾತ್ ವ್ಯಾಪಾರಸ್ಥರು ಎಲ್ಲರಂತೆ ಬದುಕಬೇಕಿದೆ. ಅವರು ಕಷ್ಟ ಜೀವಿಗಳು 30-40 ವರ್ಷಗಳಿಂದ ಇದೇ ಜಾಗದಲ್ಲಿ ವ್ಯಾಪಾರವನ್ನು ನಡೆಸಿಕೊಂಡು ಬಂದಿರುತ್ತಾರೆ. ಅದ್ದರಿಂದ ನಮಗೆ ಇಲ್ಲಿಯೇ ಮುಂದುವರೆಯಲು ಅವಕಾಶ ನೀಡಿ ಎಂದು ವಿನಂತಿಸಿದರು.

   ಪೌರಾಯುಕ್ತರ ಸ್ವಷ್ಟೀಕರಣ :- ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತ ಜೆ.ಟಿ.ಹನುಮಂತರಾಜು, ರಾಜ್ಯ ಪೌರಾಡಳಿತ ಇಲಾಖೆ ನಿರ್ದೇಶನಾಲಯ ಕಾಮಗಾರಿಯ ಟೆಂಡರನ್ನು ಅನುಮೋದಿಸಿದ್ದು, ಈಗಾಗಲೇ ಅವಧಿಯನ್ನು ಸಹ ನಿಗಧಿಗೊಳಿಸಿದೆ. ಕಾನೂನಿನ ಪ್ರಕಾರ ಗುತ್ತಿಗೆದಾರರು ಎಲ್ಲಾ ದಾಖಲಾತಿಗಳನ್ನು ಮತ್ತು ನಿಬಂಧನೆಗಳನ್ನು ಪೂರೈಸಿದ್ದಾರೆ. ನಗರಸಭೆ ವತಿಯಿಂದ ತೆರವುಗೊಳಿಸಿಕೊಟ್ಟಲ್ಲಿ ಮಾತ್ರ ಅವರು ಕಾಮಗಾರಿ ಕೈಗೆತ್ತಿಗೊಳ್ಳಲು ಸಾಧ್ಯ. ಇಲಾಖೆಯ ನಿರ್ದೇಶನದಂತೆ ತೆರವುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರಸ್ತುತ ಎಲ್ಲಾ ಜಾಗವೂ ನಗರಸಭೆಯ ವ್ಯಾಪ್ತಿಯಲ್ಲಿದ್ದು, ಕಡ್ಡಾಯವಾಗಿ ತೆರವುಗೊಳಿಸಲಾಗುವುದು ಎಂದರು.
ನಗರಸಭೆಯ ಆಡಳಿತಕ್ಕೆ ಪ್ರತಿಭಟನೆ ಬಿಸಿ :- ತಹಶೀಲ್ದಾರರು ಮತ್ತು ಪೌರಾಯುಕ್ತರು ಪುಟ್‍ಬಾತ್ ವ್ಯಾಪಾರಿಗಳಿಗೆ ಜಾಗ ತೆರವುಗೊಳಿಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ಪುಟ್‍ಬಾತ್ ವ್ಯಾಪಾರಸ್ಥರ ಸಂಘ, ಎಐಟಿಯುಸಿ ಸಂಘಟನೆಯ ನೇತೃತ್ವದೊಂದಿಗೆ ಮಂಗಳವಾರ ಅಧಿಕಾರಗಳ ವಿರುದ್ದ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಯಾವುದೇ ಕಾರಣಕ್ಕೂ ಪುಟ್‍ಬಾತ್ ವ್ಯಾಪಾರಸ್ಥರಿಗೆ ತೊಂದರೆ ಕೊಟ್ಟಲ್ಲಿ ಸಹಿಸುವುದಿಲ್ಲವೆಂದು ಅಧ್ಯಕ್ಷರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here