ಪೊಲೀಸರ ದೌರ್ಜನ್ಯ ಖಂಡಿಸಿ ಹುಲಿಯೂರುದುರ್ಗದಲ್ಲಿ ಪ್ರತಿಭಟನೆ

0
31

 ಕುಣಿಗಲ್ : 


      ಹುಲಿಯೂರುದುರ್ಗ ಪೊಲೀಸರು ವ್ಯಕ್ತಿಯೋರ್ವನ ಮೇಲೆ ಮಾಡಿದ ಹಲ್ಲೆಯನ್ನು ಖಂಡಿಸಿ ಹುಲಿಯೂರುದುರ್ಗದ ನಾಗರೀಕರು ತೋಳಿಗೆ ಕಪ್ಪುಪಟ್ಟಿ ಧರಿಸಿ ಬೃಹತ್ ಪ್ರತಿಭಟನೆ ನಡೆಸಿದರು.

      ಹುಲಿಯೂರುದುರ್ಗ ಸರ್ಕಲ್‍ನಲ್ಲಿ ಸಮಾವೇಶಗೊಂಡ ನೂರಾರು ಪ್ರತಿಭಟನಾ ಕಾರರು ಪೊಲೀಸ್ ಠಾಣೆ ಸೇರಿದಂತೆ, ಹೊಸಪೇಟೆಯವರೆಗೆ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ದಿಕ್ಕಾರ ಕೂಗುತ್ತ ತಪ್ಪಿತಸ್ತರ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಆಗ್ರಹಿಸಿದರು.

      ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರಾದ ಮುರುಳಿಧರ್, ನಟರಾಜ್, ಹೆಚ್.ಆರ್.ಕೃಷ್ಣಪ್ಪ, ವೆಂಕಟೇಶ್ ಜೊತೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನ ಭಾಗವಹಿಸಿ ಪ್ರತಿಭಟಿಸಿದರು. ಶುಕ್ರವಾರ ರಾತ್ರಿ ಪದ್ಮನಾಭ ಎಂಬಾತ ಮತ್ತು ಯುವಕರು ಮನೆಯ ಮುಂದೆ ರಸ್ತೆಯಲ್ಲಿ ಷೆಟಲ್‍ಬ್ಯಾಡ್ಮಿಟನ್ ಆಡುತ್ತಿದ್ದಾಗ ಸ್ಥಳಕ್ಕೆ ಬಂದ ಪೊಲೀಸ್ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ನಾರಾಯಣಸ್ವಾಮಿ ಮತ್ತು ಪೇದೆ ರಂಗಸ್ವಾಮಿ ಮತ್ತು ಇತರರು ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಸ್ಥಳಿಯರು ಬಿಡಿಸಿ ಕಳುಹಿಸಿದ್ದಾರೆ. ಆದರೆ ಮಧ್ಯರಾತ್ರಿ ಪೊಲೀಸರು ಪದ್ಮನಾಭನ ಮನೆಗೆ ಹೋಗಿ ಎಳೆದು ತಂದು ಮನಸೋ ಇಚ್ಚೇ ಥಳಿಸಿದ್ದಾರೆ ಇದನ್ನ ಗಮನಿಸಿದ ಆತನ ಕುಟುಂಬದವರು ಠಾಣೆಗೆ ಹೋಗಿ ವಿಚಾರಿಸಿದರು. ನೋಡಲು ಸಹ ಬಿಡದ ಪೊಲೀಸರು ಆಸ್ಪತ್ರೆಗೂ ಸೇರಿಸದೇ ಶನಿವಾರ ನ್ಯಾಯಲಯಕ್ಕೆ ಹಾಜಾರು ಪಡಿಸಿ ಜೈಲಿಗಟ್ಟಿರುವ ಕ್ರಮವನ್ನ ಖಂಡಿಸಿ ಸೋಮವಾರ ನೂರಾರು ಮಂದಿ ಸಾರ್ವಜನಿಕರು ಪೊಲೀಸ್ ಕೃತ್ಯವನ್ನು ಖಂಡಿಸಿ ಪ್ರತಿಭಟಿಸಿದರು.

      ಪ್ರತಿಭಟನೆಯಲ್ಲಿ ಪದ್ಮನಾಭನ ತಾಯಿ ಸೌಭಾಗ್ಯಮ್ಮ ತನ್ನ ಅಳಲನ್ನ ತೋಡಿಕೊಳ್ಳುತ್ತ, ನಾವು ಉತ್ತಮವಾದ ಕುಟುಂಬದವರು, ಸ್ವಾತಂತ್ರ್ಯ ಹೋರಾಟಗಾರರ ಮನೆತನದವರು. ನನ್ನ ಮಗ ಒಳ್ಳೆಯವ ಯಾವುದೇ ದುಶ್ಚಟಗಳು ಇಲ್ಲ. ಇಂತವನು ರಸ್ತೆಯಲ್ಲಿ ಆಟ ಆಡುತ್ತಿದ್ದ ವಿಚಾರವನ್ನೇ ದೊಡ್ಡ ತಪ್ಪಾಗಿ ಬಿಂಬಿಸಿ ಮನಬಂದಂತೆ ಥಳಿಸಿ ಜೈಲಿಗೆ ಕಳುಹಿಸಿದ್ದಾರೆ. ಇಂತಹ ಕೃತ್ಯ ಮಾಡಲು ಪೊಲೀಸರಿಗೆ ಯಾವ ಅಧಿಕಾರ ಇದೆ ಎಂದು ಕಾರವಾಗಿ ಪ್ರಶ್ನಿಸಿದರು. ಮನೆಗೆ ರಾತ್ರಿ ನುಗ್ಗಿದ ಪೊಲೀಸರು ನನಗೆ ಅವಾಚ್ಯ ನಿಂಧನೆಗಳನ್ನ ಮಾಡಿದರು. ನಿಮ್ಮ ಮಗನನ್ನು ಕಳುಹಿಸಿ ವಾಪಸ್ ಕರೆತರುತ್ತೇನೆ ಎಂದು ಬಂದ ಪೊಲೀಸ್ ರಂಗಸ್ವಾಮಿ ಅವರು ನಂಬಿಸಿ ಕರೆದುಕೊಂಡು ಹೋಗಿ, ಈಗ ನನ್ನ ಮಗನನ್ನು ವಿಪರೀತವಾಗಿ ಥಳಿಸಿ ಜೈಲಿಗಾಕಿದ್ದಾರೆ. ನನಗೆ ನ್ಯಾಯಾ ಕೊಡಿ, ನಾನು ಊಟ ನಿದ್ದೆ ಮಾಡುತ್ತಿಲ್ಲ ನನಗೆ ನನ್ನ ಮಗ ಬೇಕು ಎಂದು ಕಣ್ಣೀರು ಸುರಿಸಿದರು.

      ಇದೇ ಸಂದರ್ಭದಲ್ಲಿ ಮಾತನಾಡಿ ಗ್ರಾ.ಪಂ. ಉಪಾಧ್ಯಕ್ಷೆ ಲಲಿತಾಮುರುಳೀಧರ್, ನಟರಾಜ್ ಮತ್ತು ಹೆಚ್.ಆರ್. ಕೃಷ್ಣಪ್ಪ ಮಾತನಾಡಿ ಅಮಾಯಕರನ್ನೇ ಈ ಮಟ್ಟಕ್ಕೆ ಥಳಿಸಿ ಜೈಲಿಗೆ ಹಾಕಿರುವುದು ಅನ್ಯಾಯ ದೇಶದಲ್ಲಿ ಬಾಂಬ್ ಇಟ್ಟವರನ್ನೇ ಕಾನೂನು ರೀತಿ ರಕ್ಷಿಸಿ ನ್ಯಾಯ¯ಯ ತೀರ್ಪಿನ ನಂತರ ಶಿಕ್ಷಿಸುತ್ತಿದೆ, ಆದರೆ ಇಲ್ಲಿನ ಪೊಲೀಸರು ಅನಾಗರೀಕರಂತೆ ತಮ್ಮ ದ್ವೇಷಕ್ಕೆ ಪದ್ಮನಾಭನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಹಾಗೂ ಆತನಿಗೆ ಚಿಕಿತ್ಸೆಯನ್ನು ಕೊಡಿಸುವ ನೆಪ ಹೇಳಿ ತುಮಕೂರು ಜೈಲಿನಿಂದ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಪರಪ್ಪನಅಗ್ರಹಾರದ ಜೈಲಿಗೆ ಬಿಟ್ಟಿದ್ದಾರೆ. ಈ ಕೂಡಲೇ ಆಸ್ಪತ್ರೆಗೆ ಪದ್ಮನಾಭನನ್ನು ಸೇರಿಸಿ ಚಿಕಿತ್ಸೆ ಕೊಡಿಸಬೇಕು, ಆತನ ಮೇಲೆ ಹಾಕಿರುವ ಪ್ರಕರಣ ಕೈಬಿಡಬೇಕು ಮತ್ತು ಹಲ್ಲೆ ಮಾಡಿರುವ ಪೊಲೀಸರನ್ನು ಅಮಾನತ್ತುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

      ಪ್ರತಿಭಟನಕಾರರು ಮೊದಲು ನಾಡ ಕಚೇರಿಗೆ ತೆರಳಿ ಅಲ್ಲಿನ ಉಪತಹಶೀಲ್ದಾರ್ ಮಂಜುನಾಥ ಹಾಗೂ ಸಿ.ಪಿ.ಐ. ಅಶೋಕ್‍ಕುಮಾರ್ ಗೆ ಮನವಿ ನೀಡಿ ಕ್ರಮಕ್ಕೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸುವ ಮೂಲಕ ತಮಗೆ ನ್ಯಾಯ ನೀಡುವುದಾಗಿ ಭರವಸೆ ನೀಡಿದಾಗ ಪ್ರತಿಭಟನಾ ಕಾರರು ಪ್ರತಿಭಟನೆ ಕೈಬಿಟ್ಟರು.

 ಉಪಮುಖ್ಯಮಂತ್ರಿಗೆ ಮನವಿ ಕೊಡಲು ಬಿಡದ ಪೋಲೀಸರು:-

      ತುಮಕೂರಿನಿಂದ ಶ್ರೀರಂಗಪಟ್ಟಣಕ್ಕೆ ತಮ್ಮ ಮೃತ ಸಹೋದರ ಶಿವಪ್ರಸಾದ್‍ರವರ ಅಸ್ತಿ ಬಿಡುವ ಉದ್ದೇಶದಿಂದ ಕುಟುಂಬಸ್ತರೊಂದಿಗೆ ಎರಡು ಬಸ್ಸಿನಲ್ಲಿ ತೆರಳುವ ದಾರಿ ಮಧ್ಯ ಹುಲಿಯೂರುದುರ್ಗದ ಪ್ರವಾಸಿ ಮಂದಿರದ ಬಳಿ ಪ್ರತಿಭಟನಾಕಾರರು ತಡೆದು ಮನವಿ ನೀಡುವ ಮತ್ತು ಘೆರಾವ್ ಮಾಡಲು ಮುಂದಾದಾಗ ಸಿ.ಪಿ.ಐ. ಅಶೋಕ್ ಮತ್ತು ಪಿ.ಎಸ್.ಐ. ಅನಿಲ್ ತಡೆದು ಮನವಲಿಸುವ ಸಂದರ್ಭದಲ್ಲಿ ಪೊಲೀಸರ ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ವಾಗ್ವಾದ ನಡೆದರೂ ಸಹ ಮನವಿ ನೀಡಲು ಅವಕಾಶ ನೀಡಲಿಲ್ಲ.

LEAVE A REPLY

Please enter your comment!
Please enter your name here