ಪೋಷಕರ ಸಹಕಾರವಿದ್ದರೆ ಮಾತ್ರ ಕಾಲೇಜು ಅಭಿವೃದ್ಧಿ ಸಾಧ್ಯ : ಪ್ರೊ. ಕೆ.ಎಂ. ರಾಜಣ್ಣ

0
24

ತಿಪಟೂರು :

    ಕಾಲೇಜಿನ ಅಭಿವೃದ್ಧಿಗೆ ಪೋಷಕರ ಸಹಕಾರ ಮಹತ್ತರವಾದದ್ದು, ಪೋಷಕರು ಕಾಲೇಜಿನೊಂದಿಗೆ ಉತ್ತಮ ನಿರಂತರ ಸಂಪರ್ಕದಲ್ಲಿದ್ದರೆ ತಮ್ಮ ಮಕ್ಕಳ ಪ್ರಗತಿಯ ಜೊತೆಗೆ ಕಾಲೇಜನ್ನು ಉನ್ನತ್ತಮಟ್ಟಕ್ಕೇರಿಸಬಹುದೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಂ. ರಾಜಣ್ಣ ತಿಳಿಸಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಪೋಷಕರ ಸಮಿತಿ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಪೋಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಕಾಲೇಜು ಸ್ಥಾಪನೆಯಾಗಿ 11 ವರ್ಷಗಳಾಗಿದ್ದು, ಹಿಂದಿನ ಪ್ರಾಂಶುಪಾಲರಾಗಿದ್ದ ಡಾ. ಜಯದೇವಪ್ಪನವರ ಪರಿಶ್ರಮದಿಂದ ಕಠಿಣ ಪರಿಸ್ಥಿತಿಯಲ್ಲಿಯೂ ಇಂದು ರಾಜ್ಯದಲ್ಲಿಯೇ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದ್ದು ಅವರು ಹಾಕಿದ ಭದ್ರವಾದ ಅಡಿಪಾಯವನ್ನು ನಾವು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಈ ಕಾಲೇಜಿಗೆ ಪ್ರಾಂಶುಪಾಲರಾಗಿ ಬಂದು 11ತಿಂಗಳಾಗಿದ್ದು, ಜಯದೇವಪ್ಪನವರ ದಾರಿಯಲ್ಲೇ ಸಾಗುತ್ತಿದ್ದೇನೆ. ಕೊಠಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳಿದ್ದು ಕಾಲೇಜು ಅಭಿವೃದ್ಧಿಯತ್ತ ಸಾಗುತ್ತಿದೆ. ಯುಜಿಸಿ ನಿಯಮಕ್ಕೆ ಒಳಟ್ಟಿರುವ ಈ ಕಾಲೇಜು ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಗಮನಿಸಿದ ಯುಜಿಸಿಯಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಗ್ರೇಡ್ ನೀಡಲಾಗುತ್ತದೆ.

     ಮುಂದಿನ 2020ರೊಳಗೆ ಮೂಲಭೂತ ಸಮಸ್ಯೆ ಮುಕ್ತ ಕಾಲೇಜನ್ನಾಗಿ ಮಾಡಿ ಎ ಗ್ರೇಡ್ ಪಡೆದುಕೊಳ್ಳಬೇಕೆಂಬ ನಿರ್ಧಾರ ಮಾಡಲಾಗಿದೆ. ಅದಕ್ಕಾಗಿ ನಿಯಮದಂತೆ ಪೋಷಕರ ಸಂಘವನ್ನು ತೆರೆಯಲಾಗಿದ್ದು, ಪ್ರತಿ ವರ್ಷ ಸಭೆ ಕರೆದು ಕಾಲೇಜಿನ ಆಗುಹೋಗುಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಅದರಂತೆ ನೀವು ಸಹ ಕಾಲೇಜಿಗೆ ಆಗಾಗ ಭೇಟಿ ನೀಡುವುದರಿಂದ ನಿಮ್ಮ ಮಕ್ಕಳ ಪ್ರಗತಿ ಜೊತೆಗೆ ಕಾಲೇಜು ಅಭಿವೃದ್ಧಿಗಾಗಿ ನಿಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಬೇಕೆಂದರು.

    ಪೋಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಬಿಲ್ಲೇಮನೆ ಮಾತನಾಡಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಮನೆಯಲ್ಲಿ ಹೇಗೆ ಗಮನಹರಿಸುತ್ತೀರೋ ಹಾಗೆಯೇ ಕಾಲೇಜಿಗೆ ತಿಂಗಳಿಗೊಮ್ಮೆಯಾದರೂ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಸಂಬಂಧಪಟ್ಟ ಪ್ರಾಧ್ಯಾಪಕರಲ್ಲಿ ತಿಳಿದುಕೊಳ್ಳಬೇಕು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.

     ಹಳೇವಿದ್ಯಾರ್ಥಿ ಸಂಘದ ಸಂಚಾಲಕ ಡಾ. ಡಿ.ಆರ್. ಹೊನ್ನಾಂಜಿನಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ನಮ್ಮ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲಾಗಿದ್ದು, ನಮ್ಮ ಕಾಲೇಜಿನಲ್ಲಿ 40ಜನ ಬೋಧಕರು, 99 ಜನ ಅತಿಥಿ ಉಪನ್ಯಾಸಕರು ಮತ್ತು 10 ಜನ ಬೋಧಕೇತರ ಸಿಬ್ಬಂದಿ ವರ್ಗದವರಿಂದ ಪಾಠಪ್ರವಚನಗಳು ನಡೆಯುತ್ತಿದ್ದು, ಸುಮಾರು 3700 ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮತ್ತಷ್ಟು ಶೈಕ್ಷಣಿಕ ಪ್ರಗತಿ ಹೊಂದಬೇಕಾದರೆ ಪೋಷಕರ ಸಹಕಾರ ಅಗತ್ಯವಾಗಿದ್ದು, ನಿಮ್ಮ ಮಕ್ಕಳು, ನಿಮ್ಮ ಮನೆಯಂತೆ ಇದನ್ನು ನಿಮ್ಮ ಕಾಲೇಜೆಂದು ಭಾವಿಸಿ ಅಭಿವೃದ್ಧಿಗೆ ನಾವು ಸದಾಸಿದ್ದರಾಗಿದ್ದೇವೆ ಎಂದಾದಾಗ ಮಾತ್ರ ಕಾಲೇಜು ಅಭಿವೃದ್ಧಿಯಾಗುತ್ತದೆ ಎಂದರು.

    ಈ ಸಂದರ್ಭದಲ್ಲಿ ಕಾಲೇಜಿನ ಕುಂದುಕೊರತೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜಿಗೆ ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ಪೋಷಕರ ಬಳಿ ಚರ್ಚಿಸಲಾಯಿತು.

LEAVE A REPLY

Please enter your comment!
Please enter your name here