ಪ್ರಚಲಿತ ವಿದ್ಯಾಮಾನ ಅರಿಯಲು ಅಧ್ಯಯನಶೀಲರಾಗಿ

0
27

 ದಾವಣಗೆರೆ :

      ಉಪನ್ಯಾಸಕರು ತಮಗೆ ಎಲ್ಲವೂ ಗೊತ್ತಿದೆ ಎಂಬ ಭ್ರಮೆಯನ್ನು ಬಿಟ್ಟು, ಪ್ರಚಲಿತ ವಿದ್ಯಾಮಾನವನ್ನು ಅರಿಯಲು ನಿರಂತರವಾಗಿ ಅಧ್ಯಯನಶೀಲರಾಗಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಕರೆ ನೀಡಿದರು.

      ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅರ್ಥಶಾಸ್ತ್ರ ಉಪನ್ಯಾಸಕರಿಗಾಗಿ ಏರ್ಪಡಿಸಿದ್ದ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಉಪನ್ಯಾಸಕರು ತಮಗೆ ಎಲ್ಲವೂ ಗೊತ್ತಿದೆ ಎಂಬ ಭ್ರಮೆಯಲ್ಲಿ ಇರಬಾರದು. ಏಕೆಂದರೆ, ಪ್ರತಿನಿತ್ಯವೂ ಜಗತ್ತಿನ ವಿದ್ಯಮಾನಗಳು ಬದಲಾಗುತ್ತಿರುತ್ತವೆ. ಇಂದು ತಿಳಿದುಕೊಳ್ಳುವ ವಿಷಯ ನಾಳೆ ಹಳತಾಗಿರುತ್ತದೆ. ಆದ್ದರಿಂದ ನಮಗೆ ಒಲ್ಲವೂ ಗೊತ್ತಿದೆ ಎಂಬ ಭ್ರಮೆಯಲ್ಲಿದ್ದು, ನಿತ್ಯವೂ ಓದದಿದ್ದರೆ, ಸ್ಥಗಿತಗೊಂಡು ನಿಂತ ನೀರಾಗುವ ಅಪಾಯವಿದೆ. ಹೀಗಾಗಿ ಉಪನ್ಯಾಸಕರು ನಿಂತ ನೀರಾಗದೆ, ನಿರಂತರ ಅಧ್ಯಯನಶೀಲರಾಗಬೇಕೆಂದು ಕಿವಿಮಾತು ಹೇಳಿದರು.

      ಕೆಲ ಉಪನ್ಯಾಸಕರು ಗಂಟೆಗಟ್ಟಲೇ ಮಾತನಾಡುತ್ತಾರೆ. ಆದರೆ, ಆ ಮಾತುಗಳಲ್ಲಿ ತಿಳಿದುಕೊಳ್ಳಬೇಕಾದ ಯಾವುದೇ ಮಹತ್ವದ ವಿಷಯಗಳಿರುವುದಿಲ್ಲ. ಅಂಥವರು ಏನನ್ನೂ ತಿಳಿದಿಲ್ಲ ಎಂಬುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕಲಿಸುವ ಮುನ್ನ ಉಪನ್ಯಾಸಕರು ವಿಷಯದ ಆಳ, ಅಗಲ ಅರಿತಿರಬೇಕು. ಈ ನಿಟ್ಟಿನಲ್ಲಿ ಉಪನ್ಯಾಸಕರನ್ನು ಸಜ್ಜುಗೊಳಿಸಲು ಇಂತಹ ತರಬೇತಿ ಕಾರ್ಯಕ್ರಮಗಳು ಅನುಕೂಲಕರವಾಗಿರಲಿವೆ ಎಂದರು.

      ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷೆ ಎ.ಪಿ.ಸುಜಾತ ಮಾತನಾಡಿ, ಉಪನ್ಯಾಸಕರು ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕು. ಅರ್ಥಶಾಸ್ತ್ರ ಸೇರಿದಂತೆ ಯಾವುದೇ ವಿಷಯ ಕಬ್ಬಿಣದ ಕಡಲೆ ಎಂಬ ವಿದ್ಯಾರ್ಥಿಗಳಲ್ಲಿರುವ ಮನೋಭಾವನೆಯನ್ನು ಹೋಗಲಾಡಿಸಬೇಕು ಎಂದರು.

      ಉಪನ್ಯಾಸಕರಾಗಿರುವ ನಾವು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಪಾಠ ಮಾಡಿದರೆ, ವಿದ್ಯಾರ್ಥಿಗಳಿಗೆ ಯಾವುದೇ ವಿಷಯದಲ್ಲಾದರೂ ಆಸಕ್ತಿ ಬರಲಿದೆ. ಇದಕ್ಕಾಗಿ ಉಪನ್ಯಾಸಕರು ನಿರಂತರ ಅಧ್ಯಯನದಲ್ಲಿ ತೊಡಗುವ ಜೊತೆಗೆ ಆಕರ್ಷಕ ಬೋಧನಾ ಶೈಲಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಹೆಚ್.ಕೆ.ಶೇಖರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ.ಸಂಗಮೇಶ್ವರ ಗೌಡ್ರು, ಪ್ರಾಚಾರ್ಯರ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ, ಎಸ್.ಜಿ.ಸಾವಿತ್ರಮ್ಮ, ಡಾ.ಕುಮಾರ್, ಬಿ.ನಾಗರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here