ಪ್ರಜ್ಜು ಮತ್ತು ಪಾರಿವಾಳ

 

      ಅಂದು ಭಾನುವಾರ. ಸ್ಕೂಲಿಗೆ ರಜೆಯಾದ್ದರಿಂದ ಪ್ರಜ್ಜು ಆಲಿಯಾಸ್ ಪ್ರಜ್ವಲ್ ಮನೆಯಲ್ಲೆ ಇದ್ದ. ಮಧ್ಯಾಹ್ನದ ಹೊತ್ತಿಗೆ ಅದೆಲ್ಲಿಂದಲೊ ಬಂದು ಮುಗಿಲ ತುಂಬ ಆವರಿಸಿಕೊಂಡ ಮೋಡಗಳು ಮಳೆ ಹನಿಯ ಉದುರಿಸತೊಡಗಿದವು. ಅವನ ಅಮ್ಮ ಭಾಗ್ಯಮ್ಮ ‘ಲೋ, ಪ್ರಜ್ಜು ಏನ್ ಮಾಡ್ತಿದ್ದೀಯೊ? ಮಹಡಿ ಮೇಲೆ ಒಣಗಿ ಹಾಕಿರುವ ಬಟ್ಟೆಗಳನ್ನ ಎತ್ಕೊಂಡು ಬಾರೋ’ ಎಂದು ಅಡಿಗೆ ಮನೆಯಿಂದ ಕೂಗಿದ್ದಕ್ಕೆ ವರಾಂಡದಲ್ಲಿ ಕುಳಿತಿದ್ದ ಪ್ರಜ್ಜು ‘ಆಯ್ತಮ್ಮ ತರ್ತೀನಿ’ ಎಂದು ಮಹಡಿಗೆ ಹೋದ. ಬಿಸಿಲಿಗೆ ಒಣಗಿ ಹಾಕಿದ್ದ ಬಟ್ಟೆಗಳನ್ನು ಎತ್ತಿಕೊಂಡು ಕೆಳಗಿಳಿಯುವಾಗ ಹಿಂದಿನ ಮನೆಯ ರವಿ ಆಚೆ ಇದ್ದಾನೆಯೇ ಎಂದು ಅತ್ತ ನೋಡಿದ. ಅವನ ಗೆಳೆಯ ರವಿ ಹೊರಗೆ ಕಾಣಲಿಲ್ಲ. ಆದರೆ ಆ ಮನೆಯ ಮೇಲೆ ಎರಡು ಪಾರಿವಾಳಗಳು ಕುಳಿತಿರುವುದನ್ನು ಗಮನಿಸಿದ. ಮನೆ ಒಳಗೆ ಬಂದವನೆ ಸೋಫಾದ ಮೇಲೆ ಬಟ್ಟೆಗಳನ್ನಿಟ್ಟು, ರೂಮಿಗೆ ಹೋಗಿ ಕಿಟಕಿ ಬಳಿ ಕುಳಿತು ಪಾರಿವಾಳಗಳು ಅಲ್ಲೇ ಇರುವುದನ್ನ ನೋಡುತ್ತಿದ್ದ. ಅಷ್ಟೊತ್ತಿಗೆ ಮಳೆಯೂ ಜೋರಾಯಿತು. ಆಗ ಅವನ ತಾಯಿ ‘ಸುಮ್ಮನೆ ಕೂತು ಏನ್ ಮಾಡ್ತಿದ್ದೀಯಾ? ಮುಂದಿನ ವಾರದಿಂದ ಎಕ್ಸಾಂ ಇದೆ ಗೊತ್ತಿಲ್ವ, ಓದೋ’ ಎಂದು ರೇಗಿದ್ದಕ್ಕೆ ನೋಟ್ಸ್ ತೆರೆದು ಸುಮ್ಮನೆ ಕೈಯಲ್ಲಿ ಹಿಡಿದು ಕುಳಿತ.

      ಮಳೆ ನಿಂತ ಮೇಲೆ ಮಲಗಿದ್ದ ತನ್ನ ತಾಯಿಗೆ ಗೊತ್ತಾಗದಂತೆ ಮೆಲ್ಲಗೆ ಮನೆಯಿಂದ ಆಚೆ ಬಂದವನೆ ರವಿಯ ಮನೆಯ ಮೇಲೆ ಕುಳಿತು ಮಳೆಗೆ ಪೂರ್ತಿ ತೊಯ್ದು ಬಿಟ್ಟಿದ್ದ ಪಾರಿವಾಳಗಳನ್ನ ನೋಡಿದ. ಆಗಲೂ ರವಿ ಮನೆಯವರು ಯಾರೂ ಇದ್ದಂತೆ ಕಾಣಲಿಲ್ಲ. ಏನೇನೋ ಸಾಹಸ ಮಾಡಿ ಹೇಗೋ ಪಾರಿವಾಳಗಳನ್ನ ಹಿಡಿದು ತನ್ನ ಮನೆಯ ಮಹಡಿ ಮೇಲೆ ತಂದ. ನೀರಿನ ಟ್ಯಾಂಕಿನ ಕೆಳಗೆ ಬಿದ್ದಿದ್ದ ಮಂಕರಿಯನ್ನ ಅವುಗಳ ಮೇಲೆ ಹಾರಿ ಹೋಗದಂತೆ ಮುಚ್ಚಿದ. ಅವನ ಹಿಂದೆಯೇ ಬಂದು ಸ್ವಲ್ಪ ದೂರದಲ್ಲಿ ನಿಂತು ಇದನ್ನೆಲ್ಲ ನೋಡುತ್ತಿದ್ದ ಪ್ರಜ್ಜುವಿಗಿಂತ ಎರಡು ವರ್ಷ ಚಿಕ್ಕವನಾದ ಅವನ ತಮ್ಮ ಪ್ರವೀಣ್ ‘ಏನೋ ಅದು? ಅಮ್ಮನಿಗೆ ಹೇಳ್ತೀನಿ ಇರು’ ಎಂದು ಜೋರಾಗಿ ಬಾಯಿ ಬಿಟ್ಟಿದ್ದಕ್ಕೆ ಅವನ ಬಾಯನ್ನ ತನ್ನ ಕೈಯಿಂದ ಮುಚ್ಚಿ ಮೆಲುದನಿಯಲ್ಲಿ ‘ಅವು ಪಾರಿವಾಳ ಕಣೋ, ಅಮ್ಮನಿಗೆ ಹೇಳಬೇಡ. ನಿನಗೆ ಈಗ ಐಸ್ ಕ್ರೀಂ ತಂದು ಕೊಡ್ತೀನಿ ಆಯ್ತಾ’ ಎಂದು ಸುಮ್ಮನಿರಿಸಿದ.

      ಅಮ್ಮನಿಗೆ ಗೊತ್ತಾಗದಂತೆ ಅಡಿಗೆ ಮನೆಯಿಂದ ಸ್ವಲ್ಪ ಅಕ್ಕಿ ತುಂಬಿಕೊಂಡು ತಂದು ಪಾರಿವಾಳಗಳಿಗೆ ಹಾಕಿದ. ಬೆದರಿದ್ದ ಅವು ಒಂದು ಕಾಳನ್ನೂ ತಿನ್ನಲಿಲ್ಲ. ಬೇರೆ ಏನು ಹಾಕಿದರೆ ಇವು ತಿನ್ನಬಹುದೆಂದು ಯೋಚಿಸಿದ. ಪಕ್ಷಿಗಳಿಗೆ ಮೀನು ಇಷ್ಟವಿರಬೇಕೆಂದು ಯೋಚಿಸಿ ಮೀನು ಹಿಡಿದು ತರಲು ಹೊರಟ. ಪ್ರವೀಣನಿಗೆ ಮತ್ತೊಮ್ಮೆ ‘ಇಲ್ಲಿ ಪಾರಿವಾಳ ಇರೋದನ್ನ ಅಮ್ಮ – ಅಪ್ಪನಿಗೆ ಹೇಳಬೇಡ, ಈಗ ಅಂಗಡಿಯಿಂದ ನಿನಗೆ ಐಸ್ ಕ್ರೀಂ ತರ್ತೀನಿ’ ಎಂದು ಸುಳ್ಳು ಹೇಳಿ ಮನೆಯಿಂದ ಹೊರ ಬಂದ.Related image

      ನೀರು ಹರಿಯದೆ ಹೂಳು ತುಂಬಿರುವ ಕಾಲುವೆ. ಕಾಲುವೆಯ ಆ ಕಡೆಯ ಪಶ್ಚಿಮ ಭಾಗದ ಗದ್ದೆ ಬಯಲಿನಲ್ಲಿ ಆಗಲೇ ಒಬ್ಬರು ಭೂ ಪರಿವರ್ತನೆ ಮಾಡಿ ಬೇಸಾಯದ ಭೂಮಿ ಬಡಾವಣೆಯಾಗಲು ನಾಂದಿ ಹಾಕಿದ್ದಾರೆ. ಇನ್ನು ಕಾಲುವೆಯ ಈ ಕಡೆಯ ಅಂದರೆ ಪೂರ್ವ ಭಾಗದ ಹೊಲವಿದ್ದ ಜಾಗ ಇಪ್ಪತ್ತು ವರ್ಷಗಳ ಹಿಂದೆಯೇ ಬಡಾವಣೆಯಾಗಿ ಅಲ್ಲೆಲ್ಲ ಆಗಲೆ ಮನೆಗಳು ಎದ್ದು ನಿಂತಿವೆ. ಆ ಬಡಾವಣೆಯಲ್ಲೆ ಈಗ ಪ್ರಜ್ಜುವಿನ ಮನೆಯೂ ಇರುವುದು. ಹತ್ತು – ಹದಿನೈದು ವರ್ಷಗಳ ಹಿಂದೆ ಇದೇ ಕಾಲುವೆಯಲ್ಲಿ ಯಾವಾಗಲು ಕೆರೆಯ ನೀರು ಹರಿಯುತ್ತಿತ್ತು. ಪಕ್ಕದ ಜಮೀನುಗಳಲ್ಲಿ ಸಿಗುತ್ತಿದ್ದ ಭತ್ತ, ರಾಗಿ, ಜೋಳದ ಕಾಳು ಮತ್ತು ಹುಳುಗಳನ್ನು ತಿನ್ನಲು ಬರುತ್ತಿದ್ದ ಗೀಜುಗನ ಹಕ್ಕಿಗಳು ಕಾಲುವೆಯ ಏರಿ ಮೇಲೆ ಬೆಳೆದಿದ್ದ ಮರಗಳ ಕೊಂಬೆಗಳಲ್ಲಿ ಕಟ್ಟಿದ್ದ ಗೂಡುಗಳು ಸಾಲುಸಾಲಾಗಿ ನೇತಾಡುತ್ತಿದ್ದವು. ಈಗ ಅದೆಲ್ಲ ನೆನಪಷ್ಟೆ. ಮೊದಲಿನಂತೆ ಈಗ ಕೆರೆಯೂ ತುಂಬುವುದಿಲ್ಲ, ಕಾಲುವೆಯಲ್ಲಿ ನೀರೂ ಹರಿಯುವುದಿಲ್ಲ.

      ಆಗಿನಿಂದ ಎಷ್ಟೋ ದೂರ ಕಾಲುವೆ ಏರಿ ಮೇಲೆ ನಡೆದೂ ನಡೆದು ಪ್ರಜ್ಜುವಿನ ಹನ್ನೊಂದು ವರ್ಷ ವಯಸ್ಸಿನ ಪಾದಗಳು ದಣಿದವಷ್ಟೆ. ಕಾಲುವೆಯಲ್ಲಿ ಅಲ್ಲಲ್ಲಿ ಗುಂಡಿಗಳಾಗಿ ಅದರಲ್ಲಿ ಮೇಲಿನ ಮನೆಗಳಿಂದ ಬಂದ ಕೊಳಚೆ ನೀರು ನಿಂತಿತ್ತೇ ಹೊರತು ಮೀನುಗಳಾಗಲಿ, ಶುದ್ಧ ನೀರಾಗಲಿ ಎಲ್ಲೂ ಕಾಣಲಿಲ್ಲ. ಮರಳಿ ಮನೆಗೆ ಹೋಗಲು ಕಾಲುವೆಯ ಏರಿ ಮೇಲೆ ಆದಷ್ಟು ಬೇಗ ಬೇಗ ಹೆಜ್ಜೆಗಳನ್ನ ಮುಂದಕ್ಕೆ ಹಾಕುತ್ತಿದ್ದವನು ಬಲಕ್ಕೆ ತಿರುಗಿ ಟಾರು ರಸ್ತೆಯ ಮೇಲೆ ಸೀದಾ ನಡೆದು ಬಸ್ ಡಿಪೋದ ಎದುರು ಇರುವ ಮೀನಿನ ಅಂಗಡಿಗಳತ್ತ ಬಂದ. ಅಲ್ಲಿ ಅಂಗಡಿಗಳ ಮುಂದೆ ಬಿಸಾಡಿದ್ದ ಸಣ್ಣ ಮೀನಿನ ಮರಿಗಳನ್ನ ಒಂದು ಕವರಿನಲ್ಲಿ ಹಾಕಿಕೊಂಡು ಮನೆಯಿಂದ ಬಂದು ತುಂಬಾ ಸಮಯವಾಯಿತೆಂದು ಬೇಗ ಬೇಗ ಮನೆಯ ಕಡೆ ಓಡಿ ಬಂದ. 

      ಮೆಟ್ಟಿಲ ಕೆಳಗೆ ಮೀನಿನ ಕವರನ್ನಿಟ್ಟು ಒಳ ಬರುತ್ತಿದ್ದವನನ್ನು ಬಾಗಿಲಿನಲ್ಲೆ ಕಾಯುತ್ತಿದ್ದ ಪ್ರವೀಣ ‘ಐಸ್ ಕ್ರೀಂ ಎಲ್ಲಿ?’ ಎಂದು ಕೇಳಿದ. ಐಸ್ ಕ್ರೀಂ ತರುವೆನೆಂದು ಸುಳ್ಳು ಹೇಳಿದ್ದ ಪ್ರಜ್ಜು ‘ಅಂಗಡಿ ಬಾಗಿಲು ಹಾಕಿತ್ತು, ನಾಳೆ ಕೊಡುಸ್ತೀನಿ’ ಎಂದು ಮತ್ತೊಂದು ಸುಳ್ಳು ಹೇಳಿ ಮನೆಯ ಒಳಗೆ ಬಂದ. ಅವನ ಹಿಂದೆಯೇ ಐಸ್ ಕ್ರೀಂ ತರದ ಅಣ್ಣನ ಮೇಲೆ ಕೋಪದಿಂದ ಕುದಿಯುತ್ತ ಪ್ರವೀಣನೂ ಒಳಬಂದ.

      ಟಿವಿ ನೋಡುತ್ತ ಕುಳಿತಿದ್ದ ಪ್ರಜ್ಜು ಮತ್ತು ಪ್ರವೀಣನ ತಂದೆ ಗುಂಡುರಾವ್ ಹೆಂಡತಿಗೆ ‘ಭಾಗ್ಯ ಎಲ್ಲಿದ್ದೀಯೇ? ನಿನ್ನ ಮಗ ಬಂದ ನೋಡು, ಓದೋದು ಬಿಟ್ಟು ಎಲ್ಲಿಗೆ ಹೋಗಿದ್ದ ಇಷ್ಟು ಹೊತ್ತು ಅಂತ ಕೇಳು’ ಎಂದು ಕರೆದರು. ಅಪ್ಪನ ಮುಖವನ್ನೆ ಪೆಚ್ಚುಮೋರೆ ಹಾಕಿ ನೋಡುತ್ತ ನಿಂತಿದ್ದ ಅವನಿಗೆ ಹಿಂದಿನಿಂದ ಬಂದು ಅವನ ಅಮ್ಮ ಬೆನ್ನಿನ ಮೇಲೆ ಫಟೀರನೆ ಏಟು ಕೊಟ್ಟಾಗ ‘ಅಮ್ಮಾ’ ಎಂದು ಅಳಲಾರಂಭಿದ. ‘ಹಾಕು ಇನ್ನೊಂದು ನಾಲ್ಕು, ಓದ್ಕೊಂಡು ತೆಪ್ಪಗೆ ಮನೇಲಿ ಬಿದ್ದಿರೋದು ಬಿಟ್ಟು ಬೀದಿ ಸುತ್ತಲು ಹೋಗ್ತಾನೆ’ ಎಂದು ಗುಂಡುರಾವ್ ರೇಗಿದರು.

      ಗಂಡನ ಸಮಾಧಾನಕ್ಕಾಗಿ ಭಾಗ್ಯಮ್ಮ ಇನ್ನೂ ಎರಡು ಏಟು ಕೊಟ್ಟರು. ‘ಇಲ್ಲಮ್ಮ, ಬೀದಿ ಸುತ್ತಲು ಹೋಗಿರಲಿಲ್ಲ’ ಎಂದು ಸುಳ್ಳು ಹೇಳಿದ. ‘ಮತ್ತೆಲ್ಲಿ ಹಾಳಾಗಿ ಹೋಗಿದ್ದೆ ಬೊಗಳು’ ಎಂದು ಮಗನ ತೊಡೆ ಹಿಂಡಿದರು ಭಾಗ್ಯಮ್ಮ. ‘ಫ್ರೆಂಡ್ ಮನೇಲಿ ನೋಟ್ಸ್ ತರೋಕೆ ಹೋಗಿದ್ದೆ’ ಎಂದು ಮತ್ತೊಂದು ಸುಳ್ಳು ಹೇಳಿಬಿಟ್ಟ. ಅಷ್ಟು ಹೊತ್ತು ಸುಮ್ಮನೆ ಇದನ್ನೆಲ್ಲ ನೋಡುತ್ತ ನಿಂತಿದ್ದ ಪ್ರವೀಣ ಓಡಿ ಹೋಗಿ ಮೀನಿನ ಕವರ್ ತಂದು ತೋರಿಸುತ್ತ ‘ಇಲ್ಲಮ್ಮ, ಸುಳ್ಳು ಹೇಳ್ತಿದ್ದಾನೆ. ನೋಡಿಲ್ಲಿ ಮೀನು ತರಲು ಹೋಗಿದ್ದ, ಟ್ಯಾಂಕ್ ಕೆಳಗೆ ಪಾರಿವಾಳ ಮುಚ್ಚಿಟ್ಟವ್ನೆ’ ಎಂದು ಎಲ್ಲವನ್ನೂ ಹೇಳಿಬಿಟ್ಟ.

      ಆವರೆಗೆ ಕುಳಿತಿದ್ದ ಗುಂಡುರಾವ್ ಎದ್ದು ಬಂದು ‘ಓದೋದು ಬಿಟ್ಟು ಪಾರಿವಾಳ ಹಿಡಿಯೋದು, ಬೀದಿ ಸುತ್ತೋದು, ಕೇಳಿದ್ರೆ ಸುಳ್ಳು ಬೊಗಳೋದು’ ಎಂದು ಅವರೂ ಎರಡು ಏಟು ಕೊಟ್ಟರು. ಅಳುತ್ತಿದ್ದ ಅವನ ಕಿವಿ ಹಿಂಡುತ್ತ ‘ಪಾರಿವಾಳವನ್ನ ಮನೇಲಿ ಸಾಕ್ತಾರೇನೋ? ಅವು ಒಂಟಿ ಕಾಲಲ್ಲಿ ನಿಂತು ತಪಸ್ಸು ಮಾಡಿದ್ರೆ ಮನೆಗೆ ಅಪಶಕುನ ಅಂತಾರೆ. ಅವನ್ನ ಮೊದಲು ಬಿಟ್ಟು ಬಿಡು’ ಎಂದು ಭಾಗ್ಯಮ್ಮ ಗದರಿದರು. ಕೆಳಗೆ ಬಿದ್ದಿದ್ದ ಮೀನಿನ ಕವರ್ ಎತ್ತಿಕೊಂಡ ಗುಂಡುರಾವ್ ‘ನೋಡೇ ಇಲ್ಲಿ, ಇಷ್ಟು ಸಣ್ಣ ಮರಿಗಳನ್ನ ಹಿಡಿದು ಹಿಂಸಿಸಿ ಸಾಯಿಸಿ ತಂದಿದ್ದಾನೆ ಪಾಪಿ’ ಎಂದು ದನಿ ಸೇರಿಸಿ ಗಡಿಯಾರ ನೋಡಿದರು. ಮಹಡಿ ಹತ್ತುತ್ತಿದ್ದ ಪ್ರಜ್ಜುನನ್ನು ಕರೆದು ‘ಅವನ್ನ ಆಮೇಲೆ ಬಿಡುವೆಯಂತೆ, ಮೊದಲು ಬಸ್ ಸ್ಟ್ಯಾಂಡಿಗೆ ಹೋಗಿ ನಿಂಗನನ್ನ ಕರೆದುಕೊಂಡು ಬಾ, ಹೋಗು’ ಎಂದು ಗುಂಡುರಾವ್ ಕಳುಹಿಸಿದರು.

      ಎರಡು ತಿಂಗಳ ಹಿಂದೆ ಒಂದು ಬೆಳಿಗ್ಗೆ ಮನೆ ಬಾಗಿಲಲ್ಲಿ ಬಿದ್ದಿದ್ದ ಪೇಪರನ್ನು ಬಗ್ಗಿ ಎತ್ತಿಕೊಳ್ಳುವಾಗ ಇದ್ದಕ್ಕಿದ್ದಂತೆ ಪುಟ್ಟನ ತಾತ ಸಂಜೀವಯ್ಯನವರು ಕುಸಿದು ಬಿದ್ದಿದ್ದರು. ಹಾಸ್ಪಿಟಲ್ ಗೆ ತೋರಿಸಿ ಎಕ್ಸ್ ರೇ, ಸ್ಕ್ಯಾನಿಂಗ್ ಮಾಡಿಸಿದ ನಂತರ ಅದು ಸ್ಟ್ರೋಕ್ ಎಂದು ಗೊತ್ತಾಯಿತು. ಅವರ ಬಾಯಿ ಸೊಟ್ಟಗಾಗಿ ಒಂದು ಕಾಲು ಸ್ವಾದೀನ ತಪ್ಪಿತ್ತು. ಟ್ರೀಟ್‍ಮೆಂಟ್ ಸಹ ಮುಂದುವರೆದಿರುವಾಗಲೆ ಯಾರೋ ನಾಟಿ ಔಷಧಿಯನ್ನ ಸೂಚಿಸಿದ್ದರು. ಗುಂಡುರಾವ್ ರವರ ಊರಿನಿಂದ ನಿಂಗನೆಂಬ ಆಳು ಏನೋ ಔಷಧಿ ತೆಗೆದುಕೊಂಡು ಬಂದಿದ್ದನು. ಅವನನ್ನ ಮನೆಗೆ ಕರೆದುಕೊಂಡು ಬಾ ಎಂದೇ ಪ್ರಜ್ಜುವಿನ ತಂದೆ ಹೇಳಿದ್ದು.

      ರಾತ್ರಿ ಊಟವಾದ ನಂತರ ಗುಂಡುರಾವ್ ಮತ್ತು ಭಾಗ್ಯಮ್ಮ ನಿಂಗನೊಡನೆ ಊರಿನ ಸಮಾಚಾರ ವಿಚಾರಿಸುತ್ತಿದ್ದರು. ಮಾತಿನ ಮಧ್ಯೆ ನಿಂಗ ‘ಅಣ್ಣಾ, ಪಾರಿವಾಳದ ರಕ್ತನ ಕಾಲಿಗೆ ತಿಕ್ಕಿ ಮಾಂಸ ತಿಂದ್ರೆ ಲಕ್ವ ಬೇಗ ವಾಸಿ ಆಯ್ತದಂತೆ’ ಎಂದ. ‘ಓ!ಹೌದಾ? ಮಧ್ಯಾಹ್ನವಷ್ಟೆ ನಮ್ಮ ಪ್ರಜ್ಜು ಎರಡು ಪಾರಿವಾಳ ಹಿಡಿದವ್ನೆ’ ಅಂದರು. ‘ಆದರೆ ಅದನ್ನ ತಿನ್ನೋಕೆ, ರಕ್ತ ಹಚ್ಕೊಳೋಕೆ ಮಾವ ಒಪ್ಪುವರೊ ಇಲ್ಲವೊ?’ ಎಂದು ಭಾಗ್ಯಮ್ಮ ಅನುಮಾನಗೊಂಡರು. ಒಳಗೆ ಮಲಗಿದ್ದ ಸಂಜೀವಯ್ಯ- ನವರನ್ನು ಈ ಕುರಿತು ಕೇಳಿದಾಗ ಬತ್ತಿದ್ದ ಕಣ್ಣುಗಳನ್ನು ಅಗಲಿಸಿ ಸುಕ್ಕುಗಟ್ಟಿದ್ದ ಮುಖವನ್ನ ಅರಳಿಸಿ ‘ಪಾರಿವಾಳ ತಿಂತೀನಿ, ರಕ್ತ ಹಚ್ಕೊತೀನಿ….. ಕೊಡಿ, ಕೊಡಿ’ ಎಂದು ಸೊಟ್ಟ ಬಾಯಲ್ಲಿ ಮೆಲುದನಿಯಲ್ಲಿ ಹೇಳಿದರು. ಅದನ್ನ ಹೇಗೆ ಕೊಡಬೇಕೋ ನೀನೆ ಕೊಡು ಎಂದು ಗುಂಡುರಾವ್ ನಿಂಗನಿಗೆ ಹೇಳಿದಾಗ ‘ಆಯ್ತಣ್ಣ, ಬೆಳಿಗ್ಗೆ
ಪಾರಿವಾಳಗಳನ್ನ ಸಾಯ್ಸಿ ಔಸ್ಧಿ ಮಾಡಿ ಕೊಡ್ತೀನಿ’ ಎಂದ.

      ಪ್ರಜ್ಜುವಿಗೆ ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಬರಲಿಲ್ಲ. ಪ್ರಾಣಿ-ಪಕ್ಷಿಗಳಿಗೆ ಹಿಂಸೆ ಮಾಡಬಾರದು ಅಂತ ಸಂಜೆ ರೇಗಿದ್ದ ಅಪ್ಪ, ಅಮ್ಮ ….. ಅವುಗಳನ್ನ ತಿನ್ನಲು ಹಾತೊರೆದ ತನ್ನ ಅಜ್ಜ ….. ಬೆಳಿಗ್ಗೆ ಅವುಗಳನ್ನ ಸಾಯಿಸಲು ರೆಡಿಯಿರುವ ನಿಂಗ….. ಕೊನೆಗೆ ಪಾರಿವಾಳದ ವಿಷಯವನ್ನ ಮನೆಯಲ್ಲಿ ಹೇಳಿದ ತನ್ನ ತಮ್ಮ…. ಎಲ್ಲರ ಬಗ್ಗೆಯೂ ಕೋಪಗೊಂಡು ಒಳಗೊಳಗೇ ಶಪಿಸಿಕೊಂಡ. ತಾನು ಪಾರಿವಾಳ ಸಾಕಲು ಮನೆಯಲ್ಲಿ ಏನೆಲ್ಲ ಅಡ್ಡಿ ಎಂದು ಹತಾಶನಾದ.

      ಬೆಳಿಗ್ಗೆ ಎದ್ದವನೆ ಪ್ರವೀಣನ ಜೊತೆ ಮಹಡಿ ಮೇಲೆ ಬಂದ. ಪಾರಿವಾಳಗಳನ್ನ ತೋರಿಸುತ್ತ ‘ಈಗ ಇವನ್ನ ನಿಂಗ ಸಾಯಿಸಿ ಬಿಡ್ತಾನೆ ಕಣೋ, ನಂಗೆ ಅಳು ಬರ್ತಾ ಇದೆ. ಅವು ಸತ್ತರೆ ನಿಂಗೆ ಅಳು ಬರಲ್ವ?’ ಎಂದು ಪ್ರವೀಣನಿಗೆ ಕೇಳಿದ. ಅವನು ‘ನಂಗೂ ಅಳು ಬರ್ತದೆ’ ಎಂದ. ‘ಇವನ್ನ ಸಾಯೋಕೆ ಬಿಡಬಾರ್ದು ಕಣೋ’ ಎನ್ನುತ್ತ ಪ್ರಜ್ಜು ಮಂಕರಿಯನ್ನ ತೆಗೆದುಬಿಟ್ಟ. ಬಾನಿನಿಂದ ಯಾರದೋ ಕರೆ ಬಂದಿದೆ ಎಂಬಂತೆ ಪಾರಿವಾಳಗಳು ಪುರ್ರೆಂದು ಮೇಲಕ್ಕೆ ಹಾರಿಹೋದವು. ತನ್ನ ಅಣ್ಣ ಹೀಗೇಕೆ ಮಾಡಿದನೆಂದು ಸೋಜಿಗದಿಂದ ಪ್ರವೀಣ ಪಿಳಿಪಿಳಿ ಕಣ್ಣು ಬಿಡುತ್ತ ಹಾರಿ ಹೋಗುತ್ತಿರುವ ಪಾರಿವಾಳಗಳನ್ನ ನೋಡತೊಡಗಿದ. ಪಾರಿವಾಳ ಸಾಕಲಾಗದ ಸಂಕಟ, ಪಾರಿವಾಳ ಬಿಟ್ಟ ವಿಷಯ ಅಪ್ಪ-ಅಮ್ಮನಿಗೆ ಗೊತ್ತಾದರೆ ಎಂಬ ಭಯ, ಪಾರಿವಾಳಗಳ ಪ್ರಾಣ ಉಳಿಸಿದ ಸಂತೋಷ …… ಎಲ್ಲವು ಒಟ್ಟೊಟ್ಟಿಗೆ ಉಂಟಾಗಿ, ತನ್ನಿಂದ ದೂರ-ದೂರಕ್ಕೆ ಹಾರಿ ಹೋಗುತ್ತಿರುವ ಪಾರಿವಾಳಗಳನ್ನ ನೋಡುತ್ತ ನಿಂತ ಪ್ರಜ್ಜುವಿನ ಕಣ್ಣುಗಳಲ್ಲಿ ಕಣ್ಣೀರ ಹನಿಗಳು ತುಂಬತೊಡಗಿತ್ತು.

– ವಿನಯ್ ಕುಮಾರ್ ಕೆ.ಆರ್

Recent Articles

spot_img

Related Stories

Share via
Copy link
Powered by Social Snap