ಪ್ರತ್ಯೇಕ ರಾಜ್ಯಕ್ಕೆ ಕೈ ಜೋಡಿಸಿದ ಸ್ಥಳೀಯ ವಕೀಲರು

0
37

ಬ್ಯಾಡಗಿ:

      ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಕೈ ಜೋಡಿಸಿದ ಸ್ಥಳೀಯ ವಕೀಲರ ಸಂಘವು ಗುರುವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಬೆಂಬಲ ವ್ಯಕ್ತಪಡಿಸಿತು.
ವಕೀಲರ ಭವನದ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಸಂಘದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರಲ್ಲದೇ ಪ್ರತ್ಯೇಕ ರಾಜ್ಯದ ಅನಿವಾರ್ಯತೆ ಕುರಿತು ಮಾತನಾಡಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಉತ್ತರ ಕರ್ನಾಟಕಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿಗಳಾದ ಎಸ್.ಸಿ.ಶಿಡೇನೂರ, ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿದ್ದೇ ಉತ್ತರ ಕರ್ನಾಟಕದ ಜನತೆ ಅದರಲ್ಲೂ ಜಿಲ್ಲೆಯ ಹೊಸರಿತ್ತಿಯ ದೀನಬಂಧು ಹಳ್ಳಿಕೇರಿ ಅವರ ಕಾರ್ಯ ಮೆಚ್ಚುವಂತಹದ್ದು ಆದರೆ ರಾಜ್ಯ ರಚನೆಯಾದ ಬಳಿಕ ಅವರ ಹೆಸರು ಎಲ್ಲಿಯೂ ಕೇಳದಂತೆ ನೋಡಿಕೊಂಡಿದ್ದೇ ಅಂದಿನ ಮೈಸೂರು ಕರ್ನಾಟಕದ ಜನರ ಸಾಧನೆಯಾಗಿದೆ ಹೀಗಾಗಿ ಉತ್ತರ ಕರ್ನಾಟಕದ ಜನತೆಗೆ ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ ಎಂದರು.

     ದಾವಣೆಗೆರೆ ರಾಜಧಾನಿ ಎಂದ ನಿಜಲಿಂಗಪ್ಪ ಅವರ ಗತಿ ಏನಾಯಿತು..?: ಹಿರಿಯ ನ್ಯಾಯವಾದಿಗಳಾದ ವಿ.ಎಸ್.ಕಡಗಿ ಮಾತನಾಡಿ, ಗಣತಂತ್ರ ರಾಜ್ಯ ಘೋಷಣೆಯಾದ ಬಳಿಕ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪಟ್ಟಕ್ಕೇರಲು ಎಸ್.ನಿಜಲಿಂಗಪ್ಪ ಹೆಸರು ಅಂತಿಮವಾಗಿತ್ತು ಆದರೆ ಪ್ರಾದೇಶಿಕ ಅಸಮತೋಲನೆ ಆಗಬಾರದೆಂದು ದಾವಣೆಗೆರೆ ನಗರವನ್ನು ರಾಜಧಾನಿಯನ್ನಾಗಿ ಮಾಡಬೇಕೆಂದ ಅವರನ್ನು ಮೈಸೂರಿಗರೆಲ್ಲರೂ ಸೇರಿ ಮೂಲೆಗುಂಪು ಮಾಡಿದರು ಎಂದರು.
ಧೂಳು ತಿನ್ನುತ್ತಿದೆ ನಂಜುಂಡಪ್ಪ ವರದಿ: ಹಿರಿಯ ನ್ಯಾಯವಾದಿಗಳಾದ ಎಫ್.ಎಂ.ಮುಳಗುಂದ ಮಾತನಾಡಿ, ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಯೋಜನಾ ಆಯೋಗದ ಮುಖ್ಯಸ್ಥ ಡಿ.ಎಂ.ನಂಜುಂಡಪ್ಪ ಅವರಿಂದ ಸರ್ವೇ ಮಾಡಿಸಿ ವರದಿಯನ್ನು ತರಿಸಿಕೊಳ್ಳಲಾಯಿತು, ಪ್ರತಿವರ್ಷ 2500 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆಯೂ ಮತ್ತು ಪ್ರತಿ 3 ವರ್ಷಗಳಿಗೊಮ್ಮೆ ಅನುದಾನ ದುಪ್ಪಟ್ಟು ಮಾಡುವಂತೆಯೂ ವರದಿಯಲ್ಲಿ ತಿಳಿಸಲಾಗಿದ್ದರೂ ಸಹ ಒಂದೆರಡು ಸರ್ಕಾರಗಳು ಅನುದಾನ ನೀಡಿದ್ದನ್ನು ಬಿಟ್ಟರೆ ಮತ್ಯಾರೂ ಹಣ ನೀಡಲಿಲ್ಲ ಇದರಿಂದ ವರದಿ ಧೂಳು ತಿನ್ನುತ್ತಿದೆ ಎಂದರು.
ಕೆಂಪೇಗೌಡರ ಸಾಧನೆ ಕುರಿತು ಚರ್ಚೆಯಾಗಲಿ: ಹಿರಿಯ ನ್ಯಾಯವಾದಿಗಳಾದ ಪಿ.ಆರ್.ಮಠದ ಮಾತನಾಡಿ, ಎಲ್ಲದಕ್ಕೂ ಕೆಂಪೇಗೌಡರ ಹೆಸರನ್ನಿಡುತ್ತಿರುವ ನಿಮ್ಮಿಂದ ಅಥವಾ ಕೆಂಪೇಗೌಡರಿಂದ ರಾಜ್ಯಕ್ಕಾದ ಲಾಭವೇನು ಕೆಂಪೇಗೌಡರ ಕೊಡುಗೆ ಏನು..? ಇದು ಸಾರ್ವಜನಿಕವಾಗಿ ಚರ್ಚೆಯಾಗಬೇಕಾಗಿದೆ, ಉಚಿತವಾಗಿ ಅನ್ನ, ನೀರು, ಶಿಕ್ಷಣ ಕೊಟ್ಟ ಶಿರಸಂಗಿ ಲಿಂಗರಾಜ ದೇಸಾಯಿ (ಕೆಎಲ್‍ಈ ಸಂಸ್ಥೆ) ಸೇರಿದಂತೆ ತರಳಬಾಳು, ಎಸ್‍ಜೆಎಂ, ಶಿಕ್ಷಣ ಸಂಸ್ಥೆಗಳಿಗೆ ನಿಮ್ಮ ಕೊಡುಗೆ ಏನು..? ಹೀಗಾಗಿ ಪ್ರತ್ಯೇಕ ರಾಜ್ಯ ಅನಿವಾರ್ಯತೆ ಉದ್ಭವಾಗಿದೆ ಎಂದರು.

‘   ಕಾವೇರಿ ಜೀವನದಿಯಲ್ಲ’: ಹಿರಿಯ ನ್ಯಾಯವಾದಿಗಳಾದ ಬಿ.ಎಸ್.ಚೂರಿ ಮಾತನಾಡಿ, ಕೃಷ್ಣ ‘ಬಿ’ ಸ್ಕೀಮ್ ಇಂದಿಗೂ ಹಣ ನೀಡಲಿಲ್ಲ ಹೀಗಾಗಿ ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳು ನೀರಾವರಿ ಯೋಜನೆಯಿಂದ ವಂಚಿತವಾಗಿವೆ, ಮಹದಾಯಿ ನೀರು ಕೇಳಿದ ರೈತರಿಗೆ ಬೆತ್ತದ ರುಚಿ ತೋರಿದ ಸರ್ಕಾರ ಅಸ್ತಿತ್ವವನ್ನೇ ಕಳೆದುಕೊಂಡಿತು, ಈಗ್ಗೆ 25 ವರ್ಷಗಳ ಹಿಂದೆಯೇ ಪ್ರತ್ಯೇಕ ರಾಜ್ಯದ ಹೋರಾಟ ಕೂಗು ಆರಂಭವಾಗಬೇಕಾಗಿತ್ತು ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದೇವೆ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

    ಕಾವೇರಿ ಜೀವನದಿ ಅಲ್ಲ: ಹಿರಿಯ ನ್ಯಾಯವಾದಿಗಳಾದ ಆರ್.ವಿ.ಬೆಳಕೇರಿಮಠ ಮಾತನಾಡಿ, ರಾಜ್ಯದ ಕೇವಲ 3 ಜಿಲ್ಲೆಗಳಿಗೆ ಅನುಕೂಲ ಕಲ್ಪಿಸಿರುವ ಕಾವೇರಿ ಎಂದಿಗೂ ರಾಜ್ಯದ ಜೀವನದಿಯಾಗಲು ಸಾಧ್ಯವಿಲ್ಲ, ಅದಕ್ಕೂ ಸಂಚಕಾರ ತರುವ ಬೆಂಗಳೂರಿಗರು ತಮಿಳ ಜನಾಂಗದ ಮತಗಳನ್ನು ಓಲೈಸಲು ರಾತ್ರೋರಾತ್ರಿ ನೀರು ಬಿಡುವಂತಹ ಧೀರ ಪುರುಷರು ನೀವಾಗಿದ್ದೀರಿ 3 ಜಿಲ್ಲೆಗಳಲ್ಲಿ ಹರಿಯುವ ನೀರು ಜೀವನದಿಯಾಗಲು ಸಾಧ್ಯವೇ..? ಎಂದು ಪ್ರಶ್ನಿಸಿದರು.
ಘ್ನಾನಪೀಠ ನಾವೇ ಮುಂದು: ಹಿರಿಯ ನ್ಯಾಯವಾದಿಗಳಾದ ಪ್ರಭು ಶೀಗಿಹಳ್ಳಿ ಮಾತನಾಡಿ, ರಾಜ್ಯಕ್ಕೆ ದಕ್ಕಿರುವ ಎಂಟೂ ಘ್ನಾನಪೀಠ ಪ್ರಶಸ್ತಿಗಳಲ್ಲಿ ವಿ.ಕೃ.ಗೋಕಾಕ, ಕಾರಂತ, ಬೇಂದ್ರೆ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ ಸೇರಿದಂತೆ 5 ಪ್ರಶಸ್ತಿಗಳು ಉತ್ತರ ಕರ್ನಾಟಕದ ಸಾಹಿತಿಗಳಿಗೆ ಲಭಿಸಿವೆ, ಕನ್ನಡ ಭಾಷೆಗೆ ಮೈಸೂರು ಬೆಂಗಳೂರಿಗರ ಕೊಡುಗೆ ಏನು..? ಮುಂಬೈ ಕರ್ನಾಟಕ ಹೈದ್ರಾಬಾದ್ ಕರ್ನಾಟಕ ಎಂದು ವಿಭಜನೆ ಮಾಡುವ ಮೂಲಕ ನಮ್ಮನ್ನು ಒಡೆದಾಳುವ ನೀತಿ ವಿರುದ್ದ ನಮ್ಮ ಹೋರಾಟ ನಡೆಯಲಿದೆ ಎಂದರು.

    ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಎಸ್.ತಟ್ಟಿ, ಕಾರ್ಯದರ್ಶಿ ಎಚ್.ಎಸ್.ಜಾಧವ, ಮಾಜಿ ಅಧ್ಯಕ್ಷ ಎ.ಎಂ.ಮುಲ್ಲಾ, ಎಂ.ಸಿ.ಯರಗಲ್ಲ, ಎನ್.ಎಂ.ಹುಬ್ಬಳ್ಳಿ, ರಾಜು ಶಿಡೇನೂರ, ಎನ್.ಎಂ.ವೀರನಗೌಡ್ರ, ಪಿ.ಬಿ.ಶಿಂಗಿ, ಚಿನಿವಾಲ, ಎಂ.ಎಂ.ವೀರನಗೌಡ್ರ, ಭಾರತಿ ಕುಲಕರ್ಣಿ. ಮಾಲತೇಶ ಹಾವೇರಿ, ಶಂಕರ ಬಾರ್ಕಿ, ಟಿ.ಎಸ್.ಹಡಗಲಿ, ಯಶೋಧರ ಅರ್ಕಾಚಾರಿ, ಎಸ್.ಎಸ್.ಕಾರಗಿ, ಎಂ.ಎಂ.ಮುಲ್ಲಾ, ಬಟ್ಟಲಕಟ್ಟಿ, ಎಂ.ಎಂ.ಕುಡಪಲಿ, ಎಸ್.ಕೆ.ಹೊಸ್ಮನಿ, ಎಂ.ಕೆ.ಪಟ್ಟಣಶೆಟ್ಟ, ಹುಣಶೀಮರದ, ಮುಚ್ಚಟ್ಟಿ, ಎಂ.ಸಿ.ಮುಳಗುಂದ, ಬಿ.ಎಸ್.ಹಿರೇಮಠ, ದೇವರಾಜ ಬುಡ್ಡನಗೌಡ್ರ, ಎಸ್.ಎಸ್.ಬಸನಗೌಡ್ರ, ರಾಜು ಎಲಿ, ಬಣಕಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here