ಪ್ರಸ್ತುತ ಮೌಲ್ಯಯುತ ಶಿಕ್ಷಣ ಕಣ್ಮರೆ: ಕಳವಳ

0
22

 ದಾವಣಗೆರೆ:

      ಪ್ರಸ್ತುತ ಶಿಕ್ಷಣ ವ್ಯವಸ್ಥೆ ಅಂಕಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ಮೌಲ್ಯಯುತ ಶಿಕ್ಷಣ ಕಣ್ಮರೆಯಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ನಿರಂಜನಮೂರ್ತಿ ಕಳವಳ ವ್ಯಕ್ತಪಡಿಸಿದರು.

      ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ವನಿತಾ ಶಿಕ್ಷಕಿಯರ ವೇದಿಕೆ ಹಾಗೂ ವನಿತಾ ಸಮಾಜ ಇವುಗಳ ಆಶ್ರಯದಲ್ಲಿ ಶುಕ್ರವಾರ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮೌಲ್ಯ ಶಿಕ್ಷಣ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ನಮ್ಮ ಪೂರ್ವಜರ ಕಾಲದಲ್ಲಿನ ಗುರುಕುಲ ಪದ್ಧತಿಯ ಶಿಕ್ಷಣ ಮೌಲ್ಯಗಳನ್ನು ತುಂಬುತ್ತಿತ್ತು. ಆದರೆ, ಇಂದಿನ ಶಿಕ್ಷಣ ಅಂಕಗಳಿಕೆ ಹಾಗೂ ಪದವಿ ಪಡೆಯಲು ಮಾತ್ರ ಸೀಮಿತವಾಗಿದೆ. ಈಗಿನ ಶಿಕ್ಷಣದಿಂದ ಪದವೀಧರರಾಗಿ ಹೊರ ಹೊಮ್ಮಲು ಮಾತ್ರ ಸಾಧ್ಯವಾಗುತ್ತಿದೆ. ಆದರೆ, ಹಿಂದಿನ ಗುರುಕುಲ ಶಿಕ್ಷಣ ಪರಿಪೂರ್ಣ ಶಿಕ್ಷಣ ನೀಡುತ್ತಿದ್ದವು ಎಂದರು.

      ಹಿಂದೆ ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಹೇಳಿಕೊಡಲಾಗುತ್ತಿತ್ತು. ಆದರೆ, ಇಂದಿನ ಶಿಕ್ಷಣ ಕೇವಲ ಜ್ಞಾನಕ್ಕೆ ಸೀಮಿತವಾಗಿದೆ. ಹೀಗಾಗಿ ಸಮಾಜ ಅಧಃಪತನದತ್ತ ಸಾಗುತ್ತಿದೆ. ಹೀಗಾಗಿ ಶಿಕ್ಷಕರು ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಭವ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸಬೇಕೆಂದು ಕರೆ ನೀಡಿದರು.

      ಶಿಕ್ಷಣದಿಂದ ಮಾತ್ರ ಪರಿವರ್ತನೆ ಎಂಬುದನ್ನು ಅರಿತು ಹಿಂದೆ ಗುರುಕುಲಗಳಿಗೆ ಸೀಮಿತವಾಗಿದ್ದ ಶಿಕ್ಷಣವನ್ನು ಇಂದು ಸಾರ್ವತ್ರಿಕರಣಗೊಳಿಸಿ, ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ. ಈಗ ಎಲ್ಲರಿಗೂ ಶಿಕ್ಷಣ ಕೊಡಲು ಸರ್ಕಾರ ಮುಂದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಿಕ್ಷಣವೇ ನಿಜವಾದ ಆಸ್ತಿಯಾಗಿದ್ದು, ಅದನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಬಿ.ಆರ್.ಶಾಂತಕುಮಾರಿ, ಚೇತನಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here