ಫಲಾನುಭವಿಗಳಿಗೆ ವಿಳಂಬ ಮಾಡದೆ ಸರಕಾರದ ಸವಲತ್ತು ತಲುಪಿಸಿ

0
28

ತುಮಕೂರು:
   ರೈತರು ಮತ್ತು ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಕೃಷಿ, ತೋಟಗಾರಿಕೆ, ಪಶುಪಾಲನೆ, ಶಿಕ್ಷಣ ಇಲಾಖೆಯಂತಹ ಮಹತ್ವದ ಇಲಾಖೆಗಳು ಸರಕಾರದ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ವಿಳಂಬ ಮಾಡದಂತೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

      ನಗರದ ತಾ.ಪಂ.ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಶಾಸಕರ ನೇತೃತ್ವದ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ರೈತರು ಸಾರ್ವಜನಿಕರು ತಮ್ಮ ಕೆಲಸ, ಕಾರ್ಯ ಬಿಟ್ಟು, ಸರಕಾರಿ ಕಚೇರಿಗಳಿಗೆ ಅಲೆಯದಂತೆ ಎಚ್ಚರಿಕೆ ವಹಿಸಬೇಕು. ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಸವಲತ್ತುಗಳು ಆರ್ಹ ಫಲಾನುಭವಿಗಳಿಗೆ ತಲುಪವಂತೆ ಕಾರ್ಯಪ್ರವೃತ್ತರಾಗ ಬೇಕೆಂದರು.

ದುರುಪಯೋಗ ತಡೆಯಲು ಸೂಚನೆ:
      ಈ ಹಿಂದಿನ ಸಾಲುಗಳಲ್ಲಿ ಪಶು ಸಂಗೋಪನಾ ಇಲಾಖೆಯ ವತಿಯಿಂದ ಸರಕಾರದ ಪಶುಭಾಗ್ಯ ಯೋಜನೆಯಡಿ ಹೈನುಗಾರಿರರಿಗೆ ನೀಡಿರುವ ಹಸುಗಳು, ನೆಲಮಂಗಲ, ದಾಬಸ್‍ಪೇಟೆಯಲ್ಲಿರುವ ಎಂಬ ದೂರು ಕೇಳಿ ಬಂದಿದೆ. ಇದುವರೆಗೂ ಆಗಿರುವ ಲೋಪದೋಷಗಳಿಗೆ ತಲೆ ಕಡೆಸಿಕೊಳ್ಳುವುದಿಲ್ಲ. ಆದರೆ ಇನ್ನು ಮುಂದೆ ಈಗಾಗಬಾರದು. ಆರ್ಹ ಫಲಾನುಭವಿಗೆ ಮಾತ್ರ ಸರಕಾರದ ಯೋಜನೆಯ ಫಲ ದೊರೆಯಬೇಕು. ಈ ಬಗ್ಗೆ ಆಗಿಂದಾಗ್ಗೆ ಪರಿಶೀಲನೆ ಕೂಡ ನಡೆಯಬೇಕೆಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಸಂಜೀವರಾಯ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಹಣದ ಬಗ್ಗೆ ಚಿಂತೆ ಬೇಡ:
      ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಅಗತ್ಯವಿರುವ ಕಡೆ ಕೊಳವೆ ಬಾವಿ ಕೊರೆದು ನೀರು ಕೊಡಿ, ಹಣಕ್ಕೆ ಚಿಂತೆ ಮಾಡಬೇಡಿ, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ, ಅನುದಾನ ತರುವ ಹೊಣೆಗಾರಿಕೆ ನನ್ನದು ಎಂದ ಶಾಸಕರು, ಯಾವುದೇ ಕಾರಣಕ್ಕೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ಎಚ್ಚರಿಕೆ ವಹಿಸಿ ಎಂದು ತಾಕೀತು ಮಾಡಿದರು.

ವಾಡಿಕೆಗಿಂತ ಹೆಚ್ಚು ಮಳೆ:
      ತುಮಕೂರು ತಾಲ್ಲೂಕಿನಲ್ಲಿ ಪ್ರಸ್ತುತ ಮಾಹೆಯವರೆಗೆ ವಾಡಿಕೆಗಿಂತ ಶೇ40ರಷ್ಟು ಹೆಚ್ಚು ಮಳೆಯಾಗಿದೆ. ಈಗಾಗಲೇ ರಾಗಿ ಇನ್ನಿತರ ಬೆಳೆಗಳ ಬಿತ್ತನೆ ಕಾರ್ಯ ನಡೆದಿದೆ. ಹೆಬ್ಬೂರು, ಗೂಳೂರು ಮತ್ತು ಮರಳೂರು ದಿಣ್ಣೆಯಲ್ಲಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳನ್ನು ನಿರ್ಮಿಸಲು ಹಣ ಮಂಜೂರಾಗಿದ್ದು, ಭೂಮಿ ಗುರುತಿಸಿಕೊಟ್ಟರೆ ಅನುಕೂಲವಾಗಲಿದೆ ಎಂದು ಎಡಿಎ ಚಂದ್ರಕಾಂತ್ ಸಭÉಯ ಗಮನಕ್ಕೆ ತಂದರು.

ಎಸ್.ಎಸ್.ಎಲ್.ಸಿ.ತಾಲ್ಲೂಕಿನಲ್ಲಿ ಶೇ15ರಷ್ಟು ಹೆಚ್ಚು ಫಲಿತಾಂಶ:

     ತುಮಕೂರು ತಾಲ್ಲೂಕಿನಲ್ಲಿ ಈ ಹಿಂದಿನ ಸಾಲಿಗೆ ಹೊಲಿಕೆ ಮಾಡಿದರೆ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ15ರಷ್ಟು ಹೆಚ್ಚು ಫಲಿತಾಂಶ ಬಂದಿದೆ. ಉರ್ದು ಶಾಲೆಗಳು ಹಾಗೂ ಹಿಂದಿ ಭಾಷಾ ಪುಸ್ತಕವನ್ನು ಹೊರತು ಪಡಿಸಿ ಉಳಿದ ಎಲ್ಲಾ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ. ತಾಲ್ಲೂಕಿನಲ್ಲಿರುವ ಸುಮಾರು 328 ಶಾಲೆಗಳಿಗೆ ಶಾಲೆಯ ಜಾಗವನ್ನು ಖಾತೆ ಮಾಡಿಕೊಡುವ ಸಂಬಂಧ ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು.
.

LEAVE A REPLY

Please enter your comment!
Please enter your name here