ಬರದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಹೆಚ್ಚಿನ ಅನುದಾನಕ್ಕಾಗಿ ಒತ್ತಾಯ

0
14

ಕೊರಟಗೆರೆ:

      ರಾಜ್ಯದ ಬಹುತೇಕ ಜಿಲ್ಲೆಗಳು ಸತತ 20 ವರ್ಷಗಳಿಂದ ಬರಗಾಲ ಛಾಯೆಗೆ ಸಿಲುಕಿ ನಲುಗಿ ಹೋಗಿವೆ. ಅದೇ ಮಾದರಿಯಲ್ಲಿ ಈ ಬಾರಿಯೂ 13 ಜಿಲ್ಲೆಗಳಲ್ಲಿ ಹಿಂಗಾರು ಹಾಗೂ ಮುಂಗಾರು ಮಳೆ ಕೈ ಕೊಟ್ಟು ರೈತರು ಬಿತ್ತನೆ ಮಾಡಿದ ಬೆಳೆ ಪೂರ್ಣಪ್ರಮಾಣದಲ್ಲಿ ನಾಶವಾಗಿರುವ ಹಿನ್ನೆಲೆಯಲ್ಲಿ ರೈತರ ಆಶ್ರಯಕ್ಕಾಗಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 16 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸುತ್ತಿರುವುದಾಗಿ ಕೃಷಿ ಸಚಿವ ಶಿವಶಂಕರರೆಡ್ಡಿ ತಿಳಿಸಿದರು.

      ಶನಿವಾರ ಸಚಿವ ಸಂಪುಟದ ಉಪ ಸಮಿತಿಯ ತಂಡ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಪಂ ವ್ಯಾಪ್ತಿಯ ಗಟ್ಲಹಳ್ಳಿ ಗ್ರಾಮದ ಸಮೀಪ ಉದ್ಯೋಗಖಾತ್ರಿ ಯೋಜನೆಯಡಿ 3 ಲಕ್ಷರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಗೋಕಟ್ಟೆಯನ್ನು ವೀಕ್ಷಿಸಿ, ಪತ್ರಿಕೆಯೊಂದಿಗೆ ಮಾತನಾಡುತ್ತಾ, ಹಿಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟ ಕಾರಣ ರೈತ ಬರಗಾಲದಿಂದ ಬಳಲುತ್ತಿದ್ದು, ರೈತನ ಆಶ್ರಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅನುದಾನ ಬಿಡುಗಡೆಗೆ ಮನವಿ ಮಾಡಿರುವುದಾಗಿ ತಿಳಿಸಿದರು.

      ರಾಜ್ಯದಲ್ಲಿ ತ್ವರಿತವಾಗಿ ಬರ ನಿರ್ವಹಣೆ ಮಾಡಲು ಕೇಂದ್ರ ಸರಕಾರ ಎನ್‍ಡಿಆರ್‍ಪಿ ಯೋಜನೆಯಡಿ 2434 ಕೋಟಿ ರೂ. ಮೊದಲ ಹಂತದಲ್ಲಿ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ತುಮಕೂರು ಸಂಸದರು ಸಹ ಕೇಂದ್ರಕ್ಕೆ ಈಗಾಗಲೇ ರಾಜ್ಯದ ರೈತರ ಪರಿಸ್ಥಿತಿಯ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸಿದ್ದಾರೆ. ರಾಜ್ಯದ ರೈತರ ರಕ್ಷಣೆ ಮತ್ತು ಉಳಿವಿವಾಗಿ ಕೇಂದ್ರ ಸರಕಾರ ರಾಜ್ಯಕ್ಕೆ ಹೆಚ್ಚಿನ ಬರ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದರು.

      ಬೆಂಗಳೂರು ವಿಭಾಗದ 9 ಜಿಲ್ಲೆಗಳಿಗೆ ಪ್ರವಾಸ ಮಾಡಿ ಬರ ಅಧ್ಯಯನ ನಡೆಸಲು ರಾಜ್ಯ ಸರಕಾರ ಸೂಚನೆ ನೀಡಿದೆ. ಬರ ಪರಿಹಾರ ಕಾಮಗಾರಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ನೀರಿನ ಶೇಖರಣೆಗೆ ಗೋಕಟ್ಟೆ, ಉದ್ಯೋಗಖಾತ್ರಿ ಯೋಜನೆ ಸೇರಿದಂತೆ ಪ್ರತಿ ತಾಲ್ಲೂಕಿನಲ್ಲಿ ಬರ ಪರಿಹಾರ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯ ವೀಕ್ಷಣೆ ಮಾಡಿ ರಾಜ್ಯ ಸರಕಾರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದರು.

      ಕೊರಟಗೆರೆ ಕ್ಷೇತ್ರದ ಭೈರೇನಹಳ್ಳಿ ಗ್ರಾಮದ ಸಮೀಪ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆ, ಚನ್ನಸಾಗರ ಗ್ರಾಮದ ಜಾನುವಾರು ಕುಡಿಯುವ ನೀರಿನ ತೊಟ್ಟಿ ಮತ್ತು ಮೇವಿನ ಕಿರು ಪೊಟ್ಟಣ ತಾಕುಗಳ ವೀಕ್ಷಣೆ ಮತ್ತು ಗಟ್ಟಹಳ್ಳಿ ಬಳಿ ಉದ್ಯೋಗಖಾತ್ರಿ ಯೋಜನೆಯಿಂದ 3ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗಿರುವ ಗೋಕಟ್ಟೆಯನ್ನು ವೀಕ್ಷಣೆ ಮಾಡಿದರು. ನಂತರ ಜಾನುವಾರುಗಳಿಗೆ ಬೇಕಾದ ಮೇವು ಮತ್ತು ನೀರಿನ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಿದರು.

      ಸಂಸದ ಮುದ್ದಹನುಮೆಗೌಡ ಮಾತನಾಡಿ, ಬರ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಮನವಿ ಮಾಡಲಾದ 16 ಸಾವಿರ ಕೋಟಿರೂ. ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಅತಿ ಶೀಘ್ರವಾಗಿ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಶ್ರಮ ಹಾಕುವುದಾಗಿ ತಿಳಿಸಿದ ಸಂಸದರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಮೂಲಭೂತವಾಗಿ ರೈತರಿಗೆ ಅವಶ್ಯಕವಾಗಿ ಬೇಕಿರುವ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಸಾರ್ವಜನಿಕರು ಗುಳೆ ಹೋಗದ ರೀತಿಯಲ್ಲಿ ನರೇಗಾ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಹಾಗೂ ಬರಗಾಲದ ತೀವ್ರತೆಯನ್ನು ಅರಿತು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುವುದರ ಬಗ್ಗೆ ಹೆಚ್ಚು ಜವಾಬ್ದಾರಿ ವಹಿಸಬೇಕು ಎಂದರು.

ಗಣಿಗಾರಿಕೆ ವಿರುದ್ದ ಆಕ್ರೋಶ:

      ಸಾರ್ವಜನಿಕರು ಬರ ನಿರ್ವಹಣಾ ತಂಡದ ಮುಂದೆ ಅಳಲು ತೋಡಿಕೊಂಡ ಪರಿಣಾಮ ಕಲ್ಲುಗಣಿಗಾರಿಕೆಯ ಶಬ್ದ ಮತ್ತು ದೂಳಿನಿಂದ ಗ್ರಾಮಸ್ಥರಿಗೆ ಮತ್ತು ಜಾನುವಾರುಗಳಿಗೆ ಸಮಸ್ಯೆ ಆಗಿರುವ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ತುಮಕೂರು ಜಿಲ್ಲಾಧಿಕಾರಿಗೆ ಕೃಷಿ ಸಚಿವ ಶಿವಶಂಕರರೆಡ್ಡಿ ಸೂಚನೆ ನೀಡಿದರು. ಕೊರಟಗೆರೆ ಕ್ಷೇತ್ರದ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಸಂಬಂಧ ರಾಜ್ಯದ ಡಿಸಿಎಂ ಮತ್ತು ಕೊರಟಗೆರೆ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ಜೊತೆ ಚರ್ಚಿಸುತ್ತೇವೆ ಎಂದು ರೈತರಿಗೆ ಕೃಷಿ ಸಚಿವ ಆಶ್ವಾಸನೆ ನೀಡಿದರು.

      ಸಣ್ಣಕೈಗಾರಿಕೆ ಸಚಿವ ಶ್ರೀನಿವಾಸ್, ಕಾರ್ಮಿಕ ಸಚಿವ ವೆಂಕಟರವಣಪ್ಪ, ಸಂಸದ ಮುದ್ದಹನುಮೆಗೌಡ, ಎಂಎಲ್‍ಸಿ ಬೆಮೆಲ್ ಕಾಂತರಾಜು, ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಡಾ.ಶೋಭಾಭರಾಣಿ, ಜಿಪಂ ಸಿಇಓ ಅನಿಸ್ ಕಣ್ಮಯಿಜಾಯ್, ಕೃಷಿ ಜಂಟಿ ನಿರ್ದೇಶಕ ಜೆ.ಸ್ವಾಮಿ, ಮಧುಗಿರಿ ಎಸಿ ವೆಂಕಟೇಶಯ್ಯ, ತಹಸೀಲ್ದಾರ್ ನಾಗರಾಜು, ಇಓ ಶಿವಪ್ರಕಾಶ್, ಕೃಷಿ ಅಧಿಕಾರಿ ನಾಗರಾಜು, ನೂರುಆಜಾಂ ಸೇರಿದಂತೆ ಇತರರು ಇದ್ದರು.

 ಕೆರೆಗಳಿಗೆ ನೀರು ಹರಿಸಲು ಒತ್ತಾಯ:

      ಕೊರಟಗೆರೆ ಕ್ಷೇತ್ರದ 170 ಕೆರೆಗಳಿಗೆ ಹೇಮಾವತಿ ನೀರು ಇನ್ನೂ ಮರೀಚಿಕೆ ಆಗಿದೆ. ಕಳೆದ ಆರು ವರ್ಷದಿಂದ ಮುಂಗಾರು ಮಳೆ ಕೈಕೊಟ್ಟು ಬರಗಾಲ ಆವರಿಸಿ ರೈತರ ಕೋಟ್ಯಾಂತರ ಮೌಲ್ಯ ಕೃಷಿ ಬೆಳೆಗಳು ನಾಶವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಈಗಾಗಲೇ ಹಾಹಾಕಾರ ಉಂಟಾಗಿದೆ. ನಮಗೆ ಬರದ ಹಣಕ್ಕಿಂತ ಮುಖ್ಯವಾಗಿ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಕೆಲಸ ಮಾಡಿ ಎಂದು ರೈತರು ಕೃಷಿ ಸಚಿವರಿಗೆ ಒತ್ತಾಯ ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here