ಬಾಕಿ ವೇತನಕ್ಕಾಗಿ ಡಿ ಗ್ರೂಪ್ ಸಿಬ್ಬಂದಿಗಳ ಒತ್ತಾಯ

0
25

 ದಾವಣಗೆರೆ:

      ಸರ್ಕಾರಿ ವಸತಿ ನಿಲಯಗಳಲ್ಲಿ ಹಾಗೂ ವಸತಿಯುತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಗ್ರೂಪ್ ಸಿಬ್ಬಂದಿಗಳ ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ(ಎಐಯುಟಿಯುಸಿ ಸಂಯೋಜಿತ)ದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

      ನಗರದ ಹೊರ ವಲಯದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಜಮಾಯಿಸಿದ ವಸತಿ ನಿಲಯಗಳ ಹಾಗೂ ವಸತಿಯುತ ಶಾಲೆಗಳ ಅಡುಗೆಯವರು, ಅಡುಗೆ ಸಹಾಯಕರು ಹಾಗೂ ಸ್ವಚ್ಛತ ಸಿಬ್ಬಂದಿಗಳು, ತಮ್ಮನ್ನು ದುಡಿಸಿಕೊಂಡು ಹಲವು ತಿಂಗಳಿದ ವೇತನ ಪಾವತಿಸದ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆಯುತ್ತಿರುವ ವಸತಿ ನಿಲಯ ಹಾಗೂ ವಸತಿಯುತ ವಸತಿ ಶಾಲೆಗಳಲ್ಲಿ ಅಡುಗೆಯವರಾಗಿ, ಅಡುಗೆ ಸಹಾಯಕರಾಗಿ ಹಾಗೂ ಸ್ವಚ್ಛತಾ ಸಿಬ್ಬಂದಿಗಳಾಗಿ ಕೆಲಸ ನಿರ್ವಹಿಸುತ್ತಿರುವ ಡಿ ಗ್ರೂಪ್ ನೌಕರರಿಗೆ ಕಳೆದ ಹಲವು ತಿಂಗಳುಗಳಿಂದ ವೇತನ ಪಾವತಿಸಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇಲ್ಲಸಲ್ಲದ ಸಬೂಬು ಹೇಳುತ್ತಾರೆ. ಹೀಗೆ ವೇತನ ನೀಡದಿದ್ದರೆ, ಈ ವೃತ್ತಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕೆಳ ಮಟ್ಟದ ನೌಕರರು ಈ ದುಬಾರಿ ಯುಗದಲ್ಲಿ ಹೇಗೆ ಜೀವನ ನಡೆಸಬೇಕೆಂದು ಪ್ರಶ್ನಿಸಿದರು.

      ಕನಿಷ್ಟ ವೇತನ ಕಾಯ್ದೆಯ 2014-15, 2015-16, 2016-17ನೇ ಸಾಲಿನ ವ್ಯತ್ಯಾಸದ ತುಟ್ಟಿಭತ್ಯೆಯನ್ನು ಸಮಾಜ ಕಲ್ಯಾಣ ಮತ್ತು ವಸತಿ ಶಾಲೆಗಳಿಗೆ ಮತ್ತು ಬಿಸಿಎಂ ಜಗಳೂರು ತಾಲೂಕಿನಲ್ಲಿ ಇಂದಿಗೂ ನೀಡಿಲ್ಲ. ಎಲ್ಲಾ ಕಾರ್ಮಿಕರಿಗೆ ತುಟ್ಟಿಭತ್ಯೆಯನ್ನು ನೀಡುವ ಕೆಲಸವಾಗಬೇಕು ಹಾಗೂ ಬಾಕಿ ಇರುವ ವೇತವನ್ನು ತಕ್ಷಣವೇ ಪಾವತಿಸಬೇಕು. ಈ ಸಿಬ್ಬಂದಿಗಳಿಗೆ ವಾರದ ರಜೆ, ತಿಂಗಳ ರಜೆ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

      ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು. ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ತಪ್ಪದೇ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು. ಗ್ಲೋಬಲ್ ಮ್ಯಾನ್ ಪವರ್ ಏಜೆನ್ಸಿ ದಾವಣಗೆರೆ ಮತ್ತು ಪ್ರೈವೇಟ್ ಬ್ಯೂರೋ ಶಿವಮೊಗ್ಗದವರು ಗುತ್ತಿಗೆದಾರರಾಗಿದ್ದು, ಇಪಿಎಫ್ ತುಂಬುವಲ್ಲಿ ಅಕ್ರಮ ಎಸಗಿದ್ದಾರೆ. ಎರಡೂ ಸಂಸ್ಥೆಗಳ ವಿರುದ್ಧ ಹಣ ದುರುಪಯೋಗದಡಿ ಕೇಸ್ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಮಂಜುನಾಥ ರೆಡ್ಡಿ, ಕಾರ್ಯದರ್ಶಿ ಸ್ವಾಮಿ ನಿಂಗಪ್ಪ, ಶಿವಯೋಗಪ್ಪ, ಜಯಪ್ಪ, ಮಂಜುಳಮ್ಮ, ಹರಿಹರ ಈಶ್ವರ, ಹೊನ್ನಾಳಿ ರಂಗಮ್ಮ, ಹರಪನಹಳ್ಳಿ ಅಜ್ಜಪ್ಪ, ರಮೇಶ, ಜಗಳೂರು ಮಹೇಶ, ಶಾಂತಕುಮಾರ, ಈಶ್ವರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here