ಬಿಜೆಪಿಯಿಂದ ಜನಮತ ವಿರೋಧಿ ಕರಾಳ ದಿನಾಚರಣೆ

0
9

ದಾವಣಗೆರೆ:

ಚುನಾವಣೆಯಲ್ಲಿ ಮತದಾರರು ನೀಡಿರುವ ಜನಾದೇಶದ ವಿರುದ್ಧ, ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಅಪವಿತ್ರ ಮೈತ್ರಿಯ ಮೂಲಕ ಸರ್ಕಾರ ರಚಿಸಿವೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಜನಮತ ವಿರೋಧಿ ಕರಾಳ ದಿನಾಚರಣೆ ಆಚರಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರುಗಳಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಅವರುಗಳ ನೇತೃತ್ವದಲ್ಲಿ ಕಪ್ಪುಪಟ್ಟಿ ಧರಿಸಿ ಮೆರವಣಿಗೆ ಹೊರಟ ಕಾರ್ಯಕರ್ತರು ಜೆಡಿಎಸ್-ಕಾಂಗ್ರೆಸ್ ಸರ್ಕಾರಗಳ ಅಪವಿತ್ರ ಮೈತ್ರಿಯ ವಿರುದ್ಧ ಘೋಷಣೆ ಕೂಗುತ್ತಾ, ಗಾಂಧಿ ವೃತ್ತಕ್ಕೆ ತೆರಳಿ, ವೃತ್ತದಲ್ಲಿ ಕೆಲ ಹೊತ್ತು ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ, ಚುನಾವಣೆಯಲ್ಲಿ ನಾಡಿನ ಜನತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿದ್ದಾರೆ. ಆದರೂ ಅಧಿಕಾರದ ದಾಹದಿಂದ 78 ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್, 37 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಜೊತೆಗೆ ಸೇರಿಕೊಂಡು ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದು, ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿದ್ದ 16 ಜನ ಸಚಿವರು ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾಗಿರುವ ಜೆಡಿಎಸ್ ಪಕ್ಷಕ್ಕೆ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಬಿಜೆಪಿ ಪಕ್ಷವನ್ನು ಜನರು ಆಶೀರ್ವದಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಂತೆ ಮಾಡಿ ಜನಾದೇಶ ನೀಡಿದ್ದಾರೆ. ಆದರೂ ಕಾಂಗ್ರೆಸ್-ಜೆಡಿಎಸ್ ಹಿಂಬಾಗಿಲ ಮೂಲಕ ಜನಾದೇಶಕ್ಕೆ ವಿರುದ್ಧವಾಗಿ ಸರ್ಕಾರ ರಚಿಸುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ ಮಾತನಾಡಿ, ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಆಡಳಿತ ಚುಕ್ಕಾಣಿ ಹಿಡಿಯಲು ವಿಫಲರಾಗಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಆದರೆ, ಪಕ್ಷದ ಹಿತೈಷಿಗಳು ಯಾವುದೇ ಕಾರಣಕ್ಕೂ ಧೃತಿಗೆಡುವ ಅವಶ್ಯಕತೆ ಇಲ್ಲ. ಈ ಅಪವಿತ್ರ ಮೈತ್ರಿಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತಾನಾಗಿಯೇ ಪತನವಾಗಲಿದ್ದು, ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ದೊರೆತು, ಬಿ.ಎಸ್.ಯಡಿಯೂರಪ್ಪನವರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆಂದ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಜನಾದೇಶಕ್ಕೆ ವಿರುದ್ಧವಾಗಿ ಮೈತ್ರಿ ಮಾಡಿಕೊಂಡು, ಸಮ್ಮಿಶ್ರ ಸರ್ಕಾರ ರಚಿಸಿರುವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿವೆ. ಆಡಳಿತ ನಡೆಸಲು ಬಿಜೆಪಿಗೆ ಜನಾದೇಶ ನೀಡಿದ್ದರೂ, ಜನರಿಂದ ತಿರಸ್ಕಾರ ಗೊಂಡಿರುವ ¸ ಪಕ್ಷಗಳೆರೆಡು ಸೇರಿ ಅಧಿಕಾರ ಹಿಡಿಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನಮತ ವಿರೋಧಿ ಕರಾಳ ದಿನಾಚರಣೆಯಲ್ಲಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಿ.ಪಿ.ಹರೀಶ್, ಮುಖಂಡರಾದ ಪಿ.ಸಿ.ಶ್ರೀನಿವಾಸ, ಹೆಚ್.ಎನ್.ಶಿವಕುಮಾರ, ಎನ್.ರಾಜಶೇಖರ್, ಹೇಮಂತ್‍ಕುಮಾರ್, ಪಿ.ಎಸ್.ಜಯಣ್ಣ, ಹೆಚ್.ಸಿ.ಜಯಮ್ಮ, ಲೋಕಿಕೆರೆ ನಾಗರಾಜ, ಎಸ್.ಎಂ.ವೀರೇಶ ಹನಗವಾಡಿ, ಪ್ರಭು ಕಲ್ಬುರ್ಗಿ, ಬಿ.ಎಂ.ಸತೀಶ, ಟಿಂಕರ್ ಮಂಜಣ್ಣ, ಪಿಸಾಳೆ ಕೃಷ್ಣ, ಪ್ರವೀಣ್ ಜಾಧವ್, ಗೌತಮ್ ಜೈನ್, ಧನುಷ್‍ರೆಡ್ಡಿ, ಶಂಕರಗೌಡ ಬಿರಾದರ್, ಅಣಜಿ ಗುಡ್ಡೇಶ್, ಟಿಪ್ಪು, ಎಂ.ಮನು ಸೇರಿದಂತೆ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here