ಬ್ಯಾಂಕ್‍ಗೆ 7.50 ಕೋಟಿ ನಿವ್ವಳ ಲಾಭ

0
47

 ಹೊಸಪೇಟೆ :

      2017-18ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ರೂ.7.50 ಕೋಟಿ ನಿವ್ವಳ ಲಾಭ ಗಳಿಸಿದ್ದು, ಜೊತೆಗೆ ನಿವೃತ್ತ ನೌಕರರಿಗೆ ಪಿಂಚಣಿ ಪಡೆಯಲು 20ಲಕ್ಷ ಕ್ಷೇಮಾಭಿವೃದ್ದಿ ನಿಧಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಪಿ.ರವೀಂದ್ರ ತಿಳಿಸಿದರು.

      ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ಸಂಜೆ ಜರುಗಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 40 ವರ್ಷಗಳಿಂದ ನಿರಂತರವಾಗಿ ಬ್ಯಾಂಕ್ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಅದರಂತೆ ಈ ಬಾರಿಯೂ ಬ್ಯಾಂಕ್ 7.50 ಕೋಟಿ ಲಾಭ ಗಳಿಸಿದೆ. ಜೊತೆಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಕೃಷಿಗೆ ಶೇ.70ರಷ್ಟು ಹಾಗು ಕೃಷಿಯೇತರ ಚಟುವಟಿಕೆಗಳಿಗೆ ಶೇ.30ರಷ್ಟು ಸಾಲ ಸೌಲಭ್ಯ ನೀಡಲಾಗಿದೆ. ಎಲ್ಲಾ ವಸೂಲಾತಿಯೂ ಶೇ.87 ರಷ್ಟು ಆಗಿದೆ ಎಂದರು.

      ಕಳೆದ 3 ವರ್ಷಗಳಿಂದ ಬಂದ ಲಾಭದಲ್ಲಿ ನೌಕರರಿಗೆ 2 ತಿಂಗಳ ವೇತನದ ಬೋನಸ್ ನೀಡಿದಂತೆ ಈ ಬಾರಿಯೂ ನೀಡಲಾಗುತ್ತಿದೆ. ಜೊತೆಗೆ ನೌಕರರಿಗೂ ಕ್ಷೇಮಾಭಿವೃದ್ದಿ ನಿಧಿಯನ್ನು ತೆಗೆದಿರಿಸಲಾಗಿದೆ. ಬ್ಯಾಂಕ್‍ನಿಂದ 13 ಎಟಿಎಂ ಕೇಂದ್ರಗಳನ್ನು ತೆರೆಯಲಾಗಿದೆ. ಅದರಲ್ಲಿ 8 ಎಟಿಎಂಗಳನ್ನು ಹೊಸಪೇಟೆ, ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಖಾನಾ ಹೊಸಳ್ಳಿ ಸೇರಿದಂತೆ ವಿವಿದೆಡೆ ಉದ್ಘಾಟಿಸಲಾಗಿದೆ. ಉಳಿದ 5 ಕೇಂದ್ರಗಳನ್ನು ಹ.ಬೊ.ಹಳ್ಳಿ, ಕೂಡ್ಲಿಗಿ, ಹಡಗಲಿ, ಇಟಿಗಿ ಮತ್ತು ಸಂಡೂರಿನಲ್ಲಿ ಉದ್ಘಾಟಿಸಬೇಕಿದೆ ಎಂದರು.

      ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ರೂ.50 ಸಾವಿರ ಸಾಲಮನ್ನಾ ಹಣ ಜಿಲ್ಲೆಯ 66,448 ರೈತರಿಗೆ ತಲುಪಿ, ಒಟ್ಟು 292 ಕೋಟಿ ಹಣ ಸಂದಾಯವಾಗಿದೆ. ಸರ್ಕಾರದಿಂದ ಬ್ಯಾಂಕಿಗೆ 248 ಕೋಟಿ ಮುಟ್ಟಿದೆ.ಉಳಿದ ಹಣವನ್ನು ಸಿಎಂ ಕುಮಾರಸ್ವಾಮಿ ನೀಡಲು ಒಪ್ಪಿದ್ದಾರೆ. ಜಿಲ್ಲೆಯ ಚಿಕ್ಕ

      ಜೋಗಿಹಳ್ಳಿ,ಕುಡುತಿನಿ,ಹಂಪಸಾಗರ ಸೇರಿದಂತೆ ವಿವಿದೆಡೆ ಶಾಖೆಗಳನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸಹಕಾರ ಬ್ಯಾಂಕ್ ಜೊತೆಗೆ ಇನ್ನುಳಿದ ಶಾಖೆಗಳಲ್ಲಿ ಕಟ್ಟಡ ನವೀಕರಣ, ಗಣಕೀಕರಣ, ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಹಾಗು ರೈತರಿಗೆ 500 ಕೋಟಿ ಸಾಲ ನೀಡಲಾಗಿದೆ ಎಂದರು.

      ಈ ಸಂಧರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೋಳೂರು ಮಲ್ಲಿಕಾರ್ಜುನಗೌಡ, ಸಿಇಒ ಕುಬೇರಪ್ಪ, ನಿರ್ದೇಶಕರಾದ ಜೆ.ಎಂ.ವೃಷಬೇಂದ್ರಯ್ಯ, ಟಿ.ಎಂ.ಚಂದ್ರಶೇಖರಯ್ಯ, ಬಾತಿ ಚೌಡಪ್ಪ, ಬಿ.ಚಂದ್ರಶೇಖರ, ಕೆ.ಎಂ.ಗಂಗಾಧರ ಸೇರಿದಂತೆ ಇತರರು ಇದ್ದರು.

 ತುಕಾರಾಮ್‍ಗೆ ಸಚಿವ ಸ್ಥಾನ ಸಿಗಲಿ

      ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ ಬಳ್ಳಾರಿ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಮುಂದಿನ ದಿನಗಳಲ್ಲಿ 3 ಬಾರಿ ಗೆದ್ದಿರುವ ತುಕಾರಾಮ್‍ಗೆ ಸಿಗುವ ವಿಶ್ವಾಸವಿದೆ ಎಂದು ಮಾಜಿ ಶಾಸಕ ಎಂ.ಪಿ.ರವೀಂದ್ರ ಹೇಳಿದರು.

      ಹರಪನಹಳ್ಳಿಯಲ್ಲಿ ನಾನು ಸೋತಿರಬಹುದು. ಆದರೆ ನಾನು ಮಾಡಿದ ಅಭಿವೃದ್ದಿ ಕಾರ್ಯಗಳು ಜನ ಮರೆಯುವಂತಿಲ್ಲ. 60 ಕೆರೆಗಳಿಗೆ ನೀರು ತುಂಬಿಸಿದ್ದೇನೆ. 371ಜೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ಅನುಕೂಲವಾಗಬಹುದು ಎಂದರು.

      ಹೊಸಪೇಟೆ ಜಿಲ್ಲಾ ಕೇಂದ್ರವಾದರೂ ನನ್ನ ಅಭ್ಯಂತರವಿಲ್ಲ. ಎಲ್ಲಕ್ಕೂ ಮಧ್ಯದಲ್ಲಿರುವ ಹ.ಬೊ.ಹಳ್ಳಿ ಜಿಲ್ಲಾ ಕೇಂದ್ರವಾದರೂ ಸರಿ. ಒಟ್ಟು ಧೂಳುಮುಕ್ತ ಜಿಲ್ಲೆಯಾಗಬೇಕೆನ್ನುವುದೇ ನನ್ನ ಆಶಯ ಎಂದರು.

 

LEAVE A REPLY

Please enter your comment!
Please enter your name here