ಬ್ಯಾಡಗಿ: ತಾಲೂಕಿನ ಮತ್ತೂರ ಗ್ರಾಮದಲ್ಲಿ ಎನ್‍ಆರ್‍ಇಜಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯು ಜರುಗಿತು

0
35

ಬ್ಯಾಡಗಿ:

ಎನ್‍ಆರ್‍ಇಜಿ ಯೋಜನೆಯಡಿ ತೋಟಗಾರಿಕೆ ಇಲಾಖೆಯ ವತಿಯಿಂದ ಗ್ರಾಮ ಪಂಚಾಯತ ವಾಟರ್‍ಮನ್ ಹಾಗೂ ಅಡುಗೆ ಸಹಾಯಕರ ಹೆಸರಲ್ಲಿ ಅನುದಾನ ದುರ್ಬಳಕೆಯಾಗಿದ್ದು, ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆಯಲ್ಲಿ ವಸೂಲಾತಿಗೆ ಕ್ರಮ ವಹಿಸಿದ ಘಟನೆ ತಾಲೂಕಿನ ಮತ್ತೂರ ಗ್ರಾಮದಲ್ಲಿ ಜರುಗಿದೆ.

ಬುಧವಾರ ತಾಲೂಕಿನ ಮತ್ತೂರ ಗ್ರಾಮದ ಶ್ರೀ ಕರಿಯಮ್ಮದೇವಿ ದೇವಸ್ಥಾನದಲ್ಲಿ ಜರುಗಿದ ಕಳೆದ ಸಾಲಿನ ಎನ್‍ಆರ್‍ಇಜಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಅನುಷ್ಟಾನಗೊಂಡ ಬಾಳೆ ಹಾಗೂ ತೆಂಗು ತೋಟ ನಿರ್ಮಾಣ ಕಾಮಗಾರಿಯಲ್ಲಿ ಸರಕಾರಿ ಹಾಗೂ ಸರಕಾರೇತರವಾಗಿ ಕಾರ್ಯನಿರ್ವಹಿಸುತ್ತಲಿರುವ ಸಿಬ್ಬಂದಿಯ ಹೆಸರಿನಲ್ಲಿ 41 ಸಾವಿರ ರೂ.ಗಳನ್ನು ಅನಧೀಕೃತವಾಗಿ ವೆಚ್ಚ ತೋರಿಸಲಾಗಿದ್ದು, ಸದರಿ ಸಿಬ್ಬಂದಿಯ ಹೆಸರಿನಲ್ಲಿ ಎನ್‍ಆರ್‍ಇಜಿ ಯೋಜನೆಯಡಿಯಲ್ಲಿ ಅನುದಾನ ಬಳಕೆ ಮಾಡಲು ಅವಕಾಶವಿರುವುದಿಲ್ಲ, ಆದರೂ ಸಹ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಮಗೆ ಇಷ್ಟ ಬಂದವರ ಹೆಸರಿನಲ್ಲಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು, ಸಾಮಾಜಿಕ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಕಂಡು ಬಂದಿದೆ. ಸದರಿ ಮೊತ್ತವನ್ನು ವಸೂಲಾತಿ ಮಾಡುವಂತೆ ಗ್ರಾಮ ಸಭೆಯ ಮೂಲಕ ಕ್ರಮ ವಹಿಸಿದೆ ಎಂದು ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲೂಕಾ ಸಂಯೋಜಕ ಬಸವರಾಜ ಅಮಾತಿ ಸಭೆಯಲ್ಲಿ ತಿಳಿಸಿದರು.

ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಫಕ್ಕೀರೇಶ ಅಂಗಡಿ ಮಾತನಾಡಿ ಕಳೆದ 6 ತಿಂಗಳಲ್ಲಿ ಎನ್‍ಆರ್‍ಇಜಿ ಯೋಜನೆಯಡಿ 50 ಕಾಮಗಾರಿಗಳನ್ನು ಕೈಗೊಂಡಿದ್ದು ಅದಕ್ಕಾಗಿ 20.98 ಲಕ್ಷ ರೂ.ಗಳನ್ನು ವೆಚ್ಚಿಸಲಾಗಿದೆ. ಇನ್ನೂ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಶಿಕ್ಷಣ ಸಂಯೋಜಕ ಎಸ್.ಆರ್.ಶಿಡೇನೂರ ವಹಿಸಿದ್ದರು. ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ರೇಹನಾಭಾನು ನಧಾಪ, ಎನ್‍ಆರ್‍ಇಜಿ ತಾಲೂಕಾ ಸಹಾಯಕ ನಿರ್ಧೇಶಕ ಪರುಶುರಾಮ ಪೂಜಾರ, ಗ್ರಾ.ಪಂ.ಸದಸ್ಯರಾದ ಗುಡದೇಶ ಲಿಂಗದಹಳ್ಳಿ, ಬಸನಗೌಡ ಪಾಟೀಲ, ವೆಂಕನಗೌಡ ಪಾಟೀಲ, ಗ್ರಾಮಸ್ಥರಾದ ಇಮಾಮಸಾಬ ನಧಾಪ, ಶಿವಯೋಗಿ ಉಕ್ಕುಂದ, ಷಣ್ಮುಖಪ್ಪ ಜಿಗಳಿಕೊಪ್ಪ, ಇಂಜನೀಯರ ಮಂಜುನಾಥ ದೊಡ್ಡಗೌಡ್ರ, ತೋಟಗಾರಿಕೆ ಇಲಾಖೆಯ ಅಧಿಕಾರಿ ಅಶೋಕ ಕೊಪ್ಪದ, ಎನ್‍ಆರ್‍ಇಜಿ ತಾಲೂಕಾ ಸಂಯೋಜಕ ಶಾನವಾಜ್, ಸಾಮಾಜಿಕ ಲೆಕ್ಕ ಪರಿಶೋಧನಾ ತಂಡದ ನಾಗರಾಜ್ ತೆವರಿ, ಗುಡ್ಡಪ್ಪ ಪ್ಯಾಟಿ, ಮಲ್ಲೇಶ ಅಳಲಗೇರಿ, ಮಂಜುನಾಥ ಡಮ್ಮಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here